ಗುಡಿಬಂಡೆ ತಾಲೂಕಿನಲ್ಲಿ 90% ಲಸಿಕೀಕರಣ
by GS Bharath Gudibande
ಗುಡಿಬಂಡೆ: ತಾಲೂಕಿನಲ್ಲಿ 90% ಲಸಿಕೀಕರಣ ಮುಗಿದಿದ್ದು, ಒಟ್ಟು 30,೦೦೦ಕ್ಕೂ ಹೆಚ್ಚ ಜನ ಲಸಿಕೆ ಪಡೆದಿದ್ದಾರೆ.
ಪಟ್ಟಣ ಹಾಗೂ ಹಳ್ಳಿಗಳ ಪ್ರತಿಯೊಂದು ಮನೆ ಬಾಗಿಲಿಗೇ ಹೋಗಿ ಲಸಿಕೆ ನೀಡಲಾಗುತ್ತಿದೆ. ಒಂದು ಗ್ರಾಮ ಪಂಚಾಯತಿ ಸೇರಿದಂತೆ 5 ಹಳ್ಳಿಗಳಲ್ಲಿ ಲಸಿಕೆ ನೀಡುವುದರ ಮೂಲಕ ಯಶಸ್ವಿಯಾಗಿ 100% ಲಸಿಕೀಕರಣ ಮಾಡಲಾಗುತ್ತಿದೆ.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ, ಶಿಕ್ಷಕರು, ವಿಟಿಎಫ್ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ನಿತ್ಯ ಕಾರ್ಯಗಳನ್ನು ಬಿಟ್ಟು ಲಸಿಕಾ ಮೇಳದಲ್ಲಿ ಪಾಲ್ಗೊಂಡು 100% ಲಸಿಕೀಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಯಾರು ಲಸಿಕೆ ಹಾಕಿಸಿಕೊಂಡಿಲ್ಲವೋ ಅವರ ಹೆಸರುಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
1 ಪಂಚಾಯತಿ, 5 ಹಳ್ಳಿಗಳಲ್ಲಿ ಪೂರ್ಣ ವ್ಯಾಕ್ಸಿನೇಷನ್
ಗುಡಿಬಂಡೆ ತಾಲೂಕಿನ ದಪ್ಪರ್ತಿ ಪಂಚಾಯತಿಯ ಎಲ್ಲ ಗ್ರಾಮಗಳ ಜನರಿಗೆ ಲಸಿಕೆ ನೀಡಲಾಗಿದೆ ಹಾಗೂ ಉಲ್ಲೋಡು ಪಂಚಾಯತಿಯ 5 ಹಳ್ಳಿಗಳಾದ ಮಾಚಾವಲಹಳ್ಳಿ, ಇಡ್ರಹಳ್ಳಿ, ಯಲಕರಾಲಹಳ್ಳಿ, ಹಳೇ ಗುಡಿಬಂಡೆ ಹಾಗೂ ಲಕ್ಷ್ಮೀಸಾಗರದಲ್ಲಿ 100% ಲಸಿಕೀಕರಣ ಮುಗಿದಿದೆ. ಇನ್ನೆರಡು ಮೂರು ದಿನಗಳಲ್ಲಿ ಉಳಿದ ಹಳ್ಳಿಗಳಲ್ಲೂ ವ್ಯಾಕ್ಸಿನೇಷನ್ ಸಂಪೂರ್ಣವಾಗಿ ಮುಗಿಯುತ್ತದೆ ಎಂದು ಉಲ್ಲೋಡು ಕಂದಾಯ ವೃತ್ತದ ಅಧಿಕಾರಿ ವಿ.ಲಕ್ಷ್ಮೀನಾರಾಯಣ ಮಾಹಿತಿ ನೀಡಿದರು.
ತಾಲೂಕಿನಾದ್ಯಂತ 46430 ಜನ 18 ವರ್ಷ ಮೇಲ್ಪಟ್ಟವರಿದ್ದು, ಇವರಲ್ಲಿ ಅನೇಕರು ಉದ್ಯೋಗ ನಿಮಿತ್ತ ಇತರೆ ಊರುಗಳಲ್ಲಿ ಇದ್ದಾರೆ. 30 ಸಾವಿರಕ್ಕೂ ಅಧಿಕ ಜನರಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಯಾರು ಲಸಿಕೆ ಪಡೆದಿಲ್ಲ ಅಂತಹವರ ಪಟ್ಟಿ ತಯಾರು ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಹಸೀಲ್ದಾರ್ ಸಿಬ್ಗತ್ ವುಲ್ಲಾ ಅವರು ಸಿಕೆನ್ಯೂಸ್ ನೌ ಗೆ ತಿಳಿಸಿದರು.
ಯಾರು ಏನಂತಾರೆ?
ತಾಲೂಕಿನ ಜನರು ಲಸಿಕೆ ವಿಷಯದಲ್ಲಿ ಅಲಕ್ಷ್ಯ ತೋರದೆ ಎಲ್ಲರೂ ಲಸಿಕೆ ಹಾಕಿಸಿಕೊಂಡು ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ನಮ್ಮ ಜತೆ ಸಹಕರಿಸಬೇಕು. ವ್ಯಾಕ್ಸಿನೇಷನ್ ಬಗ್ಗೆ ಅಪನಂಬಿಕೆ, ವದಂತಿಗಳಿಗೆ ಗುಡ್ ಬೈ ಹೇಳಿ ಜಾಗರೂಕರಾಗಿ ಲಸಿಕಾ ಮೇಳದಲ್ಲಿ ಭಾಗವಹಿಸಿ. ಲಸಿಕೀಕರಣದಲ್ಲಿ ತಾಲೂಕಿನ ನರ್ಸುಗಳು, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
ಸಿಬ್ಗತ್ ವುಲ್ಲಾ, ತಹಸೀಲ್ದಾರ್
ತಾಲೂಕಿನ ಲಸಿಕಾ ಮೇಳದಲ್ಲಿ ನಿನ್ನೆ (ಬುಧವಾರ) 2239 ಹಾಗೂ ಇಂದು 500 ಜನರಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಒಟ್ಟು 30 ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ನೀಡಿದ್ದೇವೆ. ಇನ್ನೊಂದು ತಿಂಗಳಲ್ಲಿ 100% ಲಸಿಕೀಕರಣ ತಾಲೂಕಿನಲ್ಲಿ ಮಾಡಬೇಕು ಎಂಬ ಗುರಿ ಹೊಂದಿದ್ದೇವೆ. ಯಾರು ಲಸಿಕೆ ಹಾಕಿಸಿಕೊಂಡಿಲ್ಲವೋ ಅವರು ಮುಂದೆ ಬಂದು ಲಸಿಕೆ ಪಡೆಯಬೇಕು.
ಡಾ.ನರಸಿಂಹಮೂರ್ತಿ, ತಾಲೂಕು ವೈದ್ಯಾಧಿಕಾರಿ
ತಹಸೀಲ್ದಾರ್, ಆರೋಗ್ಯ ಇಲಾಖೆ, ತಾಲೂಕು ಪಂಚಾಯತಿ, ಫ್ರಂಟ್ʼಲೈನ್ ವಾರಿಯರ್ಸ್, ಪೊಲೀಸ್ ಇಲಾಖೆ, ಪಪಂ.. ಹೀಗೆ ಎಲ್ಲರೂ ಲಸಿಕೀಕರಣದಲ್ಲಿ ಭಾಗವಹಿಸಿ ಶ್ರಮಿಸುತ್ತಿದ್ದಾರೆ. ಅಧಿಕಾರಿಗಳು ಮನೆ-ಮನೆಗೂ ಭೇಟಿ ನೀಡಿ ಲಸಿಕೆ ಅರಿವು ಮೂಡಿಸಿ ವ್ಯಾಕ್ಸಿನ್ ನೀಡುತ್ತಿರುವ ಕಾರ್ಯ ಶ್ಲಾಘನೀಯ.
ಕೆ.ಎನ್.ನವೀನ್ ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ