ಯೋಜನಾ ವೆಚ್ಚ 23,251 ಕೋಟಿ ರೂ.ಗೆ ಹೆಚ್ಚಳ
- 2023ರ ಅಂತ್ಯಕ್ಕೆ ಎತ್ತಿನಹೊಳೆ ಪೂರ್ಣ
- ಒಂದೆರಡು ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸ್ತಾರಂತೆ ಜಲ ಸಂಪನ್ಮೂಲ ಸಚಿವರು
- ಭೂ ಸ್ವಾಧೀನ ಪ್ರಕ್ರಿಯೆಗೆ 195 ಕೋಟಿ ರೂ.
- ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಕೈಚಳಕ
- ಸದನದಲ್ಲೇ ಸತ್ಯಸಂಗತಿ ಹೇಳಿದ ಸಚಿವ ಕಾರಜೋಳ
ವಿಧಾನಸಭೆ: ಎತ್ತಿನಹೊಳೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಇಷ್ಟರಲ್ಲಿಯೇ ಸಭೆ ನಡೆಸುವುದಾಗಿ ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯೋಜನೆಯನ್ನು 2023ರ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ವಿಧಾನಸಭೆಗೆ ಮಂಗಳವಾರ ತಿಳಿಸಿದರು.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಅವರು ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಜಲಾಶಯದ ಭೂ ಸ್ವಾಧೀನ ಪ್ರಕ್ರಿಯೆಯ ಸಮಸ್ಯೆಗಳ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ನೀಡಿದ ಉತ್ತರಕ್ಕೆ ಧ್ವನಿಗೂಡಿಸಿ ಈ ವಿಷಯವನ್ನು ತಿಳಿಸಿದರು.
ಎತ್ತಿನಹೊಳೆಯಿಂದ ನೀರು ಎತ್ತಿಯೇ ತೀರುತ್ತೇವೆ ಎಂದು ಮುಖ್ಯಮಂತ್ರಿಗಳು ಒತ್ತಿ ಹೇಳಿದರು.
ಇದಕ್ಕೂ ಮುನ್ನ ಉತ್ತರಿಸಿದ ಸಚಿವರು; ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆಯನ್ನು 2023ರ ಅಂತ್ಯಕ್ಕೆ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಯೋಜನೆಯ ವೆಚ್ಚ 23,251 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ನಾನು ಕೂಡ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೆ. ಭೂ ಸ್ವಾಧೀನವೂ ಸೇರಿದಂತೆ ಯೋಜನೆಯ ಅಡ್ಡಿ ಆತಂಕಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಂಡು ಪರಿಹರಿಸಲು ಮಾಡಿದ ಪ್ರಯತ್ನ ಫಲವಾಗಿ ಎರಡು ಬಹುದೊಡ್ಡ ಅಡ್ಡಿ ಅಡೆತಡೆಗಳು ನಿವಾರಣೆಯಾಗಿವೆ. ಒಂದೆರಡು ತಿಂಗಳಲ್ಲಿ ಎತ್ತಿನಹೊಳೆಯಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವರು ತಿಳಿಸಿದರು.
ಎತ್ತಿನಹೊಳೆಯಂತಹ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಗೆ ಇರುವ ಅಡ್ಡಿ ಆತಂಕ ಪರಿಹರಿಸಿ ತಕ್ಷಣ ಕ್ರಮಕೈಗೊಳ್ಳಲು ಕಾರ್ಯಪ್ರವೃತ್ತವಾಗಿದ್ದು, ಆದಷ್ಟು ಬೇಗ ಫಲಿತಾಂಶ ನಿಮ್ಮ ಕಣ್ಣಿಗೆ ಕಾಣಿಸಲಿದೆ ಎಂದು ಸಚಿವರು ತಿಳಿಸಿದರು.
ಭೂ ಸ್ವಾಧೀನ ಪ್ರಕ್ರಿಯೆಗೆ 195 ಕೋಟಿ ರೂ. ಹಣ ಒದಗಿಸಲಾಗಿದ್ದರೂ, ಕೆಲ ಅಧಿಕಾರಿಗಳು ರೈತರಿಗೆ ಹಣವಿಲ್ಲವೆಂದು ಹೇಳುತ್ತಿದ್ದರು. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಪ್ರಕರಣಗಳಲ್ಲಿ ರೈತರಿಗೆ ಹಣ ಪಾವತಿ ಮಾಡುವುದು ವಿಳಂಬವಾದಲ್ಲಿ ಭೂ ಸ್ವಾಧೀನ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿಸಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.
ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ರೈತರ 5078 ಎಕರೆ ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಏಕರೂಪದ ದರ ನಿಗದಿಪಡಿಸುವಲ್ಲಿ ಸಮಸ್ಯೆಗಳಿವೆ. ಈ ಸಮಸ್ಯೆ ಪರಿಹಾರಕ್ಕೆ 11.10.2018ರಂದು ಅಂದಿನ ಉಪ ಮುಖ್ಯಮಂತ್ರಿ ಆಗಿದ್ದ ಡಾ.ಜಿ.ಪರಮೇಶ್ವರ ಅವರ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ಸಭೆ ನಡೆದಿದ್ದರೂ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲಾಗಲಿಲ್ಲ. ಈಗ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವರು ಉತ್ತರ ನೀಡಿದರು.
ಎತ್ತಿನಹೊಳೆ ಯೋಜನೆಯ ಅನುಷ್ಠಾನದಲ್ಲಿ ಸಣ್ಣ-ಪುಟ್ಟ ಅಡ್ಡಿಗಳನ್ನು ನಿವಾರಿಸಿಕೊಂಡು ಮುಂದಿನ ಹೆಜ್ಜೆ ಇರಿಸುವುದಾಗಿ, ಆದಷ್ಟು ಬೇಗ ಯೋಜನೆ ಸಾಕಾರಗೊಳಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಹೈಡ್ರಾಲಜಿ ಬಗ್ಗೆ ಇಲ್ಲ ಸೊಲ್ಲು
ಎತ್ತಿನಹೊಳೆ ಯೋಜನಾ ವೆಚ್ಚ ಹೆಚ್ಚಳ, ಭೂಸ್ವಾಧೀನ, ಅಧಿಕಾರಿಗಳ ಗೋಲ್ಮಾಲ್ ಇತ್ಯಾದಿಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತಾದರೂ, ಯೋಜನೆಯ ಆತ್ಮವಾದ ʼಹೈಡ್ರಾಲಜಿʼ (ಜಲ ವಿಜ್ಞಾನ) ಯ ಬಗ್ಗೆ ಒಂದು ಪದವೂ ಸದನದಲ್ಲಿ ಚರ್ಚೆಯಾಗಲಿಲ್ಲ.
ಪ್ರಶ್ನೆ ಕೇಳಿದ ಮಾಜಿ ಡಿಸಿಎಂ ಪರಮೇಶ್ವರ ಆಗಲಿ ಅಥವಾ ಉತ್ತರ ಕೊಟ್ಟ ಮುಖ್ಯಮಂತ್ರಿಯಾಗಲಿ, ಜಲ ಸಂಪನ್ಮೂಲ ಸಚಿವರೇ ಆಗಲಿ ಹೈಡ್ರಾಲಜಿಯ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ನೀರಿನ ಇಳುವರಿಯೇ ಇಲ್ಲದ ಯೋಜನೆಯಲ್ಲಿ 2023ಕ್ಕೆ ನೀರನ್ನು ಹೇಗೆ ಹರಿಸುತ್ತಾರೆ? ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಮಾತ್ರ ಮೀಸಲಾಗಿದ್ದ ಯೋಜನೆಯನ್ನು ರಾಜಕೀಯ ಕಾರಣಗಳಿಗಾಗಿ ವಿವಿಧ ಜಿಲ್ಲೆಗಳಿಗೆ ಹರಿದು ಹಂಚಲಾಗಿದ್ದು, ಕಟ್ಟಕಡೆಯ ತಾಲೂಕಿಗೆ ನೀರು ಹರಿಯುತ್ತದಾ? ಈ ಪ್ರಶ್ನೆಗೆ ಸರಕಾರ ಉತ್ತರ ಕೊಡಬೇಕಾಗಿದೆ ಎಂದು ಶಾಶ್ವತ ನೀರಾವರಿ ಸಮಿತಿ ಹೋರಾಟಗಾರ ಆರ್.ಆಂಜನೇಯ ರೆಡ್ಡಿ ಒತ್ತಾಯ ಮಾಡಿದ್ದಾರೆ.
ಆರ್. ಆಂಜನೇಯ ರೆಡ್ಡಿ
ಯೋಜನಾ ವೆಚ್ಚವನ್ನು ಏರಿಸುವುದರಲ್ಲಿ ಸರಕಾರ ಉತ್ಸಾಹ ತೋರುತ್ತಿದೆ. ಆದರೆ ಜಲ ವಿಜ್ಞಾನದ ಬಗ್ಗೆ ಮರು ಅಧ್ಯಯನ ಮಾಡಲು ಸರಕಾರ ನಿರಾಸಕ್ತಿ ತೋರುತ್ತಿದೆ. ಕೇಂದ್ರ ಜಲ ಆಯೋಗ ತಿರಸ್ಕರಿಸಿರುವ ಈ ಯೋಜನೆಗೆ 23,251 ರೂ.ಗಳಿಗೆ ಮರು ಡಿಪಿಆರ್ ಮಾಡಲಾಗಿದೆ. ಇದು ಜನತೆಗೆ ಎಸಗುತ್ತಿರುವ ಮಹಾ ವಂಚನೆ ಎಂದು ಆಂಜನೇಯ ರೆಡ್ಡಿ ಹೇಳಿದರು.
ಎತ್ತಿನಹೊಳೆ ಯೋಜನೆಯ ಪ್ರತಿಹೆಜ್ಜೆಯೂ ಅನುಮಾನಾಸ್ಪದವಾಗಿದೆ. ಮೂಲ ಯೋಜನಾ ಸಮಗ್ರ ವರದಿಯಲ್ಲಿ 9.5 ಟಿಎಂಸಿ ನೀರು ಲಭ್ಯವಿದೆ ಎಂದು ತೋರಿಸಿ 8,300 ಕೋಟಿ ರೂ.ಗಳನ್ನು ಯೋಜನಾ ವೆಚ್ಚವೆಂದು ನಿಗದಿ ಮಾಡಿ ಅನುಮೋದನೆ ಪಡೆಯಲಾಗಿತ್ತು. ಅದಾಗಿ ಆರೇ ತಿಂಗಳಲ್ಲಿ ಪುನಾ ಪರಿಷ್ಕೃತ DPR ಮಾಡಿ ಲಭ್ಯ ನೀರಿನ ಪ್ರಮಾಣವನ್ನು 24 ಟಿಎಂಸಿ (!!) ಎಂದು ತೋರಿಸಿ 13,000 ಕೋಟಿ ರೂ. ವೆಚ್ಚವೆಂದು ನಮೂದು ಮಾಡಿ ಮರು ಆಡಳಿತಾತ್ಮಕ ಅನುಮೋದನೆ ಪಡೆಯಲಾಯಿತು. ಈಗ ನೋಡಿದರೆ ಭೂ ಸ್ವಾಧೀನ, ಕಚ್ಛಾ ಸಾಮಗ್ರಿಗಳ ವೆಚ್ಚ, ಕೋವಿಡ್ ನೆಪಗಳನ್ನು ಮುಂದೆ ಮಾಡಿ 23,251 ಕೋಟಿ ರೂ.ಗಳ ಇನ್ನೊಂದು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲು ಸರಕಾರ ಮುಂದಾಗಿದೆ. ಇದು ಅತ್ಯಂತ ಕಳವಳಕಾರಿ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..