ಕೋವಿಡ್ ಸೋಂಕು ಕಂಟ್ರೋಲ್, ಪೂರ್ಣ ವಿನಾಯಿತಿ ಅವಕಾಶ ನಿರೀಕ್ಷೆ; ಯಾವುದಕ್ಕೆಲ್ಲ ಸಿಗಲಿದೆ ರಿಲ್ಯಾಕ್ಸ್? ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ, ಪಬ್ ಸೇರಿದಂತೆ ಕೆಲ ಚಟುವಟಿಕೆಗಳ ಮೇಲಿದ್ದ ನಿಷೇಧವನ್ನು ಸಡಿಲಿಸಲು ಸರಕಾರ ಮುಂದಾಗಿದೆ.
ಮಹಾತ್ಮ ಗಾಂಧಿ ಜಯಂತಿ (ಅಕ್ಟೋಬರ್ 2) ವೇಳೆಗೆ ಬಹುತೇಕ ಚಟುವಟಿಕೆಗಳನ್ನು ನಿರ್ಬಂಧದಿಂದ ಮುಕ್ತಗೊಳಿಸಲು ನಿರ್ಧರಿಸಲಾಗಿದೆ.
ಪ್ರಸಕ್ತ ವಿಧಾನ ಮಂಡಲದ ಅಧಿವೇಶನ ಪೂರ್ಣಗೊಂಡ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿ, ತಜ್ಞರ ಸಲಹೆ ಪಡೆದು ರಾಜ್ಯದಲ್ಲಿ ಆರ್ಥಿಕ ಚಟಿವಟಿಕೆಗಳಿಗೆ ಮತ್ತಷ್ಟು ಒತ್ತು ಕೊಡಲು ಮುಂದಾಗಲಿದ್ದಾರೆ.
ಕೊರೊನಾ ಸೋಂಕು ಪಾಸಿಟಿವಿಟಿ ದರ ಶೇಕಡ 1ಕ್ಕಿಂತ ಕಡಿಮೆ ಇರುವುದರ ಜತೆಗೆ ಕಳೆದ ಕೆಲ ದಿನಗಳಿಂದ ನಿಯಂತ್ರಣದಲ್ಲೇ ಇದೆ. ಕೋವಿಡ್-19 ಲಸಿಕೆಯನ್ನು ಶೇ.70ರಷ್ಟು ಜನರಿಗೆ ನೀಡುವಲ್ಲಿ ಸರಕಾರ ಯಶಸ್ವಿಯಾಗಿದೆ. ಅಲ್ಲದೆ, ಶೇ.35ರಷ್ಟು ಜನ ಎರಡನೇ ಡೋಸ್ ಪಡೆದಿದ್ದಾರೆ.
ಈ ತಿಂಗಳ ಅಂತ್ಯದೊಳಗೆ ಲಸಿಕೆ ನೀಡಿಕೆ ಪ್ರಮಾಣ ಶೇ.80ರಿಂದ ಶೇ.85ಕ್ಕೆ ತಲುಪುವ ನಿರೀಕ್ಷೆಯಿದ್ದು, ಎರಡನೇ ಡೋಸ್ ನೀಡಿಕೆ ಪ್ರಮಾಣ ಶೇ.40ರಿಂದ ಶೇ.45ಕ್ಕೆ ತಲುಪಲಿದೆ.
ಕೋವಿಡ್-19 ಮೂರನೇ ಅಲೆ ಸೆಪ್ಟೆಂಬರ್ ಎರಡು-ಮೂರನೇ ವಾರದಲ್ಲಿ ಬರಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಈ ಮಧ್ಯೆ ತಜ್ಞರು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ನಿಯಮಾವಳಿ ಅಡಿಯಲ್ಲಿ ನಿಷೇಧಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡಬಹುದು ಎಂದು ತಿಳಿಸಿದ್ದಾರೆ.
ಇದರಿಂದ ಪ್ರಸ್ತುತ ಚಲನ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಇದ್ದ ಆಸನ ಭರ್ತಿ ಪ್ರಮಾಣವನ್ನು ಪೂರ್ಣ ಪ್ರಮಾಣಕ್ಕೆ ಏರಿಸುವ ಹಾಗೂ ಪಬ್‌ಗಳಿಗೆ ಅನುಮತಿ ನೀಡುವುದು, ಮದುವೆ ಮತ್ತಿತರೆ ಸಮಾರಂಭಗಳಿಗೆ ಈಗಿರುವ ಮಿತಿಯನ್ನು ಮತ್ತಷ್ಟು ಸಡಿಲಿಸುವುದು, ಅಲ್ಲದೇ 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಪುನಾರಂಭಿಸುವುದು ಸೇರಿದೆ.
ಪ್ರಾಥಮಿಕ ಶಾಲೆ ಹೊರತುಪಡಿಸಿ ಉಳಿದ ಶೈಕ್ಷಣಿಕ ಸಂಸ್ಥೆಗಳು ಆರಂಭಗೊಂಡು ಎರಡು ತಿಂಗಳೇ ಕಳೆದಿದೆ. ಇದರಿಂದ ಸೋಂಕಿನಲ್ಲಿ ಹೆಚ್ಚಳ ಕಂಡುಬಂದಿಲ್ಲ. ಅಲ್ಲದೆ, ವಾಣಿಜ್ಯ ವಹಿವಾಟು, ಸಮೂಹ ಸಾರಿಗೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇದರಿಂದಲೂ ಸೋಂಕು ಹೆಚ್ಚಳವಾದೆ ಸಂಪೂರ್ಣ ನಿಯಂತ್ರಣದಲ್ಲಿದೆ. ಈ ಎಲ್ಲಾ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಈ ತಿಂಗಳ 30ರಂದು ತಜ್ಞರ ಸಭೆ ನಡೆಸಿ ಬಹುತೇಕ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವಂಥ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ರಾತ್ರಿ ಕರ್ಫ್ಯೂವನ್ನು 9ರ ಬದಲಿಗೆ 10 ಗಂಟೆಯಿಂದ ಮುಂಜಾನೆ 5ರ ಬದಲಿಗೆ 6 ಗಂಟೆ ರವರೆಗೆ ವಿಸ್ತರಿಸುವ ಸಾಧ್ಯತೆಯೂ ಇದೆ.
ಈ ನಡುವೆ ಚಲನಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್; ನಿರ್ಮಾಪಕರ ಮನವಿ ಪರಿಶೀಲನೆ ಮಾಡಲಾಗುವುದು. ಸೋಂಕಿನ ಪ್ರಮಾಣ ಕಡಿಮೆ ಆಗಿದೆ. ಎಲ್ಲ ಆಯಾಮಗಳಲ್ಲೂ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು, ಈಜುಕೊಳ, ಕಲ್ಯಾಣ ಮಂಟಪಗಳಿಗೂ ಇದು ಅನ್ವಯ ಆಗುತ್ತದೆ ಎಂದರು.