ಜನ ಗುಂಪುಗೂಡುತ್ತಿದ್ದಂತೆ ಟ್ಯಾಂಕರ್ ಬಿಟ್ಟು ಓಡಿದ ಚಾಲಕ, ಕ್ಲೀನರ್
ವಿಷಲಾರಿ ಹಿಂಬಾಲಿಸಿ ಬಂದಿದ್ದ ಖತರ್ನಾಕ್ ಕಾರ್ಖಾನೆ ಸಿಬ್ಬಂದಿ
by GS Bharath Gudibande
ಗುಡಿಬಂಡೆ: ಸಮೀಪದ ವಾಟದಹೊಸಹಳ್ಳಿ ಕೆರೆಗೆ ವಿಷಪ್ರಾಷಣ ಮಾಡಿದ ದುರುಳರು, ಅಡ್ಡಿಪಡಿಸಲೆತ್ನಿಸಿದ ಸ್ಥಳೀಯರಿಗೆ ಬೆದರಿಕೆ ಹಾಕುವುದರ ಜತೆಗೆ, ಹಣದ ಆಮಿಷವನ್ನೂ ಒಡ್ಡಿರುವ ಅಂಶವೂ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಅಗಸ್ಟ್ 29 ರಂದು ಕೆಮಿಕಲ್ ಟ್ಯಾಂಕರ್ ತಾಲೂಕು ಮೀಸಲು ಅರಣ್ಯ ವ್ಯಾಪ್ತಿಯ ಚಿಮುಕಲಹಳ್ಳಿಯ ಸಮೀಪದಲ್ಲಿ ವಿನಾಶಕಾರಿ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುತ್ತಿದ್ದಾಗ, ಸ್ಥಳೀಯರು ಟ್ಯಾಂಕರ್ ಅನ್ನು ಸುತ್ತುವರೆದು ಅಡ್ಡಿಪಡಿಸಿ ತೀವ್ರ ಪ್ರತಿರೋದ ಒಡ್ಡಿದ್ದಾರೆ.
ಕೂಡಲೇ ಕಿರಾತಕ ಬುದ್ಧಿ ಪ್ರಯೋಗಿಸಿರುವ ದುರುಳರು ಮೊದಲು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಜನ ಜಗ್ಗದಿದ್ದಾಗ ಹಣದ ಆಮಿಷ ಒಡ್ಡಿ, ʼಇದರ ಬಗ್ಗೆ ಯಾರಿಗೂ ಮಾಹಿತಿ ಕೊಡಬೇಡಿʼ ಎಂದ ಅಂಗಲಾಚಿ ಹಣ ನೀಡಲು ಮುದಾಗಿದ್ದಾರೆ. ಈ ಅಂಶವು ವಿಷಲಾರಿ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮೀಸಲು ಅರಣ್ಯ ಪ್ರದೇಶ ಹಾಗೂ ವಾಟದಹೊಸಳ್ಳಿ ಕೆರೆಗೆ ಗೌರಿಬಿದನೂರು ಮೂಲದ ಕೈಗಾರಿಕೆಗಳ ರಸಾಯನಿಕ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾಗ ಹತ್ತಿರದಲ್ಲೇ ಇರುವ ಚಿಮುಕಲಹಳ್ಳಿ ಜನರು ಭಾರೀ ವಿರೋಧ ವ್ಯಕ್ತಪಡಿಸಿ, ಆ ಟ್ಯಾಂಕರ್ ಅನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.
ಪ್ರತಿ ಮೂರುನಾಲ್ಕು ದಿನಗಳಿಗೆ ಒಮ್ಮೆ ವಿಷ ವಿಲೇವಾರಿ
ಭಯಾನಕ ಸಂಗತಿ ಎಂದರೆ, ವಿಷಲಾರಿ ಕಿರಾತಕರು ಈ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ವಿಲೇವಾರಿ ಮಾಡಿರುವುದು ಇದೇ ಮೊದಲಲ್ಲ. ಸ್ಥಳೀಯರು ಹೇಳುವಂತೆ, ಹಲವು ದಿನಗಳಿಂದ ಈ ರಸ್ತೆಯಲ್ಲಿ ಹೋಗಿಬರುವಾಗ ಕೆಮಿಕಲ್ʼನ ಕೆಟ್ಟ ವಾಸನೆ ಬರುತ್ತಿತ್ತು, ಇದರ ಬಗ್ಗೆ ಗ್ರಾಮಸ್ಥರು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಕಳೆದ ಅಗಸ್ಟ್ 29ರಂದು ಹಾಡಹಗಲೇ ಅರಣ್ಯ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವಾಗ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು, ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ʼಗೆ ಧರ್ಮದೇಟು ಕೊಡಲು ಮುಂದಾದರು. ಆದರೆ, ಅಪಾಯದ ಮುನ್ನೆಚ್ಚರಿಕೆ ಅವರಿಬ್ಬರೂ ಪರಾರಿಯಾದರು ಎಂದು ಚಿಮುಕಲಹಳ್ಳಿ ಗ್ರಾಮಸ್ಥರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಹಣಕ್ಕಿಂತ ಅರಣ್ಯ ಮುಖ್ಯ ಎಂದ ಹಳ್ಳಿಗರು
ಯಾವಾಗ ಗ್ರಾಮಸ್ಥರು ಟ್ಯಾಂಕರ್ ಅನ್ನು ಅಡ್ಡಗಟ್ಟಿ ಚಾಲಕ ಕ್ಲೀನರ್ ಮೇಲೆ ದಾಳಿಗೆ ಮುಂದಾದರೋ ಅಲ್ಲೆಲ್ಲೋ ಮರ ಗಿಡಗಳ ಪೊದೆಗಳಲ್ಲಿ ಅಡಗಿದ್ದ ವಿಷಲಾರಿಗೆ ಸಂಬಂಧಿಸಿದ ಇನ್ನಷ್ಟು ಜನರು ಪ್ರತ್ಯಕ್ಷರಾದರು. ಅವರು ಬಂದವರೇ ನಮ್ಮ ಜತೆ ದರ್ಪದಿಂದ ವರ್ತಿಸಿ, ಬೆದರಿಕೆ ಒಡ್ಡುವ ರೀತಿ ಮಾತನಾಡಿದರು. ನಾವು ಜಗ್ಗಲಿಲ್ಲ. ಈ ಸಮಸ್ಯೆಯನ್ನು ಇಲ್ಲಿಗೆ ಬಿಟ್ಟು ಬಿಡಿ, ಯಾರಿಗೂ ದೂರು ನೀಡಬೇಡಿ, ನಿಮಗೆ ಹಣ ಕೊಡುತ್ತೇವೆ ಎಂದು ಹೇಳಿದಾಗ ರೈತರು ಮತ್ತಷ್ಟು ರೊಚ್ಚಿಗೆದ್ದರು ಎಂದು ಚಿಮುಕಲಹಳ್ಳಿ ಗ್ರಾಮದ ಧನಂಜಯ್ ಹೇಳಿದರು.
ವಾರಾಂತ್ಯದಲ್ಲಿ ರಾಜ್ಯದ ವಿವಿಧ ಸ್ಥಳಗಳಿಂದ ಸಾವಿರಾರು ಪ್ರವಾಸಿಗರು ಈ ಭಾಗಕ್ಕೆ ಬರುತ್ತಾರೆ. ಅವರಿಗೆ ತೊಂದರೆ ಆಗದಂತೆ ಎಚ್ಚರ ವಹಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಪ್ರವಾಸಿಗರು ಬರುವುದರಿಂದ ನಮ್ಮ ಹಳ್ಳಿಗಳು ಈಗೀಗ ಸ್ವಲ್ಪ ಅಭಿವೃದ್ಧಿ ಕಡೆ ಹೋಗುತ್ತಿವೆ. ಈ ರೀತಿಯ ಪ್ರಕರಣ ಕಂಡು ಬರುವುದರಿಂದ ನಮ್ಮ ಗ್ರಾಮಕ್ಕೆ ಕಟ್ಟ ಹೆಸರು ಬರುತ್ತದೆ ಎಂದು ಅವರು ಅಳಲು ತೋಡಿಕೊಂಡರು.
ವಾಟದಹೊಸಹಳ್ಳಿ ಕೆರೆಯು ಪ್ರಾಕೃತಿಕವಾಗಿ ಅತ್ಯಂತ ಸುಂದರ ಮತ್ತು ಸೂಕ್ಷ್ಮ ತಾಣವಾಗಿದೆ. ಅನೇಕ ವನ್ಯಜೀವಿಗಳ ತಾಣವಾಗಿದೆ. ಅಪರೂಪದ ಮಗ ಗಿಡಗಳ ಆಗರವಾಗಿದೆ. ಹೀಗಾಗಿ ವಾರಾಂತ್ಯದ ವೇಳೆ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಒಂದು ವೇಳೆ ಈ ವಿಷತ್ಯಾಜ್ಯ ಕೆರೆ ಸೇರಿದ್ದಿದ್ದರೆ ಅಪಾರ ಮೀನುಗಳ ಮಾರಣಹೋಮವೇ ನಡೆಯುತ್ತಿತ್ತು. ಯಾವುದೇ ಕಾರಣಕ್ಕೂ ಟ್ಯಾಂಕರ್ ಅನ್ನು ಬಿಡಬಾರದು. ಅದಕ್ಕೆ ಕಾರಣರಾದ ಎಲ್ಲರನ್ನೂ ಕಾನೂನಿನ ಕಟಕಟೆಗೆ ತಂದು ಶಿಕ್ಷಿಸಬೇಕು ಎಂದು ಧನಂಜಯ ಒತ್ತಾಯ ಮಾಡಿದರು.
ಅಲ್ಲಿಗೆ ವಿಷಲಾರಿಗಳು ವಿಷ ವಿಲೇವಾರಿ ಮಾಡುವ ಸಂದರ್ಭದಲ್ಲಿ ಕೇವಲ ಚಾಲಕ, ಕ್ಲೀನರ್ ಮಾತ್ರವೇ ಇರುವುದಿಲ್ಲ. ಅವರ ಜತೆ, ಆ ಕಾರ್ಖಾನೆಗೆ ಸಂಬಂಧಿಸಿದ ಅಧಿಕಾರಿಗಳು, ಸಂಬಂಧಿತ ಸಿಬ್ಬಂದಿಯೂ ಹಿಂಬಾಲಿಸಿ ಮೂರನೇ ಕಣ್ಣಿಗೆ ಗೊತ್ತಾಗದಂತೆ ಕಾರ್ಯ ಮುಗಿಸಿ ಹೋಗುತ್ತಿದ್ದರು ಎಂಬುದು ಇದರಿಂದ ಅರ್ಥವಾಗುತ್ತದೆ. ಅಲ್ಲದೆ, ಇದೇ ಮೊದಲ್ಲದೆ, ಕೆಲ ದಿನಗಳಿಂದ ನಿರಂತರವಾಗಿ ಈ ಅರಣ್ಯದಲ್ಲಿ ವಿಷ ವಿಲೇವಾರಿ ಆಗಿರುವ ಅಂಶವೂ ಬೆಳಕಿಗೆ ಬಂದಿದೆ.
ಧನಂಜಯ್, ಚಿಮುಕಲಹಳ್ಳಿ ಗ್ರಾಮಸ್ಥ
ಸುಮಾರು ಮೂರು ನಾಲ್ಕು ದಿನಗಳಿಗೊಮ್ಮೆ ರಾಸಾಯನಿಕ ತ್ಯಾಜ್ಯ ನೀರನ್ನು ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಓಡಾಡುವಾಗ ದುರ್ವಾಸನೆ ಬರುತ್ತಿತ್ತು. ಇವರು ಹಗಲಿನಲ್ಲಿ ಕೈಗಾರಿಕೆಗಳ ವಿಷತ್ಯಾಜ್ಯ ವಿಲೇವಾರಿ ಮಾಡುತ್ತಿರುವಾಗಲೇ ನಮಗೆ ಸಿಕ್ಕಿಬಿದ್ದರು. ಆಗ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಟ್ಯಾಂಕರ್ ಅನ್ನು ಅರಣ್ಯ ಇಲಾಖೆಗೆ ಒಪ್ಪಿಸಿದೆವು. ನಮ್ಮ ಗ್ರಾಮಸ್ಥರು ಯಾವುದೇ ಆಮಿಷಗಳಿಗೆ ಒಳಗಾಗಿದೆ ಎಲ್ಲರ ಶ್ರೇಯಸ್ಸಿಗಾಗಿ ಹೋರಾಟಕ್ಕೆ ಮುಂದಾಗಿದ್ದೇವೆ. ನಮಗೆ ಸಹಕಾರ ನೀಡಿದ ಅರಣ್ಯಾಧಿಕಾರಿಗಳಿಗೆ, ಪೊಲೀಸ್ ಇಲಾಖೆ ಹಾಗೂ ಎಲ್ಲರಿಗಿಂತ ಮೊದಲೇ ಈ ಭಯಾನಕ ಸುದ್ದಿಯನ್ನು ವರದಿ ಮಾಡಿ ಎಲ್ಲರ ಕಣ್ತೆರೆಸಿದ ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಧನ್ಯವಾದಗಳು.
ಧನಂಜಯ್, ಚಿಮುಕಲಹಳ್ಳಿ ಗ್ರಾಮಸ್ಥ
ಎಲ್ಲರಿಗಿಂತ ಮೊದಲೇ ಸುದ್ದಿ ಮಾಡಿದ ಸಿಕೆನ್ಯೂಸ್ ನೌ!!
ಈ ಸುದ್ದಿಗಳನ್ನು ಓದಲು ಕೆಳಗಿನ ಲಿಂಕ್ʼಗಳನ್ನು ಕ್ಲಿಕ್ ಮಾಡಿ..