ಕೋವಿಡ್ 3ನೇ ಅಲೆ ತಪ್ಪಿಸಲು ನಾಳೆಯಿಂದ ವ್ಯಾಪಕ ಲಸಿಕೀಕರಣ; ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿದರೆ ಕಠಿಣ ಕ್ರಮ; ತಹಸೀಲ್ದಾರ್ ಎಚ್ಚರಿಕೆ
by GS Bharath Gudibande
ಗುಡಿಬಂಡೆ: ಇನ್ನೂ ಎರಡನೇ ಅಲೆ ಮುಗಿದಿಲ್ಲ, ಇನ್ನೇನು ಮೂರನೇ ಅಲೆಯೂ ಬರುವುದರಲ್ಲಿದೆ. ಇದೇ ಹೊತ್ತಿನಲ್ಲಿ ಗುಡಿಬಂಡೆ ಆರೋಗ್ಯ ಇಲಾಖೆ ಮನೆ-ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡುವ ಅಭಿಯಾನವನ್ನು ನಾಳೆಯಿಂದ (ಗುರುವಾರ) ಆರಂಭಿಸುತ್ತಿದೆ.
ದೇಶಾದ್ಯಂತ ಕೆಲ ರಾಜ್ಯಗಳಲ್ಲಿ 3ನೇ ಅಲೆ ಭಾರೀ ಭೀತಿ ಸೃಷ್ಟಿ ಮಾಡಿದ್ದು, ಪುನಾ ಲಾಕ್‌ಡೌನ್ ಆಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕೊರೋನ 3ನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯು ಈವರೆಗೆ ಲಸಿಕೆ ಪಡೆಯದ ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವರನ್ನು ಹುಡುಕಿ-ಹುಡುಕಿ ಲಸಿಕೆ ನೀಡುವ ಕಾರ್ಯಕ್ರಮ ಹಾಕಿಕೊಂಡಿದೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ತಹಸೀಲ್ದಾರ್ ಸಿಗ್ಬಲ್ ವುಲ್ಲಾ ಅವರು, ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಲಸಿಕೆ ಪಡೆಯಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಯಾರಾದರೂ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
“ಜಗತ್ತಿನ ಪ್ರತಿ ದೇಶವೂ ಈ ಮಾರಕ ವೈರಸ್ʼಗೆ ತುತ್ತಾಗಿ ಸಂಕಷ್ಟ ಅನುಭವಿಸಿದೆ. ಎಲ್ಲೆಡೆ ಅಪಾರ ಜೀವನಷ್ಟವೂ ಆಗಿದೆ. ಆದರೆ, ಎಲ್ಲೆಡೆ ವ್ಯಾಕ್ಸಿನ್ ನೀಡುವ ಮೂಲಕ ಜನರ ಜೀವ ಕಾಪಾಡಲಾಗುತ್ತಿದೆ. ನಮ್ಮ ದೇಶಾದ್ಯಂತ ಇದೇ ಕ್ರಮ ಅನುಸರಿಸಲಾಗುತ್ತಿದ್ದು, ರಾಜ್ಯಾದ್ಯಂತ ವ್ಯಾಪಕವಾಗಿ ವ್ಯಾಕ್ಸಿನೇಷನ್ ನಡೆದಿದೆ. ಈಗ ನಮ್ಮ ತಾಲೂಕಿನಲ್ಲಿ ಮನೆ ಮನೆಗೂ ತೆರಳಿ ಲಸಿಕೆ ನೀಡಲು ತಂಡ ಸಿದ್ದವಾಗಿದೆ” ಎಂದು ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಅವರು ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಮಾಹಿತಿ ನೀಡಿದರು.
ತಾಲೂಕಿನಲ್ಲಿ 18 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿದೆ ಹಾಗೂ ಕೆಲವರು ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆಯದ ಎಲ್ಲರೂ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬಂದು ಲಸಿಕೆ ಪಡೆದು ಕೊರೋನಾ ಕಟ್ಟಿಹಾಲು ಸಹಕರಿಸಬೇಕು ಎಂದು ಡಾ.ನರಸಿಂಹಮೂರ್ತಿ ಮನವಿ ಮಾಡಿದರು.
ಲಸಿಕೆ ಪಡೆದು ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಈಗಾಗಲೇ ಸರಕಾರ ಹಾಗೂ ಆರೋಗ್ಯ ಇಲಾಖೆ ಹೇಳಿರುವಂತೆ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ, ಬದಲಿಗೆ ವೈರಸ್ ವಿರುದ್ಧ ಹೋರಾಡಲು ಅಗತ್ಯ ಶಕ್ತಿ ನಮ್ಮ ದೇಹಕ್ಕೆ ಬರುತ್ತದೆ. ಹಾಗಾಗಿ ಲಸಿಕೆ ಪಡೆಯಲು ಅಲಕ್ಷ್ಯ ಬೇಡ. ಕೂಡಲೇ ಲಸಿಕೆ ಪಡೆಯಲು ಎಲ್ಲರೂ ಮುಂದಾಗಬೇಕು ಎಂದು ತಹಶೀಲ್ದಾರ್ ಸಿಬ್ಗತ್ ವುಲ್ಲಾ ಜನೆತೆಗೆ ಮನವಿ ಮಾಡಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಧರಿಸಿ
ಕೊರೊನಾ ವಿರುದ್ಧ ನಿರೋಧಕತೆಗೆ ಮಾಸ್ಕ್‌ಗಳು ಸಹಕಾರಿ. ತಪ್ಪದೆ ಮಾಸ್ಕ್ ಧರಿಸಿದರೆ ವೈರಸ್ ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ”ವೈರಾಣುವಿನ ಪ್ರಮಾಣ ದೇಹದಲ್ಲಿ ಹೊಕ್ಕಿರುವುದನ್ನು ಆಧರಿಸಿ ಕೊರೊನಾ ಸೋಂಕಿನ ಗಂಭೀರತೆ ಅಥವಾ ವೈರಸ್ ಲೋಡ್ ನಿರ್ಧರಿತವಾಗುತ್ತದೆ. ಹಾಗಾಗಿ ಸರಿಯಾಗಿ ಧರಿಸಿದ ಮಾಸ್ಕ್‌ಗಳು ವೈರಾಣುಗಳ ಪ್ರಮಾಣವನ್ನು ಸಾಕಷ್ಟು ಬಾರಿ ತಡೆಯುವ ಸಾಮರ್ಥ್ಯ ಹೊಂದಿವೆ. ಇದರಿಂದಾಗಿ ಮಾಸ್ಕ್‌ಗಳು ಕೂಡ ಕೊರೊನಾ ನಿಯಂತ್ರಕ ಲಸಿಕೆ ಇದ್ದಂತೆ” ಎಂದಿದ್ದಾರೆ ಸಿಬ್ಗತ್ ವುಲ್ಲಾ.
ಲಸಿಕೀಕರಣ ಎಲ್ಲೆಲ್ಲಿ?
ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಅಂಗನವಾಡಿ ಕೇಂದ್ರಗಳು ಸೇರಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಅಭಿಯಾನವನ್ನು ವಿವಿಧ ಇಲಾಖೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಿಬ್ಗತ್ ವುಲ್ಲಾ ಮಾಹಿತಿ ನೀಡಿದರು.
ಮನೆ ಬಾಗಿಲಿಗೇ ಟಾಸ್ಕ್ ಫೋರ್ಸ್
ಪಟ್ಟಣ ಹಾಗೂ ತಾಲೂಕಿನ 8 ಪಂಚಾಯಿತಿಗಳಲ್ಲಿ ನಾಳೆಯಿಂದ ಲಸಿಕಾ ಅಭಿಯಾನ ನಡೆಯುತ್ತಿದ್ದು, ಪಟ್ಟಣದ 11 ವಾರ್ಡ್ʼಗಳು ಹಾಗೂ ತಾಲೂಕಿನ 8 ಪಂಚಾಯಿತಿಗಳಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಪ್ರತಿ ಮನೆ ಬಾಗಿಲಿಗೇ ತೆರಳಲಿದ್ದು, ಲಸಿಕೆ ಪಡೆದವರ ಮಾಹಿತಿ ಪಡೆಯಲಿದ್ದಾರೆ. ಈ ಲಸಿಕಾ ಅಭಿಯಾನಕ್ಕೆ ತಾಲೂಕಿನ ಎಲ್ಲಾ ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪಟ್ಟಣ ಮತ್ತು ತಾಲೂಕಿನ ಪಂಚಾಯತಿಗಳಲ್ಲಿ ವ್ಯಾಕ್ಸಿನ್ ಅಭಿಯಾನ ನಾಳೆ ಆರಂಭವಾಗಲಿದ್ದು, ಎಲ್ಲರೂ ಬಂದು ವ್ಯಾಕ್ಸಿನ್ ಹಾಕಿಸಿಕೊಂಡು ಸೋಂಕು ಹರಡುವುದನ್ನು ತಡೆಗಟ್ಟಬೇಕು, ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ಹಳ್ಳಿಹಳ್ಳಿ ಬೇಟಿ ಮಾಡಿ ವ್ಯಾಕ್ಸಿನ್ ಮಹತ್ವದ ಬಗ್ಗೆ ತಿಳಿಸಬೇಕು, ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಸಿಬ್ಗತ್ ವುಲ್ಲಾ. ತಹಶೀಲ್ದಾರ್ ಗುಡಿಬಂಡೆ
ನಾಳೆ ಲಸಿಕಾ ಅಭಿಯಾನದಡಿ ಪಟ್ಟಣ ಮತ್ತು ತಾಲೂಕಿನ ಎಲ್ಲಾ ಪಂಚಾಯತಿಗಳ ಹಳ್ಳಿಗಳ ಮನೆ ಬಾಗಿಲಿಗೇ ನಮ್ಮ ತಂಡದವರು ತೆರಳಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಿದ್ದಾರೆ. ಹಾಗೂ ಈ ಗಾಗಲೇ ತಾಲ್ಲೂಕಿನ 39711 ಜನರಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ, ಇದರಲ್ಲಿ 26186 ಜನರಿಗೆ ಮೊದಲ ಡೋಸ್, 13525 ಜನರಿಗೆ ಎರಡನೇ ಡೋಸ್ ಕೊಡಲಾಗಿದೆ. ಒಟ್ಟಾರೆಯಾಗಿ ದೈಹಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಈ ಮಹಾಮಾರಿಯನ್ನು ನಿಯಂತ್ರಿಸಬಹುದು.
ಡಾ.ನರಸಿಂಹಮೂರ್ತಿ, ಆರೋಗ್ಯ ವೈದ್ಯಾಧಿಕಾರಿ. ಸಾರ್ವಜನಿಕ ಆಸ್ಪತ್ರೆ, ಗುಡಿಬಂಡೆ