ಇಂದು ಮಾಹಾತ್ಮ ಗಾಂಧಿಜೀ ಅವರ ಜಯಂತಿ
ಇಂದು ಮಾಹಾತ್ಮ ಗಾಂಧಿಜೀ ಅವರ ಜಯಂತಿ. ಕೋವಿಡ್, ಆರ್ಥಿಕ ಕುಸಿತ, ನಿರುದ್ಯೋಗ ಇತ್ಯಾದಿಗಳೇ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ಬಾಪು ಅವರ ಜೀವನವನ್ನು ಹೊಸ ದೃಷ್ಟಿಕೋನದಲ್ಲಿ ನೋಡಿದ್ದಾರೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್ ರಾವ್ ಹವಲ್ದಾರ್.
ಇಂದು ದೇಶದಾದ್ಯಂತ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಇದು ಅವರ 153ನೇ ಜನ್ಮದಿನ. ಗಾಂಧಿ ಎನ್ನುವ ವ್ಯಕ್ತಿತ್ವ, ತತ್ವ ಚಿಂತನೆಗಳು ಕಾಲತೀತವಾದವುಗಳು. ಗಾಂಧಿ ಬರೆದದ್ದು, ಬದುಕಿದ್ದು-ಹಂಬಲಿಸಿದ್ದು ಇಡಿಯಾಗಿ, ಸಮಗ್ರವಾಗಿ. ಧರ್ಮ, ಸಂಸ್ಕೃತಿ, ರಾಜಕೀಯ, ಆರ್ಥಿಕತೆ, ನೈತಿಕತೆ, ಆಸ್ಪಶ್ಯತೆ, ಸ್ತ್ರೀ ಸುಧಾರಣೆ, ಪಾನ ನಿರೋಧ, ಗ್ರಾಮ ಸ್ವರಾಜ್ಯ, ವಿಕೇಂದ್ರಿಕರಣ, ಸ್ವಾತಂತ್ರ್ಯದ ಪ್ರಶ್ನೆ- ಎಲ್ಲದಕ್ಕೂ ಏಕಕಾಲದಲ್ಲೇ ಸಮಾನವಾದ ತೀವ್ರತೆಯಿಂದ, ಪ್ರಾಮುಖ್ಯತೆಯಿಂದ ಸ್ಪಂದಿಸುತ್ತಿದ್ದರು. ನಮ್ಮಲ್ಲಿ ಬಹುಪಾಲು ಜನಕ್ಕೆ ಹೀಗೆ ಇಡಿಯಾಗಿ, ಸಮಗ್ರವಾಗಿ ಸ್ಪಂದಿಸಲು ಬರುವುದಿಲ್ಲ. ಬದುಕಿನ ಕೆಲ ಆಯಾಮಗಳಿಗೆ ಮಾತ್ರ ಸ್ಪಂದಿಸುತ್ತೇವೆ. ಹಾಗೆಯೇ ಗಾಂಧಿಜೀ ಅವರು ಆದಷ್ಟು ಎಲ್ಲ ಜನರನ್ನು, ಎಲ್ಲ ಹಿನ್ನೆಲೆಯವರನ್ನು, ಸ್ವಭಾವದವರನ್ನು ಒಳಗು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಬಂಡವಾಳಶಾಹಿ ಈ ದೇಶದ ಶತ್ರು ಎಂದು ಎಲ್ಲರೂ ಮಾತಾಡುತ್ತಿದ್ದರೆ, ಗಾಂಧೀಜಿ ಅದರಲ್ಲೂ ಸಕಾರಾತ್ಮಕವಾದದ್ದನ್ನು ಹುಡುಕುತ್ತಿದ್ದರು. ಹೇಗೆ ಬಂಡವಾಳ ಶಾಹಿಯ ಮೂಲಕ ಸಮಾಜವಾದದ ಆಶಯಗಳನ್ನು ಜಾರಿಗೆ ತರಬಹುದು ಅನ್ನುವ ಬಗ್ಗೆ ಗಾಂಧೀಜಿ ಯೋಚಿಸಿದ್ದರು. ಅವರು ಹಣದ ವಿರೋಧಿಯಾಗಿರಲಿಲ್ಲ. ಅಕ್ರಮ ಸಂಪತ್ತು ಮತ್ತು ಅದರ ಅನಗತ್ಯ ಸಂಗ್ರಹಣೆಯನ್ನು ಖಂಡಿಸುತ್ತಿದ್ದರು.
ನಮ್ಮ ದೇಶಕ್ಕೆ ಬೇಕಾದ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಅದರ ಸ್ವೀಕಾರಾರ್ಹ ಸ್ಥಿತಿಯಲ್ಲಿ ಗ್ರಹಿಸಿದವರು ಗಾಂಧಿ. ಅಂಬೇಡ್ಕರರು ಗ್ರಾಮ ಸಂಸ್ಕೃತಿಯ ದೋಷಗಳನ್ನು ಹೇಳುತ್ತಿದ್ದಾಗ ಗಾಂಧೀಜಿ ನನ್ನ ಗ್ರಹಿಕೆಯ ಗ್ರಾಮ ಅದಲ್ಲವೇ ಅಲ್ಲ, ನಾನು ಹೇಳುತ್ತಿರುವ ಗ್ರಾಮ ಹೊಸ ರೀತಿಯದ್ದು ಅಂತ ಮತ್ತೆ ಮತ್ತೆ ಹೇಳುತ್ತಿದ್ದರು. ರೈತನಾಗಲೀ, ಕೃಷಿ ಕಾರ್ಮಿಕನಾಗಲೀ ಅತ್ಯಂತ ಘನತೆಯಿಂದ ಬಾಳಬಲ್ಲ, ಹುಸಿಯಾದ ಸಮಾನತೆ ಇಲ್ಲದ ಗ್ರಾಮವೊಂದನ್ನು ರೂಪಿಸುವ ಅದಮ್ಯ ಕನಸು ಅವರಲ್ಲಿತ್ತು. ಕೇಡು ಯಾವುದು ಎಂಬುದು ಗಾಂಧೀಜಿಯವರಿಗೆ ಚೆನ್ನಾಗಿ ಗೊತ್ತಿತ್ತು. ದೇಶದ ಕೇಡನ್ನು ಕೂಡ ಅವರು ಗ್ರಹಿಸಬಲ್ಲವರಾಗಿದ್ದರು. ಅದೇ ಕಾರಣಕ್ಕೆ ಗಾಂಧೀಜಿ ಪ್ರತಿಪಾದಿಸಿದ್ದು ಸತ್ಯ, ಅಸ್ತೇಯ, ಅಹಿಂಸೆ, ಅಸಂಗ್ರಹ, ಅಪರಿಗ್ರಹ.. ಹೀಗೆ ಸಪ್ತಸೂತ್ರಗಳನ್ನು ಗ್ರಹಿಸಿ, ಅಳವಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ನಾವೀಗ ಬಳಸುವ ಅಭಿವೃದ್ಧಿ ಎಂಬ ಪದವನ್ನು ಗಾಂಧೀಜಿ ಇಷ್ಟಪಡುತ್ತಿರಲಿಲ್ಲ. ಅವರು ಅದಕ್ಕೆ ಪರ್ಯಾಯವಾಗಿ ಅಭ್ಯುದಯ ಎಂಬ ಪದವನ್ನು ಬಳಸುತ್ತಿದ್ದರು. ಅಭ್ಯುದಯ ಎಂಬ ಪದದಲ್ಲಿ ಕರುಣೆ, ಅನುಕಂಪ ಮತ್ತು ಪೂರ್ತಿಯಾಗಿ ಹಿಂದಿನದನ್ನು ಕಳೆದುಕೊಳ್ಳದ ಪರಂಪರಾ ಪ್ರಜ್ಞೆ ಇದೆ ಎನ್ನುತ್ತಿದ್ದರು.
ಗಾಂಧಿವಾದವನ್ನು, ವ್ಯಕ್ತಿತ್ವವನ್ನು ಇತರ ‘ಇಸಂ’ಗಳು ಸಿದ್ಧಾಂತಗಳಂತೆ ನಿರ್ದಿಷ್ಟ ವಿಚಾರಗಳು, ಚಿಂತನ ಕ್ರಮದೊಡನೆ ಸಮೀಕರಿಸುವುದು ಸಾಧ್ಯವಿಲ್ಲ. ಇದೇ ಗಾಂಧಿವಾದದ ಹೆಗ್ಗಳಿಕೆ. ಪ್ರತಿ ಕ್ಷಣವೂ, ಪ್ರತಿ ಸನ್ನಿವೇಶಕ್ಕೆ ವಾಸ್ತವಕ್ಕೆ ಸ್ಪಂದಿಸಬೇಕು. ಹಾಗೆಯೇ ಒಳದನಿಗೂ ಗಮನ ಕೊಡಬೇಕು, ಪ್ರಯೋಗಶೀಲವಾಗಿದ್ದು, ನಮ್ಮ ನಮ್ಮ ಚಿಂತನೆಯನ್ನು ನಾವೇ ರೂಪಿಸಿಕೊಂಡು, ಕ್ರಿಯಾಶೀಲರಾಗಿರಬೇಕು ಎಂಬುದೇ ಗಾಂಧಿವಾದದ ತಿರುಳು. ಹೀಗೆ ಯೋಚಿಸಿದಾಗ ಮಾತ್ರ, ಎಡ-ಬಲದ ದ್ವಂದ್ವಗಳಿಂದ, ಇಸಂಗಳ ಸೀಮಿತ ಚೌಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ.
ಹಾಗೆ ನೋಡಿದರೆ ಗಾಂಧಿವಾದ, ಚಿಂತನೆಗಳಿಗೆ, ಗಾಂಧಿಯ ನಂತರ ಹೊಸ ರೂಪ ಕೊಟ್ಟವರಲ್ಲಿ ಸ್ವಘೋಷಿತ, ಸಾಂಸ್ಥಿಕ ಗಾಂಧಿವಾದಿಗಳಿಗಿಂತ ಹೆಚ್ಚಾಗಿ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್‌ರಂತಹ ನಾಯಕರು, ಹಾಗೆಯೇ ತಮ್ಮ ತಮ್ಮ ವೈಯಕ್ತಿಕ ಸ್ತರದಲ್ಲಿ, ಸಂಘಟನೆಗಳಲ್ಲಿ ಗಾಂಧಿಯ ಪರಿಕಲ್ಪನೆಗಳನ್ನು ಪ್ರಯೋಗಿಸಿದ, ನವೀಕರಿಸಿದ, ವಿಜ್ಞಾನಿಗಳು, ಕಲಾವಿದರು, ರಾಜಕೀಯ- ಆರ್ಥಿಕ ಚಿಂತಕರೂ ಶಿಕ್ಷಣ ತಜ್ಞರೂ ಇದ್ದಾರೆ.
ಗಾಂಧೀಜಿ ದೇಶದ ಎಲ್ಲಾ ಸಿದ್ಧಾಂತಗಳಿಗೂ ಸಕಾರಾತ್ಮವಾಗಿ ಸ್ಪಂದಿಸಿದವರು. ಎಲ್ಲವನ್ನೂ ಧ್ಯಾನಿಸಿ ತಮ್ಮದನ್ನಾಗಿ ಮಾಡಿಕೊಂಡವರು. ಮನುಷ್ಯ ನಿರಾಕರಿಸಬಹುದಾದ ಯಾವ ಪಂಥವೂ ಇಲ್ಲ ಎಂದು ನಂಬಿದ್ದವರು.
ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿ ಹಿಂಸೆಯ ವಿರೋಧಿಯಾಗಿದ್ದವರು ಅನ್ನುವವರಿಗೆ ಗಾಂಧೀಜಿ ಯಾವುದು ಹಿಂಸೆಯಲ್ಲ ಎಂದೂ ಹೇಳಬಲ್ಲವರಾಗಿದ್ದರು. ಪಡೆಯುವುದಕ್ಕೆ ಅಹಿಂಸೆಯೇ ಹೊರತು ತಡೆಯುವುದಕ್ಕೆ ಅಲ್ಲ ಎಂದು ಅವರು ಹೇಳಿದ್ದರು. ಅವರು ತಮ್ಮ ಆತ್ಮಚರಿತ್ರೆಯನ್ನು ಸತ್ಯದೊಂದಿಗೆ ನಡೆಸಿದ ಪ್ರಯೋಗ ಎಂದು ಕರೆದರು.
ಗಾಂಧಿಯವರ ಮಾತುಗಳಲ್ಲೇ ಹೇಳಬಹುದಾದರೆ- ‘ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ರೂಪಿತವಾದ ಧರ್ಮದಲ್ಲಿ ಉತ್ಕೃಷ್ಟವಾಗಿರುವುದೆಂದರೆ- ವ್ಯಕ್ತಿಯು ಸರ್ವಜೀವ ಸೃಷ್ಟಿಯ ಅಖಂಡ ಸೇವೆಯಲ್ಲಿ ತನ್ಮಯವಾಗುವುದು. ಚೈತನ್ಯದ ಈ ಅಮರ್ಯಾದಿತ ಸಾಗರದಲ್ಲಿ ವ್ಯಕ್ತಿಯು ತನ್ನನ್ನು ಸಂಪೂರ್ಣವಾಗಿ ವಿಲೀನವಾಗಿಸಿ ಏಕರೂಪತೆಯನ್ನು ಸಾಧಿಸದ ಹೊರತು ಸತ್ಯದ ಸಾಕ್ಷಾತ್ಕಾರವಾಗಲಾರದು. ಆದುದರಿಂದ ಸಮಾಜ ಸೇವೆಯ ಹೊರತು ನನಗೆ ಗತ್ಯಂತರವಿಲ್ಲ. (IN SEARCH OF THE SUPREME-VOLUME II.PAGE 265-266).
courtesy: wikipedia
ನಮ್ಮ ಕಾಲದ ಮುಖ್ಯ ತಾತ್ವಿಕ ಸಮಸ್ಯೆಯೆಂದರೆ; ನಮಗೆ ಯಾವುದು ಪ್ರಸ್ತುತವಾದ ಪ್ರಶ್ನೆಗಳು ಎಂದು ಗುರುತಿಸಿಕೊಳ್ಳಲು ನಾವು ವಿಫಲರಾಗಿರುವುದು ಮತ್ತು ಇಂತಹ ಪ್ರಶ್ನೆಗಳನ್ನು ಉಳಿದ ಸಮಸ್ಯೆಗಳ ಜೊತೆ ಹೆಣಿಗೆಯಲ್ಲಿ ಕಾಣಲು ಸಾಧ್ಯವಾಗದೇ ಇರುವುದು. ಅಸ್ಮಿತೆಯ ಪ್ರಶ್ನೆ, ವಲಸೆಯ ಪ್ರಶ್ನೆ, ನೆಮ್ಮದಿಗೆ ಅನುಗುಣವಾದ ತಂತ್ರಜ್ಞಾನ-ವಿಜ್ಞಾನದ ಸ್ವರೂಪ- ಇವು ಮಾತ್ರ ನಮ್ಮ ಕಾಲದ ಮುಖ್ಯ ಪ್ರಶ್ನೆಗಳೆಂದು ಒಂದು ಅಭಿಪ್ರಾಯವಿದೆ. ಇದನ್ನೆಲ್ಲ ಗುರುತಿಸಲು, ಹೊಸ ಹೆಣಿಗೆ ಸಾಧಿಸಲು ಗಾಂಧಿಯ ಮನೋಧರ್ಮ ನೆರವಿಗೆ ಬರುವಷ್ಟು ಮತ್ತೆ ಯಾರೂ ಬರುವುದಿಲ್ಲ.
ಮನುಷ್ಯ ತನ್ನ ಮೂಲಭೂತ ಸ್ವಭಾವದಲ್ಲೇ ತಕ್ಷಣಕ್ಕೆ, ವರ್ತಮಾನಕ್ಕೆ ಮಾತ್ರ ತೀವ್ರವಾಗಿ ಸ್ಪಂದಿಸುತ್ತಾನೆ. ಆದರೆ ಯಾವುದೇ ವಿದ್ಯಮಾನಕ್ಕೂ ತಕ್ಷಣದ, ವರ್ತಮಾನದ ಆಯಾಮವಿರುವಂತೆ, ಅನಂತ ಕಾಲದ, ಕಾಲಾತೀತವಾದ ಇನ್ನೊಂದು ಆಯಾಮವೂ ಇರುತ್ತದೆ. ಕೇವಲ ತಕ್ಷಣಕ್ಕೆ, ವರ್ತಮಾನಕ್ಕೆ ಮಾತ್ರ ಸ್ಪಂದಿಸುವವರೂ ಚರಿತ್ರೆಗೂ- ಅನಂತಕಾಲದ ಕಾಲಾತೀತ ಆಯಾಮಗಳ ಒಡನೆ, ವರ್ತಮಾನದಲ್ಲಿ ಸ್ಪಂದಿಸುವವರು ನಾಗರೀಕತೆಗೂ ಸ್ಪಂದಿಸುತ್ತಿರುತ್ತಾರೆ. ಗಾಂಧಿಗೆ ಅವರ ದೇಶ-ಕಾಲದ ಎಲ್ಲ ಸಮಸ್ಯೆಗಳನ್ನು ನಾಗರೀಕತೆಯ ಪ್ರಶ್ನೆಗಳಾಗಿ ಪರಿಭಾವಿಸಿ ವಿಶಾಲವಾಗಿ ಚಿಂತಿಸುವ ಪರಿಪಾಠವಿತ್ತು. ಹಾಗಾಗಿ ನನ್ನ ಜೀವನವೇ ನನ್ನ ಸಂದೇಶ ಎಂಬ ಹೇಳಿಕೆ ನೀಡುವುದು ಬಹುಶಃ ಗಾಂಧಿ ಅವರಿಗೆ ಮಾತ್ರ ಸಾಧ್ಯವಿತ್ತು.
ಗಾಂಧಿ ಇಂದಿಗೂ ಬಹಳ ಪ್ರಸ್ತುತ. ಏಕೆಂದರೆ, ಈ ಕಾಲಘಟ್ಟದಲ್ಲಿ ಇಡೀ ಜಗತ್ತು ಸಂದ್ಧಿಗತೆಯಲ್ಲಿದೆ. ಆರ್ಥಿಕತೆ ಚೇತರಿಕೆ ಇಲ್ಲದೇ ಜನರ ಜೀವನ ಮಟ್ಟ ಕುಸಿದಿದೆ. ಇಂತಹ ಗಾಂಧಿಜಿಯ ಗ್ರಾಮ ಸ್ವರಾಜ್ಯ ತತ್ವ ಹೆಚ್ಚು ಅವಶ್ಯಕವಾಗಿದೆ. ಜನ, ಸಮುದಾಯ, ರಾಜ್ಯ ದೇಶ ಸ್ವಾವಲಂಬಿಗಳಾದ ಸಶಕ್ತ ಆಹಿಂಸಾ ರೂಪದ ಸಮಾಜ ನಿರ್ಮಿಸಲು ಸಾಧ್ಯ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.