ಕುಡುಕರ ಅಡ್ಡೆಯಾಗಿದೆ ಐತಿಹಾಸಿಕ ಜೈನ ಪುಣ್ಯಭೂಮಿ
By GS Bharath Gudibande
ಗುಡಿಬಂಡೆ: ಅದು ಪ್ರಶಾಂತವಾದ ಸ್ಥಳ. ಅಲ್ಲಿಗೆ ಯಾರೇ ಹೋದರೂ ಸ್ವಲ್ಪ ಸಮಯ ಕುಳಿತು ಧ್ಯಾನ ಮಾಡಿಕೊಂಡು ಹೋಗಬೇಕು ಅನ್ನಿಸದೇ ಇರದು. ಮನಸ್ಸಿಗೆ ಆಹ್ಲಾದ ಉಂಟು ಮಾಡುವ, ಧ್ಯಾನಕ್ಕೆ ಪ್ರೇರಣೆ ನೀಡುವ ಈ ವೈಶಿಷ್ಟ್ಯಪೂರ್ಣ ತಾಣವು ಐತಿಹಾಸಿಕ ಪಟ್ಟಣ ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆಯ ಪಕ್ಕದಲ್ಲೇ ಇದೆ.
ಚಿಕ್ಕಬಳ್ಳಾಪುರದಿಂದ 35 ಕಿ.ಮೀ. ದೂರದಲ್ಲಿರುವ ಗುಡಿಬಂಡೆ ಪಟ್ಟಣಕ್ಕೆ ಪ್ರವೇಶ ಮಾಡುವುದಕ್ಕೆ ಮುನ್ನವೇ ವಿಶಾಲವಾಗಿ ಹರಡಿಕೊಂಡಿರುವ ಅಮಾನಿ ಭೈರಸಾಗರ ಕೆರೆಯ ಮುಂಭಾಗದಲ್ಲಿರುವ ಸಣ್ಣಗುಡ್ಡದ ಮೇಲೆ ಈ ಐತಿಹಾಸಿಕ ಪಾದಬೆಟ್ಟವಿದೆ.
ಏನಿದು ಪಾದಬೆಟ್ಟ?
ಪಾದಬೆಟ್ಟವೆಂದೇ ಪ್ರಸಿದ್ದಿ ಪಡೆದಿರುವ ಈ ತಾಣ ಗುಡಿಬಂಡೆ ಜನರು, ಅದರಲ್ಲೂ ಜೈನ ಸಮುದಾಯಕ್ಕೆ ಬಹಳ ಶ್ರದ್ಧಾಭಕ್ತಿಯ ತಾಣ. ಇಲ್ಲಿನ ಬಂಡೆಯ ಮೇಲೆ ಕಲ್ಲಿನ ಮಂಟಪವಿದ್ದು, ಆ ಬಂಡೆಯ ಮೇಲೆ ಕೆತ್ತಲಾದ ಮೂರು ಪಾದಗಳಿವೆ. ಹಿಂದೆ ಏಳು ಪಾದಗಳಿದ್ದವೆಂದು ಹೇಳಲಾಗುತ್ತಿದೆಯಾದರೂ, ಈಗ ನಮಗೆ ಕಂಡು ಬರುವುದು ಸಣ್ಣ ಮಂಟಪ ಮತ್ತು ಮೂರು ಪಾದಗಳು ಮಾತ್ರ. ಇನ್ನುಳಿದ ಶಿಲಾಪಾದಗಳು ಕಾಲಗರ್ಭದಲ್ಲಿ ಅಳಿಸಿಹೋಗಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಇತಿಹಾಸ ಹೇಳುವುದೇನು?
ಪಾದಬೆಟ್ಟದ ಇತಿಹಾಸದ ಬಗ್ಗೆ ನಿಖರ ಮಾಹಿತಿಗಳು ಸಿಗುವುದಿಲ್ಲ. ಆದರೆ ಕೆಲ ಗ್ರಂಥಗಳನ್ನು ಪರಿಶೀಲಿಸಿದಾಗ ಇದು ಹನ್ನೆರಡನೇ ಶತಮಾನದ ಆಸುಪಾಸಿನಲ್ಲಿ ಗುಡಿಬಂಡೆ ಪ್ರದೇಶದಲ್ಲಿ ಜೈನ ಸಂಸ್ಕೃತಿಯ ಗತ ವೈಭವವನ್ನು ಈ ಪಾದಬೆಟ್ಟ ಎತ್ತಿ ತೋರಿಸುತ್ತದೆ. ಅಂದಿನಿಂದ ಇಪ್ಪತ್ತನೇ ಶತಮಾನದವರೆಗೂ ಇಲ್ಲಿ ಜೈನ ಪರಂಪರೆ ಉತ್ತುಂಗ ಸ್ಥಿತಿಯಲ್ಲಿದ್ದು, ದೇಶದಾದ್ಯಂತ ಪ್ರಸಿದ್ದಿ ಪಡೆದಿತ್ತು ಎಂಬ ಮಾಹಿತಿ ಲಭ್ಯವಾಗುತ್ತದೆ. ಅನಾದಿ ಕಾಲದಿಂದಲೂ ಜೈನ ಮುನಿಗಳು ತಪಸ್ಸನ್ನಾಚರಿಸಲು ಈ ಪಾದಬೆಟ್ಟ ಅತ್ಯಂತ ಸೂಕ್ತ ತಾಣವೆಂದು ಭಾವಿಸಿ ಇಲ್ಲಿಯೇ ಕಠಿಣ ತಪಸ್ಸುಗಳನ್ನು ಕೈಗೊಂಡಿದ್ದರು ಎಂದು ಹೇಳಲಾಗುತ್ತಿದೆ.
ಇಲ್ಲಿಗೆ ಸಮೀಪದಲ್ಲಿರುವ ಗುಡಿಬಂಡೆ ಪಟ್ಟಣದ ಜೈನರ ಬೀದಿಯಲ್ಲಿರುವ ಚಂದ್ರನಾಥ ಮತ್ತು ಪಾರ್ಶ್ವನಾಥ ಬಸದಿಗಳು (ಸಣ್ಣ ಬಸದಿ ಮತ್ತು ದೊಡ್ಡ ಬಸದಿ) ಜೈನಮುನಿಗಳ ಆಶ್ರಯ ತಾಣಗಳಾಗಿದ್ದವು. ಜೈನ ನಿರ್ಗಂಥರು, ಕ್ಷುಲ್ಲಕರು ಹಾಗೂ ಅರ್ಚಿಕೆಯರು ಇಲ್ಲಿ ತಪಸ್ಸು ಮಾಡಿ ನಿರ್ವಾಣ ಹೊಂದಿದ ಕುರುಹಾಗಿ ಶಿಲಾಪಾದಗಳನ್ನು ಕೆತ್ತಲಾಗಿದೆ. ಆದುದರಿಂದ ಈ ಸ್ಥಳಕ್ಕೆ ಪಾದಬೆಟ್ಟ ಎಂದು ಕರೆಯಲಾಗುತ್ತದೆ.
ಇಲ್ಲಿ ಶ್ರೀ ಚಂದ್ರಕೀರ್ತಿ ನಿರ್ಗಂಥ ಮಹಾ ಮುನಿಗಳು, ಶ್ರೀ ಅಜಿತಕೀರ್ತಿ ಮಹಾ ಮುನಿಗಳು, ಶ್ರೀ 108 ಸಂಭವಸಾಗರ ನಿರ್ಗಂಥ ಮಹಾ ಮುನಿಗಳು ಸೇರಿದಂತೆ ಇನ್ನೂ ಹಲವಾರು ಜೈನ ಮಹಾ ಮುನಿಗಳು ತಪಸ್ಸನ್ನಾಚರಿಸಿದ್ದರು ಎಂಬ ಮಾಹಿತಿ ಇತಿಹಾಸದಲ್ಲಿ ದಾಖಲಾಗಿದೆ.
ಇಷ್ಟಲ್ಲಾ ಗತಕಾಲದ ವೈಭವದ ಖ್ಯಾತಿಯ ಪವಿತ್ರವಾದ ಪಾದಬೆಟ್ಟವು ಇಂದು ನಿರ್ಲ್ಯಕ್ಷ್ಯಕ್ಕೆ ಒಳಗಾಗಿ ವಿನಾಶದ ಅಂಚಿಗೆ ತಲುಪಿದೆ. ಐತಿಹಾಸಿಕ ಪಾದಬೆಟ್ಟದ ಸುತ್ತಮುತ್ತಲಿನ ವಾತಾವರಣ ಮಲೀನವಾಗುತ್ತಿದ್ದು, ಕುಡುಕರ ತಾಣವಾಗಿ ಮಾರ್ಪಟ್ಟಿರುವುದು ನೋವಿನ ಸಂಗತಿ ಹಾಗೂ ಸ್ಥಳೀಯ ಆಡಳಿತ ಇಂತಹ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಮುಖ್ಯವಾಗಿ ಗುಡಿಬಂಡೆ ಪಟ್ಟಣ ಹಾಗೂ ಸುತ್ತಮುತ್ತ ಇರುವ ಜೈನರ ತಾಣಗಳನ್ನು ಪತ್ತೆ ಹಚ್ಚಿ ಅವುಗಳಿಗೆ ರಕ್ಷಣೆ ಕೊಡುವುದರ ಜತೆಗೆ, ಅದರ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಜೀರ್ಣೋದ್ಧಾರ ಮಾಡಿ ಉಳಿಸಬೇಕೆಂದು ಸ್ಥಳೀಯರು ಆಗ್ರಹ ಮಾಡುತ್ತಿದ್ದಾರೆ. ಮುಖ್ಯವಾಗಿ, ಪ್ರವಾಸೋದ್ಯಮ, ಕನ್ನಡ-ಸಂಸ್ಕೃತಿ, ಪ್ರಾಚ್ಯವಸ್ತು ಇಲಾಖೆಗಳು ಗಮನ ಹರಿಸಬೇಕಿದೆ.
ಯಾರು ಏನಂತಾರೆ?
ನಾನು ಚಿಕ್ಕ ವಯಸ್ಸಿನಿಂದ ಈ ಪಾದಬೆಟ್ಟವನ್ನು ನೋಡುತ್ತಿದ್ದೇನೆ. ಬೆಳ್ಳಂಬೆಳಗ್ಗೆ ಅಲ್ಲಿಗೆ ಹೋಗಿ ಸ್ವಲ್ಪ ಸಮಯ ಧ್ಯಾನ ಮಾಡಿದರೆ ಮನಸ್ಸಿಗೆ ನೆಮ್ಮದಿ, ಸಂತೋಷ ಸಿಗುತ್ತದೆ. ಸ್ಥಳೀಯ ಆಡಳಿತ ತಾಲೂಕಿನಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸಲು ಮುಂದಾಗಬೇಕು. ಇಡೀ ಗುಡಿಬಂಡೆಯ ಇತಿಹಾಸಕ್ಕೆ ಅತ್ಯಂತ ಮಹತ್ವದ ಕುರುಹಾದ, ಜೈನ ಪರಂಪರೆಯನ್ನು ಹೊಂದಿರುವ ಈ ಅಪರೂಪದ ಪಾದಬೆಟ್ಟವನ್ನು ಸಂರಕ್ಷಣೆ ಮಾಡಬೇಕು.
ಜಿ.ಪಿ.ಅಭಿನಂದನ್, ಗುಡಿಬಂಡೆ
ಗುಡಿಬಂಡೆ ತಾಲೂಕಿನಲ್ಲಿ ಐತಿಹಾಸಿಕ ಸ್ಥಳಗಳು ಸಾಕಷ್ಟಿವೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಯಾವುದೆ ಸೌಲಭ್ಯಗಳನ್ನು ಮಾಡುತ್ತಿಲ್ಲ. ಇದರಿಂದ ಪ್ರವಾಸಿಗರೂ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಬೇಸರವಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ತಾಲೂಕು ಅಭಿವೃದ್ಧಿಯೂ ಸಾಧ್ಯವಿದೆ.
ಸುರೇಶ್ ಕುಮಾರ್, ಪ್ರವಾಸಿಗ