ತಾಲೂಕಿನ ಮೂವರಿಗೆ ನಾಳೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
by GS Bharath Gudibande
ಗುಡಿಬಂಡೆ: ತಾಲೂಕಿನ ಮೂವರು ಶಿಕ್ಷಕರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಕರ ದಿನಾಚರಣೆ ಪ್ರಯುಕ್ತ ನಾಳೆ ಚಿಕ್ಕಬಳ್ಳಾಪುರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಚಿಕ್ಕಬಳ್ಳಾಪುರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯು 2021 ಹಾಗೂ 2022ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರತೀ ವರ್ಷದಂತೆ ಈ ವರ್ಷವೂ ತಾಲೂಕಿನಿಂದ 6 ಅರ್ಜಿಗಳಿದ್ದವು. ಈ ಪೈಕಿ ಮೂವರು ಶಿಕ್ಷಕರನ್ನು ಜಿಲ್ಲಾ ಸಮಿತಿ ಆಯ್ಕೆ ಮಾಡಿದೆ. ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ತಲಾ ಒಬ್ಬೊಬ್ಬ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರು ಯಾರು?
ಪ್ರೌಡಶಾಲಾ ವಿಭಾಗ
ಹರೀಶ್ ರಾಜ್ ಅರಸ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರು ಗುಡಿಬಂಡೆ ತಾಲೂಕಿನ ಹಂಪಸಂದ್ರ ಪ್ರೌಡಶಾಲೆಯಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಜಿಲ್ಲಾ, ರಾಜ್ಯ ಮಟ್ಟದಲ್ಲಿ ವಿಜ್ಞಾನ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಕ್ವಿಜ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ರಾಷ್ಟ್ರಮಟದಲ್ಲಿ ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ್ದರಲ್ಲದೆ, ಆ ವಿದ್ಯಾರ್ಥಿಗಳು ವಿಜೇತರಾಗಿದ್ದರು ಕೂಡ. ಚಂದನವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲೂ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. 2 ವರ್ಷ ಇವರು ಹಳ್ಳಿಗಳಲ್ಲಿ ಆಂಗ್ಲ ಭಾಷೆ ಕಲಿಕೆಗಾಗಿ ಮೂಲ ಸೌಕರ್ಯ ಒದಗಿಸುವ ಮೂಲಕ ಅರಿವು ಮೂಡಿಸಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಈ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಎಂ.ಶಂಕರ್ ಅವರು ತಾಲೂಕಿನ ಬೀಚಗಾನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಮಾದರಿ ಶಾಲೆ, ಮಕ್ಕಳ ದಾಖಲಾತಿ, ಗ್ರಾಮ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಸಹಕಾರದಿಂದ ಕೊಠಡಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಮಳೆ ಕೊಯ್ಲು, ಕೈತೋಟ, ಬ್ಯಾಸ್ಕೆಟ್ ಬಾಲ್ ಕೋರ್ಟ್, ಪರಿಸರ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ
ಈ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಎನ್. ಗೋಪಾಲಕೃಷ್ಣ ಸಿಂಗ್ ಅವರು ತಾಲೂಕಿನ ಕೊಂಡಾವಲಹಳ್ಳಿಯಲ್ಲಿ 8 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಮಕ್ಕಳ ವೈಯಕ್ತಿಕ ಸ್ವಚ್ಚತೆಯ ಬಗ್ಗೆ ಗಮನ, ಗುಣಮಟ್ಟದ ಕಲಿಕೆ ಸೇರಿದಂತೆ ಮುಂತಾದ ಅಂಶಗಳ ಬಗ್ಗೆ ಇವರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ.
ಯಾರು ಏನಂತಾರೆ?
ಹರೀಶ್ ರಾಜ್ ಅರಸ್ ಬಹಳ ಅತ್ಯುತ್ತಮವಾಗಿ ಕೆಲಸ ಮಾಡಿ, ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 3 ಭಾರಿ ಭಾಗವಹಿಸಿ ವಿಜೇತರಾಗಿದ್ದಾರೆ, 8 ಭಾರಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿ ವಿಜೇತರಾಗಿರುವುದು ತಾಲೂಕಿಗೆ ಹಾಗೂ ಶಿಕ್ಷಕ ಮಿತ್ರರಿಗೆ ಸಂತಸ ತಂದಿದೆ.
ವಿ.ಶ್ರೀರಾಮಪ್ಪ, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದವರಿಗೆ ಅಭಿನಂಧನೆಗಳು. ಈ ಪ್ರಶಸ್ತಿಗೆ ಎಲ್ಲರೂ ಅರ್ಹರಾಗಿದ್ದಾರೆ. ನಾಳೆ ನಡೆಯುವ ಜಿಲ್ಲಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಇವರೆಲ್ಲರೂ ಪ್ರಶಸ್ತಿ ಪಡೆಯುತ್ತಿರುವುದು ತಾಲೂಕಿನ ಶಿಕ್ಷಕರಿಗೆ ಹೆಮ್ಮೆಯ ಸಂಗತಿ.
ಬಾಲಾಜಿ, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ