ಕೋರೊನಾ ಸಾವಿನಲ್ಲೂ ಸುಳ್ಳುಲೆಕ್ಕ; ಸರಕಾರದ ವಿರುದ್ಧ ಗುಡುಗಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
by M Krishnapa Chikkaballapura
ಚಿಕ್ಕಬಳ್ಳಾಪುರ: ಕೋವಿಡ್ ಸಾವಿನಲ್ಲೂ ಸುಳ್ಳು ಲೆಕ್ಕ ಹೇಳಿ ಸರಕಾರ ನಾಟಕವಾಡಿತು. ಇದು ನಮ್ಮ ರಾಜ್ಯದ ದುರಂತ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು.
ಅವರು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರ ಸ್ವಗ್ರಾಮ ಪೆರೇಸಂದ್ರದಲ್ಲಿ ಕೆಪಿಸಿಸಿ ಸದಸ್ಯ ಎನ್.ವಿನಯ್ ಶ್ಯಾಮ್ ಅವರ ನೇತೃತ್ವದಲ್ಲಿ ಸರಕಾರದ ವೈಫಲ್ಯ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾನ ಮರ್ಯಾದೆ ಇಲ್ಲದವರ ಬಗ್ಗೆ ಸಾಮಾನ್ಯವಾಗಿ ನಾನು ಮಾತನಾಡುವುದಿಲ್ಲ. ನೀವು ಹರಾಜಿಗೆ ಬಲಿಯಾಗಬೇಡಿ, ಪ್ರಜಾತಂತ್ರಕ್ಕೆ ಅವಮಾನ ಮಾಡಬೇಡಿ ಎಂದ ಅವರು; ಇಂದು ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಇಂಧನ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ ಎಂದರು.
ಮಾಧ್ಯಮಗಳು ಮಸಾಲೆ ದೋಸೆ ಹುಡುಕಿಕೊಂಡು ಬಂದಿವೆ. ಆದರೆ ಇಲ್ಲಿ ಖಾಲಿ ದೋಸೆ ಮಾತ್ರ ಇದೆ. ನಾವು ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು, ಬೆಲೆ ಏರಿಕೆ ಕುರಿತು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇವೆ. ಸಂಕಟದ ಸಮಯದಲ್ಲಿ ಜನರ ನೆರವಿಗೆ ಬಂದಿರುವ ಕೆಪಿಸಿಸಿ ಸದಸ್ಯ ಎನ್.ವಿನಯ್ ಸಂಕಷ್ಟದಲ್ಲಿ ಇರುವವರಿಗೆ ಆರ್ಥಿಕ ಸಹಾಯ ಮಾಡುತ್ತಿರುವುದು ಉತ್ತಮ ಕೆಲಸ ಎಂದರು.
ಇನ್ನು ಚುನಾವಣೆ ಮುಂದಿಟ್ಟುಕೊಂಡು ಈ ಕೆಲಸ ಮಾಡುತ್ತಿಲ್ಲ. ಕೋವಿಡ್ ಏನನ್ನೂ ಲೆಕ್ಕಿಸದೇ ಎಲ್ಲರನ್ನು ಕಾಡಿ ಸಂಕಟಕ್ಕೆ ತಳ್ಳಿದೆ. ಜನ ಸಾಮಾನ್ಯರು, ಪೊಲೀಸರು, ವೈದ್ಯರು ಎಲ್ಲರೂ ಈ ವ್ಯಾಧಿಯಿಂದ ಮೃತರಾದರು. ಕನಿಷ್ಠ ಮೃತರಾದವರ ಮುಖ ನೋಡಲು ಎಷ್ಟೋ ಮಂದಿಗೆ ಸಾಧ್ಯವಾಗಲಿಲ್ಲ. ಆದರೆ ಇಂತಹ ಸಂಕಟ ಬಂದಾಗ ಸರಕಾರ ಸ್ಪಂದಿಸಿದ್ದು ಹೇಗೆ ಎಂಬುದು ಮುಖ್ಯವಾಗುತ್ತದೆ. ಆಸ್ಪತ್ರೆಯಲ್ಲಿ ಮೃತದೇಹ ತೆಗೆದುಕೊಂಡು ಹೋಗಲು ಹಣ ಕೇಳಿದರು. ಆಗ ಸರಕಾರ ಮಾತನಾಡಲಿಲ್ಲ ಎಂದು ಅವರು ಛೇಡಿಸಿದರು.
ಇದು ಹೇಗಿದೆ ಎಂದರೆ, ನ್ಯಾಯಾಲಯಕ್ಕೆ ಹೋಗಿ ಹೆಣ ಕೊಡಲು ಹಣ ಕೇಳಕೂಡದು ಎಂಬ ತೀರ್ಪು ನೀಡುವಂತೆ ಮಾಡಬೇಕಾಯ್ತು. ಇಷ್ಟಾದರೂ ದಪ್ಪ ಚರ್ಮದ ಸರಕಾರಕ್ಕೆ ಇದು ತಟ್ಟಲೇ ಇಲ್ಲ. ಕೋವಿಡ್ ಪೀಡಿರಿಗೆ ಬೆಡ್ ಸಿಗಲಿಲ್ಲ, ಆಕ್ಸಿಜನ್ ಸಿಗಲಿಲ್ಲ. ಸಾವಿನಲ್ಲಿ ಸುಳ್ಳು ಲೆಕ್ಕ ನೀಡುತ್ತಾ ಸರಕಾರ ನಾಟಕವಾಡಿತು ಎಂದು ಪರೋಕ್ಷವಾಗಿ ಸಚಿವ ಸುಧಾಕರ್ ಅವರ ನಾಟಕೀಯತೆಯನ್ನು ಜನತೆಯ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.
ಐವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಎಲ್ಲವನ್ನೂ ನೋಡಿದ್ದೇನೆ. ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂಬುದು ಕಣ್ಮುಂದೆ ಇದೆ. ಆದರೆ ಇದೇ ಪಕ್ಷದಲ್ಲಿ ಬೆಳೆದು ಹೋದವರಿಗೆ ಅದು ಕಾಣುತ್ತಿಲ್ಲ ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಲ್ನಡಿಗೆ ಜಾಥಾ ಸಮಾವೇಶದಲ್ಲಿ ಮಾಜಿ ಸಚಿವರು ಹಾಲೀ ಶಾಸಕರಾದ ಕೃಷ್ಣಭೈರೇಗೌಡ, ಎನ್.ಹೆಚ್.ಶಿವಶಂಕರ ರೆಡ್ಡಿ, ವಿ.ಮುನಿಯಪ್ಪ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಕೆಪಿಸಿಸಿ ಸದಸ್ಯರಾದ ಮಧು ಬಂಗಾರಪ್ಪ, ಎನ್. ವಿನಯ್ (ಶ್ಯಾಂ) ಮಾತನಾಡಿದರು.
ಇದೇ ವೇಳೆ ಕೋವಿಡ್ ಸಂತ್ರಸ್ತರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ವಿನಯ್ ಶ್ಯಾಂ ಅವರು ಜಿ ಹೆಚ್ ಎನ್ ಪೌಂಡೇಷನ್ ವತಿಯಿಂದ ಆರ್ಥಿಕ ನೆರವು ನೀಡಿದರು.