ವೈಮಾನಿಕ ಕ್ಷೇತ್ರದಲ್ಲಿ ʼಏರ್‌ಟ್ಯಾಕ್ಸಿʼ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಗೆ ಶುಭಾಶೀರ್ವಾದ ಮಾಡಿದ ಶಿಕ್ಷಕರು
by GS Bharath Gudibande
ಗುಡಿಬಂಡೆ: ಏರೋನಾಟಿಕ್ಸ್ ಎಂಜಿನಿಯರಿಂಗ್’ನಲ್ಲಿ ಹೊಸ ಡಿಸೈನ್ ಆವಿಷ್ಕಾರದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ದೇಶದೆಲ್ಲಡೆ ಹಬ್ಬಿದ ಗುಡಿಬಂಡೆ ಕೀರ್ತಿಯನ್ನು ಶಿಕ್ಷಕರ ಮನಸಾರೆ ಶ್ಲಾಘಿಸಿ, ಮುಂದಿನ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದ್ದಾರೆ.
ʼಶಿಕ್ಷಕರ ನಡೆ ಸಾಧಕರ ಕಡೆʼ ಎಂಬ ಅಭಿಯಾನದಡಿ ಪಟ್ಟಣದ 2ನೇ ವಾರ್ಡ್ʼನ ಶಿಕ್ಷಕ ನಾಗರಾಜ್ ಮತ್ತು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಲಕ್ಷ್ಮೀಕಾಂತಮ್ಮ ಅವರ ಮನೆಯಲ್ಲಿ ಬೆಂಗಳೂರಿನ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಏರೋನಾಟಿಕ್ ಎಂಜಿನಿಯರಿಂಗ್ ವಿದ್ಯಾರ್ಥಿ ಕೀರ್ತಿ ಅವರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆತ್ಮೀಯ ಸನ್ಮಾನ ನಡೆದು, ಎಲ್ಲ ಶಿಕ್ಷಕರು ಕೀರ್ತಿಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುಡಿಬಂಡೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ; “ಗುಡಿಬಂಡೆಯ ಮಣ್ಣಿನ ಮಗಳ ಸಾಧನೆ ಹಿಂದೆ ಪಟ್ಟ ಪರಿಶ್ರಮ, ಟೀಮ್ ವರ್ಕ್, ಕೊರೋನಾ ಕಾಲದಲ್ಲೂ ಆನ್ಲೈನ್ ಮೀಟಿಂಗ್, ಪ್ರಾಜೆಕ್ಟ್ ವರದಿ ತಯಾರಿ.. ಹೀಗೆ ಎಲ್ಲವನ್ನೂ ಸರಿಯಾದ ಸಮಯಕ್ಕೆ ಮಾಡಿ, ಮುಂಬಯಿಯಲ್ಲಿ ನಡೆದ ಅಖಿಲ ಭಾರತೀಯ ಮಟ್ಟದ ರಾಷ್ಟ್ರೀಯ ಏರೋಸ್ಪೇಸ್ ಪರಿಕಲ್ಪನಾ ವಿನ್ಯಾಸ ಸ್ಪರ್ಧೆ (National Aerospace Conceptual Design Competition) ಯಲ್ಲಿ 26 ತಂಡಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದ ಕೀರ್ತಿ ಮತ್ತು ಅವರ ತಂಡದ ಸಾಧನೆ ಶ್ಲಾಘನೀಯ” ಎಂದರು.
ಕೀರ್ತಿ ಅವರ ತಾಯಿ ಲಕ್ಷ್ಮೀಕಾಂತಮ್ಮ ಮಾತನಾಡಿ, “ಕೆಲ ವರ್ಷಗಳ ಹಿಂದೆ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ತಾರತಮ್ಯವಿತ್ತು. ನಾವು ನಮ್ಮ ಮಗಳಿಗೆ ಶಿಕ್ಷಣದಲ್ಲಿ ನಮ್ಮ ಹೆಚ್ಚೆಚ್ಚು ಪ್ರೋತ್ಸಾಹ ಮಾಡಿದ್ದೇವೆ. ನನ್ನ ಮಗಳು ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬ ಆಸೆ ಇತ್ತು. ಆದರೆ ಕೀರ್ತಿಗೆ ಏರೋನಾಟಿಕ್ ಎಂಜಿನಿಯರಿಂಗ್ ಮಾಡುವ ಹಂಬಲ ಇತ್ತು. ನಾವು ಅದಕ್ಕೆ ಸೇರಿಸಿ ಸ್ಫೂರ್ತಿ ತುಂಬಿದೆವು. ಅದರಲ್ಲಿ ಆಕೆ ಮಾಡಿದ ಸಾಧನೆ ನಮಗೆ ಸಂತಸ ತಂದಿದೆ” ಎಂದರಲ್ಲದೆ, ಸಿಕೆನ್ಯೂಸ್ ನೌ ನಲ್ಲಿ ಪ್ರಕಟವಾದ ಸಮಗ್ರ ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ ಎನ್.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ, ಮುದ್ದುರಾಜ್, ಕೀರ್ತಿ ಅವರ ತಂದೆಯಾದ ಶಿಕ್ಷಕ ನಾಗರಾಜ್ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಿಕ್ಷಕ ಶ್ರೀನಿವಾಸ್, ಅಶೋಕ ಕುಮಾರ್, ಗಂಗನಾರಾಯಣ, ಗೋಪಾಲಕೃಷ್ಣ ಸಿಂಗ್, ಜಿ.ವಿ.ನಾಗರಾಜ್, ಎಂ.ನಾರಾಯಣಪ್ಪ, ಕನ್ನಡಸೇನೆ ಅಧ್ಯಕ್ಷ ಅಂಬರೀಶ್ ಮತ್ತು ಕೀರ್ತಿ ಕುಟುಂಬ ಸದಸ್ಯರು ಸೇರಿ ಅನೇಕರು ಭಾಗವಹಿಸಿದ್ದರು.
ಈ ಪ್ರಾಜೆಕ್ಟ್ ಮಾಡಲು ಪ್ರತಿದಿನ 6ರಿಂದ 8 ಗಂಟೆ ಕಾಲ ಕೆಲಸ ಮಾಡುತ್ತಿದ್ದೆವು. ಅವಿಶ್ರಾಂತವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದೆವು. ಇದೇ ನಮ್ಮ ತಂಡ ಶಕ್ತಿ ಮತ್ತು ಸ್ಪೂರ್ತಿ. ಜತೆಗೆ; ಗೂಗಲ್ ಮೀಟ್ ಮತ್ತು ಜೂಮ್ ಮೀಟಿಂಗ್ʼಗಳಲ್ಲಿ ಸದಾ ಚರ್ಚೆ, ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಬಹಳಷ್ಟು ತಯಾರಿ ಮಾಡಿಕೊಂಡಿದ್ದೆವು. ಇದಕ್ಕೆ ನಮ್ಮ ಕಾಲೇಜಿನ ಉಪನ್ಯಾಸಕರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ನಮ್ಮ ತಂದೆ-ತಾಯಿ ಅವರ ಸಹಕಾರವೂ ಇದೆ. ನನ್ನ ಗುರುತಿ ಸನ್ಮಾನ ಮಾಡಿ ಎಲ್ಲಾ ಗುರುಗಳಿಗೆ ಕೃತಜ್ಞತೆಗಳು.
ಜಿ.ಎನ್.ಕೀರ್ತಿ, ಏರೋನಾಟಿಕ್ ವಿದ್ಯಾರ್ಥಿ
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..