ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1,500 ಕೋಟಿ ರೂ.; ನಿಗದಿತ 1,500 ಕೋಟಿ ಸೇರಿ ಒಟ್ಟು 3,000 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ
ಕಲಬುರಗಿ: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ದಿನವಾದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1,500 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಇಲ್ಲಿನ ಡಿಆರ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಿಗದಿತ 1,500 ಕೋಟಿ ಜತೆಗೆ ಹೆಚ್ಚುವರಿಯಾಗಿ 1,500 ಕೋಟಿ ಸೇರಿಸಿ ಒಟ್ಟು 3,000 ಕೋಟಿ ರೂ. ಅನುದಾನವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಲಾಗುವುದು ಎಂದು ಘೋಷಣೆ ಮಾಡಿದರು
ಈ ಅನುದಾನದ ಪ್ರತಿ ಪೈಸೆಯನ್ನೂ ಎಚ್ಚರಿಕೆಯಿಂದ ಖರ್ಚು ಮಾಡಲಾಗುವುದು. ಜನರ ನಂಬಿಕೆ ಚ್ಯುತಿ ಬರದಂತೆ ಎಲ್ಲರೂ ಕೆಲಸ ಮಾಡಬೇಕು. ಈ ಭಾಗದ ಪ್ರತಿಯೊಬ್ಬ ಜನಪ್ರತಿನಿಧಿಯೂ ಅತ್ಯಂತ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಜನಪರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಿಎಂ ಪ್ರತಿಪಾದಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರಕಾರ ಆದ್ಯತೆಯ ಮೇರೆಗೆ ಹಮ್ಮಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಕಲಬುರಗಿಯಲ್ಲಿ ಹೊಸದಾಗಿ ಜವಳಿ ಪಾರ್ಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ನವ ಕಲ್ಯಾಣ ಕರ್ನಾಟಕ, ನವ ಕರ್ನಾಟಕ ನಿರ್ಮಾಣಕ್ಕೆ ಆದ್ಯತೆಯಾಗಿದೆ. ಪಟೇಲರ ಕೊಡುಗೆ ದೇಶಕ್ಕೆ ಅಪಾರವಾದದ್ದು, ಅವರು ಹಾಕಿರುವ ಮಾರ್ಗದಲ್ಲಿ ನಾವೆಲ್ಲರೂ ಒಂದು ದಾರಿಯಲ್ಲಿ ಮುಂದೆ ಸಾಗಬೇಕು ಎಂದು ಸಚಿವರು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾಭಿವೃದ್ಧಿ ಜತೆಗೆ, ಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿ ಮಾಡಬೇಕಿದೆ. ಇದಕ್ಕಾಗಿ ಸರಕಾರ ಅನೇಕ ಪ್ರಮುಖ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಮುಂದಿನ ದಿನಗಳಲ್ಲೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ನುಡಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಬೃಹತ್ ಲಸಿಕೆ ಅಭಿಯಾನಕ್ಕೆ ಚಾಲನೆ
ಇದಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಯಲ್ಲಿ ರಾಜ್ಯದಲ್ಲಿ 30 ಲಕ್ಷ ಲಸಿಕೆ ಹಾಕುವ ಬೃಹತ್ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆಯಲ್ಲಿ ಸಿಎಂ ಅವರು ಕೋವಿಡ್ ವಾರಿಯರ್ʼಗಳಿಗೆ ಸನ್ಮಾನ ಮಾಡಿ ಗೌರವಿಸಿದರು. ಸಚಿವರಾದ ಮುರುಗೇಶ್ ನಿರಾಣಿ, ಮುನಿರತ್ನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಮುಂತಾದವರು ಮುಖ್ಯಮಂತ್ರಿಗಳ ಜತೆಯಲ್ಲಿ ಇದ್ದರು.