ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಹೊತ್ತಿನಲ್ಲೂ ಗುಡಿಸಲುಗಳ ಹಳ್ಳಿ
- ಅರಣ್ಯ ಪಕ್ಕದ ಹಳ್ಳಿಗರ ಆರ್ತನಾದ
- ಗುಡಿಸಲು ಮುಕ್ತ ಭಾರತ ಕಲ್ಪನೆ ಇಲ್ಲಿ ಸುಳ್ಳು
- ಮನೆಗಳಿಲ್ಲ, ಕುಡಿಯಲು ಶುದ್ಧ ನೀರಿಲ್ಲ
- ಜನರಿಗೆ ಅರೋಗ್ಯವಿಲ್ಲ, ಕಷ್ಟಗಳೇ ಎಲ್ಲ
- ಶಾಸಕರು, ಸಂಸದರು, ಉಸ್ತುವಾರಿ ಸಚಿವರ ಸುಳಿವಿಲ್ಲ
by GS Bharath Gudibande
ಗುಡಿಬಂಡೆ: ಹಳ್ಳಿ, ಪಟ್ಟಣ, ರಾಜ್ಯ ಮತ್ತು ದೇಶವನ್ನು ಗುಡಿಸಲು ಮುಕ್ತ ಮಾಡಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದರೂ ಇಂದಿಗೂ ಗುಡಿಸಲು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳನ್ನು ಸಾರ್ವಜನಿಕರು ಇಂದಿಗೂ ಎದುರಿಸುತ್ತಿದ್ದಾರೆ.
ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮಲಾಪುರ ಗ್ರಾಮ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಹಳ್ಳಿ ಎಂಬ ಕುಖ್ಯಾತಿಗೀಡಾಗಿದೆ.
ದೇಶ ಅಭಿವೃದ್ಧಿಯತ್ತ, ಹಳ್ಳಿಗಳು ಅವನತಿಯತ್ತ
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಅಮೃತ ಮಹೋತ್ಸವದ ವೇಳೆಯಲ್ಲೂ ನಿರುದ್ಯೋಗ, ಅನಕ್ಷರತೆ, ಬಡತನ, ಗುಡಿಸಲು ಮನೆಗಳು ಹೋಗಿಲ್ಲ. ಒಂದೆಡೆ ದೇಶ ಅಭಿವೃದ್ಧಿಯ ಕಡೆ ಹೋಗುತ್ತಿದ್ದರೆ, ಇನ್ನೊಂದೆಡೆ ರೈತರಿಗೆ ಕನಿಷ್ಠ ಗೌರವವಿಲ್ಲದೆ ಹಳ್ಳಿಗಳು ಅವನತಿಯತ್ತ ಸಾಗುತ್ತಿವೆ ಎಂದು ಸೋಮಲಾಪುರ ಗ್ರಾಮಸ್ಥರು ಅಳಲು ತೋಡಿಕೊಂಡರು.
ಸಿಕೆನ್ಯೂಸ್ ನೌ ಜತೆ ತಮ್ಮ ದುಃಖ ತೋಡಿಕೊಂಡ ಸೋಮಲಾಪುರ ಗ್ರಾಮಸ್ಥರು; ನಗರ, ಪಟ್ಟಣಗಳನ್ನು ಸರಕಾರ ಅಭಿವೃದ್ಧಿ ಮಾಡುತ್ತಿದೆ. ಹಳ್ಳಿಗಳ ಬಗ್ಗೆ ಮಾತ್ರ ಅನಾದರ ತೋರುತ್ತಿದೆ. ಇದು ನಿಜಕ್ಕೂ ಅನ್ಯಾಯ. ಮತ ಕೇಳುವ ಸಮಯದಲ್ಲಿ ಮಾತ್ರ ನಮಗೆ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ಆದರೆ, ನಮಗೆ ಸಿಗುತ್ತಿರುವುದು ಶೂನ್ಯಫಲ ಎಂದು ಕಂಬನಿ ಮಿಡಿದರು.
ತಾಲೂಕಿನಲ್ಲಿ 100ಕ್ಕೂ ಹೆಚ್ಚು ಗುಡಿಸಲು ಮನೆಗಳು
ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಗುಡಿಸಲು ಮನೆಗಳನ್ನು ಈಗಲೂ ಕಾಣಬಹುದು, ಮಳೆ, ಗಾಳಿಗೆ ತಡೆಯದ ಹಾಗೂ ಸರಕಾರದಿಂದ ಕನಿಷ್ಠ ಸೌಲಭ್ಯಗಳನ್ನೂ ಕಾಣದ ನೂರಾರು ಕುಟುಂಬಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಕೇವಲ ಚುನಾವಣೆ ಸಂದರ್ಭ ಹೊರತುಪಡಿಸಿ ಬೇರೆ ಸಮಯದಲ್ಲಿ ಯಾವ ನಾಯಕನೂ ನಮ್ಮ ಹಳ್ಳಿಗೆ ಭೇಟಿ ನೀಡಿ ಕಷ್ಟ-ಸುಖ ವಿಚಾರಿಸುತ್ತಿಲ್ಲ ಎಂದು ಸೋಮಲಾಪುರ ಗ್ರಾಮಸ್ಥರು ಹೇಳುತ್ತಾರೆ.
ಸಿಗದ ವಸತಿ ಸೌಲಭ್ಯ
ರಾಜ್ಯ, ಕೇಂದ್ರ ಸರಕಾರಗಳು ಗುಡಿಸಲು ಮುಕ್ತ ಮಾಡಲು ಹಲವು ವಸತಿ ಯೋಜನೆಗಳನ್ನು ಜಾರಿ ಮಾಡಿವೆ. ಮುಖ್ಯಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಆವಾಜ್ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳು ಇವೆ. ಆದರೆ, ಈ ಯೋಜನೆಗಳಲ್ಲಿ ಯಾವು ಕೂಡ ಸೋಮಲಾಪುರ ತಲುಪಿಲ್ಲ. ನಮ್ಮ ಗ್ರಾಮದ ಮೇಲೆ ಈ ಅನಾದರ ಏಕೆ? ಇದಕ್ಕೆ ಸಂಬಂಧಿತ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತರ ನೀಡಬೇಕಿದೆ ಎಂದು ಹಳ್ಳಿಗರು ಒತ್ತಾಯ ಮಾಡುತ್ತಾರೆ.
ಈ ಹಳ್ಳಿಯಲ್ಲಿ 24 ಕುಟುಂಬಗಳಿವೆ. ಆ ಪೈಕಿ ಹತ್ತಕ್ಕೂ ಹೆಚ್ಚು ಕುಟುಂಬಗಳು ಕುಡಿಸಲುಗಳಲ್ಲೇ ವಾಸ ಮಾಡುತ್ತಿವೆ. ಯಾವ ಮೂಲಸೌಕರ್ಯವೂ ಇಲ್ಲ. ಜನರಿಗೆ ಬಯಲೇ ಶೌಚಾಲಯ. ಇನ್ನು ಕೆಲವರಿಗೆ ಕಾಟಾಚರಕ್ಕೆ ಮನೆ ಕಟ್ಟಿಸಿಕೊಡಲಾಗಿದೆ, ಅದರ ಗುಣಮಟ್ಟವಂತೂ ದೇವರಿಗೆ ಪ್ರೀತಿ. ಗುಡಿಸಲಿಗೂ ಅದಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ. ಶೌಚಾಲಯ ನಿರ್ಮಾಣವಂತೂ ಪೂರ್ಣ ಅವೈಜ್ಞಾನಿಕ. ಇನ್ನು ಬಯಲು ಶೌಚಕ್ಕೆ ಕಾಡು ಪ್ರಾಣಿಗಳ ಭೀತಿ ಬೇರೆ. ಇಲ್ಲಿನ ಜನರ ಬವಣೆ ಕರುಣಾಜನಕವಾಗಿದೆ.
ಸೋಮಲಾಪುರ ಸಮಸ್ಯೆಗಳ ಆಗರ
ಸೋಮಲಾಪುರ ಗ್ರಾಮದಲ್ಲಿ ಗುಡಿಸಲು ಮನೆಗಳೇ ಹೆಚ್ಚು. ಬಸ್ ಸಂಪರ್ಕ ಇಲ್ಲ. ಯಾವ ಮನೆಗೂ ನೀರಿನ ಸಂಪರ್ಕವೂ ಇಲ್ಲ. ಚರಂಡಿ, ಸ್ವಚ್ಚತೆ ಮರೀಚಿಕೆ. ರೋಗ ರುಜಿನಗಳ ಜತೆ ಜನ ಜೀವನ ಸಾಗಿಸುವಂಥ ಸ್ಥಿತಿ. ಹಳ್ಳಿಗೆ ಹೆಜ್ಜೆ ಇಟ್ಟ ಕೂಡಲೇ ಗುಡಿಸಲು ಮನೆಗಳು ಕಣ್ಣಿಗೆ ರಾಚುತ್ತವೆ. ಅನೇಕ ವರ್ಷಗಳ ಹಿಂದೆ ಹಾಕಿದ ಸಿಮೆಂಟ್ ಟ್ಯಾಂಕ್ʼನಿಂದ ಮಹಿಳೆಯರು ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಆ ಟ್ಯಾಂಕ್ ಒಳಗೆ, ಹೊರಗೆ ಪಾಚಿ ಕಟ್ಟಿದೆ.
ಜನ ಪ್ರತಿನಿಧಿಗಳ ನಿರ್ಲಕ್ಷ್ಯ
ಇನ್ನು, ಈ ಹಳ್ಳಿಗರಿಂದ ಮತ ಪಡೆದು ಗೆದ್ದ ಸ್ಥಳೀಯ ಜನಪ್ರತಿನಿಧಿಗಳು ಬಿಡಿಗಾಸಿನ ಕೆಲಸ ಮಾಡಿಲ್ಲ. ಶಾಸಕ ಎಸ್.ಎಸ್.ಸುಬ್ಬಾರೆಡ್ಡಿ ಅವರು ಸೋಮಲಾಪುರ ಗ್ರಾಮದ ಕಡೆ ಕಣ್ಣೇ ಹಾಕಿಲ್ಲ. ಇನ್ನು, ಚಿಕ್ಕಬಳ್ಳಾಪುರ ಸಂಸದ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎನ್.ಬಚ್ಚೇಗೌಡರು ಗೆದ್ದು ಲೋಕಸಭೆಗೆ ಹೋದ ಮೇಲೆ ಸೋಮಲಾಪುರ ಏಕೆ? ಗುಡಿಬಂಡೆಯತ್ತ ಕೂಡ ಸುಳಿದಿಲ್ಲ. ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿಂದಲೇ ವಾಪಸ್ ಹೋಗುತ್ತಾರೆ. ಈ ಬಗ್ಗೆ ಗುಡಿಬಂಡೆ ತಾಲೂಕಿನಲ್ಲಿ ತೀವ್ರ ಆಕ್ರೋಶವಿದೆ. ಕಾಯಿಲೆ-ಕಸಾಲೆಗಳಿಂದ ಬಳಲುತ್ತಿರುವ ಈ ಹಳ್ಳಿಯ ದುಃಸ್ಥಿತಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಗಮನಕ್ಕೂ ಹೋಗಿಲ್ಲ.
ಒಟ್ಟಾರೆ, ಜಾಗತಿಕ ಶಕ್ತಿಯಾಗಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಸೋಮಲಾಪುರದ ಕರುಣಾಜನಕ ಕಥೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಇನ್ನಾದರೂ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಣ್ಣಿಗೆ ಈ ಹಳ್ಳಿ ಬೀಳಲಿ ಎಂಬುದೇ ಸಿಕೆನ್ಯೂಸ್ ನೌ ಕಳಕಳಿ.
ಸೋಮಲಾಪುರ ಗ್ರಾಮ ಕರ್ನಾಟಕದ ಅತ್ಯಂತ ಹಿಂದುಳಿದ ಹಳ್ಳಿ ಎಂದರೆ ತಪ್ಪಲ್ಲ. ಮೀಸಲು ಅರಣ್ಯ ಪ್ರದೇಶದ ಪಕ್ಕದಲ್ಲೇ ಇರುವುದರಿಂದ ಜನರು ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕೊರೋನಾ ಸಂದರ್ಭದಲ್ಲಿ ನಾನು ಈ ಗ್ರಾಮದ ಪ್ರತಿ ಮನೆಗೆ ಆಹಾರದ ಕಿಟ್ ತಲುಪಿಸಿದ್ದೇನೆ. ಹಳ್ಳಿಯ ಜನರು ತುಂಬಾ ಕಷ್ಟದ ಜೀವನ ನಡೆಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಗ್ರಾಮಸ್ಥರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ.
ಆಶಾ ಜಯಪ್ಪ, ಮಾಜಿ ಅಧ್ಯಕ್ಷೆ, ಗುಡಿಬಂಡೆ ತಾಲೂಕು ಪಂಚಾಯತಿ
ಈ ಕ್ಷೇತ್ರದ ಜನರು ಜನ ಪ್ರತಿನಿಧಿಗಳಿಗೆ ಮತ ಹಾಕಿದ್ದಾರೆ. ಪ್ರಧಾನಿಗಳು ಮಾತಿನಂತೆ ಲೋಕಸಭಾ ಸದಸ್ಯರು ಸೋಮಲಾಪುರ ಗ್ರಾಮವನ್ನು ದತ್ತು ಪಡೆದು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು. ಕೇವಲ ಚುನಾವಣಾ ಪ್ರಚಾರದಲ್ಲಿ ಮತದಾರರಿಗೆ ಆಮಿಷಗಳನ್ನು ನೀಡುತ್ತಾರೆ. ಆದರೆ, ಯಾವುದು ಮಾಡದಿರುವುದು ನೋವಿನ ಸಂಗತಿ.
ಸೋಮಲಾಪುರ ಗ್ರಾಮಸ್ಥರು
ತಾಲೂಕಿನ ಸೋಮಲಾಪುರ ಗ್ರಾಮಕ್ಕೆ ಬೇಟಿ ನೀಡಿದ್ದೇನೆ. ಸರಕಾರದಿಂದ ಬಂದಿದ್ದ ಮನೆಗಳನ್ನು ಕಟ್ಟಿಸಿದ್ದೇವೆ ಹಾಗೂ ಅದರಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನೂ ಕೆಲ ಗುಡಿಸಲು ಮನೆಗಳಿದ್ದು ಅವರಿಗೆ ನರೇಗಾ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ವ್ಯವಸ್ಥೆ ಮಾಡುತ್ತೇವೆ. ಸ್ವಚ್ಚತೆ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲು ಉಲ್ಲೋಡು ಪಿಡಿಓಗೆ ಸೂಚಿಸುತ್ತೇನೆ.
ರವೀಂದ್ರ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ