ಗುಡಿಬಂಡೆಯಲ್ಲಿ ನಾಳೆ ರಕ್ತದಾನ ಶಿಬಿರ
By GS Bharath Gudibande
ಗುಡಿಬಂಡೆ: ನಾಳೆ (ಗುರುವಾರ) ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ತಾಲೂಕಿನ ಸಾರ್ವಜನಿಕರು ರಕ್ತದಾನ ಮಾಡಬೇಕೆಂದು ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು, ರಕ್ತದಾನ ಶ್ರೇಷ್ಟ ದಾನ ಎಂದರಲ್ಲದೆ ಪ್ರತಿಯೊಬ್ಬ ಆರೋಗ್ಯವಂತರೂ ಸ್ವ ಇಚ್ಚೆಯಿಂದ ರಕ್ತದಾನ ಮಾಡಬೇಕೆಂದು ಕೋರಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉನ್ನತಿ ಮಾನವ ಹಕ್ಕುಗಳ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಘಟಕ, ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ತು, ಜಮಿಯತ್-ಎ-ಉಲಾಮ, ತಾಲೂಕು ಜಯಕರ್ನಾಟಕ ಸಂಘಟನೆ, ತಾಲೂಕಿನ ಎಲ್ಲಾ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ರಕ್ತದಾನದಿಂದ ಆಗುವ ಪ್ರಯೋಜನ
- ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆಯಾಗುತ್ತದೆ.
- ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯದಕ್ಷತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
- ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ.
- ಹೃದಯಾಘಾತವನ್ನು 80% ತಡೆಯಲು ಸಹಾಯವಾಗುತ್ತದೆ.
- ರಕ್ತದೊತ್ತಡ ಹಾಗೂ ಇತರೆ ರೋಗಿಗಳು ತಡೆಗಟ್ಟಲು ಸಹಾಯಕರ.
ಯಾರು ರಕ್ತದಾನ ಮಾಡಬಹುದು?
- ಹೆಣ್ಣು ಗಂಡು ಎಂಬ ಬೇಧಬಾವ ಇಲ್ಲದೆ 18 ವರ್ಷ ಮೇಲ್ಪಟ್ಟ 60 ವರ್ಷ ಒಳಗಿರುವ ಎಲ್ಲ ಆರೋಗ್ಯವಂತರು ರಕ್ತದಾನ ಮಾಡಬಹುದು.
- ಗಂಡಸರು 3 ತಿಂಗಳು ಹಾಗೂ ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
- ದಾನಿಯ ದೇಹದ ತೂಕ 45 ಕೆ.ಜಿ ಗಿಂತ ಹೆಚ್ಚಿರಬೇಕು.
- ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.
- ಒಂದೆರಡು ವಾರದಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣ ತುಂಬಿಕೊಳ್ಳುತ್ತದೆ.
ಕೋವಿಡ್ ಕಾರಣ ರಕ್ತ ಶೇಖರಣೆ ಕಡಿಮೆಯಾಗಿದ್ದು, ಹೆಚ್ಚು ರಕ್ತದಾನ ಮಾಡಲು ಸಾರ್ವಜನಿಕರು ಮುಂದಾಗಬೇಕು. ಈಗ ಡೆಂಘಿ ಜ್ವರದಿಂದ ದೇಹದಲ್ಲಿ ಪ್ಲೇಟ್ʼಲೆಟ್ಸ್ ಕೊರತೆ ಉಂಟಾಗಿದೆ. ಹಾಗಾಗಿ ಹೆಚ್ಚು ಹೆಚ್ಚಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು, ಕೋವಿಡ್ ವ್ಯಾಕ್ಸಿನ್ ಪಡೆದು ಒಂದು ತಿಂಗಳಾದವರೂ ರಕ್ತದಾನ ಮಾಡಬಹುದು.
ಡಾ.ವಿಜಯಲಕ್ಷ್ಮಿ, ಆಡಳಿತ ವೈದ್ಯಾಧಿಕಾರಿ, ಗುಡಿಬಂಡೆ
ನಾಳೆ ನಡೆಯುವ ರಕ್ತದಾನ ಶಿಬಿರದಲ್ಲಿ ಎಲ್ಲರೂ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಜಿಲ್ಲೆಯಲ್ಲಿ ರಕ್ತದ ಶೇಖರಣೆ ಕಡಿಮೆಯಾಗಿದೆ. ನೂರಾರು ಜನರಿಗೆ ರಕ್ತದ ಅವಶ್ಯಕತೆ ಇದೆ. ಹಾಗಾಗಿ ನಮ್ಮ ತಾಲೂಕಿನಿಂದ ಹೆಚ್ಚು ರಕ್ತ ಶೇಖರಣೆ ಮಾಡಲು ಎಲ್ಲರ ಸಹಕಾರ ಅವತ್ಯವಿದೆ.
ಜಿ.ವಿ.ವಿಶ್ವನಾಥ್, ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ
ಜಗತ್ತಿನ ಅತಿ ದೊಡ್ಡ ಸಹಾಯ ಎಂದರೆ ಒಬ್ಬ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿಯ ಜೀವ ಉಳಿಸಲು ನೀಡುವುದು. ಇದರಿಂದ ನೂರಾರು ಜನರು ಸಾವಿನಿಂದ ಪಾರಾಗುತ್ತಾರೆ. ಇಂತಹ ಮಹಾ ರ್ಕಾಯದಲ್ಲಿ ತಾಲೂಕಿನ ಯುವಕರು, ಸಾರ್ವಜನಿಕರು ಹೆಚ್ಚು ಭಾಗವಹಿಸಬೇಕು, ವ್ಯಕ್ತಿಯ ಜೀವ ಉಳಿಸಲು ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ಯಾವುದೇ ಪ್ರತಿಫಲಾಪೇಕ್ಷ ಇಲ್ಲದೆ ರಕ್ತದಾನ ಮಾಡಿ ಜೀವ ಉಳಿಸಬೇಕು.
ಕೆ.ಎನ್.ನವೀನ್ ಕುಮಾರ್, ಆರೋಗ್ಯ ರಕ್ಷಾಸಮಿತಿ ಸದಸ್ಯ, ಗುಡಿಬಂಡೆ
ನಾನು 24 ಸಲ ರಕ್ತದಾನ ಮಾಡಿದ್ದೇನೆ. ಯಾರೇ ತೊಂದರೆಯಲ್ಲಿದ್ದರೂ, ಯಾವುದೇ ಸಮಯದಲ್ಲಿ ನನಗೆ ಕರೆ ಮಾಡಿ ರಕ್ತ ಕೇಳಿದರೂ ಹೋಗಿ ಕೊಡುತ್ತೇನೆ. ರಕ್ತದಾನ ನಿಜಕ್ಕೂ ಒಂದು ಪ್ರಾಣವನ್ನು ಉಳಿಸುವ ಕಾರ್ಯ. ಇಂಥ ಕಾರ್ಯಕ್ಕೆ ಪ್ರತಿಯೊಬ್ಬರೂ ಹೆಗಲು ಕೊಡಬೇಕು.
ಡಿ.ಎಸ್.ಮುರಳಿ, ತಾಲೂಕು ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ