ಚಾಲಕ ಮತ್ತು ಪೊಲೀಸ್ ಮುಖ್ಯ ಪೇದೆ, ಪ್ರಾಣಾಪಾಯದಿಂದ ಪಾರು; ಆವತಿ ಬಳಿ ಘಟನೆ
by GS Bharath Gudibande
ಚಿಕ್ಕಬಳ್ಳಾಪುರ/ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಪೊಲೀಸರ ಗಸ್ತು ವಾಹನಕ್ಕೆ ಅತಿ ವೇಗವಾಗಿ ಬರುತ್ತಿದ್ದ ಟಾಟಾ ಸಫಾರಿ (ಕ್ಯಾಬಿನ್) ಇರುವ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಪೊಲೀಸರ ಕಾರು ಅಡ್ಡಲಾಗಿ ಉರುಳಿಬಿದ್ದಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಹಾಗೂ ಪೊಲೀಸ್ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಪೊಲೀಸರ ಹೆದ್ದಾರಿ ಗಸ್ತು ವಾಹನ ಇನೋವಾ ಕ್ರಿಸ್ಟಾ ಕಾರಿಗೆ ರಭಸವಾಗಿ ಟಾಟಾ ಸಫಾರಿ ಡಿಕ್ಕಿ ಹೊಡೆದ ಪರಿಣಾಮ ಕ್ರಿಸ್ಟಾ ಕಾರು ಪಲ್ಟಿಯಾಗಿದೆ. ಈ ಘಟನೆ ಜಾಗ ಆವತಿ ಗ್ರಾಮಕ್ಕೆ ಸ್ವಲ್ಪ ದೂರದಲ್ಲಿರುವ ಶ್ರೀ ಸಾಯಿ ಬಾಬಾ ದೇಗುಲದ ಬಳಿ ಇದೆ.
ಹೇಗಾಯಿತು ಅಪಘಾತ?
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ಪೊಲೀಸರ ಕಾರಿಗೆ ಅತಿ ವೇಗವಾಗಿ ಬರುತ್ತಿದ್ದ ಟಾಟಾ ಸಫಾರಿ ಕ್ಯಾಬಿನ್ ಇರುವ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಪೊಲೀಸರ ಕಾರು ಅಡ್ಡಲಾಗಿ ಉರುಳಿ ಬಿದ್ದಿದ್ದು, ಕಾರಿನೊಳಗಿದ್ದ ಚಾಲಕ ರಾಮಕೃಷ್ಣ ಹಾಗೂ ಪೊಲೀಸ್ ಮುಖ್ಯ ಪೇದೆ ನಾರಾಯಣರಾವ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಾಟಾ ಸಫಾರಿ ಸ್ಥಳದಲ್ಲೆ ಬಿಟ್ಟು ಎಸ್ಕೇಪ್
ಘಟನೆಯ ನಂತರ ಟಾಟಾ ಸಫಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಸೇರಿ ವಾಹನದಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ. ವಿಜಯಪುರ ಪೊಲೀಸ್ ಠಾಣೆಗೆ ಸೇರಿದ ಹೆದ್ದಾರಿ ಗಸ್ತು ವಾಹನ ಇದಾಗಿದ್ದು, ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಸಿಪಿಐ ಶ್ರೀನಿವಾಸ್ ಭೇಟಿ ನೀಡಿ ಗಾಯಾಳುಗಳ ಆರೈಕೆ ಮಾಡಿ, ವಾಹನಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.