ಕರ್ನಾಟಕದ ಒಂದೂರಿನಲ್ಲಿ ಅರ್ಧ ದಿನವಷ್ಟೇ ಗಣಪತಿ ಹಬ್ಬ!
ಗಣೇಶ ಚತುರ್ಥಿ ಎಂಬುದು ಪ್ರಮುಖ ಹಬ್ಬ. ಇದು ಆದಿಪೂಜಿತ ಗಣಪತಿಯ ಭಜಿಸುವ, ಆರಾಧಿಸುವ ಆತನ ಹುಟ್ಟಿದ ದಿನವನ್ನು ಸಂಭ್ರಮಿಸುವ ದಿನ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲ್ಪಡುವ ಈ ಹಬ್ಬವು ಹತ್ತು ಹಲವು ದಿನಗಳ ಕಾಲ ಆಚರಿಸಲಾಗುವುದು. ವಿವಿಧ ಪ್ರಕಾರದ, ಆಕಾರದ ಹಾಗೂ ಆಕರ್ಷಕ ಗಣೇಶನ ಮೂರ್ತಿಗಳನ್ನು ಪೂಜಿಸಲು ತಯಾರಿಸಿ ಮಾರಲಾಗುವುದು. ಕೆರೆಯ ಅಥವಾ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಎಲೆ, ಹೂವು, ಬಾಳೆ ಕಂಬದಿಂದ ಅಲಂಕೃತವಾದ ಮಂಟಪದಲ್ಲಿ ಇರಿಸಿ, ಮೋದಕ, ಕಡುಬು ಮುಂತಾದ ಭಕ್ಷ್ಯ ಭೋಜ್ಯಗಳನ್ನು ಅರ್ಪಿಸಿ ಭಕ್ತಿಭಾವದಿಂದ ಪೂಜಿಸುವುದು ನಮ್ಮ ಪರಂಪರೆ.
ಸ್ವಾತಂತ್ರ್ಯೋತ್ಸವದ ಪೂರ್ವದಲ್ಲಿ ಏಕತೆಗೆ ನಾಂದಿ ಹಾಡಿದ ಹಬ್ಬ ಗಣೇಶೋತ್ಸವ. ಭಕ್ತಿ ಹಾಗೂ ಭಾವೈಕ್ಯತೆಯ ರೂಪದಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಆರಂಭವಾದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ.
ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ತರಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಅರಿವನ್ನೂ ಮಾಡಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುವ ಸಾಧನವಾಗಿ ಬಳಸಿಕೊಂಡರು. 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.
ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಲೋಕಮಾನ್ಯರು, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ಕೊನೆಗಾಣಿಸಲು, ಅವರ ನಡುವೆ ಐಕ್ಯತೆ ಮೂಡಿಸುವುದಕ್ಕಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ರೂಪಿಸಿ ಸಮರ್ಪಕವಾಗಿ ಬಳಸಿಕೊಂಡರು. ಆರಂಭದಲ್ಲಿ ಇದು ಜಾತಿ-ಜಾತಿಗಳ ನಡುವಿನ ಏಕತೆಯ ಪ್ರತೀಕದಂತೆ ಕಂಡು ಬಂದರೂ ಕ್ರಮೇಣ, ಬ್ರಿಟೀಷ್ ದುರಾಡಳಿತದ ವಿರುದ್ಧ ತಿಲಕರು ಆರಂಭಿಸಿದ ಪರೋಕ್ಷ ಹೋರಾಟ ಎಂಬುದು ಎಲ್ಲರಿಗೂ ಅರ್ಥವಾಯಿತು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರ ಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ ದೇವಸ್ವರೂಪಿಯಾಗಿದ್ದ.
ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಮುಖ್ಯ ಹಬ್ಬವಾಗಿದ್ದ ಗಣೇಶೋತ್ಸವ, ಸ್ವರಾಜ್ ಆಂದೋಲನದ ಸಂದರ್ಭದಲ್ಲಿ ಸಂಘಟಿತ ಸ್ವರೂಪ ಪಡೆಯಿತು. ಗಣೇಶನ ಬೃಹತ್ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು, ಚರ್ಚಾಗೋಷ್ಠಿಗಳು ಮುಂತಾದವುಗಳ ರೂಪದಲ್ಲಿ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು. ಜನರ ಮೇಲೆ ನಿಯಂತ್ರಣ ಹೇರಲು ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಸೇರುವ ತಾಣವಾಯಿತು.
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಿಲಕರು ಆರಂಭಿಸಿದ್ದ ಗಣೇಶೋತ್ಸವವನ್ನು ಅದೇ ಕಾರಣದಿಂದಾಗಿ ಅರ್ಧ ದಿನಕ್ಕೆ ನಿಲ್ಲಿಸಿದ ಘಟನೆಯೂ ಕೂಡ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅದೂ ಕೂಡ ನಮ್ಮ ಕರ್ನಾಟಕದಲ್ಲಿ. ಕರ್ನಾಟಕದ ಒಂದು ಮೂಲೆಯಲ್ಲಿ ಇಂದಿಗೂ ಗಣೇಶ ವಿಗ್ರಹವನ್ನು ಕೇವಲ ಅರ್ಧ ದಿನಕ್ಕೇ ವಿಸರ್ಜನೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಹುಬ್ಬಳ್ಳಿಯ ಗಣೇಶೋತ್ಸವ ಎಲ್ಲರಿಗೂ ಚಿರಪರಿಚಿತವೇ. ತಿಂಗಳು ಗಟ್ಟಲೆ ಇಲ್ಲಿ ಗಣೇಶೋತ್ಸವ ನಡೆಯುತ್ತದೆ. ಆದರೆ ಇಂತಹ ಹುಬ್ಬಳ್ಳಿಯ ಸನಿಹದ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದಲ್ಲಿ ಮಾತ್ರ ಅರ್ಧದಿನ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಭೋಗೇನಾಗರಕೊಪ್ಪದ ದೇಶ ಕುಲಕರ್ಣಿ ವಾಡೆಯಲ್ಲಿ ಗಣೇಶೋತ್ಸವದ ಬೆಳಗ್ಗೆ ಪ್ರತಿಷ್ಠಾಪನೆಗೊಳ್ಳುವ ಗಣೇಶನನ್ನು ಅದೇ ದಿನ ಮಧ್ಯಾಹ್ನ ವಿಸರ್ಜಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಲಘಟಗಿ ಪ್ರದೇಶದಲ್ಲಿ ತೀವ್ರ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ಸ್ಥಳೀಯ ಬ್ರಿಟೀಷ್ ಆಡಳಿತ ಉಪ್ಪಿಗೂ ಅಧಿಕ ತೆರಿಗೆ ವಿಧಿಸಿತ್ತು. ಹೀಗಾಗಿ ಅಲ್ಲಿನ ಜನರು ಕಂದಾಯ ಪಾವತಿ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇದೇ ವಿಚಾರವಾಗಿ ಭೋಗೇನಾಗರಕೊಪ್ಪ ದೇಸಾಯಿ ಹಾಗೂ ಬ್ರಿಟೀಷರ ಮಧ್ಯೆ ಭಾರೀ ವಾಗ್ವಾದವಾಗಿತ್ತು. ಇದೇ ಸಂದರ್ಭದಲ್ಲಿ ಬ್ರಿಟೀಷ್ ಅಧಿಕಾರಿಯಾಗಿದ್ದ ಲಾರ್ಡ್ ಡಾಲ್ʼಹೌಸಿ ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆಗೆ ದೇಸಾಯಿ ಸಂಸ್ಥಾನವನ್ನು ಒಳಪಡಿಸಲು ಮುಂದಾದಾಗ ವಿರೂಪಾಕ್ಷ ದೇಸಾಯಿ ಎಂಬುವವರು ಬ್ರಿಟೀಷರ ವಿರುದ್ಧ ಚಳುವಳಿ ಆರಂಭಿಸಿದರು. ಅದೇ ಸಂದರ್ಭದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚುತುರ್ಥಿ ಮುಂದಿಟ್ಟುಕೊಂಡು ಜನರಲ್ಲಿ ಐಕ್ಯತೆ ಮೂಡಿಸುವ ನಿಟ್ಟಿನಲ್ಲಿ ಹೋರಾಡುತ್ತಿದ್ದರು. ಅವರ ಕರೆಗೆ ಅನುಗುಣವಾಗಿ ಮೊದಲ ವರ್ಷದ ಆಚರಣೆ 5 ದಿನ ವಿಜೃಂಭಣೆಯಿಂದ ನಡೆದಿತ್ತು. ಜನರು ಕೂಡ ಒಗ್ಗಟ್ಟಿನ ಮಂತ್ರಿ ಜಪಿಸುವುದರೊಂದಿಗೆ ಬ್ರಿಟೀಷ್ ದುರಾಡಳಿತದ ವಿರುದ್ಧ ಕ್ರಮೇಣ ದಂಗೆ ಎದ್ದಿದ್ದರು.
ಇದು ಬ್ರಿಟೀಷ್ ಅಧಿಕಾರಿಗಳ ಕೈಕೈ ಹಿಸುಕಿಕೊಳ್ಳುವಂತೆ ಮಾಡಿತ್ತು. ಹೀಗಾಗಿ ಗಣೇಶೋತ್ಸವ ನಡೆಯುತ್ತಿದ್ದ ತಾಲೂಕಿಗೆ ಬ್ರಿಟೀಷ್ ಸೈನಿಕರನ್ನು ನುಗ್ಗಿಸುವ ಕುರಿತು ಬ್ರಿಟೀಷ್ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದರು. ಈ ವಿಚಾರ ತಿಳಿದ ಗ್ರಾಮಸ್ಥರು ಗಣೇಶ ಮೂರ್ತಿಗೆ ಯಾವುದೇ ಧಕ್ಕೆಯಾಗಬಾರದು ಎಂದು ನಿರ್ಧರಿಸಿ ಅಂದೇ ಮಧ್ಯಾಹ್ನದ ಹೊತ್ತಿಗೇ ಗ್ರಾಮದ ಹುಡೇದ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು. ಅಂದಿನಿಂದ ಇಲ್ಲಿ ಪ್ರತೀವರ್ಷ ಅರ್ಧ ದಿನ ಮಾತ್ರ ಗಣೇಶ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ. ಬೆಳಗ್ಗೆ ಮೂರ್ತಿಯನ್ನು ಇಟ್ಟು ಮಧ್ಯಾಹ್ನ ಊಟಕ್ಕೂ ಮೊದಲು ವಿಸರ್ಜಿಸಲಾಗುತ್ತದೆ.
ಭಕ್ತಿಭಾವದೊಂದಿಗೆ, ರಾಷ್ಟ್ರೀಯತೆಯನ್ನು, ಏಕತೆಯನ್ನು ಪಸರಿಸಿದ ನಮ್ಮ ಗಣಪತಿ ಹಬ್ಬ, ಇತ್ತೀಚಿನ ದಿನಗಳಲ್ಲಿ ತನ್ನ ನಿಜ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಹಬ್ಬವು ಈಗ ಆಡಂಬರ, ಮಾಲಿನ್ಯ, ಪರಿಸರ ಹಾನಿಗೆ ಕಾರಣ ಎಂಬಂತೆ ಆಗುತ್ತಿದೆ. ಇದರ ಪ್ರತಿಯಾಗಿ, ಪರಿಹಾರವಾಗಿ ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಯ ಹೊಸ ಪರಂಪರೆ ಈ ನಡುವೆ ಪ್ರಾರಂಭವಾಗಿದೆ. ಗಣಪತಿಯನ್ನು ಬಣ್ಣಗಳಿಂದ ಚಂದ ಅಲಂಕರಿಸಿ, ಉತ್ಸಾಹದಿಂದ ಆಚರಿಸಲು ಇಚ್ಚಿಸುತ್ತಾರೆ, ಆದರೆ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಪರಿಸರದ ಮೇಲೆ ಆಗುವ ಪರಿಣಾಮವನ್ನು ನೋಡಬೇಕಿದೆ.
ರಾಸಾಯನಿಕ ಬಣ್ಣ ಮತ್ತು ಇತರೆ ವಸ್ತುಗಳಿಂದ ತಯಾರಿಸಿದ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ನೀರಿನ ಮಾಲಿನ್ಯ ಉಂಟಾಗುತ್ತದೆ. ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್, ತರ್ಮಕೋಲ್ ಕರಗದೆ ಪರಿಸರದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಈ ವಸ್ತುಗಳಲ್ಲಿನ ವಿಷದ ಅಂಶವು ಸಸ್ಯ ಮತ್ತು ಜಲಚರಗಳ ಮೇಲೆ ಮಾರಕ ಪ್ರಭಾವ ಬೀರುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಹಬ್ಬವನ್ನು ಭಕ್ತಿಭಾವದಿಂದ, ಉಲ್ಲಾಸ ಹಾಗೂ ಸೌಹಾರ್ದದೊಂದಿಗೆ, ಸಾಮಾಜಿಕ ಕಳವಳದೊಂದಿಗೆ ಆಚರಿಸಿ ಪರಿಸರವನ್ನು ಸಂರಕ್ಷಿಸುವುದು ಒಳಿತು.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.