ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕರ ದಿನಾಚರಣೆ
by M Krishnappa Chikkaballapura
ಚಿಕ್ಕಬಳ್ಳಾಪುರ: ಶಿಕ್ಷಣ ಅಂದರೆ ವಿದ್ಯಾಭ್ಯಾಸ ಮಾತ್ರವಲ್ಲ, ಹೆಚ್ಚು ಅಂಕ ಪಡೆದವರಷ್ಟೇ ಜೀವನದಲ್ಲಿ ಸಫಲರಾಗುತ್ತಾರೆ ಅಂತಾನೂ ಅಲ್ಲ. ವಿದ್ಯಾರ್ಥಿಗಳಲ್ಲಿರುವ ಅಭಿರುಚಿಯನ್ನು ಮತ್ತು ಸೂಕ್ತ ಗುಣವನ್ನು ಗುರುತಿಸಿ ಮಾರ್ಗದರ್ಶನ ನೀಡುವುದೇ ನಿಜವಾದ ಶಿಕ್ಷಣ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಶಿಕ್ಷಕರಿಗೆ ಸಲಹೆ ನೀಡಿದರು.
ಅವರು ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನ್ಮ ಕೊಡೋದು ತಂದೆ-ತಾಯಿ. ಜೀವನ ಕೊಡೋದು ಶಿಕ್ಷಕರು. ನಮ್ಮದು ಗುರು ಪರಂಪರೆಯ ದೇಶ. ಶಿಕ್ಷಣ ವ್ಯವಸ್ಥೆ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣದಿಂದ ಆಗಲ್ಲ. ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು , ಶಿಕ್ಷಕರು ಮಕ್ಕಳನ್ನು ಜ್ಞಾನ ಸಂಪನ್ನರನ್ನಾಗಿ ಮಾಡಲು ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಸಮ ಸಮಾಜದ ಕಲ್ಪನೆಯನ್ನು, ಕುವೆಂಪುರವರ ವಿಶ್ವಮಾನವ ಸಂದೇಶ ಮತ್ತು ಶಾಂತಿ ತೋಟದ ಕಲ್ಪನೆಯ ವಿಚಾರಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಆಗುವಂತಹ ಶಿಕ್ಷಣ ನೀಡಬೇಕು ಎಂದರು.
ಕೇವಲ ಹಣದಿಂದ ನೆಮ್ಮದಿ, ಸಂತೋಷ ಸಿಗುವುದಿಲ್ಲ. ಅದಕ್ಕೆ ಜ್ಞಾನದ ಅವಶ್ಯಕತೆ ಇದೆ. ಅಂತಹ ಜ್ಞಾನವನ್ನು ನೀಡುವವರು ಶಿಕ್ಷಕರು. ವೈದ್ಯ ವೃತ್ತಿಯಂತೆ ಶಿಕ್ಷಕ ವೃತ್ತಿಯು ಅತಿ ಮುಖ್ಯವಾದದ್ದು. ಆದ್ದರಿಂದ ವೃತ್ತಿ ಮತ್ತು ಪ್ರವೃತ್ತಿ ಎಲ್ಲಾ ಶಿಕ್ಷಣವೇ ಎಂದು ನಂಬಿದ್ದ ಮಾಜಿ ರಾಷ್ಟ್ರಪತಿಗಳಾದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮ ದಿನದಂದು ಶಿಕ್ಷಕರ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣ. ಆದ್ದರಿಂದ ಶಿಕ್ಷಕರನ್ನು ನೋಡಿ ನಾವು ಹೀಗೇ ಆಗಬೇಕು ಎನ್ನುವ ಭಾವನೆ ಮಕ್ಕಳಲ್ಲಿ ಮೂಡಬೇಕು. ಅಂತಹವರು ಶ್ರೇಷ್ಠ ಶಿಕ್ಷಕರಾಗುತ್ತಾರೆ. ಶಿಕ್ಷಣ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾವಣೆ ಆಗಬೇಕು ಎನ್ನುವ ನಿಟ್ಟಿನಲ್ಲಿ 2020ರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿನ ಹೊಸ ಕಲಿಕಾ ವಿಧಾನಗಳಿಗೆ ಹತ್ತಿರವಾಗಿರುವ ಶಿಕ್ಷಣ ನೀತಿಯಾಗಲಿದೆ ಎಂದರು ಸಚಿವರು.
ಸೆಪ್ಟೆಂಬರ್ 6ರಿಂದ ಆರನೇ ತರಗತಿಗೂ ಮೇಲ್ಪಟ್ಟ ಶಾಲೆಗಳು ಆರಂಭವಾಗುತ್ತಿವೆ. ತಮ್ಮ ಸ್ವಂತ ಮಕ್ಕಳನ್ನು ನೋಡಿಕೊಳ್ಳುವಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು. ಎಲ್ಲ ಮಕ್ಕಳು ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ನೋಡಿಕೊಳ್ಳಬೇಕು. ಆನ್ಲೈನ್ ತರಗತಿಗಳಿಗಿಂತ ಭೌತಿಕ ತರಗತಿಗಳೇ ಕಲಿಕೆಗೆ ಹೆಚ್ಚು ಪರಿಣಾಮಕಾರಿ. ಎಲ್ಲ ತರಗತಿಗಳು ಭೌತಿಕವಾಗಿ ನಡೆಯುವಂತಹ ವಾತಾವರಣ ಬೇಗ ಬರಲಿ ಎಂದರು.
ಒಂದೇ ವರ್ಷದಲ್ಲಿ ಗುರುಭವನ ನಿರ್ಮಾಣ
ಜಿಲ್ಲಾಧಿಕಾರಿಗಳು ನಗರದ ಪ್ರತಿಷ್ಠಿತ ಜಾಗದಲ್ಲಿ ಜಿಲ್ಲಾ ಗುರುಭವನ ನಿರ್ಮಿಸಲು ಜಮೀನು ನೀಡಿದ್ದಾರೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಮುಂದಿನ ವರ್ಷದೊಳಗಡೆ ಜಿಲ್ಲಾ ಗುರುಭವನ ನಿರ್ಮಾಣವಾಗಲಿದೆ ಎಂದು ಸಚಿವರು ಹೇಳಿದರು. ಈ ಕಾರ್ಯಕ್ರಮಕ್ಕೂ ಮುನ್ನ ನಗರದ ಹೊರವಲಯದ ಜೈನ್ ಆಸ್ಪತ್ರೆ ಹತ್ತಿರ ಗುರುಭವನ ನಿರ್ಮಾಣ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಮೆಚ್ಚುಗೆ
ಕಳೆದ 2 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ತನ್ನದೇ ಆದಂತಹ ಛಾಪು ಮೂಡಿಸುತ್ತಿದೆ. 2019-20 ನೇ ಸಾಲಿನಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಜಿಲ್ಲೆ ಗಳಿಸಿತ್ತು ಮತ್ತು 2020-21 ಸಾಲಿನಲ್ಲಿ ರಾಜ್ಯದಲ್ಲಿ 625 ಅಂಕ ಗಳಿಸಿದ 157 ವಿದ್ಯಾರ್ಥಿಗಳ ಪೈಕಿ ಜಿಲ್ಲೆಯವರೇ 30 ವಿದ್ಯಾರ್ಥಿಗಳು ಇರುವುದು ಹೆಮ್ಮೆಯ ಸಂಗತಿ. ಈ ಎಲ್ಲ ಸಾಧನೆಗಳ ಹಿಂದೆ ಜಿಲ್ಲೆಯ ಶಿಕ್ಷಕರ ಮತ್ತು ಜಿಲ್ಲಾಡಳಿತದ ಸಮನ್ವಯ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯುತ್ತಮ 18 ಶಿಕ್ಷಕರಿಗೆ ಸನ್ಮಾನ
ಈ ವೇಳೆ ಸಚಿವರು 2021-22ನೇ ಸಾಲಿಗೆ ರಾಜ್ಯ ಮಟ್ಟದ ತ್ತಮ ಶಿಕ್ಷಕ ಪ್ರಶಸ್ತಿಗೆ ಜಲ್ಲೆಯಿಂದ ಆಯ್ಕೆಯಾಗಿರುವ ಗೌರಿಬಿದನೂರು ತಾಲೂಕಿನ ಅಲೀಪುರದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಆರ್. ಯು.ನವೀನ್ ಕುಮಾರ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ವಿವಿಶಾ ಅವರಿಗೆ ಅಭಿನಂದನೆ ತಿಳಿಸಿ, 2021-22ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ 18 ಶಿಕ್ಷಕರಿಗೆ ಸನ್ಮಾನ ಮಾಡಿದರು.
ಸನ್ಮಾನಿತರಾದ ಶಿಕ್ಷಕರು
- ಪ್ರಮೀಳಮ್ಮ, ಸಹಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೇವರಗುಡಿಪಲ್ಲಿ, ಬಾಗೇಪಲ್ಲಿ ತಾಲ್ಲೂಕು.
- ಚಂದ್ರಶೇಖರರೆಡ್ಡಿ, ಸಹಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಮ್ಮಗಾನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು.,
- ಮಂಜುನಾಥ, ಸಹಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾರಪಲ್ಲಿ, ಚಿಂತಾಮಣಿ ತಾಲ್ಲೂಕು.
- ಎನ್. ರವಿಕುಮಾರ್, ಸಹಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೊಡ್ಡರಾಗಡಹಳ್ಳಿ, ಗೌರಿಬಿದನೂರು ತಾಲ್ಲೂಕು.
- ಎನ್. ಗೋಪಾಲಕೃಷ್ಣಸಿಂಗ್, ಸಹಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಂಡಾವಲಹಳ್ಳಿ, ಗುಡಿಬಂಡೆ ತಾಲ್ಲೂಕು.
- ಎಂ.ವೇಣುಗೋಪಾಲ, ಸಹಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗಡಿಮಿಂಚೇನಹಳ್ಳಿ, ಶಿಡ್ಲಘಟ್ಟ ತಾಲ್ಲೂಕು.
- ಎನ್. ನಾಗರಾಜು, ಸಹಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಾಕವೇಲು, ಬಾಗೇಪಲ್ಲಿ ತಾಲ್ಲೂಕು.
- ಆರ್. ಶ್ರೀನಿವಾಸ್, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೆಡ್ಡಿಗೊಲ್ಲವಾರಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು.
- ಕೆ.ಎಂ.ಜಯರಾಮರೆಡ್ಡಿ, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಿಂತಾಮಣಿ ತಾಲ್ಲೂಕು.
- ಸಂಜೀವರೆಡ್ಡಿ, ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಕ್ಕಲಹಳ್ಳಿ, ಗೌರಿಬಿದನೂರು ತಾಲ್ಲೂಕು.
- ಎಂ. ಶಂಕರ್, ಸಹಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೀಚಗಾನಹಳ್ಳಿ, ಗುಡಿಬಂಡೆ ತಾಲ್ಲೂಕು.
- ಪಿ.ಗೀತಾ, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜೆ.ವೆಂಕಟಾಪುರ, ಶಿಡ್ಲಘಟ್ಟ ತಾಲ್ಲೂಕು.
- ಮಹಬೂಬ್ಸಾಬಿ, ಉಪಪ್ರಾಂಶುಪಾಲರು, ಸರ್ಕಾರಿ ಬಾಲಕರ ಪ್ರೌಢಶಾಲೆ, ಬಾಗೇಪಲ್ಲಿ ತಾಲ್ಲೂಕು.
- ಎಲ್. ರಾಮಲಿಂಗಪ್ಪ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಅಂಗರೇಕನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು.
- ಈ.ರಾಘವೇಂದ್ರ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬಟ್ಲಹಳ್ಳಿ, ಚಿಂತಾಮಣಿ ತಾಲ್ಲೂಕು.
- ಆರ್.ರಾಣಾಪ್ರತಾಪ್, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಲ್ಲಿನಾಯಕನಹಳ್ಳಿ, ಗೌರಿಬಿದನೂರು ತಾಲ್ಲೂಕು.
- ಹರೀಶ್ ರಾಜ್ ಅರಸ್, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹಂಪಸಂದ್ರ, ಗುಡಿಬಂಡೆ ತಾಲ್ಲೂಕು.
- ಎಲ್.ವಿ. ವೆಂಕಟರೆಡ್ಡಿ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕುಂದಲಗುರ್ಕಿ, ಶಿಡ್ಲಘಟ್ಟ ತಾಲ್ಲೂಕು.
ಕಾರ್ಯಕ್ರಮದಲ್ಲಿ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರಾದ ಆನಂದರೆಡ್ಡಿ (ಬಾಬು), ಅಪರ ಜಿಲ್ಲಾಧಿಕಾರಿ ಹೆಚ್. ಅಮರೇಶ್, ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಎಸ್ ಜಯಚಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಿ.ಹರೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಎಂ. ಜಯರಾಮರೆಡ್ಡಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.