ಸೇವಾ ಮನೋಭಾವ ಕುಗ್ಗುತ್ತಿದೆ ಎಂದು ನೊಂದುಕೊಂಡ ಮುಖ್ಯಮಂತ್ರಿ
ಸತ್ಯಸಾಯಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ವೈದ್ಯಕೀಯ ವಿದ್ಯಾಲಯ ಸ್ಥಾಪನೆಗೆ ಸರಕಾರದ ಸಹಕಾರ ಘೋಷಿಸಿದ ಸಿಎಂ: ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯನ್ನು ಹಾಗೂ ಮಕ್ಕಳ ತೀವ್ರ ನಿಗಾ ಘಟಕ ಲೋಕಾರ್ಪಣೆ
by GS Bharath Gudibande
ಚಿಕ್ಕಬಳ್ಳಾಪುರ: ಪ್ರಶಾಂತಿ ಬಾಲಮಂದಿರ ಟ್ರಸ್ಟ್ ವತಿಯಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ವಿದ್ಯಾಲಯ ಸ್ಥಾಪನೆಗೆ ಸರಕಾರದ ಸಂಪೂರ್ಣ ಸಹಕಾರ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದ್ದಾರೆ.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ 300 ಹಾಸಿಕೆಗಳ ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯನ್ನು ಹಾಗೂ ಮಕ್ಕಳ ತೀವ್ರ ನಿಗಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ಬಡವರಿಗೆ, ಕಷ್ಟದಲ್ಲಿರುವರಿಗೆ ಹಾಗೂ ಅಶಕ್ತರಿಗೆ ಸಹಾಯ ಆಗಲಿದೆ. ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಈ ಸೇವಾ ಸಂಸ್ಥೆಯ ಕಾರ್ಯ ಅಮೋಘವಾದದ್ದು ಎಂದರು.
ನೋವನ್ನು ತಡೆಯುವ ಮತ್ತು ನಿವಾರಿಸುವ ಶಕ್ತಿ ವೈದ್ಯರಿಗೆ ಮಾತ್ರ ಇರುತ್ತದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ ಸತ್ಯಸಾಯಿ ಗ್ರಾಮಕ್ಕೆ ಅನೇಕ ವೈದ್ಯರು, ತಜ್ಞರು, ರೋಗಿಗಳ ಆರೋಗ್ಯ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಇದಕ್ಕೆ ಸೇವಾ ಮನೋಭಾವ ಬಹಳ ಮುಖ್ಯ. ಅಂತಹ ಸೇವಾ ಮನೋಭಾವ ಹುಟ್ಟಿಸಬೇಕಾದರೆ ಆಧ್ಯಾತ್ಮಿಕ ಶಕ್ತಿಯಿಂದ ಮಾತ್ರ ಸಾಧ್ಯ. ಈ ಶಕ್ತಿ ಎಲ್ಲಾ ಕಡೆ ಇರಬೇಕು. ಆಗ ಮಾತ್ರ ಕಲಿಯುಗ ಸುವ್ಯವಸ್ಥೆಯತ್ತ ಸಾಗುತ್ತದೆ. ನಮ್ಮ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. 4000 ವೈದ್ಯರ ನೇಮಕಾತಿಗೆ ಕ್ರಮ ವಹಿಸಿತ್ತು. ಇದರಲ್ಲಿ 2500 ವೈದ್ಯರು ಮಾತ್ರ ಕರ್ತವ್ಯಕ್ಕೆ ವರದಿ ಮಾಡಿಕೊಂಡರು ಎಂದು ಸಿಎಂ ವಿಷಾಧಿಸಿದರು
ಕಲಿಯುಗದಲ್ಲಿ ಭಗವಂತ ಗುರುವಿನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ದರಿಂದ ನಾವೆಲ್ಲರೂ ಗುರುವಿನಲ್ಲಿ ಕರಗಿ ಲೀನವಾಗಬೇಕು. ಆಗಲೇ ಗುರುವಿನ ಸಂಪೂರ್ಣ ಆಶಿರ್ವಾದ ಸಿಗುತ್ತದೆ. ಗುರುವಿನ ಮೂಲಕ ದೈವತ್ವದ ದರ್ಶನವಾಗುತ್ತದೆ ಎಂದರು ಮುಖ್ಯಮಂತ್ರಿ.
ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ವ್ಯವಸ್ಥೆ ಇದ್ದು,ಪ್ರಸ್ತುತ 150 ಆಮ್ಲಜನಕ ಯುಕ್ತ ಹಾಸಿಗೆಗಳು ಮತ್ತು ಮಕ್ಕಳ ತೀವ್ರ ನಿಗಾ ಘಟಕವು ಮಕ್ಕಳು ಮತ್ತು ನವಜಾತ ಶಿಶುಗಳ ಆರೋಗ್ಯ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ದವಾಗಿದೆ ಹಾಗೂ ಕೋವಿಡ್-19ರ ಸಂಭಾವ್ಯ ಮೂರನೇ ಅಲೆಯ ಹೊಡೆತವನ್ನು ಎದುರಿಸಲು ಸಶಕ್ತವಾಗಿದೆ ಎಂದು ಅವರು ತಿಳಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಸಂಸ್ಥೆಯ ಆಸ್ಪತ್ರೆಯಲ್ಲಿ ಬಾಲ ಹೃದಯ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದ ಪುಟಾಣಿಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಸದ್ಗರು ಶ್ರೀ ಮಧುಸೂದನ ಸಾಯಿ ರವರ ಸಾನ್ನಿಧ್ಯದಲ್ಲಿ ಬದುಕಿನ ಉಡುಗೊರೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ವಿಸ್ತೃತ ವಿಭಾಗದ ಶ್ರೀ ಸತ್ಯಸಾಯಿ ರಾಜೇಶ್ವರಿ ಬ್ಲಾಕ್ʼಗೆ ಭೂಮಿ ಪೂಜೆಯನ್ನು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮುಖ್ಯಮಂತ್ರಿಗಳೊಂದಿಗೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ ಸಾಯಿ, ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಆನಂದ ರೆಡ್ಡಿ (ಬಾಬು), ಶ್ರೀ ಸತ್ಯಸಾಯಿ ಮಾನವ ಅಭ್ಯುಧಯ ವಿಶ್ವವಿದ್ಯಾಲಯ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ, ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.