ಅರಮನೆ ನಗರದಲ್ಲಿ ಅರಳಿದ ಕಮಲ; ಹಳೇ ದೋಸ್ತಿಗಳ ಮೈತ್ರಿ ಖತಂ
ಮೈಸೂರಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ; ಸುನಂದಾ ಪಾಲನೇತ್ರಾ ಹೊಸ ಮೇಯರ್
ಮೈಸೂರು: ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತೆ ಕಾಂಗ್ರೆಸ್-ಜೆಡಿಎಸ್ ಜಗಳದಿಂದ ಬಿಜೆಪಿಗೆ ಲಾಭವಾಗಿದೆ.
ಮೈಸೂರು ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೇಯರ್ ಹುದ್ದೆಯನ್ನು ಅಲಂಕರಿಸಿದೆ. ಈ ಸಲವೂ ಮೇಯರ್ ಗಿರಿ ಪಡೆಯಬೇಕೆಂಬ ಕಾಂಗ್ರೆಸ್ ಕನಸು ನುಚ್ಚುನೂರಾಗಿದ್ದು, ಅದೇ ಹಠಕ್ಕೆ ಬಿದ್ದ ಜೆಡಿಎಸ್ ಕೂಡ ಕೈಚೆಲ್ಲಿತು.
ಈ ಎರಡೂ ಪಕ್ಷಗಳ ತಿಕ್ಕಾಟದ ಲಾಭವನ್ನು ಬಿಜೆಪಿ ಪಡೆದುಕೊಂಡಿತಲ್ಲದೆ, ಈ ಬಿಕ್ಕಟ್ಟನ್ನು ಮತ್ತಷ್ಟು ಹಿಗ್ಗಿಸಿ ಪಾಲಿಕೆಯಲ್ಲಿ ಅಧಿಕಾರ ಗಿಟ್ಟಿಸಿ ಹಿಗ್ಗಿತು. ಹಳೇ ದೋಸ್ತಿಗಳ ಮೈತ್ರಿ ಸಂಪೂರ್ಣವಾಗಿ ಮುರಿದುಬಿದ್ದಿರುವುದು ರಾಜ್ಯ ರಾಜಕಾರಣದ ಮೇಲೆ ಖಚಿತವಾಗಿ ಪರಿಣಾಮ ಬೀರಲಿದೆ.
ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟದಲ್ಲಿ ಕೊನೆಗೂ ಮೇಯರ್ ಹುದ್ದೆ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಸುನಂದಾ ಪಾಲನೇತ್ರ ಅವರು ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿಯ ಮೊತ್ತ ಮೊದಲ ಮೇಯರ್ ಆಗಿ ಆಯ್ಕೆಯಾದರು.
ಪಾಲಿಕೆಯ ಒಟ್ಟು 72 ಸ್ಥಾನಗಳ ಪೈಕಿ ಬಿಜೆಪಿ 26, ಕಾಂಗ್ರೆಸ್ 22, ಜೆಡಿಎಸ್ 22 ಮತಗಳನ್ನು ಪಡೆದರೆ, ಇಬ್ಬರು ಗೈರಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುರಿದುಬಿದ್ದ ಕಾರಣಕ್ಕೆ ಬಲವೇ ಇಲ್ಲದ ಬಿಜೆಪಿ ನಿರಾಯಾಸವಾಗಿ ಅಧಿಕಾರ ಹಿಡಿದಿದೆ.
ಆಪರೇಷನ್ ಕಮಲ
ಪಾಲಿಕೆಯಲ್ಲಿ ಬಿಜೆಪಿ ಅನ್ಯ ಪಕ್ಷಗಳ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳಲಿಲ್ಲ ಎನ್ನುವುದು ಬಿಟ್ಟರೆ ಆಪರೇಷನ್ ಕಮಲದ ಎಲ್ಲ ಪಟ್ಟುಗಳನ್ನು ಪ್ರಯೋಗಿಸಿತು. ಜೆಡಿಎಸ್ ನಾಯಕರು, ಅದರಲ್ಲೂ ಮುಖ್ಯವಾಗಿ ಶಾಸಕ ಸಾ.ರಾ.ಮಹೇಶ್, ಕಮಲದ ತಂತ್ರಗಾರಿಕೆಗೆ ಸುನಾಯಾಸವಾಗಿ ಟ್ಯಾಪ್ ಆದರೆನ್ನಬಹದು. ಮೈಸೂರಿನ ವಿಶ್ವಸನೀಯ ಮೂಲಗಳು ಹೇಳುವ ಪ್ರಕಾರ, ಸಾ.ರಾ.ಮಹೇಶ್ ಅವರಿಗೆ ಕಾಂಗ್ರೆಸ್ ಜತೆ ಮೈತ್ರಿ ಮುರಿದುಕೊಂಡು ಬಿಜೆಪಿಗೆ ಹೆಗಲು ಕೊಡುವ ಇರಾದೆ ಇತ್ತು.
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತೆಗೆದಿದ್ದ ಭೂ ಅಕ್ರಮಗಳ ಸುಳಿ ಅತ್ತ ಜೆಡಿಎಸ್, ಇತ್ತ ಬಿಜೆಪಿ ನಾಯಕರ ಕೊರಳಿಗೆ ಸುತ್ತಿಕೊಳ್ಳುವ ಭೀತಿ ಇದ್ದ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈಸೂರು ಪಾಲಿಕೆಯಲ್ಲಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡವು ಎಂದು ಹೇಳಲಾಗಿದೆ. ಅಧಿಕಾರಕ್ಕೇರಲು ಬಿಜೆಪಿಗೆ ಜೆಡಿಎಸ್ ಹೆಗಲು ಬೇಕು, ಅದೇ ರೀತಿ ಅಕ್ರಮಗಳಿಂದ ಪಾರಾಗಲು ಜೆಡಿಎಸ್‌ಗೆ ಬಿಜೆಪಿಯ ಕೃಪೆ ಬೇಕು ಎಂದು ನಿನ್ನೆಯಷ್ಟೇ ಪಕ್ಷ ತೊರೆದ ಹಿರಿಯ ನಾಯಕರೊಬ್ಬರು ಹೇಳಿದ ಮಾತು.
ಅಲ್ಲದೆ, ಮೈಸೂರಿನಲ್ಲಿ ಸಾ.ರಾ.ಮಹೇಶ್ ಅವರಿಗೆ ಚೆಕ್‌ಮೇಟ್ ಕೊಡಲು ಜಿ.ಟಿ.ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ಜೆಡಿಎಸ್‌ಗೆ ಕೈಕೊಟ್ಟರು ಎಂಬುದು ರಹಸ್ಯವೇನಲ್ಲ. ವಾರದ ಹಿಂದೆಯಷ್ಟೆ ಸಾ.ರಾ.ಮಹೇಶ್ ಜತೆ ಸಚಿವ ಸೋಮಶೇಖರ್ ಜತೆಗೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್ & ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ, ಮುಡಾ ಅಧ್ಯಕ್ಷರು ಮೇಯರ್ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು. ಈ ಹೆಜ್ಜೆ ಬಿಜೆಪಿಗೆ ಬಂಗಾರದಂಥ ಅವಕಾಶ ಸೃಷ್ಟಿ ಮಾಡಿದಂತೆ ಆಯಿತು. ಒಳಗೊಳಗೇ ಜೆಡಿಎಸ್ ತನ್ನ ದೋಸ್ತಿ ಪಕ್ಷ ಕಾಂಗ್ರೆಸ್‌ನಿಂದ ದೂರ ಸರಿಯುತ್ತಾ ಬಿಜೆಪಿಗೆ ಹತ್ತಿರವಾಗುತ್ತಾ ಹೋಯಿತು. ಇದು ಜೆಡಿಎಸ್‌ನ ರಾಜ್ಯ ವರಿಷ್ಠರ ಅಗತ್ಯ ಎನ್ನುವುದಕ್ಕಿಂದ ಅದೆಲ್ಲ ಸಾ.ರಾ.ಮಹೇಶ್ ಇಚ್ಛೆಗನುಸಾರ ನಡೆಯುತ್ತಾ ಹೋಯಿತು.
ಇನ್ನು ಬಿಜೆಪಿಯೂ ಇಡೀ ಎಪಿಸೋಡ್ ಅನ್ನು ಅಚ್ಚುಕಟ್ಟಾಗಿ ಮ್ಯಾನೇಜ್ ಮಾಡಿತು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್ ಮತ್ತು ನಾಗೇಂದ್ರ ಮುಂತಾದವರು ಒಂದು ತಂಡದಂತೆ ಕೆಲಸ ಮಾಡಿದರಲ್ಲದೆ, ತಮ್ಮ ಸದಸ್ಯರು ಭದ್ರವಾಗಿ ಇರುವಂತೆ ಎಚ್ಚರ ವಹಿಸಿದರು. ಇದಕ್ಕೆ ಪೂರಕವೋ ಎನ್ನುವಂತೆ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪಾಲಿಕೆಯತ್ತ ಸುಳಿಯಲಿಲ್ಲ. ಇದು ಬಿಜೆಪಿಗೆ ವರದಾನವಾಯಿತು. ನಿನ್ನೆ ಸಂಜೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಜಿಟಿಡಿ, ಜೆಡಿಎಸ್ ತೊರೆದಿದ್ದು ಬಿಜೆಪಿಗೆ ದೊಡ್ಡ ಪ್ಲಸ್ ಆಯಿತು. ಆದರೆ, ಅದನ್ನು ಪ್ಲಸ್ ಮಾಡಿಕೊಳ್ಳಲು ಕಾಂಗ್ರೆಸ್ ಯತ್ನಿಸಿತಾದರೂ ಮೊದಲೇ ಅಜೆಂಡಾ ಇಟ್ಟುಕೊಂಡ ಸಾ.ರಾ. ಅದಕ್ಕೆ ಸೊಪ್ಪು ಹಾಕಲಿಲ್ಲ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ತಲೆಕೆಡಿಸಿಕೊಳ್ಳಲಿಲ್ಲ. ಅವರು ನಂಬಿ ಕೆಟ್ಟರು ಎಂದು ಮೈಸೂರು ಕಾಂಗ್ರೆಸ್ ನಾಯಕರೊಬ್ಬರು ಸಿಕೆನ್ಯೂಸ್ ನೌ ಗೆ ಹೇಳಿದ ಮಾತು.
38 ವರ್ಷದ ಇತಿಹಾಸದಲ್ಲೇ ಪ್ರಥಮ
160ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಪೌರ ಸಂಸ್ಥೆಯು 1983ರಲ್ಲಿ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿತು. ಅಲ್ಲಿಂದ ಇಲ್ಲಿಯವರೆಗಿನ 38 ವರ್ಷಗಳ ಅವಧಿಯಲ್ಲಿ ಬಿಜೆಪಿ ಒಂದು ಬಾರಿಯೂ ಮೇಯರ್ ಪಟ್ಟವನ್ನು ಅಲಂಕರಿಸಿರಲಿಲ್ಲ. ಇದೀಗ ಬಿಜೆಪಿ ಸಾಧನೆ ತೋರಿದೆ.
ಮುಖ್ಯಮಂತ್ರಿ, ಮಾಜಿ ಸಿಎಂ ಅಭಿನಂದನೆ
ಕಳೆದ ಒಂದು ವರ್ಷದಿಂದ ಅತ್ಯಂತ ಚುರುಕಿನಿಂದ 24×7 ಪಕ್ಷದ ನಿರ್ದೇಶನಗಳನ್ನು ಮತ್ತು ಸರ್ಕಾರದ ಜನಪ್ರಿಯ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ಸನ್ನು ಈಗಾಗಲೇ ಸಾಧಿಸಿದ್ದೀರಿ. ಇದೀಗ ಮೈಸೂರಿನ ಮಹಾಪೌರರು ಹಾಗೂ ಉಪ ಮಹಾಪೌರರನ್ನು ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಅಭಿನಂದನೆಗಳು ಎಂದು ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಚಿವ ಸೋಮಶೇಖರ್ ಹಾಗೂ ನೂತನ ಮೇಯರ್ ಸುನಂದಾ ಪಾಲನೇತ್ರಾ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟವನ್ನು ಹೊಂದಿದೆ. ಇದಕ್ಕೆ ಸಹಕಾರ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿಮೆ, ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಈ ಅವಕಾಶವನ್ನು ಪಕ್ಷ ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಿ ತೋರಿಸಲಿ ಎಂದು ಹಾರೈಸುವೆ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಪಕ್ಷಗಳ ಬಲಾಬಲ
- ಒಟ್ಟು ಸ್ಥಾನ: 72
- ಬಿಜೆಪಿ: 26
- ಕಾಂಗ್ರೆಸ್: 22
- ಜೆಡಿಎಸ್: 22
- ಗೈರು ಹಾಜರಿ: 02