ಅಪೂರ್ಣ ಶಾಲೆಯ ಕಟ್ಟಡಕ್ಕೆ ಟೇಪ್ ಕಟ್ ಮಾಡಿದ ಎಸ್.ಎನ್.ಸುಬ್ಬಾರೆಡ್ಡಿ!!
by GS Bharath Gudibande
- ಸ್ಥಳೀಯ ಪಂಚಾಯಿತಿಗೆ ಮಾಹಿತಿ ಇಲ್ಲ
- ಮುಖ್ಯ ಶಿಕ್ಷಕಿಗೂ ತಡವಾಗಿ ಮಾಹಿತಿ
- ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌ಒಸಿ ನೀಡಿಲ್ಲ, ಶಾಲೆಗೆ ಭೇಟಿಯನ್ನೂ ಕೊಟ್ಟಿಲ್ಲ
- ರಾಜಕೀಯ ಕಾರಣಕ್ಕೆ ಶಾಸಕರಿಗೆ ತಪ್ಪು ಮಾಹಿತಿ
- ನಾಮಫಲಕ, ಉದ್ಘಾಟನಾ ಫಲಕವಿಲ್ಲದ ಶಾಲೆ ಉದ್ಘಾಟಿಸಿದ ಶಾಸಕ
- ಅಪೂರ್ಣ ಕಟ್ಟಡದಲ್ಲಿ ಎಲ್ಲವೂ ಅವ್ಯವಸ್ಥೆ
ಗುಡಿಬಂಡೆ: ಶಾಲೆಯ ಕಟ್ಟಡವೇ ಪೂರ್ಣಗೊಳ್ಳದಿದ್ದರೂ ಸ್ಥಳೀಯ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲದೆ ಶಾಸಕರಿಗೆ ತಪ್ಪು ಮಾಹಿತಿ ನೀಡಿ ತರಾತುರಿಯಲ್ಲಿ ಲಕ್ಷ್ಮೀಸಾಗರ ಶಾಲೆಯ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ. ಇದು ಸ್ಥಳೀಯ ಗ್ರಾಮ ಪಂಚಾಯಿತಿ ಆಕ್ರೋಶಕ್ಕೆ ಕಾರಣವಾಗಿದೆ.
ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ 2019-2020ನೇ ಸಾಲಿನ ಯೋಜನೆಯಡಿ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲೆಯ ಕಟ್ಟಡ ಇನ್ನೂ ಸಂಪೂರ್ಣಗೊಂಡಿಲ್ಲ. ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಮಾಹಿತಿಯನ್ನೇ ನೀಡದೆ ಉದ್ಘಾಟನೆ ಮಾಡಿ ಅಧಿಕಾರಿಗಳಿಗೇ ದಾರಿ ತಪ್ಪಿಸಲಾಗಿದೆ. ಇದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.
ಗುರುವಾರದಂದು (ಸೆ.2) ನಡೆದ ಈ ಶಾಲೆಯ ಉದ್ಘಾಟನಾ ಪ್ರಸಂಗ ಎಷ್ಟು ವಿಚಿತ್ರವಾಗಿದೆ ಎಂದರೆ; ಶಾಸಕರ ಬೆಂಬಲಿಗರು ತರಾತುರಿಯಲ್ಲಿ ಟೇಪ್ ಕಟ್ ಮಾಡಿಸಿದ್ದಾರೆ. ಸ್ವತಃ ಮುಖ್ಯ ಶಿಕ್ಷಕಿಯೇ ಕಾರ್ಯಕ್ರಮಕ್ಕೆ ಹೋಗಲಾಗಿಲ್ಲ. ಅವರಿಗೂ ಮಾಹಿತಿ ನೀಡಿಲ್ಲ. ಇನ್ನು, ಗ್ರಾಮದ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಿಗೂ ತಡವಾಗಿ ಮಾಹಿತಿ ನೀಡಲಾಗಿದೆ. ಕೊನೆಯ ಪಕ್ಷ ಕಟ್ಟಡದ ಮೇಲೆ ನಾಮಫಲಕ ಬೋರ್ಡ್ ಬರೆಸಿಲ್ಲ, ಕಟ್ಟಡದ ಫಿನಿಶಿಂಗ್ ಮಾಡಿಲ್ಲ, ಎಲ್ಲವೂ ಅರ್ಧಂಬರ್ಧ ಕಾಮಗಾರಿ, ಪೂರ್ಣ ಕಳಪೆ ಬೇರೆ. ಬಾಗೇಪಲ್ಲಿ ಕಡೆಯ ಗುತ್ತಿಗೆದಾರನೊಬ್ಬ ಮಾಡಿರುವ ಘನ ಕಾರ್ಯವಿದು. ಕಾರ್ಯಕ್ರಮದಲ್ಲಿ ಆತನೂ ಪತ್ತೆ ಇರಲಿಲ್ಲ.
ಇದೆಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ ಈ ಕಟ್ಟಡಕ್ಕೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಿರಪೇಕ್ಷಣಾ ಪತ್ರವನ್ನೇ ಕೊಟ್ಟಿಲ್ಲ, ಸ್ವತಃ ಅವರೂ ಭೇಟಿ ನೀಡಿ ಕಟ್ಟಡದ ಪರಿಶೀಲನೆ ಮಾಡಿಲ್ಲ. ಈ ಎಲ್ಲ ಮಾಹಿತಿಯನ್ನೇ ಪಡೆಯದ ಶಾಸಕರು ನೇರವಾಗಿ ಬಂದು ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಿದರಾ? ಎಂದು ಚಕಿತಾಗುತ್ತಿದ್ದಾರೆ ಜನರು.
ಮುಖ್ಯವಾಗಿ ಸ್ಥಳಿಯ ಕಾಂಗ್ರೆಸ್ ನಾಯಕರು ಶಾಸಕರನ್ನು ದಿಕ್ಕು ತಪ್ಪಿದರು ಎಂದು ಪಂಚಾಯಿತಿ ಉಪಾಧ್ಯಕ್ಷರು ದೂರುತ್ತಿದ್ದು, ಕೊನೆಯ ಪಕ್ಷ ಶಾಸಕರಾದರೂ ಈ ಬಗ್ಗೆ ವಿವರವಾಗಿ ಕೇಳಿ ತಿಳಿದುಕೊಳ್ಳಬೇಕಿತ್ತು. ಮಕ್ಕಳು ಕಲಿಯುವ ಶಾಲೆಯ ಬಗ್ಗೆ ಅವರು ಮುತುವರ್ಜಿ ವಹಿಸಬೇಕಿತ್ತು. ಕಟ್ಟಡದ ಗುಣಮಟ್ಟ, ಕಾಮಗಾರಿ ವಿವರ, ನಿರಪೇಕ್ಷಣಾ ಪತ್ರ, ಕಟ್ಟಡದ ಮೂಲಸೌಕರ್ಯಗಳು ಇತ್ಯಾದಿಗಳ ಬಗ್ಗೆ ಅವರು ಕೇಳಬೇಕಿತ್ತು ಎಂದು ಸ್ಥಳೀಯರು ಕೇಳುತ್ತಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಯ ನಿರಪೇಕ್ಷಣಾ ಪತ್ರವಿಲ್ಲದೆ ಕಟ್ಟಡ ಉದ್ಘಾಟನೆ ಮಾಡಿದ್ದು ಅಕ್ರಮ ಮಾತ್ರವಲ್ಲದೆ, ಈ ಬಗ್ಗೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬಹುದು. ಸ್ಥಳೀಯ ಗ್ರಾಮ ಪಂಚಾಯಿತಿ ಆ ಕೆಲಸ ಮಾಡಲಿ. ಈ ಬಗ್ಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಪಂಚಾಯಿತಿ ಉಪಾಧ್ಯಕ್ಷ ಬಾಬು, “ಸರಕಾರದ ಯಾವುದೇ ಕಾರ್ಯಕ್ರಮ ಮಾಡಿದರೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ಇರಲೇಬೇಕು. ವರ್ಲಕೊಂಡ ಪಂಚಾಯಿತಿ ಕಚೇರಿಗೆ ಕೂಗಳತೆ ದೂರದಲ್ಲಿರುವ ಲಕ್ಷ್ಮೀಸಾಗರ ಗ್ರಾಮದ ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವ, ಅದರಲ್ಲೂ ಶಾಸಕರು ಪಾಲ್ಗೊಂಡ ಕಾರ್ಯಕ್ರಮದ ಮಾಹಿತಿಯನ್ನೂ ನೀಡಿಲ್ಲ ಎಂದರೆ ಅರ್ಥವೇನು” ಎಂದು ಪ್ರಶ್ನೆ ಮಾಡಿದ್ದಾರೆ.
ಅಧಿಕಾರಿಗಳಿಗೂ ಮಾಹಿತಿ ಇಲ್ಲವಂತೆ!
ಶಾಲೆಯ ಉದ್ಘಾಟನೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಪ್ರಶ್ನಿಸಿದಾಗ ಸಿಕ್ಕಿದ ಉತ್ತರವಿದು.
ಉದ್ಘಾಟನಾ ಕಾರ್ಯಕ್ರಮದಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿದ್ದ ಕಾರಣಕ್ಕೆ ಆ ಸಮಾರಂಭಕ್ಕೆ ಇಸಿಒ ಚಂದ್ರಶೇಖರ್ ಅವರನ್ನು ಕಳುಹಿಸಲಾಗಿತ್ತು. PRED ಎಂಜಿನಿಯರ್ ಸೇರಿ ಶಾಲೆಯ ಮುಖ್ಯ ಶಿಕ್ಷಕಿಗೂ ತರಾತುರಿಯಲ್ಲಿ ಮಾಹಿತಿ ನೀಡಿ ಕಾಮಗಾರಿಯೇ ಪೂರ್ಣಗೊಳ್ಳದ ಶಾಲೆಯನ್ನು ಉದ್ಘಾಟನೆ ಮಾಡಲಾಗಿದೆಯಂತೆ. ಅಂದರೆ, ಶಾಲಾ ಕಟ್ಟಡ ಉದ್ಘಾಟನೆ ವಿಷಯ ತಾಲೂಕು ಶಿಕ್ಷಣ ಇಲಾಖೆಗೂ ಸಮರ್ಪಕವಾಗಿ ಗೊತ್ತಾಗಿಲ್ಲ. ಇದು ಕೂಡ ಸಾರ್ವಜನಿಕರು ಮತ್ತು ಪಂಚಾಯಿತಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ನಾಮಫಲಕ ಇಲ್ಲದೆ ಉದ್ಘಾಟನೆ!
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರೇ ಕಟ್ಟಡ ಉದ್ಘಾಟನೆ ಮಾಡಿದರಾದರೂ, ನಾಮಫಲಕ ಹಾಗೂ ಉದ್ಘಾಟನಾ ಕಾರ್ಯಕ್ರಮದ ವಿವಗಳಿರುವ ಫಲಕವೂ ಅಲ್ಲಿ ಕಾಣಲಿಲ್ಲ. ಜತೆಗೆ, ಸರಕಾರದ ಶಿಷ್ಟಾಚಾರವನ್ನು ಗಾಳಿಗೆ ತೂರಲಾಗಿದೆ. ವಿದ್ಯುತ್ ದೀಪ, ಫ್ಯಾನ್ ಇಲ್ಲದೆ ಉದ್ಘಾಟನೆ ಮಾಡಿರುವ ಉದ್ದೇಶವಾದರೂ ಏನು? ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಆನಂದಮ್ಮ ಹಾಗೂ ಉಪಾಧ್ಯಕ್ಷ ಬಾಬು ಪ್ರಶ್ನಿಸಿದ್ದಾರೆ.
ತರಾತುರಿಯಲ್ಲಿ ಹೀಗೆ ಉದ್ಘಾಟನೆಗೊಂಡ ಶಾಲೆಯ ಕಟ್ಟಡದ ಬಗ್ಗೆ ಈಗ ನಾನಾ ಅನುಮಾನಗಳು ಮೂಡಿವೆ.
ಯಾರು ಏನೆಂದರು?
ಶಾಲೆಯ ಕಟ್ಟಡ ಉದ್ಘಾಟನೆ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡಿಲ್ಲ. ಇನ್ನೇನು ಕಾರ್ಯಕ್ರಮ ಆರಂಭವಾಗುವ ಸಮಯದಲ್ಲಿ ಮಾಹಿತಿ ನೀಡಿದ್ದಾರೆ. ಸರಕಾರದ ನಿಯಮಗಳನ್ನು ಪಾಲನೆ ಮಾಡಿಲ್ಲ. ಅಪೂರ್ಣ ಕಟ್ಟಡ ಉದ್ಘಾಟನೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಲ್.ಎ.ಬಾಬು, ಉಪಾಧ್ಯಕ್ಷ, ವರ್ಲಕೊಂಡ ಗ್ರಾಮ ಪಂಚಾಯತಿ
ನಿನ್ನೆ (ಗುರುವಾರ) ನಾನು ಸಿ.ಎಲ್ ಹಾಕಿಕೊಂಡು ಬೆಂಗಳೂರಿನ ಕಾಲೇಜಿನಲ್ಲಿ ನನ್ನ ಮಗನನ್ನು ದಾಖಲು ಮಾಡಲು ಹೋಗಿದ್ದೆ. ಬೆಳಗ್ಗೆ ಸುಮಾರು 10 ಗಂಟೆ ವೇಳೆಯಲ್ಲಿ ನಮ್ಮ ಶಾಲೆಯ ಅಡುಗೆ ಸಹಾಯಕರ ಬಳಿ ಹೇಳಿ ನನಗೆ ಮಾಹಿತಿ ನೀಡಿದ್ದರು. ಅವರ ಮಾಹಿತಿ ಮೇರೆಗೆ ಪಂಚಾಯಿತಿ ಜನಪ್ರತಿನಿಧಿಗಳಿಗೆ ಮಾಹಿತಿ ತಲುಪಿಸಿದ್ದೇನೆ.
ಮನೋಜಮ್ಮ, ಮುಖ್ಯ ಶಿಕ್ಷಕಿ, ಲಕ್ಷ್ಮೀಸಾಗರ ಸರಕಾರಿ ಶಾಲೆ