ಮರಳು ನೀತಿಯಲ್ಲಿ ನಿಯಮ ಸರಳೀಕರಣ: ಸಚಿವ ಹಾಲಪ್ಪ ಆಚಾರ್
ಬೆಂಗಳೂರು: ಹಳ್ಳ, ತೊರೆಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಗ್ರಾಮ ಪಂಚಾಯತಿಯಿಂದಲೇ ಅನುಮತಿ ನೀಡಲು ಅನುಕೂಲವಾಗುವಂತೆ ಮರಳು ನೀತಿಯಲ್ಲಿ ನಿಯಮಗಳನ್ನು ಸರಳೀಕರಣ ಮಾಡಲಾಗುವುದು ಎಂದು ಭೂ ವಿಜ್ಞಾನ ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿಂದು ಎಸ್.ಎಲ್.ಬೋಜೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮತಿ ನೀಡಲಾಗುವುದು. ಇದರಿಂದ ಗ್ರಾಮೀಣ ಭಾಗದಲ್ಲಿ ಮರಳಿನ ಸಮಸ್ಯೆ ನಿವಾರಣೆಯಾಗವುದಲ್ಲದೆ, ಹಲವು ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದರು.
ರಾಜ್ಯದಲ್ಲಿ 45 ದಶ ಲಕ್ಷ ಟನ್ ಮರಳಿನ ಬೇಡಿಕೆ ಇದೆ. 35 ದಶಲಕ್ಷ ಟನ್ ಮಾತ್ರ ಮರಳು ಸಿಗುತ್ತಿದೆ. ಕೊರತೆ ಇರುವ 10 ದಶಲಕ್ಷ ಟನ್ ಮರಳು ಉತ್ಪಾದನೆಗೆ ಕಲ್ಲುಪುಡಿ ಗಣಿಗಾರಿಕೆ ಮತ್ತು ಹಳ್ಳ-ತೊರೆಗಳಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗಿದೆ ಎಂದರು.
ಕಲ್ಲು ಗಣಿಕಾರಿಕೆಗೆ ಅನುಮತಿ ನೀಡಲು ಜಿಲ್ಲಾ ಮಟ್ಟದಲ್ಲಿ ಪ್ರಾಧಿಕಾರ ಮಾಡಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯ ಕ್ರಷರ್ʼಗಳ ಅನುಮತಿಯನ್ನು ಪ್ರತ್ಯೇಕಗೊಳಿಸಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ನಾಲ್ಕು ಕ್ರಷರ್ʼಗಳು ಮಾತ್ರ ಇವೆ. ಅವುಗಳಲ್ಲಿ ಎರಡು ಮಾತ್ರ ಸಕ್ರಿಯವಾಗಿವೆ. ಮೂರು ಹೊಸ ಕ್ರಷರ್ʼಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಮರಳು ತೆಗೆಯಲು 17 ನದಿಗಳ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅಲ್ಲಿ 68 ಸಾವಿರ ಟನ್ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ 1.2 ಮೆಟ್ರಿಕ್ ಟನ್ ಎಂ-ಸ್ಯಾಂಡ್ ಕೊಡಗಿಗೆ ರವಾನೆ ಮಾಡಲಾಗುತ್ತಿದೆ. ನಿಸರ್ಗದತ್ತ ಮರಳು ತೆಗೆಯಲು ತಿದ್ದುಪಡಿ ಮಾಡಿ ಮರಳು ನೀತಿಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಅವರು ಹೇಳಿದರು.