ಮೊದಲು 8,000 ಕೋಟಿ ರೂ. DPR ಮಾಡಲಾಯಿತು. ಆಮೇಲೆ 13,000 ಕೋಟಿಗೆ ಮರು DPR ಮಾಡಲಾಯಿತು. ಈಗ ಪುನಾ 24,000 ಕೋಟಿ ರೂ.ಗಳಿಗೆ DPR ಮಾಡಲು ಹೊರಟಿದ್ದಾರೆ.
ಬಿಡದಿ: ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗೆ ಕುಡಿಯುವ ನೀರೊದಿಗಿಸುವ ಎತ್ತಿನಹೊಳೆ ಯೋಜನೆಯ ಬಗ್ಗೆ ರಾಜ್ಯ ಸರಕಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.
ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಬಗ್ಗೆ ಪಕ್ಷದ ಹಾಲಿ ಶಾಸಕರೂ, ಕಳೆದ ಚುನಾವಣೆಯಲ್ಲಿ ಪರಾಜಿತರಾಗಿದ್ದ ಅಭ್ಯರ್ಥಿಗಳು ಹಾಗೂ ಮುಂದಿನ ಚುನಾವಣೆಯ ಅಭ್ಯರ್ಥಿಗಳ ಜತೆ ಮಹತ್ವದ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು; ರಾಜ್ಯದ ಐದು ನೀರಾವರಿ ಯೋಜನೆಗಳಿಗೆ ಜೀವ ತುಂಬುವುದು ನಮ್ಮ ಮಹತ್ವದ ನಿಲುವು ಎಂದರು.
ಮೇಕೆದಾಟು, ಯುಕೆಪಿ, ಮಹದಾಯಿ, ಎತ್ತಿನಹೊಳೆ ಯೋಜನೆಗಳ ಕ್ಷಿಪ್ರ ಕಾರ್ಯಗತದ ಭರವಸೆಯೊಂದಿಗೆ ಮುಂದಕ್ಕೆ ಹೋಗುವುದು ಪಕ್ಷದ ಕಾರ್ಯಸೂಚಿ. ಎತ್ತಿನಹೊಳೆ ಯೋಜನೆ ಹೆಸರು ಹೇಳಿಕೊಂಡು ಮೊದಲು 8,000 ಕೋಟಿ ರೂ. DPR ಮಾಡಲಾಯಿತು. ಆಮೇಲೆ 13,000 ಕೋಟಿಗೆ ಮರು DPR ಮಾಡಲಾಯಿತು. ಈಗ ಪುನಾ 24,000 ಕೋಟಿ ರೂ.ಗಳಿಗೆ DPR ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದರು.
ಯೋಜನೆಗಳ ಗಾತ್ರವನ್ನು ಬೇಕಾದ ಹಾಗೆ ಹಿಗ್ಗಿಸಿಕೊಳ್ಳುವುದು, ಅದಕ್ಕೆ ಹಣದ ಹೊಳೆ ಹರಿಸುವುದು ಹೆಚ್ಚಾಗಿದೆ. ಜನರ ದುಡ್ಡಿನ ಬಗ್ಗೆ ಬೆಲೆಯೇ ಇಲ್ಲ ಎಂದು ಅವರು ಕಿಡಿ ಕಾರಿದರು.
ಮೇಕೆದಾಟು ಸೇರಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ಹಾಗೂ ಬಿಜೆಪಿಗೆ ಯಾವ ಬದ್ಧತೆಯೂ ಇಲ್ಲ. ಹೊಸ ಮುಖ್ಯಮಂತ್ರಿಗೆ ಕೂಡ ಬದ್ಧತೆ ಇಲ್ಲ. ಮೇಕೆದಾಟು ಯೋಜನೆ ಕೇಂದ್ರ ಸರಕಾರದ ಮುಂದೆಯೇ ಇಲ್ಲ. ರಾಜ್ಯ ರಾಜ್ಯಗಳ ನಡುವೆ ಬಿಕ್ಕಟ್ಟಿದೆ ಎನ್ನುವ ಕಾರಣಕ್ಕೆ ಕೇಂದ್ರ ಹಿಂಜರಿಯುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಹೀಗಾಗಿ. ನೀರಾವರಿ ಯೋಜನೆಗಳ ಬಗ್ಗೆ ಜೆಡಿಎಸ್ ಹೋರಾಟ ಮಾಡಲಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸುತ್ತೇವೆ. ಕೇಂದ್ರ ಸರ್ಕಾರದ ವಿರುದ್ದವೂ ಹೋರಾಟ ಮಾಡುತ್ತೇವೆ. ಭಾಷೆ, ನೆಲ, ನೀರಿನ ವಿಚಾರದಲ್ಲಿ ನಾಡಿನ ಹಿತ ಕಾಪಾಡಲು ಜೆಡಿಎಸ್ ಕೆಲಸ ಮಾಡುತ್ತದೆ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ರಾಜ್ಯದಲ್ಲಿ ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು ನೋಡಿದ್ದಾರೆ. ಹೀಗಾಗಿ ಅವರ ವರ್ತನೆಗಳು ಏನು ಅನ್ನುವುದು ಗೊತ್ತಿದೆ. ಹೀಗಾಗಿ ಈ ಬಾರಿ ಜನ ನಮ್ಮ ಜತೆ ಇಇರುತ್ತಾರೆ ಅನ್ನೋ ವಿಶ್ವಾಸ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು ಹೆಚ್ಡಿಕೆ ಅವರು.