ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ ಆರ್.ಲತಾ
by Ra Na Gopala Reddy Bagepalli
ಬಾಗೇಪಲ್ಲಿ: ಮಾಡಪ್ಪಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ದೂರು ನೀಡಿದ್ದಾರೆ.
ಕೋವಿಡ್ ವ್ಯಾಕ್ಸಿನ್ ಬಗ್ಗೆ ಅರಿವು ಮೂಡಿಸಲು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಈ ಬಗ್ಗೆ ಸುದೀರ್ಘ ಮನವಿ ಮತ್ರ ನೀಡಿದ ಗ್ರಾಮದ ಯುವಕ ನರಸಿಂಹಮೂರ್ತಿ ಮತ್ತಿತರರು, “ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಅನಾಹುತಗಳು ಅನೇಕ. ಇದರಿಂದ ಜಲ ಮೂಲಗಳು ಸಂಪೂರ್ಣ ನಾಶವಾಗುತ್ತಿವೆ. ರಸ್ತೆಗಳು ಹಾಳಾಗಿವೆ. ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ” ಎಂದು ತಿಳಿಸಿದರು.
ಈ ಸಮಸ್ಯೆ ಬಗ್ಗೆ ಅನೇಕ ಮನವಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಸಲ್ಲಿಸಿದ್ದೇವೆ. ಆದರೆ ನಮ್ಮ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ, ಪರಿಹಾರಗಳು ಮಾತ್ರ ಕಾಣುತ್ತಿಲ್ಲ. ಕಲ್ಲು ಗಣಿಗಾರಿಕೆ ನಡೆಸುವವರು ತಡೆಗೋಡೆ ನಿರ್ಮಿಸುವಂತೆ ಹಾಗೂ ಕೆರೆ ಹಾಳಾಗದಂತೆ ಕ್ರಮ ಕೈಗೊಳ್ಳುವ ನೋಟಿಸ್ ಕೊಡುತ್ತೇನೆಂದು ಜಿಲ್ಲಾಧಿಕಾರಿಗಳು ಮೌಖಿಕ ಭರವಸೆ ಕೊಟ್ಟಿದ್ದಾರೆ. ಕಾದು ನೋಡೋಣ ಎಂದು ಗ್ರಾಮಸ್ಥ ಮಾಡಪಲ್ಲಿ ನರಸಿಂಹಮೂರ್ತಿ ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಇತರೆ ಸಮಸ್ಯೆಗಳ ವಿರಾಟ್ ದರ್ಶನ ಆಯಿತು. ವಿದ್ಯಾರ್ಥಿಗಳು ಕೂಡ ಡೀಸಿಗೆ ದೂರುಗಳ ಸರಣಿಯನ್ನೇ ಹೇಳಿದರು.
ನಮ್ಮೂರಿನ ಸಂಪೂರ್ಣ ಹಾಳಾಗಿದೆ. ಶಾಲಾ, ಕಾಲೇಜುಗಳಿಗೆ ನಡೆದುಕೊಂಡು ಹೋಗಲು ತುಂಬಾ ಪ್ರಯಾಸ ಪಡುತ್ತಿದ್ದೇವೆ. ಯಾವುದೇ ರೀತಿಯ ಸಾರಿಗೆ ಸೌಕರ್ಯವಿಲ್ಲ. ಪ್ರತಿದಿನ 5 ಕಿ.ಮೀ ಹೋಗುವುದು ಮತ್ತು 5 ಕಿ.ಮೀ ನಡೆದು ಬರುವುದಾಗಿದೆ. ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಯವರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕೂಡಲೇ ಈ ಸಮಸ್ಯೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಲಸಿಕೆ ಹಾಕಿಸಿಕೊಳ್ಳಲು ಮನವಿ
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾಡಪಲ್ಲಿ ಗ್ರಾಮದಲ್ಲಿ ಕೊರೋನಾ ಲಸಿಕಾ ಅಭಿಯಾನದ ನಿಮಿತ್ತ ಎಲ್ಲರೂ ಕೋವಿಡ್ ವ್ಯಾಕ್ಸಿನ್ ಪಡೆಯುವಂತೆ ಜನರಿಗೆ ಮನವೊಲಿಸಿದರು.
ಗ್ರಾಮದಲ್ಲಿ ಸುಮಾರು ಶೇ.20ರಷ್ಟು ಜನರಿಗೆ ಮಾತ್ರ ವ್ಯಾಕ್ಸಿನ್ ಹಾಕಿಸಲಾಗಿದ್ದು, ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದ ಡೀಸಿ ಅವರು; ಗ್ರಾಮದ ಪ್ರಜ್ಞಾವಂತರು, ಅನಕ್ಷರಸ್ಥ ಯುವ ಜನರು ಮುಗ್ಧರಿಗೆ ತಿಳಿವಳಿಕೆ ಕೊಡುವಂಥ ಕೆಲಸ ಮಾಡಬೇಕು. ವ್ಯಾಕ್ಸಿನ್ ನೀಡಲು ಆರೋಗ್ಯ ಇಲಾಖೆ, ತಾಲೂಕು ಆಡಳಿತಗಳ ಅಧಿಕಾರಿಗಳು ಗ್ರಾಮದ ಮನೆಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಿ ಈವರೆಗೂ ಲಸಿಕೆ ಪಡೆಯದವರನ್ನು ಹುಡುಕಿಸಿ ಅವರಿಗೆ ವ್ಯಾಕ್ಸಿನ್ ಹಾಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಆರ್ ಕಬಾಡೆ, ತಹಶಿಲ್ದಾರ್ ಡಿ.ಎ.ದಿವಾಕರ್, ತಾಲೂಕು ಆರೋಗ್ರಾಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ಸ್ವಾಮಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಾಬು ಸಾಹೇಬ ಸೇರಿದಂತೆ ಹಲವಾರು ಅಧಿಕಾರಿಗಳು ಹಾಜರಿದ್ದರು.