ಬಾಗೇಪಲ್ಲಿ ಭಾಗ್ಯದ ಬಾಗಿಲು ತೆರೆದ ಆಸ್ಕರ್ ಫರ್ನಾಂಡೀಸ್
by Ra Na Gopala Reddy Bagepalli
ಬಾಗೇಪಲ್ಲಿ: ಇಂದು (ಸೆಪ್ಟೆಂಬರ್ 13) ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಅವರಿಗೆ ಬಾಗೇಪಲ್ಲಿ ಜತೆ ಭಾವನಾತ್ಮಕ ನಂಟಿತ್ತು.
ಆಸ್ಕರ್ ಅವರು ನಿಧನರಾದ ಸುದ್ದಿ ಗೊತ್ತಾಗುತ್ತಿದ್ದಂತೆ ಇಲ್ಲಿನ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರಲ್ಲದೆ, ಕಷ್ಟಕಾಲದಲ್ಲಿ ಬಾಗೇಪಲ್ಲಿಗೆ ಆಪದ್ಭಾಂದವನಂತೆ ಬಂದ ಅವರನ್ನು ನೆನಪು ಮಾಡಿಕೊಂಡು ಕಂಬಿನಿ ಮಿಡಿದಿದ್ದಾರೆ.
1980ರಲ್ಲಿ ಬಾಗೇಪಲ್ಲಿ ಕ್ಷೇತ್ರವು ತೀವ್ರ ಬರಕ್ಕೆ ತುತ್ತಾಗಿತ್ತು. ಈ ಕ್ಷೇತ್ರ ಮಾತ್ರವಲ್ಲ, ಆಗಿನ ಅವಿಭಜಿತ ಕೋಲಾರ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿಯೂ ಬರ ಉಗ್ರ ತಾಂಡವವಾಡುತ್ತಿತ್ತು. ಪಟ್ಟಣದಲ್ಲಿ ವಾಸ ಮಾಡುವ ಅನೇಕರೂ ಈಗಲೂ ಆ ಬರದ ಕರಾಳತೆಯನ್ನು ನೆನಪು ಮಾಡಿಕೊಳ್ಳುತ್ತಾರೆ.
ಆ ಬರದ ಭೀಕರ ಚಿತ್ರಣ ಹೇಗಿತ್ತೆಂದರೆ, ಮಳೆ ಇಲ್ಲದೇ ಭೂಮಿ ಬಾಯಿಬಿಟ್ಟಿತ್ತು. ಕೆರೆಕಟ್ಟೆಗಳು ಒಣಗಿ ಹೋಗಿದ್ದವು. ಜಾನುವಾರುಗಳು ಮೇವಿಲ್ಲದೆ ಎಲ್ಲೆಂದರಲ್ಲಿ ಅಸುನೀಗುತ್ತಿದ್ದವು. ಜನರು ಹನಿ ನೀರಿಗೂ ತತ್ವಾರ ಪಡುವಂಥ ದುಸ್ಥಿತಿ. ಇಂಥ ವಿಷಮ ಪರಿಸ್ಥಿತಿಯಲ್ಲಿ ಬಾಗೇಪಲ್ಲಿ ಕ್ಷೇತ್ರಕ್ಕೆ ಮಿಡಿದವರು ಅಂದಿನ ಯುವ ಸಂಸದ ಆಸ್ಕರ್ ಫರ್ನಾಂಡೀಸ್ ಅವರು.
ಸ್ಥಳೀಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷರೂ ಆಗಿದ್ದ ಜಿ.ವಿ.ಬಾಬುರೆಡ್ಡಿ ಅವರು ಆ ದಿನಗಳನ್ನು ನೆನಪು ಮಾಡಿಕೊಂಡು ಸಿಕೆನ್ಯೂಸ್ ನೌ ಜತೆ ಹಂಚಿಕೊಂಡಿದ್ದು ಹೀಗೆ.
ನಮ್ಮ ತಾಲೂಕಿನ 60 ವರ್ಷ ವಯಸ್ಸಿನ ಆಸುಪಾಸಿನವರೆಲ್ಲ 1980ರ ಭೀಕರ ಬರಗಾಲವನ್ನು ಅನುಭವಿಸಿದ್ದಾರೆ. ಕುಡಿಯಲು ನೀರೂ ಸಿಗುತ್ತಿರಲಿಲ್ಲ. ಗಂಜಿಯೇ ಗತಿಯಾಗಿತ್ತು. ಈ ಕ್ಷಾಮ ನಮ್ಮೆಲ್ಲರ ಬದುಕನ್ನು ನರಕಸದೃಶ ಮಾಡಿತ್ತು. ಆ ದಿನಗಳನ್ನು ನೆನಪು ಮಾಡಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ.
ಇಂಥ ಕಷ್ಟದ ಸಂದರ್ಭದಲ್ಲಿ ನಮ್ಮ ಜನರ ನೆರವಿಗೆ ಬಂದವರು ಆಸ್ಕರ್ ಫರ್ನಾಂಡೀಸ್. ಅವರ ಜತೆ ನನಗೆ ನಿಕಟ ಪರಿಚಯ, ಆತ್ಮೀಯತೆ ಇತ್ತು. ನಾನು ಕ್ಷೇತ್ರದ ಬರದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದೆ. ಬೆಂಗಳೂರಿಗೆ ತೆರಳಿ ಭೇಟಿ ಎಲ್ಲ ಮಾಹಿತಿಯನ್ನೂ ನೀಡಿ ನೆರವಿಗೆ ಬನ್ನಿ ಎಂದು ಮನವಿ ಮಾಡಿಕೊಂಡೆ.
ಆಸ್ಕರ್ ಅವರು ಕೂಡಲೇ ಸ್ಪಂದಿಸಿದರು. ಆಗ ಅವರು ಉಡುಪಿ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ನನ್ನ ಮನವಿಗೆ ಓಗೊಟ್ಟು ತಕ್ಷಣವೇ ಬಾಗೇಪಲ್ಲಿಗೆ ಬಂದರು. ಆಗ ಮುನಿರಾಜು ಅವರು ಕ್ಷೇತ್ರದ ಶಾಸಕರಾಗಿದ್ದರು. ಬಂದವರೇ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ತಕ್ಷಣವೇ ತಾಲೂಕಿನಲ್ಲಿ ಎಂಟು ಗಂಜಿ ಕೇಂದ್ರ ಮತ್ತು ಎಂಟು ಗೋ ಶಾಲೆಗಳನ್ನೂ ತೆರೆಯಲಾಯಿತು. ಅಷ್ಟೇ ಅಲ್ಲದೆ, ರಾಜ್ಯ ಸರಕಾರದಿಂದ ಅಗತ್ಯ ನೆರವನ್ನೂ ಕೊಡಿಸಿದರು. ಬರ ನಿರ್ವಹಣೆಗೆ ಸಾಕಷ್ಟು ಸಹಾಯವೂ ಹರಿದು ಬಂತು ಎಂದು ಹೇಳುತ್ತಾರೆ ಬಾಬುರೆಡ್ಡಿ ಅವರು.
ಉಡುಪಿಯಿಂದ ಮೊದಲ ಸಲ ಗೆದ್ದು ಲೋಕಸಭೆಗೆ ಹೋಗಿದ್ದ ಆಸ್ಕರ್ ಅವರು ಎಲ್ಲೋ ಆಂಧ್ರದ ಗಡಿಯಲ್ಲಿದ್ದ ಬಾಗೇಪಲ್ಲಿ ಜನರಿಗಾಗಿ ಮಿಡಿದಿದ್ದರು. ಅವರ ನೆರವು-ಕಾಳಜಿಯನ್ನು ನೆನಪು ಮಾಡಿಕೊಂಡರೆ ಈಗಲೂ ನನ್ನ ಹೃದಯ ಉಕ್ಕಿಬರುತ್ತದೆ ಎಂದು ಅವರು ತಮ್ಮ ಮತ್ತು ಆಸ್ಕರ್ ಫರ್ನಾಂಡೀಸ್ ನಡುವಿನ ಒಡನಾಟವನ್ನು ಸ್ಮರಿಸಿಕೊಂಡರು.
ಪಲಿಮಾರು ಶ್ರೀಗಳ ವಾಸ್ತವ್ಯ
ಕೇವಲ ಸರಕಾರದ ನೆರವಷ್ಟೇ ಕೊಡಿಸಿ ಆಸ್ಕರ್ ಫರ್ನಾಂಡೀಸ್ ಸುಮ್ಮನಾಗಲಿಲ್ಲ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪಲಿಮಾರು ಮಠದ ಸ್ವಾಮೀಜಿಗಳನ್ನು ಭೇಟಿಯಾಗಿ ಬಾಗೇಪಲ್ಲಿಯ ಪರಿಸ್ಥಿತಿಯನ್ನು ವಿವರಿಸಿ ನೆರವಿಗೆ ಬನ್ನಿ ಎಂದು ಕೋರಿದ್ದರು.
ಕೂಡಲೇ ಆಸ್ಕರ್ ಅವರ ಮನವಿಯನ್ನು ಮನ್ನಿಸಿದ ಸ್ವಾಮೀಜಿ ಅವರು ಮೂರೇ ದಿನದಲ್ಲಿ ಬಾಗೇಪಲ್ಲಿಗೆ ಆಗಮಿಸಿದರು. ಸುಮಾರು ಆರು ತಿಂಗಳ ಕಾಲ ಗಡಿದಂ ದೇವಾಲಯದ ಛತ್ರದಲ್ಲಿ ವಾಸ್ತವ್ಯ ಹೂಡಿದ ಸ್ವಾಮೀಜಿ ಅವರು, ಬರ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡರು. ಪೆನಮಲೆಯಲ್ಲಿ ಸ್ವಾಮೀಜಿ ಅವರು ಶಾಲೆ ಮತ್ತು ಗೋ ಶಾಲೆಯನ್ನು ಆರಂಭ ಮಾಡಿದ್ದರು. ಜತೆಗೆ; ಬಾಲರೆಡ್ಡಿಪಲ್ಲಿ, ಪೆನಮಲೆ, ಪೆನಮಲೆ ಕಣಿವೆ, ಗಂಟ್ಲಮಲ್ಲಮ್ಮನ ಕಣಿವೆ, ಯಲ್ಲಂಪಲ್ಲಿ ಅರಣ್ಯ ಪ್ರದೇಶದಲ್ಲಿ ಸ್ವಾಮೀಜಿ ಅವರು ಬರ ಪರಿಹಾರ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ಗಂಟ್ಲಮಲ್ಲಮ್ಮನ ಕಣಿವೆ ಹಾಗೂ ಯಲ್ಲಂಪಲ್ಲಿ ಅರಣ್ಯ ಪ್ರದೇಶದಲ್ಲೂ ಗೋ ಶಾಲೆಗಳನ್ನು ಶ್ರೀಗಳು ತೆರೆದಿದ್ದರು. ಸತತ ಆರು ತಿಂಗಳ ಕಾಲ ಜಾನುವಾರುಗಳಿಗೆ ಮೇವು, ಜನರಿಗೆ ಆಹಾರದ ವ್ಯವಸ್ಥೆ ಮಾಡಿದ್ದರು ಸ್ವಾಮೀಜಿ .
ರಾಜೀವ್ ಗಾಂಧಿ ಅವರೂ ಬಂದಿದ್ದರು
1986 ಇರಬಹುದು. ಈ ಅವಧಿಯಲ್ಲೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಮತ್ತೊಮ್ಮೆ ಭೀಕರ ಬರಗಾಲ ಬಂದಿತ್ತು. ಆಗಲೂ ಬಾಬುರೆಡ್ಡಿ ಅವರು ಇದೇ ಆಸ್ಕರ್ ಫರ್ನಾಂಡೀಸ್ ಅವರ ನೆರವು ಕೋರಿದ್ದರು. ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ನೆರವು ಕೋರಿದ ಆಸ್ಕರ್, ಸ್ವತಃ ಪ್ರಧಾನಿಯನ್ನೇ ಬಾಗೇಪಲ್ಲಿಗೆ ಕರೆತಂದಿದ್ದರು. ಯಾವಾಗ ರಾಜೀವ್ ಭೇಟಿ ನೀಡಿದರೋ ರಾಜ್ಯ ಸರಕಾರ ಬಾಗೇಪಲ್ಲಿಯತ್ತ ನೋಡಿತು. ಆಗ ರಾಮಕೃಷ್ಣ ಹೆಗಡೆ ನೇತೃತ್ವದ ಅವರ ಜನತಾ ಸರಕಾರ ಇತ್ತು. ರಾಜೀವ್ ಮತ್ತು ಆಸ್ಕರ್ ಆಪ್ತರಾಗಿದ್ದ ಕಾರಣಕ್ಕೆ ಇದೆಲ್ಲ ಸಾಧ್ಯವಾಯಿತು.
Photo courtesy: Rahul Gandhi @RahulGandhi
ಬಳಿಕ, ನೋಡ ನೋಡುತ್ತಿದ್ದಂತೆ ಬಾಗೇಪಲ್ಲಿ ಚಿತ್ರಣವೇ ಬದಲಾಯಿತು. ಕೆರೆ ಕಟ್ಟೆಗಳು ನಿರ್ಮಾಣವಾದವು. ಅದೇ ಮೊದಲಿಗೆ ಜನ ಬೋರ್‌ವೆಲ್‌ಗಳನ್ನು ನೋಡಿದರು. ಎಲ್ಲ ಹಳ್ಳಿಗಳಲ್ಲಿ ಬೋರ್‌ವೆಲ್ ತೋಡಿದ ಮೇಲೆ ಜನ ಜಾನುವಾರುಗಳ ಜಲದಾಹ ತೀರಿತು. ಹೀಗೆ, ಆಸ್ಕರ್ ಫರ್ನಾಂಡೀಸ್ ಅವರು ಬಾಗೇಪಲ್ಲಿ ಜನರಿಗೆ ನೆರವಾಗಿದ್ದಾರೆ. ಬರದಿಂದ ತತ್ತರಿಸಿದ್ದ ಬಾಗೇಪಲ್ಲಿ ಜನರಿಗೆ ಅನ್ನ ಸಿಗವಂತೆ ಮಾಡಿದ್ದರು ಆಸ್ಕರ್ ಫರ್ನಾಂಡೀಸ್.