ವಿಷಲಾರಿ ಚಾಲಕ, ಮಾಲೀಕ, ಕೈಗಾರಿಕೆ ಮಾಲೀಕನ ಬೆನ್ಹತ್ತಿದ ಅಧಿಕಾರಿಗಳು
ಗುಡಿಬಂಡೆಗೆ ಧಾವಿಸಿಬಂದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
CkNewsNow Big Impact!!
ಮುಂದೆ ಒಂದು ಪ್ಲೇಟ್, ಹಿಂದೆ ಒಂದು ಪ್ಲೇಟ್ ಇರುವ ವಿಷಲಾರಿ!!
by GS Bharath Gudibande
ಗುಡಿಬಂಡೆ: ತಾಲೂಕಿನ ವಲಯ ಅರಣ್ಯ ಮೀಸಲು ಪ್ರದೇಶದಲ್ಲಿ ಕೆರೆಗೆ ವಿಷಪ್ರಾಷಣ ಮಾಡಿಸಲೆತ್ನಿಸಿದ ಬೆಚ್ಚಿಬೀಳಿಸುವ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದೆ.
ಸಿಕೆನ್ಯೂಸ್ ನೌ ಈ ಸುದ್ದಿ ಬ್ರೇಕ್ ಮಾಡುತ್ತಿದ್ದಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಗುಡಿಬಂಡೆಗೆ ಧಾವಿಸಿ ಬಂದಿದ್ದು, ಅರಣ್ಯಾಧಿಕಾರಿಗಳಿಂದ ಖುದ್ದು ಮಾಹಿತಿ ಪಡೆದರು. ಅಲ್ಲದೆ, ಯಾವುದೇ ಕಾರಣಕ್ಕೂ ಈ ಟ್ಯಾಂಕರ್ ಅನ್ನು ಬಿಡಬಾರದು. ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು; ಪ್ರಕರಣದ ಆಳಕ್ಕಿಳಿದಂತೆ ಕೆಲ ಭಯಾನಕ ಸಂಗತಿಗಳು ಹೊರಬೀಳುತ್ತಿವೆ. ಒಂದು ವರ್ಷದ ಹಿಂದೆ ಗೌರಿಬಿದನೂರು ತಾಲೂಕಿನ ವಿವಿಧೆಡೆ ಖಾಸಗಿ ಜಮೀನುಗಳಲ್ಲಿ, ಸಾರ್ವಜನಿಕ ನಿರ್ಜನ ಪ್ರದೇಶಗಳಲ್ಲಿ ಇದೇ ರೀತಿಯ ಟ್ಯಾಂಕರ್ʼಗಳು ವಿಷಕಾರಿ ರಾಸಾಯನಿಕವನ್ನು ವಿಲೇವಾರಿ ಮಾಡಿದ್ದವು ಎನ್ನುವ ಸ್ಫೋಟಕ ಅಂಶವೂ ಬೆಳಕಿಗೆ ಬಂದಿದೆ. ರಾಸಾಯನಿಕ ಬಿದ್ದ ಪರಿಣಾಮ ಈವರೆಗೂ ಆ ಭೂಮಿಯಲ್ಲಿ ಒಂದು ರಾಗಿ ಕಾಳನ್ನೂ ಬೆಳೆಯಲಾಗಿಲ್ಲ. ಅಂದರೆ; ಆ ಭೂಮಿ ಸಂಪೂರ್ಣವಾಗಿ ನಿಸ್ಸಾರವಾಗಿದೆ.
ಇದೇ ವೇಳೆ ವಾಟದಹೊಸಹಳ್ಳಿ ಕೆರೆಯ ಬಳಿ ವಶಕ್ಕೆ ತೆಗೆದುಕೊಂಡ ಟ್ಯಾಂಕರ್ ಬೆನ್ಹತ್ತಿರುವ ವಲಯ ಅರಣ್ಯಾಧಿಕಾರಿಗಳು, ಈಗಾಗಲೇ ಅದರಲ್ಲಿದ್ದ ರಾಸಾನಿಯಕದ ಸ್ಯಾಂಪಲ್ ಅನ್ನು ಚಿಕ್ಕಬಳ್ಳಾಪುರಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಕಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಅರಣ್ಯ ವಲಯದ ಮೀಸಲು ಪ್ರದೇಶ ಎನ್.ಡಿ.ಬಿ 5ನೇ ಬ್ಲಾಕ್ ಗಸ್ತು ವ್ಯಾಪ್ತಿಯ ವಾಟದಹೊಸಳ್ಳಿ ಕೆರೆಗೆ ಕಳೆದ ಅಗಸ್ಟ್ 29ರಂದು ರಾತ್ರಿ ಟ್ಯಾಂಕರ್ʼನಲ್ಲಿ ತುಂಬಿಕೊಂಡು ತರಲಾದ ಕೆಮಿಕಲ್ ನೀರನ್ನು ಕೆರೆಗೆ ವಿಲೇವಾರಿ ಮಾಡುತ್ತಿದ್ದಾಗ ಸ್ಥಳೀಯರ ಸಮಯ ಪ್ರಜ್ಞೆಯಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿ ಅಪಾರ ಜೀವ ಹಾನಿ, ಅರಣ್ಯ ನಾಶಕ್ಕೆ ಕಾರಣವಾಗಲಿದ್ದ ದೊಡ್ಡ ಅನಾಹುತ ಕೂದಲೆಳೆಯಲ್ಲಿ ತಪ್ಪಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ
ಅಕ್ರಮ ಮತ್ತು ವಿನಾಶಕಾರಿ ಕೆಮಿಕಲ್ ವಿಲೇವಾರಿ ಪ್ರಕರಣದ ಬಗ್ಗೆ ಗುಡಿಬಂಡೆ ಅರಣ್ಯ ಅಧಿಕಾರಿಗಳು ಹೆಚ್ಚಿನ ಕ್ರಮಕ್ಕಾಗಿ ಚಿಕ್ಕಬಳ್ಳಾಪುರಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮಂಡಳಿ ಅಧಿಕಾರಿಗಳು ಗುಡಿಬಂಡೆಗೆ ಭೇಟಿ ನೀಡಿ ಕೆಮಿಕಲ್ ಟ್ಯಾಂಕರ್ ನಲ್ಲಿರುವ ರಾಸಾಯನಿಕ ಅಂಶವನ್ನು ಪರಿಶೀಲಿಸಲಿದ್ದಾರೆ.
ವಿಷಲಾರಿಯಿಂದ ಸಂಗ್ರಹ ಮಾಡಿರುವ ರಾಸಾಯನಿಕದ ಸ್ಯಾಂಪಲ್.
ಎಲ್ಲಿಂದ ಬಂತು ಈ ವಿನಾಶಕಾರಿ ಟ್ಯಾಂಕರ್?
ಗೌರಿಬಿದನೂರು ಕೈಗಾರಿಕಾ ಪ್ರದೇಶದಿಂದ ಹೊರಗೆ ಬರುವ ತ್ಯಾಜ್ಯ ಹಾಗೂ ರಾಸಾಯನಿಕ ನೀರನ್ನು ನಿರ್ಜನ ಪ್ರದೇಶಗಳಲ್ಲಿ ಬಿಡಲು ಗುತ್ತಿಗೆ ಒಪ್ಪಿಕೊಂಡಿರುವ ಟ್ಯಾಂಕರ್ ಮಾಲೀಕರು, ಹಣದ ಆಸೆಗಾಗಿ ಈ ಕೃತ್ಯ ನಡೆಸಿದ್ದಾರೆ. ಈ ಕೆಮಿಕಲ್ ಟ್ಯಾಂಕರ್ ಹೊಸಕೋಟೆ ಮೂಲದವರಾದ ಮೊಹಮ್ಮದ್ ಜಬೀವುಲ್ಲಾ ಎಂಬುವವರಿಗೆ ಸೆರಿದ್ದಾಗಿದೆ ಗೊತ್ತಾಗಿದ್ದು, ಅರಣ್ಯಾಧಿಕಾರಿಗಳು ಇನ್ನೂ ಆಳವಾಗಿ ತನಿಖೆ ನಡೆಸುತ್ತಿದ್ದಾರೆ. ಗೌರಿಬಿದನೂರು ಭಾಗದಲ್ಲಿ ರಾಸಾಯನಿಕ ವಿಲೇವಾರಿ ಮಾಡಿದ ಟ್ಯಾಂಕರ್ʼಗಳಲ್ಲಿ ಗುಡಿಬಂಡೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಟ್ಯಾಂಕರ್ ಕೂಡ ಇದೆಯಾ ಎನ್ನುವ ಬಗ್ಗೆಯೂ ತನಿಖೆ ನಡೆದಿದೆ.
ಗೌರಿಬಿದನೂರಿನಲ್ಲಿಯೂ ನಡೆದಿತ್ತು!
ಗುಡಿಬಂಡೆಗೆ ಪಕ್ಕದಲ್ಲೇ ಇರುವ ಗೌರಿಬಿದನೂರು ತಾಲೂಕಿನಲ್ಲಿ ಕಳೆದ ವರ್ಷ (9/11/2020) ಇದೇ ರೀತಿಯ ವಿಷಕಾರಿ ರಾಸಾಯನಿಕ ನೀರಿನ ವಿಲೇವಾರಿ ಮಾಡಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.
ಗೌರಿಬಿದನೂರು ತಾಲೂಕಿನಲ್ಲಿ ರಾಸಾಯನಿಕ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಚಿಕ್ಕಬಳ್ಳಾಪುರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಅಧಿಕಾರಿಗಳಿಗೆ ಗೌರಿಬಿದನೂರು ವಲಯ ಅರಣ್ಯಾಧಿಕಾರಿ ಬರೆದಿದ್ದ ಪತ್ರ ಅಥವಾ ದೂರು.
ಗೌರಿಬಿದನೂರು ತಾಲೂಕಿನ ಅಲಕಾಪುರ, ಪೋತೇನಹಳ್ಳಿ, ಚಿಕ್ಕಕುರುಗೋಡು, ಕುಡುಮಲಕುಂಟೆ ಮುಂತಾದ ಗ್ರಾಮಗಳಿಗೆ ವಿವಿಧ ಕೈಗಾರಿಕಾ ಪ್ರದೇಶಗಳಿಂದ ಲಾರಿಗಳಲ್ಲಿ ಕೈಗಾರಿಕೆಗಳ ತ್ಯಾಜ್ಯ ಹಾಗೂ ಅಪಾಯಕಾರಿ ವಿಷಕಾರಿ ರಾಸಾಯನಿಕ ದ್ರಾವಣವನ್ನು ತಂದು ರಸ್ತೆ ಬದಿ ಬಿಟ್ಟ ಪರಿಣಾಮ ಗಿಡಮರಗಳು, ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ಪೂರ್ಣವಾಗಿ ನಾಶವಾಗಿದ್ದವು.
ರಾಸಾಯನಿಕ ದ್ರಾವಣ ಬಿದ್ದ ಜಾಗದಲ್ಲಿ ಇಂದಿಗೂ ಹುಲ್ಲು ಸಹ ಬೆಳೆಯುತ್ತಿಲ್ಲ, ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಆಸಿಡ್ ಮಿಶ್ರಿತ ರಾಸಾಯನಿಕ ದ್ರಾವಣ ಬಿಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದರೂ ಚಿಕ್ಕಬಳ್ಳಾಪುರದ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ಕ್ರಮಗೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಕಾರಣ ಪುನಾ ಕೆಮಿಕಲ್ ವಿಲೇವಾರಿ ಘಟನೆ ಮರುಕಳಿಸಿರುವುದು ಎಲ್ಲರ ನಿದ್ದೆ ಕೆಡಿಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕಿರಾತಕರು ಇದುವರೆಗೂ ನಿರ್ಜನ ಪ್ರದೇಶಲ್ಲಿ ಅಥವಾ ಯಾವುದಾದರೂ ಖಾಸಗಿ ಜಮೀನಿನಲ್ಲಿ ರಾಸಾಯನಿಕಗಳನ್ನು ವಿಲೇವಾರಿ ಮಾಡುತ್ತಿದ್ದರು. ಆದರೆ, ಈಗ ಕಾಡಿನ ಮಧ್ಯೆ ಇರುವ, ಅಪರೂಪದ ವನ್ಯ ಸಂಪತು, ಜನ ಜಾಣುವಾರುಗಳು ಅವಲಂಭಿಸಿರುವ ಅತ್ಯಂತ ಪ್ರಮುಖವಾದ ವಾಟದಹೊಸಹಳ್ಳಿ ಕೆರೆಗೇ ವಿಷಪ್ರಾಷಣ ಮಾಡುವ ದುಸ್ಸಾಹಸ ಮಾಡಿದ್ದಾರೆ. ಈ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ತಪ್ಪಿತಸ್ಥ ಕೈಗಾರಿಕೆ, ವಾಹನ ಮಾಲೀಕ ಹಾಗೂ ಇದಕ್ಕೆ ಸಹಕರಿಸಿ ವ್ಯವಸ್ಥೆಯೊಳಗಿನ ಅಧಿಕಾರಿಗಳ ಮೇಲೆಯೂ ಕ್ರಮ ಜರುಗಿಸಬೇಕು ಎಂದು ಜನ ಒತ್ತಾಯ ಮಾಡುತ್ತಿದ್ದಾರೆ.
ಆಘಾತಗೊಂಡ ಶಾಸಕರು
ಸಿಕೆನ್ಯೂಸ್ ನೌ ನಲ್ಲಿ ಸುದ್ದಿ ಪ್ರಸಾರವಾಗಿದ್ದ ತಕ್ಷಣ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅರಣ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿ, ಕ್ರಮಿನಲ್ ಕೇಸ್ ದಾಖಲಿಸಿ ಎಂದು ಸೂಚಿಸಿದರು, ಹಾಗೂ ಅಪರಾಧಿ ಕೆಲಸ ಯಾರೇ ಮಾಡಿದ್ದರು ಅವರಿಗೆ ತಕ್ಕ ಪಾಠ ಕಲಿಸಿಬೇಕು ಎಂದರು.
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಶಾಸಕ ಸುಬ್ಬಾರೆಡ್ಡಿ ಅವರು, ವಿಷಕಾರಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ತ್ಯಾಜ್ಯ ವಿಲೇವಾರಿ ಮಾಡಲು ಹೇಳಿದ ಸಂಬಂಧಿತ ಕೈಗಾರಿಕೆಯ ಮಾಲೀಕ, ಅಲ್ಲಿನ ಅಧಿಕಾರಿಗಳು, ಅಲ್ಲಿ ವಿಷಕಾರಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಗೊತ್ತಿದ್ದೂ ಸುಮ್ಮನಿದ್ದ ಸಂಬಂಧಿತ ಅಧಿಕಾರಿಗಳು ಹಾಗೂ ಟ್ಯಾಂಕರ್ ಮಾಲೀಕ, ಚಾಲಕ ಎಲ್ಲರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ನನಗೆ ಸಿಕ್ಕ ಮಾಹಿತಿ ಪ್ರಕಾರ ಬೆಂಗಳೂರು ಮತ್ತಿತರೆ ಕಡೆ ಫ್ಯಾಕ್ಟರಿಗಳಲ್ಲಿ ವೇಸ್ಟ್ ಆಸಿಡ್ ಉತ್ಪತ್ತಿಯಾಗುತ್ತಿದೆ. ಬೆಂಗಳೂರಿನಂಥ ನಗರದಲ್ಲಿ ಅದನ್ನು ವಿಲೇವಾರಿ ಮಾಡಲು ಆಗುತ್ತಿಲ್ಲ. ಆದ್ದರಿಂದ ಕೆಲವರು ರಾತ್ರೋರಾತ್ರಿ ಕಣ್ತಪ್ಪಿಸಿ ಬಂದು ನಮ್ಮ ಭಾಗದ ಅರಣ್ಯ ಪ್ರದೇಶ, ಇಲ್ಲವೇ ನಿರ್ಜನ ಪ್ರದೇಶಗಳಲ್ಲಿ ವಿಲೇವಾರಿ ಮಾಡುತ್ತಿದ್ದಾರೆ ಎಂದ ಶಾಸಕರು, ಈ ವಾಹನವೇ ನಕಲಿ ಅಂತ ಗೊತ್ತಾಯಿತು. ಹಿಂದೆ ಒಂದು ನಂಬರ್ ಪ್ಲೇಟ್, ಮುಂದೆ ಒಂದು ನಂಬರ್ ಪ್ಲೇಟ್ ಎಂದರು.
ವಿಷಲಾರಿಯನ್ನು ಪರಿಶೀಲನೆ ಮಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ.
ಯಾರು ಏನೆಂದರು?
ಗುಡಿಬಂಡೆ ತಾಲೂಕಿನ ಮೀಸಲು ವಲಯ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ ಬಗ್ಗೆ ಎಚ್ಚರಿಕೆ ವಹಿಸಿ ವಾಹನ ಸೀಜ್ ಮಾಡಿರುವುದು ಒಳ್ಳೆಯ ಕೆಲಸ. ಈ ಬಗ್ಗೆ ನಾನು ರಾಜ್ಯದ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯುತ್ತೇನೆ ಹಾಗೂ ಈ ಬಗ್ಗೆ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡುತ್ತೇನೆ. ತಪ್ಪಿತಸ್ಥರಿಗೆ ತಕ್ಕಪಾಠ ಕಲಿಸುತ್ತೇನೆ.
ಎಸ್.ಎನ್.ಸುಬ್ಬಾರೆಡ್ಡಿ, ಶಾಸಕರು
ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ
ಒಂದು ವರ್ಷದ ಹಿಂದೆ ಗೌರಿಬಿದನೂರು ತಾಲೂಕು ರೈತರೊಬ್ಬರ ಭೂಮಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಈಗ ಗುಡಿಬಂಡೆ ತಾಲೂಕಿನಲ್ಲಿ ನಡೆದ ಘಟನೆಯ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಾಗಿದೆ ಹಾಗೂ ಹೆಚ್ಚಿನ ಮಾಹಿಗಾಗಿ ಆರೋಪಿಗಳನ್ನು ಹುಡುಕುತ್ತಿದ್ದೇವೆ.
ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ, ಗುಡಿಬಂಡೆ
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..