ಬಾಗೇಪಲ್ಲಿ ಶಾಲೆಯಲ್ಲಿ ನಿಲ್ಲದ ಪೋಷಕರು, ಮಕ್ಕಳ ಶೋಷಣೆ
by GS Bharath Gudibande
ಬಾಗೇಪಲ್ಲಿ: ಕೋವಿಡ್ ಮಾರಿಯಿಂದ ಆರ್ಥಿಕವಾಗಿ ಕಂಗೆಟ್ಟಿರುವ ಪೋಷಕರ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತಿರುವ ಖಾಸಗಿ ಶಾಲೆಗಳು, ಮತ್ತೂ ತಮ್ಮ ಚಾಳಿಯನ್ನು ಮುಂದುವರಿಸಿವೆ.
ಶುಲ್ಕ ಪಾವತಿ ಮಾಡಲಾಗದ ಪೋಷಕರು ಜೀವನ ನಡೆಸುವುದೇ ದುಸ್ತರ ಎನ್ನುವ ದುಃಸ್ಥಿತಿ ಇರುವುದು ಒಂದೆಡೆಯಾದರೆ, ಅವರ ಮಕ್ಕಳನ್ನು ಶುಲ್ಕದ ನೆಪದಲ್ಲಿ ಖಾಸಗಿ ಶಾಲೆಗಳು ಶೋಷಣೆ ಮಾಡಲಾಗುತ್ತಿದೆ.
ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಯಲ್ಲಂಪಲ್ಲಿಯ ಶ್ರೀ ಶಾರದ ಮಹಿಳಾ ಇಂಗ್ಲೀಷ್ ವಿದ್ಯಾಸಂಸ್ಥೆ ವಿದ್ಯಾರ್ಥಿಯೊಬ್ಬರಿಗೆ ಬಾಕಿ ಶುಲ್ಕ ಪಾವತಿಸಲು ಸತಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿ ಪೋಷಕರು ಹಾಗೂ ಸಂಬಂಧಿಕರು ಸಿಕೆನ್ಯೂಸ್ ನೌ ಬಳಿ ಅಳಲು ತೋಡಿಕೊಂಡಿದ್ದಾರೆ.
ಬಾಕಿ ಶುಲ್ಕ ಕಟ್ಟಿದರೆ ಮಾತ್ರ ಟೀಸಿ
ಉತ್ತಮ ಶಿಕ್ಷಣದ ಆಸೆಯಿಂದ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿಸಲು ಖಾಸಗೀ ಶಾಲೆಗಳಲ್ಲಿ ದಾಖಲು ಮಾಡುವುದೇ ತಪ್ಪು ಅನಿಸುತ್ತದೆ. ಶಾಲೆಗೆ ಸೇರಿಸಿಕೊಳ್ಳುವಾಗ ಇರುವ ಮುತುವರ್ಜಿ, ಟೀಸಿ (ವರ್ಗಾವಣೆ ಪತ್ರ) ಕೊಡುವಾಗ ಇರುವುದಿಲ್ಲ ಎಂದು ಆ ವಿದ್ಯಾರ್ಥಿಯ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
- ಜಿ.ಎನ್.ನವೀನ್
ಈ ದುಬಾರಿ ಶುಲ್ಕ ಪಾವತಿಸಲಾಗದೇ ಖಾಸಗೀ ಶಾಲೆಗಳನ್ನು ತೊರೆದು ಸರಕಾರಿ ಶಾಲೆಗಳಿಗೆ ಸೇರಬಯಸುವ ಮಕ್ಕಳ ಟೀಸಿ ಕೊಡದೇ ಬಾಕಿ ಶುಲ್ಕ ಪಾವತಿಸುವಂತೆ ಪೀಡಿಸುತ್ತಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಯಲಂಪಲ್ಲಿ ಶಾಲೆಯಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಯುವಾಧ್ಯಕ್ಷ ಜಿ.ಎನ್.ನವೀನ್ ಒತ್ತಾಯ ಮಾಡಿದ್ದಾರೆ.
ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರು ಈಗ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಬೆದರಿರುವ ಖಾಸಗೀ ಶಾಲೆಗಳು ಟೀಸಿ ಕೊಡಲು ಸತಾಯಿಸುತ್ತಿವೆ. ಪೂರ್ಣ ಶುಲ್ಕ ಪಾವತಿ ಮಾಡಿರುವ ಮಕ್ಕಳ ಟೀಸಿಗಳನ್ನೂ ಮೀನಾಮೇಷ ಎಣಿಸಿ ಕೊಡುತ್ತಿರುವ ಖಾಸಗಿ ಶಾಲೆಗಳು, ಇನ್ನು ಕೆಲ ವಿದ್ಯಾರ್ಥಿಗಳು ಶುಲ್ಕ ಬಾಕಿ ಇಟ್ಟುಕೊಂಡಿರುವ ಕಾರಣಕ್ಕೆ ಅವರಿಗಂತೂ ಟೀಸಿ ಕೊಡಲು ನಿರಾಕರಿಸಲಾಗುತ್ತಿದೆ. ಮಾತ್ರವಲ್ಲದೆ, ಬಾಕಿ ಶುಲ್ಕ ಪಾವತಿ ಮಾಡಿದರೆ ಮಾತ್ರ ಕೊಡ್ತಿವಿ ಎಂದು ಹೇಳುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.
ಅಧಿಕಾರಿಗಳು ಮೌನ! ಯಾಕೆ..?
ಇಂತಹ ಕಠಿಣ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಕಷ್ಟಕ್ಕೆ ಸ್ಪಂದಿಸಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮೌನವಾಗಿರುವುದು ಯಾಕೆ? ಎಂಬ ಎಲ್ಲರನ್ನೂ ಕಾಡುತ್ತಿದೆ. ಖಾಸಗೀ ಶಾಲೆಗಳು ಹದ್ದುಮೀರಿ ವರ್ತಿಸುತ್ತಿದ್ದರೂ, ಪೋಷಕರು, ವಿವಿಧ ಸಂಘಟನೆಗಳು ಪದೇ ಪದೆ ದೂರು ನೀಡುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ, ಯಾಕೆ? ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಕೆ.ಎಂ. ಜಯರಾಮರೆಡ್ಡಿ
ಇದೇ ವೇಳೆ, ಸಿಕೆನ್ಯೂಸ್ ನೌ ಜತೆ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ (ಆಡಳಿತ) ಕೆ.ಎಂ. ಜಯರಾಮರೆಡ್ಡಿ ಅವರು, ಈ ಬಗ್ಗೆ ತಮಗೂ ಸಾಕಷ್ಟು ದೂರುಗಳು ಬಂದಿದ್ದು, ಪೋಷಕರು ಮತ್ತು ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮ ತಮ್ಮನ ಮಗ ನಾಗೇಂದ್ರ ಕುಮಾರ್ ಯಲಂಪಲ್ಲಿಯ ಶ್ರೀ ಶಾರದಾ ಮಹಿಳಾ ಇಂಗ್ಲೀಷ್ ವಿದ್ಯಾಸಂಸ್ಥೆಯ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಗ ಶಾಲೆಯ ಬಸ್ಸಿನಲ್ಲಿ ಮನೆಗೆ ಬರುವಾಗ ಬಸ್ಸಿನ ಟೈಯರ್ ಪಂಕ್ಚರ್ ಆದಾಗ ಮೊಳೆಯೊಂದು ಕಾಲಿಗೆ ಚುಚ್ಚಿಕೊಂಡು ದೊಡ್ಡ ಗಾಯವಾಗಿತ್ತು. ಅವನ ಚಿಕಿತ್ಸೆಗೆ ಸುಮಾರು 25 ಸಾವಿರ ರೂ. ಖರ್ಚಾಗಿದೆ. ಶಾಲೆಗೆ ಎರಡು ತಿಂಗಳು ಹೋಗಿಲ್ಲ, ಆದರೂ ಶಾಲೆಯವರು ವಿದ್ಯಾರ್ಥಿ ಏಕೆ ಶಾಲೆ ಬಂದಿಲ್ಲ ಎಂದು ವಿಚಾರಿಸಿಲ್ಲ. ಬಳಿಕ ಲಾಕ್ ಡೌನ್ ಬಂದ ಕಾರಣಕ್ಕೆ ಬಾಲಕ ಶಾಲೆಗೆ ಹೋಗಿಲ್ಲ, ಈಗ ಟೀಸಿ ಕೇಳಿದ್ರೆ ಬಾಕಿ ಶುಲ್ಕ ಪಾವತಿಸಿ ಅಂತ ನಮ್ಮನ್ನು ಅಲೆದಾಡಿಸಿಕೊಂಡು ಹಣ ಕಟ್ಟುವಂತೆ ಪೀಡಿಸುತ್ತಿದ್ದಾರೆ.
ಕಾಂತಮ್ಮ, ವಿದ್ಯಾರ್ಥಿಯ ಪೋಷಕರು ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ