ಗುಡಿಬಂಡೆ ಸಮೀಪ ಹನುಮನ ಐತಿಹಾಸಿಕ ದೇಗುಲ
By GS Bharath Gudibande
ಗುಡಿಬಂಡೆ: ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ಸಂಕಷ್ಟದಲ್ಲಿರುವ ಭಕ್ತಾಧಿಗಳು ತಮ್ಮ ಸಮಸ್ಯೆಗಳ ಬಗ್ಗೆ ಬೇಡಿಕೊಂಡರೆ ಕಾರ್ಯಗಳು ಸಿದ್ಧಿಸಿ ಅಭಯ ನೀಡಿ ಕಷ್ಟಗಳನ್ನು ತೊಲಗಿಸುತ್ತಾನೆ ಎಂಬ ನಂಬಿಕೆ ಇದೆ.
ದೇವಾಲಯದ ಗರ್ಭಗುಡಿಯಲ್ಲಿ ಒಂದು ಕೈಯನ್ನು ಮೇಲೆತ್ತಿ ಅಭಯವನ್ನು ನೀಡುವ ಮತ್ತೊಂದು ಕೈಯಲ್ಲಿ ಗದೆ ಹಿಡಿದಿರುವ, ಅಪಾರ ಭಕ್ತರ ಆರಾಧ್ಯದೈವ ನೆಲೆಸಿರುವ ಉಲ್ಲೋಡು ಪ್ರಸನ್ನ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭಕ್ತರು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ.
ತಾಲೂಕು ಕೇಂದ್ರಕ್ಕೆ ಸಮೀಪದಲ್ಲಿರುವ ಉಲ್ಲೋಡು ಶ್ರೀ ಅಭಯ ಆಂಜನೇಯ ಸ್ವಾಮಿ ವಿಗ್ರಹ 6 ಅಡಿ ಎತ್ತರವಿದ್ದು, ಪ್ರತೀ ಶನಿವಾರ ವಿಶೇಷವಾದ ಪೂಜೆ ನೆರೆವೇರಿಸಲಾಗುತ್ತದೆ. ತೆಂಗಿನ ಕಾಯಿ ಇಟ್ಟು ಸಂಕಲ್ಪ ಮಾಡಿಕೊಂಡು ಎಂಟು ಮಂಗಳವಾರ ಅಷ್ಟೋತ್ತರ ಮೂಲಕ ಸ್ವಾಮಿಯನ್ನು ಜಪಿಸಿ, ಅಭಿಷೇಕ ಮಾಡಿಸಿದರೆ ಕಾರ್ಯ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.
200 ವರ್ಷಗಳ ಇತಿಹಾಸ
ಸುಮಾರು ಎರಡು ಶತಮಾನಗಳ ಹಿಂದೆ ನಾಲ್ವರು ಬ್ರಿಟೀಷರು ಪ್ರಜೆಗಳು ಬೇರೆ ರಾಜ್ಯಗಳಿಂದ ವ್ಯಾಪಾರ ಮಾಡಿಕೊಳುತ್ತಾ ಸಾಕಷ್ಟು ಸಂಪತ್ತನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಒಂದು ದಿನ ತಡರಾತ್ರಿ ವಿಶ್ರಾಂತಿ ಪಡೆಯಲು ಉಲ್ಲೋಡು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಬಂದು (ಆಗಿನ್ನೂ ದೇಗುಲ ನಿರ್ಮಾಣ ಆಗಿರಲಿಲ್ಲ, ಅದೊಂದು ನಿರ್ಜನ ಪ್ರದೇಶವಾಗಿತ್ತಂತೆ) ಹಣ, ವಜ್ರ, ನಾಣ್ಯಗಳನ್ನು ಅಲ್ಲಿಯೇ ಇಟ್ಟು ಅದರ ಮೇಲೆ ಹುಲ್ಲು ಮುಚ್ಚಿ ಮಲಗಿದ್ದರಂತೆ.
200 ವರ್ಷಗಳ ಇತಿಹಾಸ ಹೊಂದಿರುವ ಉಲ್ಲೋಡು ಪ್ರಸನ್ನ ಆಂಜನೇಯ ಸ್ವಾಮಿಯ ದೇವಸ್ಥಾನದ ಚಿತ್ರ
ಬೆಳ್ಳಗ್ಗೆ ಅವರು ನಿದ್ದೆಯಿಂದ ಎದ್ದು ಗಡಿಬಿಡಿಯಲ್ಲಿ ಹೊರಟುಬಿಡುತ್ತಾರೆ. ಚಿನ್ನದ ಸಂಪತ್ತನ್ನು ನಾಲ್ವರಲ್ಲಿ ಒಬ್ಬರು ಯಾರಾದರೂ ತಂದಿರುತ್ತಾರೆಂದು ಎಲ್ಲರೂ ಪರಸ್ಪರ ಯಾಮಾರಿರುತ್ತಾರೆ. ಆದರೆ, ಯಾರೊಬ್ಬರೂ ಅದನ್ನು ತೆಗೆದುಕೊಂಡು ಬಂದಿರುವುದಿಲ್ಲ.
ಸುಮಾರು ದೂರ ಪ್ರಯಾಣ ಮಾಡಿದ ಮೇಲೆ ನಾಲ್ವರಲ್ಲಿ ಒಬ್ಬ ಕೇಳುತ್ತಾನೆ, ನಾವು ಬಚ್ಚಿಟ್ಟಿದ್ದ ಚಿನ್ನ ಎಲ್ಲಿ ಎಂದು ಪ್ರಶ್ನಿಸುತ್ತಾನೆ. ಅದನ್ನು ಅಲ್ಲೇ ಬಿಟ್ಟು ಬಂದಿರುವುದು ಎಲ್ಲರಿಗೂ ಗೊತ್ತಾಗುತ್ತದೆ. ಕೊನೆಗೂ ಅಷ್ಟು ಸಂಪತ್ತು ಹೋಯಿತಲ್ಲಾ ಎಂದು ಎಲ್ಲರೂ ದುಃಖಿತರಾಗುತ್ತಾರೆ.
ಮುಂದಿನ ರಾತ್ರಿ ಅವರು ಬೇರೆ ರಾಜ್ಯದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾಗ ಆ ನಾಲ್ವರಿಗೆ ಪ್ರಸನ್ನ ಅಭಯ ಶ್ರೀ ಆಂಜನೇಯ ಸ್ವಾಮಿ ಕನಸ್ಸಿನಲ್ಲಿ ಬಂದು, ನಿಮ್ಮ ಸಂಪತ್ತು ಯಾರೂ ತೆಗೆದುಕೊಂಡಿಲ್ಲ. ಎಲ್ಲವೂ ಅಲ್ಲಿಯೇ ಹಾಗೆಯೇ ಇದೆ ಎಂಬ ಅಭಯ ನೀಡುತ್ತಾನೆ. ಶ್ರೀ ಆಂಜನೇಯ ಸ್ವಾಮಿ ನೀಡಿದ ವಾಗ್ದಾನದಂತೆ ಸ್ಥಳಕ್ಕೆ ನಾಲ್ಕು ಜನ ಸ್ನೇಹಿತರು ಬಂದು ನೋಡಿದಾಗ ಎಲ್ಲ ಸಂಪತ್ತು ಹಾಗೆಯೇ, ಅಲ್ಲಿಯೇ ಇತ್ತಂತೆ.
ಈ ಕಾರಣಕ್ಕೆ ಆ ನಾಲ್ವರು ಶ್ರೀ ಆಂಜನೇಯ ಸ್ವಾಮಿ ಅಭಯಕ್ಕೆ ಶರಣಾಗಿ ವಿಗ್ರಹವನ್ನು ಮಾಡಿಸಿ ದೇವಾಲಯವನ್ನು ನಿರ್ಮಾಣ ಮಾಡಿದರು ಎಂದು ಸ್ಥಳೀಯರು ಹೇಳುತ್ತಾರೆ.
ಇಲ್ಲಿನ ವಿಶೇಷವೇನು?
ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವುದರಿಂದ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರದ್ದು. ಮನೆಯತ್ತ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಚಿಕ್ಕ ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಕರೆತಂದು ತಾಯತ ಕಟ್ಟಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ತೊಂದರೆ ಹಾಗೂ ಕಷ್ಟಗಳಿಗೆ ಸ್ವಾಮಿಯ ಅಭಯ ಸಿಗುತ್ತದೆಯಂತೆ.
ಅಭಯ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು, ಅಂದರೆ ಪಿಶಾಚಿಗಳಿಗೆ ಒಳಪಡುವುದರಿಂದ ಅಭಯವನ್ನು ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಪ್ರತಿನಿತ್ಯ ಜನ ನೂರಾರು ಸಂಖ್ಯೆಯಲ್ಲಿ ಬಂದು ಪೂಜೆ ಮಾಡುತ್ತಾರೆ, ಕಷ್ಟ ಪರಿಹಾರಕ್ಕಾಗಿ ದೇವರಲ್ಲಿ ಹೂವನ್ನು ಕೇಳುವುದುಂಟು.
ಉಲ್ಲೋಡು ಶ್ರೀ ಅಭಯ ಆಂಜನೇಯ ಸ್ವಾಮಿಯ ದೇವಸ್ಥಾನದ 2007ರ ನಂತರದ ಚಿತ್ರ.
ವಿಶೇಷ ಪೂಜೆಗಳು
ಆಂಜನೇಯ ಸ್ವಾಮಿ ದೇಗುಲದಲ್ಲಿ ಪ್ರತೀ ವರ್ಷ ಹನುಮ ಜಯಂತಿ ಹಾಗೂ ರಾಮನವಮಿ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪ್ರವಚನ, ಭಜನೆಗಳು ನಡೆಯುತ್ತವೆ. ನೂರಾರು ಜನ ಭಕ್ತಾಧಿಗಳಿಗೆ ಅನ್ನ ಸಂತರ್ಪಣ ಮಾಡಲಾಗುತ್ತದೆ. ಪ್ರತೀ ಶನಿವಾರ, ಹುಣ್ಣಿಮೆಯಂದು ವಿಶೇಷ ಪೂಜೆ ಇರುತ್ತದೆ.
ಈ ದೇವಸ್ಥಾನ ಗುಡಿಬಂಡೆ ಪಟ್ಟಣದಿಂದ 6 ಕಿ.ಮೀ ದೂರವಿದ್ದು ರಾಮಪಟ್ಟಣ ರಸ್ತೆ ಮಾರ್ಗವಾಗಿ ಹೊಗಬೇಕಾಗುತ್ತದೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಇತ್ತೀಚಿಗೆ ಒಳಪಟ್ಟಿದ್ದು ಭಕ್ತಾಧಿಗಳು ಸಹ ದೇವಸ್ಥಾನದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುತ್ತಾ ಭಕ್ತರ ಆರಾಧ್ಯ ದೈವವಾಗಿರುವ ಪ್ರಸನ್ನ ಅಭಯ ಶ್ರೀ ಆಂಜನೇಯ ಸ್ವಾಮಿ ದರ್ಶನಕ್ಕೆ ಶನಿವಾರ, ಹುಣ್ಣಿಮೆ ಹಾಗೂ ಅಮಾವಾಸ್ಯೆ ಸಂದರ್ಭದಲ್ಲಿ ನೂರಾರು ಭಕ್ತರು ಆಗಮಿಸುತ್ತಾರೆ. ದರ್ಶನದಿಂದ ತಮ್ಮ ಸಂಕಲ್ಪಗಳಿಗೆ ಪರಿಹಾರ ಸಿಕ್ಕಿದ ಬಗ್ಗೆ ಧನ್ಯತಾ ಭಾವ ವ್ಯಕ್ತಪಡಿಸುತ್ತಿದ್ದಾರೆ.