ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲೂ ಜನರು ನಿಯಮ ಪಾಲಿಸಲಿಲ್ಲ: ಸಚಿವರ ಆತಂಕ
ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾಗಿರುವ ಕೇರಳದಿಂದ ರಾಜ್ಯಕ್ಕೆ ಯಾರೇ ಬಂದರೂ ಅವರಿಗೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಎಂದು ಹೇಳಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸೋಂಕು ನಿಯಂತ್ರಣದಲ್ಲಿದೆ ಎಂದು ನಾವು ಎಚ್ಚರ ತಪ್ಪಬಾರದು. ಹಬ್ಬ-ಹರಿದಿನಗಳ ಬಗ್ಗೆ ಈ ಹಿಂದೆ ಕೈಗೊಂಡಿದ್ದ ನಿರ್ಬಂಧ ನಿರ್ಧಾರವನ್ನು ಮುಂದುವರಿಸಬೇಕು. ಮುಖ್ಯವಾಗಿ ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಸೋಂಕಿನ ಭೀತಿ ಇದೆ. ಅಲ್ಲಿ ಈವರೆಗೂ ಶಾಲಾ ಕಾಲೇಜುಗಳನ್ನೂ ತೆರೆಯಲಾಗಿಲ್ಲ ಎಂದು ಸುಧಾಕರ್ ಹೇಳಿದರು.
ಇತ್ತೀಚೆಗೆ ನಡೆದ ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ಜನರು ಯಾವುದೇ ನಿಯಮ ಪಾಲಿಸಲಿಲ್ಲ. ಮಾರುಕಟ್ಟೆಗಳು ಕಿಕ್ಕಿರಿದಿದ್ದವು. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲೂ ಇದೇ ಆಗುತ್ತದೆ. ಸದ್ಯಕ್ಕೆ ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಸೋಂಕು ನಿಯಂತ್ರಣದಲ್ಲಿದೆ. ಅದೇ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಗ್ಗೆ ಆರೋಗ್ಯ ಇಲಾಖೆಗೆ ಆತಂಕವಿದೆ. ಈ ಬಗ್ಗೆ ಎಲ್ಲ ಸಭೆಗಳಲ್ಲೂ ಅಭಿಪ್ರಾಯ ತಿಳಿಸಲಾಗಿದೆ. ಅಂತಿಮವಾಗಿ ಮುಖ್ಯಮಂತ್ರಿಗಳು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಸುಧಾಕರ್ ತಿಳಿಸಿದರು.