12-17 ವರ್ಷ ಮಕ್ಕಳಿಗೆ ಶೀಘ್ರವೇ ವ್ಯಾಕ್ಸಿನ್: ICMR ಅನುಮತಿ ಸಿಕ್ಕಿದ ಕೂಡಲೇ ಲಸಿಕೀಕರಣ: ಡಾ.ಕೆ.ಸುಧಾಕರ್
ಬೆಂಗಳೂರು: ಡಿಸೆಂಬರ್ ಹೊತ್ತಿಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡು ಡೋಸ್ ಕೋವಿಡ್ ಲಸಿಕೆ ನೀಡಿ ಮುಗಿಸುವ ಉಮೇದಿನಲ್ಲಿರುವ ರಾಜ್ಯ ಸರಕಾರ, 12ರಿಂದ 17 ವರ್ಷ ವಯೋಮಿತಿ ಮಕ್ಕಳಿಗೆ ಶೀಘ್ರದಲ್ಲೇ ವ್ಯಾಕ್ಸಿನ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು; ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR)ಯ ಅನುಮತಿ ಸಿಕ್ಕಿದ ಕೂಡಲೇ ಈ ವಯೋಮಿತಿಯ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದರು.
ಮಕ್ಕಳಿಗೆ ಹಿರಿಯರಿಗೆ ಕೊಟ್ಟ ಹಾಗೆ ಲಸಿಕೆಯನ್ನು ಇಂಜೆಕ್ಷನ್ ರೂಪದಲ್ಲಿ ಕೊಡದೇ ನಾಸಲ್ ಡ್ರಾಪ್ಸ್ (ಮೂಗಿನಲ್ಲಿ ಹನಿಯಂತೆ ಹಾಕುವುದು) ಮಾದರಿಯಲ್ಲಿ ಹಾಕಲಾಗುವುದು. ಈಗಾಗಲೇ ಕೆಲ ಲಸಿಕಾ ತಯಾರಿಕೆ ಕಂಪನಿಗಳು ಮುಂದೆ ಬಂದಿವೆ. ಈ ಪೈಕಿ ಕೊವ್ಯಾಕ್ಸಿನ್ ಮಕ್ಕಳ ಲಸಿಕೆಯ ಕ್ಲಿನಿಕಲ್ ಟ್ರೈಯಲ್ ಹಂತದಲ್ಲಿ ಯಶಸ್ವಿಯಾಗಿದೆ. ICMR ಅನುಮತಿ ಮತ್ತು ಮಾರ್ಗಸೂಚಿಯನ್ನು ಸರಕಾರ ಎದುರು ನೋಡುತ್ತಿದೆ ಎಂದು ಸಚಿವರು ತಿಳಿಸಿದರು.
ಮೂರನೇ ಅಲೆ, ನಿಫಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಸರಕಾರ ಇದಕ್ಕೆ ಅಗತ್ಯವಾದ ಸಲಹೆ, ಮಾಹಿತಿ ಪಡೆದುಕೊಂಡಿದೆ. ಐಸಿಎಂಆರ್ ಜತೆಯೂ ಈಗಾಗಲೇ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದ್ದು, ಅವರು ಒಪ್ಪಿಗೆ ಸೂಚಿಸಿದ ಕೂಡಲೇ ಮಕ್ಕಳಿಗೆ ಮೊದಲ ಡೋಸ್ ಕೊಡಲು ಆರಂಭ ಮಾಡಲಾಗುವುದು ಎಂದು ಡಾ.ಸುಧಾರಕ್ ಮಾಹಿತಿ ನೀಡಿದರು.
ಡಿಸೆಂಬರ್ ಹೊತ್ತಿಗೆ ಎಲ್ಲರಿಗೂ ಲಸಿಕೆ
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿದ್ದು, ಈ ವರ್ಷದ ಡಿಸೆಂಬರ್ 31ರೊಳಗೆ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಲಾಗುವುದು. ರಾಜ್ಯದಲ್ಲಿ ಈಗ ಲಸಿಕೆಯ ಕೊರತೆ ಇಲ್ಲ ಎಂದು ಡಾ.ಸುಧಾಕರ್ ಹೇಳಿದರು.
ಬೆಂಗಳೂರು ಮಹಾನಗರದಲ್ಲಿ ಲಸಿಕೀಕರಣ ಅತ್ಯುತ್ತಮವಾಗಿದ್ದು, ಹಳ್ಳಿ ಪ್ರದೇಶಗಳಲ್ಲೂ ಈಗಲೂ ಕೆಲವರು ಲಸಿಕೆ ಎಂದರೆ ಭಯಪಡುತ್ತಿದ್ದಾರೆ. ಅಲ್ಲಿನ ಜನರ ಮನವೊಲಿಸಿ ವ್ಯಾಕ್ಸಿನ್ ಕೊಡಲಾಗುತ್ತಿದೆ. ಸುಶಿಕ್ಷಿತರೇ ಇರುವ ಅಮೆರಿಕದಲ್ಲೂ ಲಸಿಕೆಯೆಂದರೆ ಜನ ಭಯದಲ್ಲಿದ್ದಾರೆ. ಅದು ಸಹಜ ಕೂಡ. ಆದರೆ, ರಾಜ್ಯ ಸರಕಾರ ಎಲ್ಲರ ಮನವೊಲಿಸುತ್ತಿದೆ. ಲಸಿಕೆ ಜೀವ ಉಳಿಸುತ್ತದೆಯೇ ಹೊರತು ಪ್ರಾಣ ತೆಗೆಯುದಿಲ್ಲ ಎಂದರು ಸಚಿವರು.
ಕೋವಿಡ್ ಸಾವುಗಳ ಬಗ್ಗೆ ಪ್ರತಿಪಕ್ಷಗಳು ಹೇಳುತ್ತಿರುವ ಅಂಕಿ-ಅಂಶಗಳಲ್ಲಿ ಸತ್ಯಾಂಶ ಇಲ್ಲ. ಅವರು ಸರಕಾರವನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ತಪ್ಪು ಮಾಹಿತಿ ನೀಡಬಾರದು. ಇಲ್ಲಿ ಯಾರಿಗೆ ಯಾರೂ ವೈರಿಗಳಿಲ್ಲ. ನಮಗೆಲ್ಲರಿಗೂ ʼವೈರಸ್ ಒಂದೇ ವೈರಿʼ ಎಂಬ ಅಂಶವನ್ನು ಮರೆಯಬಾರದು ಎಂದು ಸುಧಾಕರ್ ಅಭಿಪ್ರಾಯಪಟ್ಟರು.
ಸಾಮಾನ್ಯ ಜ್ವರ ಅಷ್ಟೇ
ಸದ್ಯಕ್ಕೆ ಕೆಲ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ ಕೊರೋನಾ ಅಲ್ಲ. ಅದು ಸಾಮಾನ್ಯ ಜ್ವರವಷ್ಟೇ. ಯಾರೂ ಹೆದರಬೇಕಿಲ್ಲ. ಈಗ ಮಕ್ಕಳಲ್ಲಿ ಕಾಣುತ್ತಿರುವ ಜ್ವರ ಕೇವಲ ಸೀಸನಲ್ ಫಿವರ್ ಆಷ್ಟೇ. ಒಂದು ವೇಳೆ ಯಾರೇ ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದರೆ ಸರಕಾರವೇ ಚಿಕಿತ್ಸೆ ನೀಡುತ್ತದೆ. ಪೋಷಕರಿಗೆ ಆತಂಕ ಬೇಡ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿದೆ. ನಿರಂತರವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲಿಯೂ ಟೆಸ್ಟ್ ನಿಲ್ಲಿಸಿಲ್ಲ. ಮಂಗಳೂರಿನಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ದುಬೈನಿಂದ ಬಂದಿದ್ದ ಶಂಕಿತರ ಸ್ಯಾಂಪಲ್ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ವರದಿ ಬಂದ ಮೇಲೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸುಧಾಕರ್ ತಿಳಿಸಿದರು.