ಸಮಾಜದಲ್ಲಿ ರೇಪ್ ನಡೆಯುತ್ತವೆ; ಏನ್ ಮಾಡಕ್ ಆಗಲ್ಲ ಎಂದು ನಾಲಿಗೆ ಹರಿಬಿಟ್ಟ ಸಚಿವ
ಚಾಮರಾಜನಗರ: ಸಮಾಜದಲ್ಲಿ ರೇಪ್ʼಗಳು ನಡೆಯುತ್ತವೆ. ಏನು ಮಾಡೋದಕ್ಕೆ ಆಗಲ್ಲ ಎಂದು ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಶುಕ್ರವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸದಾ ವಿವಾದಾಸ್ಪದ ಹೇಳಿಕೆಗಳನ್ನು ನೀಡುವುದರಲ್ಲಿ ನಿಸ್ಸೀಮರಾದ ಕತ್ತಿ, ಅತ್ಯಾಚಾರದಂಥ ಸೂಕ್ಷ್ಮ ಪ್ರಕರಣದ ಬಗ್ಗೆಯೂ ಅಸೂಕ್ಷ್ಮವಾಗಿ ಪ್ರತಿಕ್ರಿಯಿಸಿದರು.
ಮೈಸೂರಿನನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕತ್ತಿ, ಇವೆಲ್ಲವೂ ಸಮಾಜದಲ್ಲಿ ನಡೆಯುವಂತವೇ, ನಡೆಯಬಾರದು. ಆದರೂ ನಡೆಯುತ್ತವೆ. ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದು, ಹೆಚ್ಚು ಇದರ ಬಗ್ಗೆ ಮಾತನಾಡಲು ತಾನು ಗೃಹ ಸಚಿವನಲ್ಲ ಎಂದುಬಿಟ್ಟರು.
ಉಮೇಶ್ ಕತ್ತಿ ಅವರು ನಿನ್ನೆ ಬಂಡೀಪುರದಲ್ಲಿ ಒಬ್ಬರಿಗೆ 5 ಕೆಜಿ ಅಕ್ಕಿ ಸಾಕು ಎಂದು ಹೇಳಿಕೆ ಕೊಟ್ಟು ಟೀಕೆಗೆ ಒಳಗಾಗಿದ್ದರು. ಇಂದು ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಮತ್ತೊಂದೆಡೆ ಗೃಹ ಸಚಿವ ಅರಗ ಜ್ಞಾನೇಂದ್ರ ನಿನ್ನೆ ಹೇಳಿಕೆ ನೀಡಿ, ಮೈಸೂರು ರೇಪ್ ಕೇಸಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರು ನನ್ನ ಮೇಲೆ ರೇಪ್ ಮಾಡುತ್ತಿದ್ದಾರೆಂಬ ಅಸಭ್ಯ ಹೇಳಿಕೆ ನೀಡಿದ್ದರು. ಅದರ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ನಂತರ ಅವರು ಹೇಳಿಕೆಯನ್ನು ವಾಪಸ್ ಪಡೆದಿದ್ದರು.
ಒಟ್ಟಾರೆಯಾಗಿ ಹಿರಿಯ ಸಂಸದೀಯ ಪಟುಗಳು, ಅನುಭವಿಗಳೂ ಆದ ಕತ್ತಿ, ಅರಗ ಜ್ಞಾನೇಂದ್ರ ಅಂಥವರಿಗೆ ಏನಾಗಿದೆ? ಯಾಕೆ ಮಾತನಾಡುತ್ತಿದ್ದಾರೆಂದು ಜನ ಆಡಿಕೊಳ್ಳುವಂತಾಗಿದ್ದು ಬಿಜೆಪಿಗೆ ಮುಜುಗರವಾಗುತ್ತಿದೆ.