ಗುಡಿಬಂಡೆ ತಾಲೂಕು ಆಡಳಿತದ ಸಕಾಲಿಕ ಕ್ರಮ; ಬಗೆಹರಿದ ಗೊಬ್ಬರ ಬಿಕ್ಕಟ್ಟು
by GS Bharath Gudibande
ಗುಡಿಬಂಡೆ: ರೈತರು ಯೂರಿಯಗಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ ಮೇಲೆ ತಾಲೂಕಿನಲ್ಲಿ ಯೂರಿಯ ಬಿಕ್ಕಟ್ಟು ಬಗೆಹರಿದಿದ್ದು, ಇದಕ್ಕಾಗಿ ತಾಲೂಕಿನ ಆಡಳಿತ ಸಕಾಲಕ್ಕೆ ಕ್ರಮ ವಹಿಸಿದೆ.
ಸೋಮವಾರ ಯೂರಿಯಕ್ಕಾಗಿ ರೈತರು ಟಿಪಿಎಂಸಿ ಮೇಲೆ ಮುಗಿಬಿದ್ದರಲ್ಲದೆ, ತಮಗೆ ಸಿಗದು ಎಂದು ಗೊತ್ತಾದ ಕೂಡಲೇ ಮುಖ್ಯರಸ್ತೆಗಿಳಿದು ರಸ್ತೆತಡೆ ನಡೆಸಿ ವಾಹನ ಸಂಚಾರ ನಿಲ್ಲಿಸಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು ಹಾಗೂ ಕೃಷಿ ಅಧಿಕಾರಿ ಅವರುಗಳು ರೈತರ ಸಮಸ್ಯೆ, ಮನವಿ ಆಲಿಸಿ ತಾಲೂಕಿನ ಎಲ್ಲಾ ರೈತರಿಗೆ ರಸಗೊಬ್ಬರ ವ್ಯವಸ್ಥೆ ಮಾಡುವಂತೆ ಕೃಷಿ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದ ಫಲವಾಗಿ ಮಂಗಳವಾರ ಗೊಬ್ಬರದ ಬಿಕ್ಕಟ್ಟು ಬಗೆಹರಿಯಿತು.
ಬೆಳಗ್ಗೆ ಹೊತ್ತಿಗೆ ಅಗತ್ಯವಾದಷ್ಟು ಯೂರಿಯ ಪೂರೈಕೆ ಆಯಿತಲ್ಲದೆ, ಪಟ್ಟಣದ ಟಿಪಿಎಂಸಿ ಮುಂದೆ ಇಂದು ಬೆಳಗಿನ ಜಾವದಿಂದಲೇ ತಹಸೀಲ್ದಾರ್ ಸಿಬ್ಗತ್ ವುಲ್ಲಾ ಹಾಗೂ ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ರೈತರಿಗೆ ಯೂರಿಯ (ರಸಗೊಬ್ಬರ) ವಿತರಿಸಲಾಯಿತು. ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಗೊಬ್ಬರದ ಅಗತ್ಯ ಹೆಚ್ಚಾಗಿದೆ.
ರೈತರಿಗೆ ಯೂರಿಯಾ ವಿತರಣೆ ಜತೆಗೇ ಕೋವಿಡ್ ಲಸಿಕೆ ನೀಡಿಕೆ.
ರೈತರಿಗೆ ಡಬಲ್ ಧಮಾಕ
ವಿವಿಧ ಹಳ್ಳಿಗಳಿಂದ ಬಂದಿದ್ದ ಎಲ್ಲ ರೈತರಿಗೂ ರಸಗೊಬ್ಬರ ವಿತರಿಸಲಾಯಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಗೊಬ್ಬರ ಸಿಕ್ಕಿತು. ಇದೇ ವೇಳೆ ತಹಸೀಲ್ದಾರ್ ಅವರ ಸೂಚನೆಯ ಮೇರೆಗೆ ಆರೋಗ್ಯ ಇಲಾಖೆ ಸಿಬಬಂದಿ ಗೊಬ್ಬರ ವಿತರಣಾ ಸ್ಥಳದಲ್ಲೇ ಕೋವಿಡ್ ಲಸಿಕೆ ನೀಡಿದರು.
ಈವರೆಗೂ ಮೊದಲ ಡೋಸ್ ಲಸಿಕೆ ಪಡೆಯದ ಹಾಗೂ ಎರಡನೇ ಡೋಸ್ ಪಡೆಯಬೇಕಾಗಿದ್ದ ರೈತರನ್ನು ಗುರುತಿಸಿ ಲಸಿಕೆ ನೀಡಲಾಯಿತಲ್ಲದೆ, ಲಸಿಕೆಯ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಲಾಯಿತು. ಗೊಬ್ಬರ ವಿತರಣೆಯ ಜತೆಗೆ ಕೋವಿಡ್ ಲಸಿಕೆಯನ್ನೂ ನೀಡಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಕೆಲ ರೈತರು ಸಿಕೆನ್ಯೂಸ್ ನೌ ಜತೆ ಮಾತನಾಡಿದರು. “ಮೊದಲ ಹಂತದಲ್ಲಿ ಯೂರಿಯ ಮುಗಿದಿದೆ ಎಂದು ತಿಳಿದು ಗಾಬರಿಯಾಯಿತು. ಕೇವಲ ಒಂದು ದಿನದ ಅಂತರದಲ್ಲಿ ತ್ವರಿತವಾಗಿ ನಮಗೆ ರಸಗೊಬ್ಬರ ನೀಡಲು ವ್ಯವಸ್ಥೆ ಮಾಡಿದ ತಾಲೂಕು ಆಡಳಿತ, ಕೃಷಿ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆಗಳು” ಎಂದು ಅವರು ತಿಳಿಸಿದರು.
ಮೊದಲ ಹಂತದಲ್ಲಿ ರೈತರಿಗೆ ಸಾಕಾಗುವಷ್ಟು ರಸಗೊಬ್ಬರ ಬಂದಿರಲಿಲ್ಲ. ಹಾಗಾಗಿ ಸ್ವಲ್ಪ ಗೊಂದಲವಾಗಿತ್ತು. ಈಗ ತಾಲೂಕಿನ ರೈತರಿಗೆ ಸಾಕಾಗುವಷ್ಟು ಯೂರಿಯಾ ಲಭ್ಯವಿದೆ ಹಾಗೂ ಕೋವಿಡ್ ವ್ಯಾಕ್ಸಿನ್ ಪಡೆಯದ ರೈತರಿಗೆ ವ್ಯಾಕ್ಸಿನೇಷನ್ ಮಾಡಿ ಅರಿವು ಮೂಡಿಸುವ ಕೆಲಸ ಮಾಡಲಾಯಿತು.
ಸಿಬ್ಗತ್ ವುಲ್ಲಾ, ತಹಸೀಲ್ದಾರ್ ಗುಡಿಬಂಡೆ
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..