ಅತಿಥಿ ಉಪನ್ಯಾಸಕರ ಆರ್ತನಾದ!!
ಭಾರತ ಬದಲಾಗುತ್ತಿದೆ. ಕರ್ನಾಟವೂ ಕೂಡ. ಆದರೆ ಇವರ ಬದುಕು ಹಾಗೆಯೇ ಇದೆ. ಇವತ್ತಿನಿಂದ ಅಲ್ಲ, ದಶಕಗಳಿಂದ. ಶಿಕ್ಷಣದಿಂದಲೇ ರಾಷ್ಟ್ರ ನಿರ್ಮಾಣ ಎನ್ನುವ ಸರಕಾರ ಶಿಕ್ಷಕರ ದಿನಾಚರಣೆ ಆಚರಿಸುವ ಸಂಭ್ರಮದಲ್ಲಿದೆ, ನಿಜ. ಆದರೆ ಅತಿಥಿ ಉಪನ್ಯಾಸರ ಆರ್ತನಾದ ಕೇಳುತ್ತಿಲ್ಲವೇ? ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹೊತ್ತಿನಲ್ಲಿ ಇವರ ಬಗ್ಗೆ ಆಲೋಚಿಸಬೇಕಿದೆ. ಈ ಬಗ್ಗೆ ಬರೆದಿದ್ದಾರೆ ಓರ್ವ ಅತಿಥಿ ಉಪನ್ಯಾಸಕರೂ ಆದ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್ ರಾವ್ ಹವಲ್ದಾರ್.
ಭಾರತೀಯ ಪರಂಪರೆಯಲ್ಲಿ ಅತಿಥಿಗಳಿಗೆ ವಿಶೇಷ ಸ್ಥಾನ. ʼಅತಿಥಿ ದೇವೋ ಭವʼ ಎಂಬ ಮಾತಿನಂತೆ
ಮನೆಗೆ ಬಂದಂತಹ ಅತಿಥಿ ಯಾರೇ ಆಗಿರಲಿ; ಅದು ಬಂಧುವೋ, ಮಿತ್ರನೋ, ಶತ್ರುವೋ ಅವರಿಗೆ ಆತಿಥ್ಯ ಮಾಡುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ.
ನಾನು ಯಾಕೆ ಮೇಲಿನ ಮಾತನ್ನು ಹೇಳುತಿದ್ದೇನೆ ಎಂಬುದು ಮುಂದೆ ಈ ಲೇಖನ ಓದಿದಂತೆಲ್ಲ ಅರ್ಥವಾಗುತ್ತದೆ.
ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಾ ನಮ್ಮ ಜ್ಞಾನದಾತರಿಗೆ, ಬದುಕಿನ ಮಾರ್ಗ ತೋರಿದವರಿಗೆ ವಿಶೇಷವಾಗಿ ನಮಿಸುತ್ತಿದ್ದೇವೆ. ಗುರುವಿಗೆ ಕೊಡುವಷ್ಟು ಮನ್ನಣೆ, ಮಹತ್ವ ಭಗವಂತನಿಗೂ ಕೊಡಲಾರವೇನೋ ನಾವು. ಅದಕ್ಕೆ ಶರಣರು ಹೇಳಿರುವುದು “ಹರ ಮುನಿದರೆ ಗುರು ಕಾಯುವವನು” ಎಂದು. ಗುರು ಬದುಕಿನಲ್ಲಿ ವಹಿಸುವ ಪಾತ್ರ ಮತ್ತ್ಯಾರೂ ವಹಿಸಲಾರರೇನೋ. ಅದರೆ, ಇಂದು ಅದೇ ಗುರುವಿನ ಸ್ಥಿತಿ ಏನಾಗಿದೆ?
ಇಂದಿನ ಸರಕಾರದ ಶಿಕ್ಷಣ ವ್ಯವಸ್ಥೆಯಲ್ಲಿ ಮೇಲೆ ಹೇಳಿದ ಅತಿಥಿಗಳನ್ನು ನೋಡುವ ರೀತಿ, ಗುರುವಿಗೆ ಕೊಡುವ ಗೌರವ, ಇವುಗಳಲ್ಲಿ ಯಾವುದನ್ನೂ ನೀಡದೇ ಮಲತಾಯಿ ತನ್ನ ಮಕ್ಕಳು ಅಲ್ಲದ ಮಕ್ಕಳನ್ನು ನೋಡುವ ರೀತಿಯಲ್ಲಿಯೇ ನಮ್ಮನ್ನು ನಡೆಸಿಕೊಳ್ಳುತ್ತಿದೆ.
ಸರಕಾರದ ಉನ್ನತ ಶಿಕ್ಷಣ ಇಲಾಖೆ ತಾತ್ಸಾರಕ್ಕೆ ಒಳಗಾಗಿ, ಯಾರಿಗೂ ಬೇಡವಾದ ರೀತಿಯಲ್ಲಿ ಕಳೆದ 15-20 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ ಒಮ್ಮೆ ʼಅತಿಥಿʼ ಹೆಸರಲ್ಲಿ, ಇನ್ನೊಮ್ಮೆ ʼಬಾಡಿಗೆʼ ಹೆಸರಲ್ಲಿ, ಮತ್ತೊಮ್ಮೆ ʼಅರೆಕಾಲಿಕʼ ಹೆಸರಿನಲ್ಲಿ ಬದುಕಿಗಾಗಿ ಚಡಪಡಿಸುತ್ತಿರುವ ಅರೆಜೀವದ ಚಾತಕ ಪಕ್ಷಿಗಳಂತಾಗಿದೆ ಅತಿಥಿ ಉಪನ್ಯಾಸಕರ ಸ್ಥಿತಿ.
ತಮ್ಮ ಹಾಗೆಯೇ ಓದಿ, ನೇಮಕಾತಿಯಲ್ಲಿ ಸ್ವಲ್ಪದರಲ್ಲೇ ಆಯ್ಕೆಯಾದವರಿಂದ ಒಂದು ರೀತಿಯಲ್ಲಿ ತಿರಸ್ಕಾರಕ್ಕೆ, ಅಸಹನೆಗೆ ಒಳಗಾಗಿ ಕಾಲೇಜಿನಲ್ಲಿ ಕುಳಿತುಕೊಳ್ಳಲು ಕುರ್ಚಿಯೂ ಸಿಗದೆ, ಮಾಡುವ ಕೆಲಸಕ್ಕೆ ಬಿಡಿಗಾಸು ಎಂಬ ಗೌರವ ಧನ ಪಡೆಯಲು ವಾರಗಟ್ಟಲೇ ಕಾಯುವ, ಕ್ಲರ್ಕ್, ಪ್ರಿನ್ಸಿಪಾಲರ ಮುಂದೆ ಕೈಕಟ್ಟಿ ನಿಲ್ಲುವ, ಅವರು ಕೊಟ್ಟಾಗ ಪಡೆದುಕೊಂಡು ಮಾಡಿದ ಸಾಲಕ್ಕೆ ಹೊಂದಿಸುವ, ಮುಂದಿನದು ಏನು ಎಂಬ ಚಿಂತೆಯಲ್ಲಿಯೇ ದಿನಗಳನ್ನು ದೂಡುತ್ತಾ ಸವೆಸುವ ಜೀವನದ ಪಾಡು ಯಾರಿಗೂ ಬೇಡ. ಅಂಥ ಬದುಕಿನವರು ಈ ಪದವಿ ಕಾಲೇಜು ಅತಿಥಿ ಉಪನ್ಯಾಸಕರು.
ರಾಜ್ಯದ 430 ಪದವಿ ಕಾಲೇಜುಗಳಲ್ಲಿ ಸುಮಾರು 14,755 ಉಪನ್ಯಾಸಕರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಯಾವ ಸೇವಾ ಭದ್ರತೆಯೂ ಇಲ್ಲದೇ, ʼಕೊಟ್ಟಾಗಷ್ಟೇ ಪ್ರಸಾದʼ ಎಂಬ ರೀತಿಯಲ್ಲಿ ಗೌರವಧನ ಪಡೆಯುತ್ತಾ ದುಸ್ತರ ಬದುಕು ಬದುಕುತ್ತಿದ್ದಾರೆ.
ನೀವು ಪ್ರತಿ ವರ್ಷವೂ ವಿಧಾನಂಡಲ ಅಧಿವೇಶನ ಸಮಯದಲ್ಲಿ ನೋಡಬಹುದು. ಸೇವಾಭದ್ರತೆ ನೀಡಿ, ಗೌರವಧನ ಹೆಚ್ಚಿಸಿ, ಕಾಯಮಾತಿ ಮಾಡಿ ಎಂದು ಅತಿಥಿ ಉಪನ್ಯಾಸಕರ ಅರ್ನಿದಿಷ್ಟ ಮುಷ್ಕರ ಎಂಬ ದೃಶ್ಯಗಳನ್ನು ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ನೋಡಿರುತ್ತೀರಾ. ಸರಕಾರ ಮಾತುಕತೆಗೆ ಕರೆದು ಚರ್ಚಿಸುತ್ತದೆ. ಕಾಯಂ ಮಾಡುತ್ತೇವೆ ಎಂಬ ಆಶ್ವಾಸನೆ ಕೊಡುತ್ತದೆ. ಇಂಥ ನಾಟಕ ದೃಶ್ಯಗಳು ಮರುಕಳಿಸುತ್ತಲೇ ಇವೆ.
ಮಾಡುವ ಕೆಲಸ ಒಂದೇ. ಆದರೆ ತಾರತಮ್ಯ ಯಾಕೆ? ಅತಿಥಿ ಉಪನ್ಯಾಸಕರಿಗೆ ಕೊಡುವ ಗೌರವ ಧನ 8 ಪಿರೇಡ್ʼಗಳಿಗೆ ಕೇವಲ 11,000 ರಿಂದ 13,000 ರೂಪಾಯಿಗಳು ಮಾತ್ರ. ಅದೇ ಕಾಯಂ ಉಪನ್ಯಾಸಕರಿಗೆ ಸಿಗುವ ಸಂಬಳ ವಾರದ 16 ಪಿರೇಡ್ʼಗೆ 60,000ದಿಂದ 1,10,000 ರೂಪಾಯಿ ವರೆಗೆ ಅಥವಾ ಅದಕ್ಕಿಂತ ಹೆಚ್ಚು. ಸಾಮಾಜಿಕ ನ್ಯಾಯ ಎಂದರೆ ಇದೇನಾ? ಶೈಕ್ಷಣಿಕ ಸುಧಾರಣೆ ಎಂದರೆ ಇದೇನಾ? ಅದೇ ಅನ್ಯ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಏನಿಲ್ಲವೆಂದರೂ 25,000ರಿಂದ 35,000 ರೂಪಾಯಿ ವರೆಗೆ ಸಂಬಳ, ಸೇವಾಭದ್ರತೆಯೂ ಇದೆ. ಶಿಕ್ಷಣದ ಕಾಶಿ, ಜ್ಞಾನದ ಗಂಗೋತ್ರಿ ಎಂದು ಕರೆಸಿಕೊಳ್ಳುವ ಕರ್ನಾಟಕದಲ್ಲಿ ಏಕಿಲ್ಲ?
ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಪಾಡು ಯಾರಿಗೂ ಹೇಳದ ಸ್ಥಿತಿಯಲ್ಲಿ ಇತ್ತು. ಅನಾರೋಗ್ಯ ಪೀಡಿತರಾಗಿ ವೇತನ ಇಲ್ಲದೇ ಸುಮಾರು 45ಕ್ಕೂ ಹೆಚ್ಚು ಉಪನ್ಯಾಸಕರು ಸಾವಿಗೀಡಾದರು. ಇದು ನಿಜಕ್ಕೂ ದುರಂತವೇ ಸರಿ. ಎಷ್ಟೋ ಉಪನ್ಯಾಸಕರು ಗೌರವಧನ ಸಿಗದೇ ಬೀದಿಬದಿ ವ್ಯಾಪಾರಿಗಳಾದರು. ಹೋಟೆಲ್, ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿದ್ದಾರೆ. ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಗಳಾಗಿ ಕೆಲಸ ಮಾಡಿದ್ದಾರೆ. ಒಂದು ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳದ, ಮನೆಯವರಿಗೂ ಬೇಡವಾಗಿ, ಸಮಾಜದ ಕಣ್ಣಲ್ಲಿ ಏನಕ್ಕೂ ಆಗದವರಂತೆ ಆಗಿಬಿಟ್ಟ ಇವರ ನೋವಿನ್ನು ಹೇಳುವುದಾದರೂ ಹೇಗೆ?
ಒಂದು ನಡೆದ ಘಟನೆಯ ಬಗ್ಗೆ ಹೇಳಬೇಕು. ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆ ಹಾಗೂ ಗೌರವಧನ ಹೆಚ್ಚಳಕ್ಕಾಗಿ ಮನವಿ ಕೊಡಲು ಡೀಸಿ ಕಚೇರಿಗೆ ಹೋದ ಸಂದರ್ಭದಲ್ಲಿ ಆ ಡೀಸಿ ಹೇಳಿದ ಮಾತು ಅಕ್ಷರಶಃ ಜಿಗುಪ್ಸಕರವಾಗಿತ್ತು. ಯಾಕಾಗಿ ಈ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆಯೋ ಎಂಬ ಸಂಕಟ ಕಾಡಿದ್ದು ಸುಳ್ಳಲ್ಲ.
ಆ ಡೀಸಿ ಮಹಾಶಯ ಹೇಳುತ್ತಾರೆ.. ” ನೀವು ಇಲಾಖೆ ನಡೆಸುವ ನೇರ ಅಥವಾ ಸ್ಪರ್ಧಾತ್ಮಕ ಪರೀಕ್ಷಯಲ್ಲಿ ಉತ್ತೀರ್ಣರಾಗದೇ ಇಲ್ಲಿ ಬಂದು ಕಾಯಂ ಮಾಡಿ, ಗೌರವಧನ ಹೆಚ್ಚಳ ಮಾಡಿ ಅಂತ ಕೇಳ್ತಾ ಇದೀರಾ. ಅವೆಲ್ಲ ಮಾಡೊಕೆ ಸರ್ಕಾರಕ್ಕೆ ಅಗೋದಿಲ್ಲ. ಇದೇ ಗೌರವಧನ ತೆಗೆದುಕೊಂಡು ಕೆಲಸ ಮಾಡುವುದಾದರೆ ಮಾಡಿ. ಇಲ್ಲವೇ ಕೆಲಸ ಬಿಟ್ಟುಬಿಡಿ. ಈ ಕೆಲಸ ಮಾಡಲು ಲಕ್ಷಾಂತರ ವಿದ್ಯಾವಂತರು ಕಾಯುತ್ತಿದ್ದಾರೆ.”
ಪಾಠ ಮಾಡಿಕೊಂಡೇ ಅರ್ಧ ಜೀವನವನ್ನೇ ಸವೆಸಿದ, ಇಂಥ ಡೀಸಿಗಳಿಗೆ ಪಾಠ ಮಾಡಿದ ಅವರ ಬದುಕಿಗೆ ಬೆಂಕಿ ಇಡುವಂಥ ಇಂಥ ಮಾತುಗಳು ಇನ್ನೆಷ್ಟು ದಿನ?
ಎಷ್ಟು ಕೇಳಿದರೂ, ಹೋರಾಟ ನಡೆಸಿದರೂ ಅತಿಥಿ ಉಪನ್ಯಾಸಕರಾಗಿ ಕಡಿಮೆ ಸಂಬಳಕ್ಕೆ (ಗೌರವ ಧನ) ವರ್ಷಗಳಿಂದ ಕೆಲಸ ಮಾಡುವ ದುಃಸ್ಥಿತಿ ನಮ್ಮದು. ಅತಿಥಿ ಉಪನ್ಯಾಸಕರ ಸಂಘಗಳು ನಮ್ಮಗಳ ಸೇವಾ ವಿಲೀನ, ಸೇವಾ ಭದ್ರತೆ ಹಾಗೂ ಗೌರವ ಧನ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಲೆ ಬಂದಿದೆ. ಆದರೂ ಸಹ ಯಾವುದೇ ಸರ್ಕಾರ ಗಮನ ಕೊಟ್ಟಿಲ್ಲ. ಕೊಡುತ್ತಲೂ ಇಲ್ಲ.
ಯಾಕೆ ಹೀಗೆ? ನಾನು ಕಂಡ ಕೆಲ ಅಂಶಗಳು ಹಾಗೂ ಸರಕಾರ ಅತಿಥಿ ಉಪನ್ಯಾಸಕರ ಕಷ್ಟಗಳಿಗೆ ಏಕೆ ಗಮನ ಹರಿಸುತ್ತಿಲ್ಲವೆಂಬ ಕಾರಣಗಳನ್ನು ಹುಡುಕುತ್ತಾ ಹೋದರೆ..
- ನಮ್ಮವರು WhatsApp ವೀರರು, ಹೋರಾಟಕ್ಕೆ ಬರುವುದಿಲ್ಲ ಬರೀ ಮಾತು ಮತ್ತು ಉಪದೇಶ.
- ಬೇರೆಯವರು ಹೋರಾಡುವುದಂತೂ ಖಂಡಿತಾ, ನಾವು ಮನೆಯಲ್ಲೇ ಕುಳಿತು ಸುದ್ದಿ ತಿಳಿದುಕೊಳ್ಳೋಣ ಮತ್ತು ಪ್ರತಿಫಲ ಕೂತೇ ಪಡೆದುಕೊಳ್ಳೋಣ ಎಂಬ ಮನೋಭಾವ.
- ಹೋರಾಟಕ್ಕೆ ಕರೆದರೆ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುವ ನಾಜೂಕುವಂತರು ನಮ್ಮ ಅತಿಥಿ ಮಹಾಶಯರು.
- ಅತಿಥಿ ಉಪನ್ಯಾಸಕರ ನಿಯೋಗ MLC ಗಳು ಸಚಿವರನ್ನು ಭೇಟಿ ಮಾಡಿ ಅವರಿಂದ ಉನ್ನತ ಶಿಕ್ಷಣ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಶಿಫಾರಸು ಪತ್ರ ಬರೆದರೆ ಇನ್ನೇನು ಕಾಯಂ ಅಗೇ ಬಿಟ್ಟಿವೇನೋ ಎಂದು ಉಬ್ಬಿ ಹೋಗುವವರು ಈ ಉಪನ್ಯಾಸಕರು.
- ಸಂಬಳ ಹೆಚ್ಚು ಮಾಡುತ್ತೇವೆ ಎಂದರೆ ಸಾಕು, ಹಿರಿಹಿರಿ ಹಿಗ್ಗುವ ಅಲ್ಪ ತೃಪ್ತರು.
- ಪ್ರಾಮಾಣಿಕ ಹೋರಾಟಗಾರರು ಧರಣಿಗೆ ಕರೆ ಕೊಟ್ಟರೆ, ನಾವು ಆ ಗುಂಪಿನವರಲ್ಲ ಎಂದು ಹೋಗುವವರನ್ನು ತಡೆಹಿಡಿಯುವವರು.
- ನಾವು ನಿಮಗೆ ಕಾಯಮಾತಿ ಮಾಡಿಸುತ್ತೇವೆ ಎಂದರೆ ಕುರಿಗಳ ಹಾಗೆ ಕಣ್ಣುಕಣ್ಣು ಬಿಡುವವರು.
- ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಂಘಟನೆ , ಹೋರಾಟದ ಕೆಚ್ಚು ಅರಿಯದವರು.
ಇಲ್ಲಿ ಬಹುತೇಕ ಉಪನ್ಯಾಸಕರು ಪಿಎಚ್.ಡಿ, ಸೆಟ್ ಹಾಗೂ ನೆಟ್ ಪರೀಕ್ಷೆ ಪಾಸಾಗಿದ್ದು ಯು.ಜಿ.ಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿರುವುದರಿಂದ ಕಾಯಂ ಗೊಳಿಸಲು ಸೂಕ್ತ ನಿಯಮಾವಳಿ ರೂಪಿಸಲು ಏಕೆ ಮೀನಮೇಷ? ಸ್ಥಳೀಯ ಅಭ್ಯರ್ಥಿ, ಗುತ್ತಿಗೆ ಆಧಾರ ಹಾಗೂ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಅವರ ಸೇವಾ ಅನುಭವ, ವಿದ್ಯಾರ್ಹತೆ ಪರಿಗಣಿಸಿ ಈ ಹಿಂದೆ ಕಾಯಂಗೊಳಿಸಿದ ಉದಾಹರಣೆಗಳಿವೆ. ಆದರೆ 2003ರಿಂದ ಇಲ್ಲಿವರೆಗೆ ಪ್ರತಿ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಲೇ ಇದೆ.
‘ಈಚೆಗೆ ಧಾರವಾಡದ ಉಚ್ಚ ನ್ಯಾಯಾಲಯವು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಕುರಿತು ನಿಯಮಾನುಸಾರ 3 ತಿಂಗಳ ಒಳಗಾಗಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್‌ಸದಸ್ಯರುಗಳ ಹಾಗೂ ಅತಿಥಿ ಉಪನ್ಯಾಸಕ ಪದಾಧಿಕಾರಿಗಳೊಂದಿಗೆ ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಹಂತ-ಹಂತವಾಗಿ ಕಾಯಂಗೊಳಿಸುವ ಭರವಸೆ ನೀಡಲಾಗಿದೆ. ಆದ್ದರಿಂದ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರನ್ನು ವಿಶೇಷವಾಗಿ ವಯೋಮಿತಿ ಮೀರುತ್ತಿರುವ ಅರ್ಹತೆ ಮತ್ತು ಅನುಭವ ಹೊಂದಿದ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಇದೆ.
ಚಿಂತಕ ಬರಗೂರು ರಾಮಚಂದ್ರಪ್ಪ, ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮುಂತಾದವರು ಹಾಗೂ ಅತಿಥಿ ಉಪನ್ಯಾಸಕರ ರಾಜ್ಯ ಒಕ್ಕೂಟವು ‘ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಕೆಲಸವನ್ನು ಪರಿಗಣಿಸಬೇಕು’ ಎಂದು ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.
15-20 ವರ್ಷಗಳಿಂದ ಕಡಿಮೆ ಸಂಬಳದಲ್ಲಿಯೂ ವೃತ್ತಿಬದ್ಧತೆ ಮೆರೆದ, ಪಾಠ, ಬೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಸರಕಾರ ಪರಿಗಣಿಸದೇ ಇರುವುದು ವಿಷಾದನೀಯ. ನಾಡಿನ ಶಿಕ್ಷಣ ಚಿಂತಕರು, ಕಾನೂನು ತಜ್ಞರು, ರಾಜಕೀಯ ಧುರೀಣರು ಮುಂತಾದವರು ಸೇರಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕಲ್ಪಿಸಿಕೊಡಲು ಪ್ರಯತ್ನಿಸಬೇಕು.
34 ವರ್ಷಗಳ ನಂತರ ಕೇಂದ್ರ ಸರಕಾರ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದಿದೆ. ಈ ಮೂಲಕ ಕರ್ನಾಟಕ ರಾಜ್ಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಮೊದಲ ರಾಜ್ಯವೆನಿಸಿದೆ. ಈ ನೀತಿಯನ್ನು ಜಾರಿಗೆ ತರುವಲ್ಲಿ ಅತಿಥಿ ಉಪನ್ಯಾಸಕರ ಪಾತ್ರ ಬಹು ದೊಡ್ಡದು. ಯಾಕೆಂದರೆ, ಬಹುತೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ. ಅತಿಥಿ ಉಪನ್ಯಾಸಕರಿಂದಲೇ ಕಾಲೇಜು ನಡೆಯುತ್ತಿದೆ. ಈ ನೀತಿಯು ಯಶಸ್ವಿಯಾಗಬೇಕಾದೆ ಇವರ ಸೇವಾ ಭದ್ರತೆ, ವೇತನ ತಾರತಮ್ಯ ನೀಗಬೇಕಿದೆ. ಸಚಿವರು 17 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಬೇಕು ಎಂದಿದ್ದಾರೆ, ಅದರೆ ಇವರಿಗೆ ಸರಿಯಾಗಿ ವೇತನ ಪಾವತಿ ಅಗುತ್ತಿಲ್ಲ. ಇನ್ನು ಉಳಿದವರ ಗತಿ ಏನು ಎಂಬ ಪ್ರಶ್ನೆ ಕಾಡುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಅನ್ಲೈನ್ ತರಗತಿಗಳನ್ನೂ ಅತಿಥಿ ಉಪನ್ಯಾಸಕರೇ ಮಾಡಿದ್ದರು. ಇಲಾಖೆಯು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಉಚಿತ ಲ್ಯಾಪ್‌ಟಾಪ್, ಟ್ಯಾಬ್ʼಗಳನ್ನು ನೀಡಿದೆ. ಅದರೆ ಎಷ್ಟೋ ಅತಿಥಿ ಉಪನ್ಯಾಸಕರುಗಳಿಗೆ ಸ್ಮಾರ್ಟ್ʼಪೋನ್ ಕೂಡ ಇಲ್ಲದಿರುವುದು ದುರ್ದೈವದ ಸಂಗತಿ. ಕಾಯಂ ಉಪನ್ಯಾಸಕರಲ್ಲಿ ಎಲ್ಲವೂ ಇದ್ದು ತರಗತಿ ಮಾಡಿದ್ದರೆ, ಅತಿಥಿಗಳು ಏನೂ ಇಲ್ಲದೇ ಅನ್ಲೈನ್ ತರಗತಿ ನಡೆಸಲು ಒಂದು ಜಿಬಿ ಡೇಟಾಗೂ ಒದ್ದಾಡಿದ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಅವರಿಗೆ ಲ್ಯಾಪ್‌ಟಾಪ್, ಟ್ಯಾಬ್ʼಗಳನ್ನಾದರೂ ಸರಕಾರ ಕೊಡಬೇಕು.
ಮೇಲೆ ಹೇಳಿದ ಹಾಗೆ ಒಮ್ಮೆ ಅರೆಕಾಲಿಕ, ಇನ್ನೊಮ್ಮೆ ಬಾಡಿಗೆ ಉಪನ್ಯಾಸಕ, ಮತ್ತೊಮ್ಮೆ ಅತಿಥಿಯಾಗಿ ಇಡೀ ಬದುಕನ್ನು ಗೌರವಯುತವಾಗಿ ಬದುಕಲೂ ಅಗದೆ, ವೃತ್ತಿಗೂ ಚ್ಯುತಿ ತಾರದೆ ಬದುಕುವ ಈ ಅತಿಥಿ ಉಪನ್ಯಾಸಕರ ಬದುಕಲ್ಲಿ ಬೆಳಕು ಮೂಡಲಿ. ಆ ಮೂಲಕ ಶಿಕ್ಷಕ ದಿನಾಚರಣೆ ಆಚರಣೆ ಅರ್ಥಪೂರ್ಣವಾಗಲಿ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.