ಬಡವರ ಆರೋಗ್ಯದ ಆಪ್ತಬಂಧು
ಬಾಗೇಪಲ್ಲಿ: ಸಮಾಜದ ವಿವಿಧ ರಂಗಗಳಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಮತ್ತು ಕೊಡುಗೆ ನೀಡಿರುವ ಸಾಧಕರಿಗೆ ಮಾಧ್ಯಮ ಸಂವಹನ ಕ್ಷೇತ್ರದ ಸಂಸ್ಥೆಯಾದ ‘ಭಾರತದ ಸಾರ್ವಜನಿಕ ಸಂಬಂಧಗಳ ಮಂಡಳಿ’- ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಸಿ.ಆರ್.ಐ.) ಕೊಡುವ ಪ್ರತಿಷ್ಠಿತ ‘ಚಾಣಕ್ಯ ಪ್ರಶಸ್ತಿ’ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ವೈದ್ಯ ಡಾ.ಎ.ಅನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂಸ್ಥೆಯು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು ಈ ವರ್ಷ ‘ಕೋವಿಡ್-19 ಪಬ್ಲಿಕ್ ಸರ್ವೀಸ್ ಹೀರೋ’ (ಸಾರ್ವಜನಿಕ ಸೇವಾ ನಾಯಕ’) ಪ್ರಶಸ್ತಿಯನ್ನು ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್ ಅವುಲಪ್ಪ ಅವರಿಗೆ ನೀಡಲು ಆಯ್ಕೆ ಮಂಡಳಿ ನಿರ್ಧರಿಸಿದೆ.
ಕೋವಿಡ್ ಸೋಂಕಿನ ಸಂಕಷ್ಟದ ಕಾಲದಲ್ಲಿ ಡಾ.ಅನಿಲ್ ಅವರು ಬಾಗೇಪಲ್ಲಿ ತಾಲೂಕಿನಲ್ಲಿ ವಿಶೇಷ ಚಿಕಿತ್ಸಾ ವಿಧಾನದ ಮೂಲಕ ಜನಜಾಗೃತಿ ಮೂಡಿಸಿದ್ದರು. ಸುಮಾರು 160 ಹಳ್ಳಿಗಳಲ್ಲಿ ಸೋಂಕು ತಡೆ ಮತ್ತು ನಿರ್ಣಾಯಕ ಸ್ಥಿತಿಯಲ್ಲಿ ಚಿಕಿತ್ಸೆ ನೀಡಿರುವುದನ್ನು ಸಂಸ್ಥೆಯು ಗುರುತಿಸಿದೆ.
‘ಆರೋಗ್ಯ ವ್ಯವಸ್ಥೆಯತ್ತ ಜನ ಬರುವುದಕ್ಕೆ ಬದಲಾಗಿ ಜನರತ್ತ ಆರೋಗ್ಯ ವ್ಯವಸ್ಥೆ ತೆರಳಬೇಕು’ ಎನ್ನುವ ಮಹತ್ವದ ತಾತ್ವಿಕ ನಿಲುವನ್ನು ಆಧಾರವಾಗಿರಿಸಿಕೊಂಡು ಗ್ರಾಮಗಳಲ್ಲಿ ಸ್ವಯಂ ಸೇವಕರ ತಂಡಗಳನ್ನು ಕಟ್ಟಿ ಆ ಮೂಲಕ ಗುರುತರ ಸೇವೆ ಸಲ್ಲಿಸಿದ್ದಾರೆ ಡಾ.ಅನಿಲ್. ಈ ಮಹತ್ವದ ಕಾರ್ಯಕ್ಕೆ ಅನೇಕ ಸಾರ್ವಜನಿಕ ಸೇವಾ ಸಂಸ್ಥೆಗಳು ಮತ್ತು ಜನಪರ ಸಂಘಟನೆಗಳು ಬೆನ್ನೆಲುಬಾಗಿ ನಿಂತಿವೆ. ಈ ಅನುಭವವನ್ನು ರಾಜ್ಯದ ಇತರೆಡೆಯೂ ವಿಸ್ತರಿಸಿದ ಅವರು ವಿಶೇಷವಾಗಿ ಪಶ್ಚಿಮಘಟ್ಟದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಆದಿವಾಸಿ ಸಮುದಾಯಗಳ ಜನರಿಗೂ ವೈದ್ಯ ಸೇವೆ ನೀಡಿದ್ದಾರೆ.
12ನೇ ಸರಣಿಯ ಚಾಣಕ್ಯ ಪ್ರಶಸ್ತಿ-2021 ನ್ನು ಇದೇ 2021 ಸೆಪ್ಟೆಂಬರ್ 17 ಮತ್ತು 18ರಂದು ಗೋವಾದ ಪಣಜಿಯಲ್ಲಿ ನಡೆಯುವ ’15ನೇ ಜಾಗತಿಕ ಸಂವಹನಾ ಸಮಾವೇಶ’ದ ಸಂದರ್ಭದಲ್ಲಿ ಸೆಪ್ಟಂಬರ್ 17ರಂದು ಸಂಜೆ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯನ್ನು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಪ್ರದಾನ ಮಾಡುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.