ಬಾಗೇಪಲ್ಲಿ ಬಳಿ 50 ಕೋಟಿ ರೂ. ಮೌಲ್ಯದ ಸತ್ತ ಪ್ರಾಣಿಗಳ ಕೊಂಬು-ಮೂಳೆ ಪತ್ತೆ: ಬಾಗೇಪಲ್ಲಿಯಿಂದ ಕೇರಳಕ್ಕೆ ಸಾಗಣೆ ಜಾಲ ಬೆಳಕಿಗೆ
Ra Na Gopala Reddy Bagepalli
ಬಾಗೇಪಲ್ಲಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಿ ಕಾನೂನು ಮಾಡಿದರೂ ರಾಜ್ಯದ ಗಡಿ ಪ್ರದೇಶದಲ್ಲಿ ಹಸು, ದನ-ಕರುಗಳ ಹತ್ಯೆ ಅವ್ಯಾಹತವಾಗಿ ನಡೆದಿದೆ ಎಂಬುದಕ್ಕೆ ಇಂಬು ನೀಡುವಂತೆ ಸತ್ತ ಪ್ರಾಣಿಗಳ ಭಾಗಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವೊಂದು ಬೆಳಕಿಗೆ ಬಂದಿದೆ.
ಕಸಬಾ ಹೋಬಳಿಯ ಪೊತೇಪಲ್ಲಿಗೆ ಹಾದುಹೋಗುವ ಮುಖ್ಯರಸ್ತೆಯ ಜಿಲಾಜಿರ್ಲ ರಸ್ತೆಯ ತಿರುವಿನಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆ 8 ಗಂಟೆಯವರೆಗೂ ಸತ್ತ ಪ್ರಾಣಿಗಳ ಕೊಂಬುಗಳನ್ನು ಹಾಗೂ ಎಲುಬುಗಳನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನ ಮಾಡುತ್ತಿದ್ದ ಜಾಳವನ್ನು ಪತ್ತೆ ಹಚ್ಚಲಾಗಿದೆ. ಈ ವಿಷಯ ದಿಗ್ಭ್ರಮೆ ಉಂಟು ಮಾಡಿದ್ದು, ಬಾಗೇಪಲ್ಲಿ ಸುತ್ತಮುತ್ತ ಅಥವಾ ಕರ್ನಾಟಕ-ಆಂಧ್ರ ಪ್ರದೇಶ ಗಡಿಭಾಗದಲ್ಲಿ ಗೋ ಹತ್ಯೆ ನಡೆಯುತ್ತಿದೆಯಾ ಎಂಬ ಅನುಮಾನ ಉಂಟು ಮಾಡಿದೆ.
ಮಂಗಳವಾರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಯುಪಿ. 12 ಎಟಿ 6515 ಸಂಖ್ಯೆಯ ಬೃಹತ್ ಕ0ಟೇನರ್ ಲಾರಿ ಒಂದಕ್ಕೆ ಸತ್ತ ಪ್ರಾಣಿಗಳ ಎಲುಬು, ಕೊಂಬುಗಳನ್ನು ಚೀಲಗಳಲ್ಲಿ ತುಂಬಿ ಲೋಡ್ ಮಾಡಲಾಗುತ್ತಿತ್ತು. ಈ ಲಾರಿಗೆ ಬಾಗೇಪಲ್ಲಿ ಹಾಗೂ ಆಂಧ್ರದ ಕಡೆಯಿಂದ ಹಲವು ಚಿಕ್ಕ ಚಿಕ್ಕ ವಾಹನಗಳಲ್ಲಿ ಕೊಂಬುಗಳನ್ನು ರವಾನೆ ಮಾಡಿ ಇಲ್ಲಿಗೆ ತಂದು ಲೋಡ್ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ ತಾಲೂಕು ಬಿಜೆಪಿ ಮುಖಂಡರು ಹಾಗೂ ಡಿಎಸ್‌ಎಸ್. ತಂಡಗಳು ದಾಳಿ ನಡೆಸಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಉಪ ನಿರೀಕ್ಷಕ ಗೋಪಾಲ್ ರೆಡ್ಡಿ ಹಾಗೂ ಪೊಲೀಸ್ ಪೇದೆ ನರಸಿಂಹ ಮೂರ್ತಿ, ನಟರಾಜ್ ಅವರು ಮೂರು ವಾಹನಗಳನ್ನು ವಶಕ್ಕೆ ಪಡೆದು ಚಾಲಕರನ್ನು ಬಂಧಿಸಿ ಠಾಣೆಗೆ ಕರೆದುದೊಯ್ದರು. ಕೆಎ07 ಎ 9596 ಸಂಖ್ಯೆಯ ಬೊಲೋರೋ ವಾಹನ ಮತ್ತು ಜೆಹೆಚ್ 05 ಎಯು 4920 ಸಂಖ್ಯೆಯ ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಿದ ಪೊಲೀಸರು, ಅದನ್ನೂ ವಶಕ್ಕೆ ಪಡೆದಿದ್ದಾರೆ.
ಕೇರಳಕ್ಕೆ ಸಾಗಣೆ, ಅಲ್ಲಿಂದ ವಿದೇಶಕ್ಕೆ
ಸುಮಾರು 70ರಿಂದ 80 ಟನ್ ತೂಕದ ಪ್ರಾಣಿಗಳ ಎಲುಬು ಹಾಗೂ ಕೊಂಬುಗಳ ಬೆಲೆ ಸದ್ಯದ ಮುಕ್ತ ಮಾರುಕಟ್ಟೆಯಲ್ಲಿ ಸುಮಾರು 50 ಕೋಟಿ ರೂ.ಗಳಿಗೂ ಹೆಚ್ಚಿದ್ದು, ಪ್ರಾಣಿಗಳ ಕೊಂಬು-ಎಲುಬುಗಳು ಇಲ್ಲಿಗೆ ಎಲ್ಲಿಂದ ಬಂದವು ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಲ್ಲದೆ, ಇಲ್ಲಿಂದ ಕೇರಳಕ್ಕೆ ಸಾಗಣೆಯಾಗಿ, ಅಲ್ಲಿಂದ ಹೊರದೇಶಕ್ಕೆ ಹೋಗುತ್ತಿವೆ ಎಂದು ಶಂಕಿಸಲಾಗಿದೆ.
ಬಾಗೇಪಲ್ಲಿಯಿಂದ ಸತ್ತ ಪ್ರಾಣಿಗಳ ಭಾಗಗಳನ್ನು ಕೇರಳಕ್ಕೆ ಸಾಗಿಸುತ್ತಿರುವ ಜಾಲ ಬೆಳಕಿಗೆ ಬರುತ್ತಿದ್ದಂತೆ ಪಟ್ಟಣದ ಜನರು ಚಕಿತರಾಗಿದ್ದಾರೆ.
ಸ್ಥಳದಲ್ಲಿ ಸಿಕೆನ್ಯೂಸ್ ನೌ ಜತೆ ಮಾತನಾಡಿದ ತಾಲೂಕು ಬಿಜೆಪಿ ಮಂಡಲಾದ್ಯಕ್ಷ ಆರ್.ಪ್ರತಾಪ್ ಮಾತನಾಡಿ; “ಸುಪ್ರೀಂ ಕೋರ್ಟ್ ಆದೇಶದಂತೆ ಅಕ್ರಮವಾಗಿ ನಡೆಸುವ ಗೋವಧೆ, ಪ್ರಾಣಿ ವಧೆ, ಸಾಗಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಬಾಗೇಪಲ್ಲಿ ವ್ಯಾಪ್ತಿಯಲ್ಲಿ ನಡೆದ ಈ ಕಳ್ಳಸಾಗಾಣೆ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಬೇಕಿದೆ. ಪ್ರಾಣಿಗಳ ಕೊಂಬುಗಳು ಹಾಗೂ ಎಲುಬುಗಳನ್ನು ಕೇರಳಕ್ಕೆ ಸಾಗಿಸುತ್ತಿರುವುದನ್ನು ವಾಹನಗಳ ಚಾಲಕರೇ ಒಪ್ಪಿಕೊಂಡಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಇದರ ಹಿಂದೆ ಇರುವ ಎಲ್ಲ ಪಾತಕಿಗಳನ್ನು ಪತ್ತೆ ಹಚ್ಚಿ ಕಾನೂನಿನ ಅಡಿಯಲ್ಲಿ ಕ್ರಮ ವಹಿಸಲು ಪೊಲೀಸ್ ಸಬ್ ಇನಸ್ಪೆಕ್ಟರ್ ಗೋಪಾಲ ರೆಡ್ಡಿ ಅವರಿಗೆ ಒತ್ತಾಯ ಮಾಡಲಾಯಿತು ಎಂದರು.
“ಈ ಅಕ್ರಮ ಸಾಗಣೆಯಲ್ಲಿ ಬಾಗೇಪಲ್ಲಿಯ ಕೆಲ ವ್ಯಕ್ತಿಗಳು ಶಾಮಿಲಿದ್ದಾರೆ ಎಂಬ ಶಂಕೆ ಇದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು, ರಾಜ್ಯ ಹಾಗೂ ರಾಷ್ತ್ರಮಟ್ಟದಲ್ಲಿ ಹೋರಾಟ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಸರ್ಕಾರದ ವತಿಯಿಂದ ಒತ್ತಡ ಹೇರಲಾಗುವುದು” ಎಂದು ಬಿಜೆಪಿ ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.
“ನಮ್ಮ ದೇಶ ಗೋಮಾತೆಯನ್ನು ಪೂಜಿಸುವ ದೇಶವಾಗಿದ್ದು, ಅದರಲ್ಲೂ ಅಕ್ರಮವಾಗಿ ಪ್ರಾಣಿಗಳ ಎಲುಬು ಹಾಗೂ ಕೊಂಬುಗಳನ್ನು ಮೂಟೆಗಳಲ್ಲಿ ತುಂಬಿ ರವಾನೆ ಮಾಡುತ್ತಿರುವುದು ನೋವಿನ ಸಂಗತಿ. ಈ ಕೊಂಬುಗಳು ಸುಮಾರು 80 ಟನ್ ತೂಕವಿವೆ ಎಂದು ಅಂದಾಜಿಸಲಾಗಿದ್ದು, ಇಷ್ಟು ಕೊಂಬುಗಳನ್ನು ಸಂಗ್ರಹಿಸಲು ಸುಮಾರು 5,000 ದಿಂದ 10,000 ಪ್ರಾಣಿಗಳನ್ನು ಕೊಲ್ಲಲಾಗಿರುತ್ತದೆ. ಇದು ನಿಜಕ್ಕೂ ಹೃದಯವಿದ್ರಾವಕ ದೃಶ್ಯವಾಗಿದ್ದು, ಈ ಕ0ಟೈನರ್ʼನಲ್ಲಿನ ಮೂಲೆಗಳಿಂದ ವಾಸನೆ ಬಾರದಂತೆ, ಒಳಗಡೇ ವ್ಯವಸ್ಥೆ ಕೂಡ ಕಲ್ಪಿಸಲಾಗಿದ್ದು, ಇದು ಯೋಜನಾಬದ್ಧವಾದ ಕಳ್ಳ ವ್ಯಾಪಾರವಾಗಿದೆ’ ಎಂದು ತಾಲೂಕಿನ ಬಿಜೆಪಿ ಮುಖಂಡ ಹಾಗೂ ಡಿಎಸ್ಎಸ್ ನಾಯಕ ರಾಮಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು, ಡಿಎಸ್ಎಸ್ ನಾಯಕ ನಾಗಪ್ಪ, ಬಿಜೆಪಿ ಹಾಗೂ ಪೋತೇಪೆಲ್ಲಿ ಗ್ರಾಮಸ್ಥರಾದ ರವಿ, ರಮೇಶ್, ಶ್ರೀನಿವಾಸ್ ಮತ್ತು ಇತರರು ಇದ್ದರು.