ಚಿಂತಾಮಣಿ ಪೊಲೀಸರ ವೈಖರಿಗೆ ರಮೇಶ್ ಕುಮಾರ್ ಗರಂ; ರಸ್ತೆಯಲ್ಲಿ ವಾಹನಗಳನ್ನುಅಡ್ಡಗಡ್ಡಿ ಹಣ ವಸೂಲಿ ಮಾಡುತ್ತಿದ್ದನ್ನು ಕಂಡು ಕೆಂಡಾಮಂಡಲ
ಚಿಂತಾಮಣಿ: ಮದನಪಲ್ಲಿ-ಚಿಂತಾಮಣಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಶ್ರೀನಿವಾಸಪುರದ ನಿವಾಸಿಗಳ ವಾಹನಗಳನ್ನು ನಿಲ್ಲಿಸಿ ಕಿರಿಕಿರಿ ನೀಡುತ್ತಿದ್ದ ಪೊಲೀಸರ ವಿರುದ್ದ ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಸಿಕ್ಕಾಪಟ್ಟೆ ಗರಂ ಆಗಿರುವ ಘಟನೆ ನಡೆದಿದ್ದು, ಅದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಂತಾಮಣಿ ನಗರ ಠಾಣೆಯ ಎಎಸ್‌ಐ ಮುಕ್ತಿಯಾರ್ ಪಾಷಾ ತಾಲೂಕಿನ ಕುರುಟಹಳ್ಳಿ ಕ್ರಾಸ್‌ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಈ ವೇಳೆ ಶ್ರೀನಿವಾಸಪರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿನ ಕಡೆಗೆ ಹೊರಟಿದ್ದ ರಮೇಶ್ ಕುಮಾರ್ ದಂಡ ವಸೂಲಿ ಮಾಡುತ್ತಿದ್ದ ಎಎಸ್‌ಐ ಮತ್ತು ತಂಡಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲಿ ದಂಡ ವಿಧಿಸುತ್ತಿದ್ದರು?
ಮದನಪಲ್ಲಿ-ಚಿಂತಾಮಣಿ ರಸ್ತೆಯಲ್ಲಿ ಬರುವ ರಾಯಲ್ಪಾಡು, ಬಟ್ಲಹಳ್ಳಿ, ಕೆಂಚಾರ‍್ಲಹಳ್ಳಿ ಮತ್ತು ಚಿಂತಾಮಣಿ ಗ್ರಾಮಾಂತರ ಠಾಣೆಯ ಸರಹದ್ದಿನಲ್ಲಿ ಪೊಲೀಸರು ಮುಖ್ಯ ರಸ್ತೆಗಳಿಗೆ ಬಂದು ವಾಹನಗಳನ್ನು ತಪಾಸಣೆ ಮಾಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರು ರಾಯಲ್ಪಾಡು ಪೊಲೀಸರ ವಿರುದ್ದು ಆಕ್ರೋಶ ವ್ಯಕ್ತಪಡಸಿದ್ದಾರೆ.
ಅವರು ಸಿಟ್ಟಾಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಇದೀಗ ಚಿಂತಾಮಣಿ ಪೊಲೀಸರ ವಿರುದ್ದ ಜನರು ತೀವ್ರ ಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಮೇಶ್ ಕುಮಾರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ವಾಹನಗಳನ್ನು ನಿಲ್ಲಿಸಿ ದಂಡ ಹಾಕಬೇಡಿ ಎಂದು ಮಿನಿಸ್ಟರ್ ಮೊನ್ನೆತಾನೆ ಬಾಯಿ ಬಡ್ಕೊಂಡು ಹೇಳಿದ್ದಾರೆ. ನೀವು ಏನು ಡ್ಯಾಕ್ಯುಮೆಂಟ ಚೆಕ್ ಮಾಡ್ತೀರಾ? ನಾಚಿಕೆಯಾಗಬೇಕು ನಿಮಗೆ, ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗೋದು ಹೇಗೆ? ಎಂದು ತರಾಟೆಗೆ ತೆಗೆದುಕೊಂಡಿರುವ ವಿಡಯೋ ಬಾರೀ ಸದ್ದು ಮಾಡುತ್ತಿದೆ.