24ರಂದು ಜಂಟಿ ಅಧಿವೇಶನ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವರಿಗೆ ಆಹ್ವಾನ: ಸ್ಪೀಕರ್ ಕಾಗೇರಿ
ಬೆಂಗಳೂರು: ಇದೇ 13ರಿಂದ 24 ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದ್ದು,ಶಾಸಕರು ಮತ್ತು ಸಚಿವರಿಗೆ ರಜೆ ಇಲ್ಲ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, 24ರಂದು ಶುಕ್ರವಾರ ಮಧ್ಯಾಹ್ನ ಜಂಟಿ ಅಧಿವೇಶನ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಜಂಟಿ ಅಧಿವೇಶನದಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಅಧಿವೇಶನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸುತ್ತೇವೆ. ಈ ಬಗ್ಗೆ ಈಗಾಗಲೇ ಸಿಎಂ ಹಾಗೂ ವಿಧಾನ ಪರಿಷತ್ ಸಭಾಪತಿಯವರ ಜತೆ ಚರ್ಚೆ ನಡೆಸಲಗಿದೆ ಎಂದು ಅವರು ತಿಳಿಸಿದರು.
ಇದು ಅತ್ಯಂತ ಮಹತ್ವದ ಅಧಿವೇಶನ. ಅನೇಕ ಮಸೂದೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಕಲಾಪದ ವೇಳೆ ಸದಸ್ಯರು ರಜೆ ಕೇಳಬಾರದು. ಎಲ್ಲರೂ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದ ಸ್ಪೀಕರ್ ಅವರು; ಕೋರಂ ಕೊರತೆ ಕಾಣಿಸಿಕೊಳ್ಳಬಾರದು. ಪ್ರಶ್ನೆ ಕೇಳುವವರು ಹಾಗೂ ಉತ್ತರ ಹೇಳುವವರು ಇಲ್ಲ ಎನ್ನುವಂಥ ಪರಿಸ್ಥಿತಿ ಉಂಟಾಗಬಾರದು. ಕಲಾಪದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಹಾಗೂ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಹತ್ತನೇ ಅಧಿವೇಶನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ಧೇವೆ. ಯಾರೂ ಗೈರಾಗಬಾರದು. ಮಂತ್ರಿಗಳು ಯಾವುದೋ ನೆಪವೊಡ್ಡಿ ರಜೆ ಕೇಳಬೇಡಿ. ಅಗತ್ಯವಿದ್ದಲ್ಲಿ ಸಹಕಾರ ನೀಡಲಾಗುವುದು. ಕಡ್ಡಾಯ ಹಾಜರಾತಿ ಖಚಿತಪಡಿಸುವಂತೆ ಈಗಾಗಲೇ ಎಲ್ಲ ಪಕ್ಷಗಳ ವಿಪ್ಗಳಿಗೂ ತಿಳಿಸಲಾಗಿದೆ ಎಂದು ಸಭಾಧ್ಯಕ್ಷರು ವಿವರಿಸಿದರು.
ಅತ್ಯುತ್ತಮ ಶಾಸಕ ಪ್ರಶಸ್ತಿ
ರಾಜ್ಯ ಸರ್ಕಾರದಿಂದ ನಮಗೆ 18 ಬಿಲ್‌ಗಳು ಬಂದಿವೆ. ಮೊದಲೇ ಬಿಲ್ ಬರಬೇಕೆಂದು ಸರ್ಕಾರಕ್ಕೆ ತಿಳಿಸಿದ್ದೆ. ಹಲವಾರು ಪ್ರಮುಖ ವಿಧೇಯಕಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿದೆ. ಹೀಗಾಗಿ ಎಲ್ಲರೂ ಹಾಜರಿದ್ದು ಅರ್ಥಪೂರ್ಣವಾಗಿ ಚರ್ಚೆ ನಡೆಸಬೇಕು. ಹೀಗಾಗಿ ಅಧಿವೇಶನದ ವೇಳೆ ಯಾರೂ ರಜೆ ಕೇಳದಂತೆ ತಿಳಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರ ಗಮನಕ್ಕೆ ಈ ವಿಷಯ ತರಲಾಗಿದೆ ಎಂದು ಅವರು ವಿವರಗಳನ್ನು ನೀಡಿದರು.
ಸೆ.24ರಂದು ವಿಶೇಷ ಜಂಟಿ ಅಧಿವೇಶನ ಕರೆಯಲಾಗುತ್ತದೆ. ಅಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಬಹುಮುಖ್ಯವಾಗಿ ಅಧಿವೇಶನದ ಕೊನೆಯ ಭಾಗದಲ್ಲಿ ಪ್ರಶಸ್ತಿ ಕೊಡುವ ಬಗ್ಗೆ ಮಾತನಾಡಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡುವ ಬಗ್ಗೆ ಚರ್ಚೆ ನಿರ್ಧರಿಸಲಾಗಿದೆ ಸ್ಪೀಕರ್ ಅವರು ತಿಳಿಸಿದರು.
ನೀತಿ ನಿರೂಪಣಾ ಸಮಿತಿಯ ವಿಚಾರಗಳನ್ನು ಅಧಿವೇಶನದ ವೇಳೆ ಅಂತಿಮಗೊಳಿಸುತ್ತೇವೆ. ಕಾನ್ಸ್ಟಿಟ್ಯೂಷನಲ್ ಕ್ಲಬ್ ವಿಚಾರವನ್ನು ಕೂಡಾ ಚರ್ಚೆ ಮಾಡುತ್ತೇವೆ. ಈ ಬಾರಿ ಅಧಿವೇಶನದಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಇದೆ. ಆದರೆ, ಹಾಗೆಂದ ಮಾತ್ರಕ್ಕೆ ಅಧಿವೇಶನದ ವೇಳೆ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬರುವುದು ಬೇಡ ಎಂದು ಸ್ಪೀಕರ್ ಹೇಳಿದರು.
ವಿಧಾನ ಪರಿಷತ್ ಸಭಾಪತಿಗೆ ಸರಕಾರಿ ಮನೆ ನೀಡದೇ ಇರುವ ಬಗ್ಗೆ ಮಾತನಾಡಿದ ಕಾಗೇರಿ ಅವರು, ಶಾಸಕಾಂಗಕ್ಕೆ ಸರಕಾರಿ ಮನೆಗಳ ಕೊರತೆ ಇದೆ. ನ್ಯಾಯಾಂಗಕ್ಕೆ ನಾವು ಕೆಲ ಮನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಸಿಎಂ, ಸಚಿವರು, ಶಾಸಕಾಂಗದವರಿಗೆ ನಿಗದಿತ ಮನೆಗಳನ್ನು ನಿಗದಿಪಡಿಸುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಅವರು ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ತಿಳಿಸಿದರು.