ಗುಡಿಬಂಡೆ ಸಮೀಪದ ಕೆರೆಗೆ ವಿಷಪ್ರಾಣ!
ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ರಾಸಾಯನಿಕ ತ್ಯಾಜ್ಯ ನೀರು ವಿಲೇವಾರಿ ಟ್ಯಾಂಕರ್
ಅರಣ್ಯಾಧಿಕಾರಿಗಳು ಕಂಡೊಡನೆ ಚಾಲಕ ಪರಾರಿ
5,000 ಲೀಟರ್ ಕೆಮಿಕಲ್ ನೀರಿದ್ದ ಟ್ಯಾಂಕರ್ ಸೀಜ್
by Gs Bharath Gudibande
ಗುಡಿಬಂಡೆ: ಇದು ಇಡೀ ತಾಲೂಕು ಮಾತ್ರವಲ್ಲ, ಇಡೀ ಜಿಲ್ಲೆ, ರಾಜ್ಯವೇ ಬೆಚ್ಚಿಬೀಳು ಸುದ್ದಿ!!
ಕೈಗಾರಿಕಾ ವಲಯದಿಂದ ರಾತ್ರೋರಾತ್ರಿ ಸಮೀಪದ ಚದುಮನಹಳ್ಳಿ ಹಾಗೂ ವಾಟದಹೊಸಳ್ಳಿ ಕೆರೆಗೆ ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುತ್ತಿರುವಾಗ ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ ಪರಿಣಾಮ ಭಾರೀ ಅನಾಹುತ ತಪ್ಪಿಹೋಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಅರಣ್ಯ ವಲಯದ ಮೀಸಲು ಪ್ರದೇಶದ ಎನ್.ಡಿ.ಬಿ 5ನೇ ಬ್ಲಾಕ್ ಗಸ್ತು ವ್ಯಾಪ್ತಿಯ ವಾಟದಹೊಸಳ್ಳಿ ಕೆರೆಗೆ ಕಳೆದ ಅಗಸ್ಟ್ 29ರಂದು ರಾತ್ರಿ ಟ್ಯಾಂಕರ್ʼನಲ್ಲಿ ತುಂಬಿಕೊಂಡು ತರಲಾದ ಕೆಮಿಕಲ್ ನೀರನ್ನು ಕೆರೆಗೆ ವಿಲೇವಾರಿ ಮಾಡುತ್ತಿದ್ದಾಗ ಸ್ಥಳೀಯರ ಸಮಯ ಪ್ರಜ್ಞೆಯಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿ ಅಪಾರ ಜೀವ ಹಾನಿ, ಅರಣ್ಯ ನಾಶಕ್ಕೆ ಕಾರಣವಾಗಲಿದ್ದ ದೊಡ್ಡ ಅನಾಹುತ ಕೂದಲೆಳೆಯಲ್ಲಿ ತಪ್ಪಿದೆ.
ಕೆಮಿಕಲ್ ಟ್ಯಾಂಕರ್ ಬಿಟ್ಟು ಚಾಲಕ ಎಸ್ಕೇಪ್
ಟ್ಯಾಂಕರ್ ದೃಶ್ಯಗಳು / ಸ್ಲೈಡ್ ಮಾಡಿ..
ಕೈಗಾರಿಕೆಗಳಿಂದ ಹೊರಬೀಳುವ ಅತ್ಯಂತ ವಿಷಕಾರಿ ತ್ಯಾಜ್ಯ ನೀರನ್ನು ವಾಟದಹೊಸಳ್ಳಿ ಕೆರೆಗೆ ಬಿಡುತ್ತಿದ್ದ ಸಂದರ್ಭದಲ್ಲೇ, ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ಮಾಡಿ ಬೃಹತ್ ಟ್ಯಾಂಕರ್ ಅನ್ನು ವಶಕ್ಕೆ ಪಡೆದು ಎಫ್.ಐ.ಆರ್ ದಾಖಲಿಸಿದ್ದಾರೆ. ಟ್ಯಾಂಕರ್ ಅನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಟ್ಯಾಂಕರ್ ಯಾವ ಕಂಪನಿಗೆ ಸೇರಿದ್ದು? ಎಲ್ಲಿಂದ ಬಂದಿದೆ ಇತ್ಯಾದಿ ವಿಷಯಗಳನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಹಾಗೆಯೇ, ಆ ರಾಸಾಯನಿಕ ನೀರನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದು ಯಾವ ರೀತಿಯ ವಿಷಕಾರಿ ನೀರು ಎಂಬುದು ಇನ್ನಷ್ಟೇ ತಿಳಿಯಬೇಕು. KA41 7380 ಸಂಖ್ಯೆಯ ಈ ಟ್ಯಾಂಕರ್ ಲಾರಿಯು ಬೆಂಗಳೂರಿನ ರಾಜರಾಜೇಶ್ವರಿ ನಗರದ ಜ್ಞಾನಭಾರತಿ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ. ಆದರೆ, ಹಿಂಭಾಗದಲ್ಲಿ ಟ್ಯಾಂಕರ್ʼಗೆ ನೋಂದಣಿ ಸಂಖ್ಯೆಯನ್ನು ತಪ್ಪಾಗಿದೆ. ಕೇವಲ MH 46 ಎಂದಷ್ಟೇ ಇದೆ. ಅಂದರೆ, ಈ ವಾಹನ ಬಂದಿರುವ ಮಾರ್ಗದ ಮಧ್ಯೆ, ʼಕೆಲವರುʼ ಇವರಿಗೆ ಸಹಕರಿಸಿರುವ ಅನುಮಾನವೂ ಇದೆ.
ಟ್ಯಾಂಕರ್ ನೀರು ವಿಲೇವಾರಿ ಆದ ಕೂಡಲೇ ನೆಲ ಸುಟ್ಟಿರುವುದು ಹಾಗೆಯೇ ಅಕ್ಕಪಕ್ಕದಲ್ಲಿದ್ದ ಮರ ಗಿಡಗಳು ಭಸ್ಮವಾಗಿರುವ ಚಿತ್ರಗಳು / ಸ್ಲೈಡ್ ಮಾಡಿ..
ಸುಟ್ಟು ಹೋಗಿದೆ ಅರಣ್ಯ ಪ್ರದೇಶ
ಟ್ಯಾಂಕರ್ʼನಿಂದ ವಿಲೇವಾರಿ ಆಗುತ್ತಿದ್ದ ನೀರು ನೆಲಕ್ಕೆ ಸ್ಪರ್ಶವಾಗುತ್ತಿದ್ದಂತೆ ಆ ನೆಲವೇ ಸುಟ್ಟುಹೋಗಿದೆ. ಅಷ್ಟೇ ಅಲ್ಲದೆ; ಪಕ್ಕದಲ್ಲೇ ಇದ್ದ ಗಿಡ ಮರಗಳು ಕೂಡ ಕೆಮಿಕಲ್ʼನಿಂದ ಸುಟ್ಟು ಹೋಗಿದೆ. ಟ್ಯಾಂಕರ್ʼನಲ್ಲಿದ್ದ ಪೂರ್ಣ ಕೆಮಿಕಲ್ ನೀರು ವಾಟದಹೊಸಳ್ಳಿ ಕೆರೆಗೆ ಮಿಶ್ರಣವಾಗಿದ್ದರೆ ಅದರಲ್ಲಿದ್ದ ಮೀನುಗಳ ಮಾರಣಹೋಮವೇ ನಡೆದುಹೋಗುತ್ತಿತ್ತು. ಅಲ್ಲದೆ, ಆ ಕೆರೆಯ ನೀರನ್ನು ಕುಡಿದು ಬದುಕುತ್ತಿರುವ ಅರಣ್ಯದ ವನ್ಯಜೀವಿಗಳು, ಜನ-ಜಾನುವಾರುಗಳ ಜೀವಕ್ಕೆ ಭಾರೀ ಹಾನಿಯಾಗುತ್ತಿತ್ತು. ಅರಣ್ಯಾಧಿಕಾರಿಗಳು ಸಕಾಲಕ್ಕೆ ದಾಳಿ ನಡೆಸಿ ಈ ದುರಂತವನ್ನೇ ತಪ್ಪಿಸಿದ್ದಾರೆ.
ಮುಖ್ಯವಾಗಿ ವಾಟದಹೊಸಹಳ್ಳಿ ಕೆರೆ ಸದಾ ನೀರಿನಿಂದ ಇದ್ದು, ಪ್ರಕೃತಿ ರಮಣೀಯ ಅರಣ್ಯ ಪ್ರದೇಶದ ನಡುವೆ ಇದೆ. ಸುತ್ತಲೂ ಬೆಟ್ಟಗಳ ಸಾಲು ಇದೆ. ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಇಂಥ ಜಾಗದಲ್ಲಿ ವಿಷಕಾರಿ ತ್ಯಾಜ್ಯ ವಿಲೇವಾರಿ ಮಾಡಿದ್ದು ಯಾರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅರಣ್ಯಾಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡು, ವಿಷಕಾರಿ ಟ್ಯಾಂಕರ್ ಬಂದ ಜಾಡು ಹಿಡಿದು ತನಿಖೆ ಮಾಡುತ್ತಿದ್ದಾರೆ.
ಇದೇ ವೇಳೆ; ಸರಿಯಾದ ಸಮಯಕ್ಕೆ ಧಾವಿಸಿಬಂದು ವಿಷಕಾರಿ ಟ್ಯಾಂಕರ್ ಅನ್ನು ವಶಪಡಿಸಿಕೊಂಡು ಭಾರೀ ಅನಾಹುತ ತಪ್ಪಿಸಿದ ಅರಣ್ಯಾಧಿಕಾರಿಗಳಿಗೆ ಜೀವನ ಪರ್ಯಂತ ಋಣಿಯಾಗಿರುತ್ತೇವೆ ಎಂದು ವಾಟದಹೊಸಳ್ಳಿ ಗ್ರಾಮಸ್ಥರು ಹೇಳುತ್ತಾರೆ.
ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ, ಗುಡಿಬಂಡೆ
ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಬರುವುದೇ ತಪ್ಪು. ಕಾನೂನು ಬಾಹಿರವಾಗಿ, ಪರಿಸರಕ್ಕೆ ಮಾರಕವಾದ ಹಾಗೂ ನಾಗರೀಕರಿಗೆ ತೊಂದರೆ ಉಂಟು ಮಾಡುವ ಕೆಮಿಕಲ್ ನೀರು ಕೆರೆಗೆ ಬಿಡುವಾಗ ಅಲ್ಲಿನ ಸುತ್ತಮುತ್ತಲಿನ ಅರಣ್ಯ ಪ್ರದೇಶ, ಮರಗಿಡಗಳು ಸೇರಿದಂತೆ ಭೂಮಿ ಸುಟ್ಟುಹೋಗಿದೆ. ನಾವು ಸ್ಥಳಕ್ಕೆ ಭೇಟಿ ನೀಡಿದಾಗ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದೆವೆ.
ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ, ಗುಡಿಬಂಡೆ
ಕನಕರಾಜ, ಉಪ ವಲಯ ಅರಣ್ಯಾಧಿಕಾರಿ, ಗುಡಿಬಂಡೆ
ನನ್ನ ಗಸ್ತು ವ್ಯಾಪ್ತಿಯ ಎನ್.ಡಿ.ಬಿ 5ನೇ ಬ್ಲಾಕ್ʼನಲ್ಲಿ ರೈತರ ಹಾಗೂ ಗ್ರಾಮಸ್ಥರ ಖಚಿತ ಮಾಹಿತಿಯ ಮೆರೆಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಸ್ಥಳಕ್ಕೆ ಹೋದಾಗ ಕೆರೆಯ ನೀರಿಗೆ ಕೆಮಿಕಲ್ ಮಿಶ್ರಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ನಾವು ಇನ್ನೇನು ಸ್ಥಳಕ್ಕೆ ಹೋಗುವಷ್ಟರಲ್ಲಿ ಚಾಲಕ ಕೆಮಿಕಲ್ ಟ್ಯಾಂಕರ್ ಅನ್ನು ಅಲ್ಲೇ ಬಿಟ್ಟು ಪರಾರಿಯಾದ.
ಕನಕರಾಜ, ಉಪ ವಲಯ ಅರಣ್ಯಾಧಿಕಾರಿ, ಗುಡಿಬಂಡೆ
ಪ್ರಕರಣ ದಾಖಲಾಗಿದೆ
ಅಗಂತುಕ ವಿಷಕಾರಿ ಟ್ಯಾಂಕರ್, ಚಾಲಕ, ಮಾಲೀಕರಿ ವಿರುದ್ಧ ಗುಡಿಬಂಡೆ ಅರಣ್ಯಾಧಿಕಾರಿಗಳು ಅರಣ್ಯಕ್ಕೆ ವಿಷ ಹಾಕುವ, ಅರಣ್ಯ ನಾಶ, ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಸೇರಿದಂತೆ ವಿವಿಧ ಕಲಮುಗಳ ಆಧಾರದ ಮೇಲೆ ಕೇಸ್ ದಾಖಲು ಮಾಡಿದ್ದಾರೆ.
ಹತ್ತಾರು ಅನುಮಾನ!!
ಇದೇ ವೇಳೆ ಅರಣ್ಯಾಧಿಕಾರಿಗಳನ್ನು ಹತ್ತಾರು ಅನುಮಾನಗಳು ಕಾಡುತ್ತಿವೆ. ಈ ವಿಷಕಾರಿ ಟ್ಯಾಂಕರ್ ಎಲ್ಲಿಂದ ಬಂತು? ಇದೇ ಮೊದಲು ಬಂದಿದೆಯಾ ಅಥವಾ ಈಗ್ಗೆ ಹಲವು ಬಾರಿ ಬಂದಿ ವಿಷ ಕಕ್ಕಿ ಹೋಗಿದೆಯಾ? ಇದು ಯಾರದ್ದು? ಯಾರಾದರೂ ಪ್ರಭಾವಿಗಳು ಇದ್ದಾರಾ? ಅದರೊಳಗೆ ಯಾವ ಕೆಮಿಕಲ್ ಇದೆ? ಗುಡಿಬಂಡೆ ಕಡೆಯಿಂದ, ಅಂದರೆ ಬೆಂಗಳೂರು ಕಡೆಯಿಂದ ಬಂತಾ? ಅಥವಾ ವಾಟದ ಹೊಸಹಳ್ಳಿ ಕಡೆಯಿಂದ ಬಂತಾ? ನಂಬರ್ ಪ್ಲೇಟ್ ಪ್ರಕಾರ ಅದು ಬೆಂಗಳೂರಿನ ವಾಹನ. ಅದು ಬೆಂಗಳೂರಿನಿಂದಲೇ ಬಂದಿದ್ದರೆ ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಪೆರೇಸಂದ್ರ, ಗುಡಿಬಂಡೆ,, ಇಷ್ಟೂ ಕಡೆ ಪೊಲೀಸರ ಕಣ್ತಪ್ಪಿಸಿ ಬಂದಿದೆ. ಅಷ್ಟೇ ಅಲ್ಲ, ಹೆದ್ದಾರಿ ಗಸ್ತು ಪೊಲೀಸರ ಕಣ್ಣಿಗೆ ಬೀಳಲಿಲ್ಲವೆ? ಯಾಕೆಂದರೆ ಮುಂದೆ ನಂಬರ್ ಪ್ಲೇಟ್ ಇದೆ, ಹಿಂದೆ ಇಲ್ಲ. ಹೋಗಲಿ, ಗಾಡಿಯ ನಂಬರ್ ಪ್ಲೇಟ್ ಅಸಲಿಯಾ? ನಕಲಿಯಾ? ಅಂತಿಮವಾಗಿ ಈ ವಿಷಕಾರಿ ಟ್ಯಾಂಕರ್ ಪ್ರಭಾವಿಗಳಿಗೆ ಸೇರಿದ್ದಾ? ಹಾಗೆ ಆಗಿದ್ದಕ್ಕೆ ಸುಲಭವಾಗಿ ಗುಡಿಬಂಡೆ ಮೀಸಲು ಅರಣ್ಯಕ್ಕೆ ಟ್ಯಾಂಕರ್ ನುಗ್ಗಲು ಕಾರಣವಾಯಿತಾ?
ಹೀಗೆ ಅನೇಕ ಪ್ರಶ್ನೆಗಳು ಕಾಡುತ್ತಿವೆ. ಇವೆಲ್ಲಕ್ಕೂ ಅರಣ್ಯಾಧಿಕಾರಿಗಳು ಉತ್ತರ ಹುಡುಕುತ್ತಿದ್ದಾರೆ. ಮೊದಲೇ ದಟ್ಟ ಅರಣ್ಯ, ಅಪರಾಧ ಪ್ರಕರಣಗಳ ತಾಣವಾದ ವಾಟದ ಹೊಸಹಳ್ಳಿ ಕೆರೆಯ ಸುತ್ತಮುತ್ತ ಹಾಗೂ ಇಡೀ ತಾಲೂಕಿನ ಮೀಸಲು ಅರಣ್ಯ ಪ್ರದೇಶದ ಮೇಲೆ ತೀವ್ರ ನಿಗಾ ಇಡುವ ಅಗತ್ಯವಿದೆ. ಅಲ್ಲದೆ, ಈ ವಿನಾಶಕಾರಿ ಟ್ಯಾಂಕರ್ ಮೂಲವನ್ನು ಪತ್ತೆ ಹಚ್ಚಬೇಕಿದೆ.
ಸುದ್ದಿ ಚೆನ್ನಾಗಿದೆ ಸರ್