ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಮಾಜಿ ಮುಖ್ಯಮಂತ್ರಿಗಳು
ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ: ಸರಕಾರದ ವಿರುದ್ಧ ಕಿಡಿ
ಸಕಲೇಶಪುರ: ಸಾವಿರಾರು ಕೋಟಿ ರೂ.ಗಳ ವೆಚ್ಚದ ಎತ್ತಿನಹೊಳೆ ಯೋಜನೆ ತೆವಳುತ್ತಿದ್ದು, ಕಾಮಗಾರಿ ಮುಗಿದು ಬರಪೀಡಿತ ಚಿಕ್ಕಬಳ್ಳಾಪುರ ಮತ್ತುಕೋಲಾರ ಜಿಲ್ಲೆಗಳಿಗೆ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಖಾರವಾಗಿ ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ವೀಕ್ಷಿಸುವ ಮುನ್ನ ಸಕಲೇಶಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “2014ರಲ್ಲಿ ಆರಂಭವಾದ ಯೋಜನೆಯನ್ನು ಮೂರೇ ವರ್ಷದಲ್ಲಿ ಮುಗಿಸಿ ಎರಡೂ ಜಿಲ್ಲೆಗಳಿಗೆ ನೀರು ಹರಿಸುವುದಾಗಿ ಹೇಳಿದ್ದ ಅಂದಿನ ಮುಖ್ಯಮಂತ್ರಿಗಳು ಈಗ ಎಲ್ಲಿದ್ದಾರೆ” ಎಂದು ಕೇಳಿದರು.
ಇಡೀ ಯೋಜನೆ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಹಲವಾರು ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು ವಿವರವಾಗಿ ಹೇಳಿದ್ದಿಷ್ಟು ಇಷ್ಟು;
“ಯೋಜನೆ ಕುಂಟುತ್ತಾ ಸಾಗುತ್ತಿದೆ. ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿ ಆಗಿರುವ ಉತ್ತಮ ಮಳೆಯನ್ನು ನಿಖರವಾಗಿ ಡಿ.4ನೇ ಪಾಯಂಟ್’ಗೆ ತಂದು ಮಾಪನ ಮಾಡಬೇಕಿತ್ತು. ಎಷ್ಟು ಮಳೆ ಸುರಿಯಿತು? ಎಷ್ಟು ಪ್ರಮಾಣದ ನೀರು ಸಮುದ್ರಕ್ಕೆ ಹರಿದುಹೋಯಿತು ಎಂಬ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಸರಕಾರ ಕೈಚೆಲ್ಲಿದೆ.
“2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಈಗ 2021. ಯೋಜನೆ ಮುಗಿಸಿ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕು? ಮೊದಲು 8,000 ಕೋಟಿ, ನಂತರ 13,000 ಕೋಟಿಯಿಂದ ಶುರುವಾದ ಈ ಯೋಜನಾ ವೆಚ್ಚ ಈಗ 23,000 ಕೋಟಿಗೆ ಬಂದು ಮುಟ್ಟಿದ್ದು, ಅದಕ್ಕೆ ಸರಕಾರದಿಂದ ಕ್ಲಿಯೆರೆನ್ಸ್ ಪಡೆದುಕೊಳ್ಳಲು ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.”
“ಭೂಸ್ವಾಧೀನ ಪ್ರಕಿಯೆ ವಿವಾದದಲ್ಲಿದೆ. ಈಗಾಗಲೇ ಭೂಮಿ ಕಳೆದುಕೊಂಡ ರೈತರಿಗೆ ವರ್ಷಗಳೇ ಉರುಳಿದರೂ ಪರಿಹಾರ ನೀಡಿಲ್ಲ. ಗುತ್ತಿಗೆದಾರರಿಗೆ ಹಣ ನೀಡಲು ಇರುವ ಆತುರ ರೈತರಿಗೆ ನೀಡಲು ಇಲ್ಲ. ಅದಕ್ಕೆ ದುಡ್ಡಿಲ್ಲ ಅನ್ನುತ್ತಿದೆ ಸರಕಾರ. ಆದರೆ, ಗುತ್ತಿಗೆದಾರರಿಗೆ ಪ್ಯಾಕೇಜುಗಳ ಲೆಕ್ಕದಂತೆ ಮೊದಲ ಹಂತದಲ್ಲಿ 4,115 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 12,000 ಕೋಟಿ ರೂ. ಕೊಡಲು ಪ್ಯಾಕೇಜ್ ಮಾಡಿಕೊಂಡಿದೆ.”
“ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜನರ ಹೆಸರಿನಲ್ಲಿ ಯಥೇಚ್ಛವಾಗಿ ಹಣ ಖರ್ಚು ಮಾಡಲಾಗುತ್ತಿದೆ. ನನಗೆ ಅಧಿಕಾರಿಗಳಿಂದ ಸಿಕ್ಕಿದ ಮಾಹಿತಿ ಪ್ರಕಾರ ಈಗಾಗಲೇ ಏಳು ಅಡ್ಡಕಟ್ಟೆ (ವೈಯರ್) ಗಳನ್ನು ನಿರ್ಮಾಣ ಮಾಡಲಾಗಿದ್ದು, ಎಂಟನೇ ಅಡ್ಡಕಟ್ಟೆಯ ಕಾಮಗಾರಿ 70% ಮುಗಿದೆಯಂತೆ. ಇಷ್ಟು ಹೊತ್ತಿಗೆ ಎಂಟೂ ಅಡ್ಡಕಟ್ಟೆಗಳನ್ನು ಪೂರ್ಣ ಮಾಡಿ ನೀರನ್ನು ಪಂಪ್ ಮಾಡಬೇಕಿತ್ತು. ಏಳು ಅಡ್ಡಕಟ್ಟೆಗಳು ಸಿದ್ಧವಿದ್ದು, ಹರವನಹಳ್ಳಿ ಬಳಿ ನಾಲ್ಕು ನೀರಿನ ಸಂಗ್ರಹಗಾರಗಳು ಸಿದ್ಧ ಇವೆ. ಈ ಮಳೆಗಾಲದಲ್ಲೇ ನೀರು ಪಂಪ್ ಮಾಡಿದ್ದಿದ್ದರೆ ನೀರಿನ ಲಭ್ಯತೆಯ ಪ್ರಮಾಣ ತಿಳಿಯುತ್ತಿತ್ತು. ಅದನ್ನು ಸರಕಾರ ಮಾಡಿಲ್ಲ.
“ಎತ್ತಿನಹೊಳೆ ಅಡ್ಡಕಟ್ಟೆಗಳಿಂದ ಹರವನಹಳ್ಳಿಗೆ ನೀರು ಸಾಗಣೆ ಮಾಡುವ ಮಾರ್ಗದಲ್ಲಿನ 9 ಕಿ.ಮೀ. ಉದ್ದದ ಲೈನ್ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಸಮಸ್ಯೆಯಿಂದ ಅದು ವಿಳಂಬವಾಗಿದ್ದು, ಅದನ್ನು ಕ್ಲಿಯರ್ ಮಾಡುವ ಕೆಲಸವನ್ನು ಸರಕಾರ ಮಾಡಿಲ್ಲ.
ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ
“ಯಾವುದೇ ಯೋಜನೆ ಕಾರ್ಯಗತ ಮಾಡಬೇಕಾದರೆ, DPR (ಸಮಗ್ರ ಯೋಜನಾ ವರದಿ) ತಯಾರಿಸಿಯೇ ಮಾಡಬೇಕು. ಆದರೆ, ಎತ್ತಿನಹೊಳೆ ಬಗ್ಗೆ ಹಾಗೆ ಮಾಡದೇ ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ ಮಾಡಲಾಗುತ್ತಿದೆ. ನಿರಂತರವಾಗಿ ಯೋಜನಾ ವೆಚ್ಚವನ್ನು ಮನಸೋಇಚ್ಛೆ ಹಿಗ್ಗಿಸಲಾಗುತ್ತಿದೆ. ಮುಂದೊಂದು ದಿನ ಇದೇ ದೊಡ್ಡ ಕರ್ಮಕಾಂಡ ಆಗುವ ಸಾಧ್ಯತೆ ಇದೆ.”
“ಕೊನೆಪಕ್ಷ ಮುಂದಿನ ಮುಂಗಾರಿನ ಹೊತ್ತಿಗಾದರೂ ನೆನೆಗುದಿಗೆ ಬಿದ್ದಿರುವ 9 ಕಿ.ಮೀ. ದೂರದ ಲೈನ್ ಕಾಮಗಾರಿ ಮುಗಿಸಿ ಹರವನಹಳ್ಳಿ ಜಲ ಸಂಗ್ರಹಗಾರಗಳಿಗೆ ನೀರು ಹರಿಸಲೇಬೇಕು. ಇದು ನನ್ನ ಆಗ್ರಹ. ಕೇವಲ 2-3 ತಿಂಗಳಲ್ಲಿ ಮಾತ್ರ ಸುರಿಯುವ ಮಳೆಯನ್ನೇ ಹಿಡಿದಿಟ್ಟುಕೊಳ್ಳದಿದ್ದರೆ ಈ ಯೋಜನೆಯ ಉದ್ದೇಶವೇ ಬುಡಮೇಲಾಗುತ್ತದೆ.”
“ಭೂ ಪರಿಹಾರ ವಿಳಂಬವಾದರೂ ಸಕಲೇಶಪುರ ಜನರು ಹೃದಯ ವೈಶಾಲ್ಯತೆ ತೋರಿದ್ದಾರೆ. ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳ ಜನರೂ ತಮ್ಮ ಅಣ್ಣ ತಮ್ಮಂದಿರೆಂದು ಭಾವಿಸಿ ಯೋಜನೆ ಕಾಮಗಾರಿ ನಡೆಯಲು ಬಿಟ್ಟಿದ್ದಾರೆ. ಅದಕ್ಕಾಗಿ ಇಲ್ಲಿನ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.”
ವಿರೋಧವಿಲ್ಲ, ಆದರೆ ನೀರು ಹರಿಯಲೇಬೇಕು
“ಯೋಜನೆಯನ್ನು ಆರಂಭ ಮಾಡಿದಾಗ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ತಲಾ 5 ಟಿಎಂಸಿ ನೀರು ಹರಿಸುವುದಾಗಿ ಅಂದಿನ ಕಾಂಗ್ರೆಸ್ ಸರಕಾರ ಹೇಳಿತ್ತು. ಅದರಂತೆ ನೀರು ಹರಿಸಲೇಬೇಕು. ನೀರಾವರಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಕೋಲಾರ ಜಿಲ್ಲೆಯ ಕಟ್ಟಕಡೆಯ ಜಾಗಕ್ಕೂ ನೀರು ಹರಿಯಬೇಕು. ಇಲ್ಲವಾದರೆ, ನಾವು ಸುಮ್ಮನಿರುವುದಿಲ್ಲ.”
“ತುಮಕೂರಿನಿಂದ ಕೋಲಾರದವರೆಗೆ ಯೋಜನೆ ವ್ಯಾಪ್ತಿಗೆ ತಂದಿರುವ ಜಿಲ್ಲೆಗಳ ಒಟ್ಟು 170 ಕೆರೆಗಳನ್ನು ತುಂಬಿಸುವುದು ಸೇರಿ ಎಲ್ಲ ಭಾಗಗಳಿಗೆ ಕುಡಿಯುವ ನೀರೊದಗಿಸುವ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ.
ದೇವರಾಯನದುರ್ಗದ ಬಳಿ 10 ಟಿಎಂಸಿ ಸಾಮರ್ಥ್ಯದ ಜಲ ಸಂಗ್ರಹಗಾರ ಮಾಡುತ್ತೇವೆ ಎಂದರು. ಅಲ್ಲಿ ಅರಣ್ಯ ಮುಳುಗಡೆ ಆಗುತ್ತದೆ ಎಂದ್ಹೇಳಿ ಭೈರಗೊಂಡ್ಲು ಸಮೀಪ 5 ಟಿಎಂಸಿ ಸಂಗ್ರಹಕಾರ ನಿರ್ಮಿಸುವುದಾಗಿ ಸರಕಾರ ಹೇಳಿತು. ಆದರೆ, ಈಗ ಅದೇ ಸರಕಾರವು ಭೈರಗೊಂಡ್ಲುವಿನಲ್ಲಿ 1.5-2 ಟಿಎಂಸಿ ಸಾಮರ್ಥ್ಯದ ಸಂಗ್ರಹಗಾರ ನಿರ್ಮಿಸಲು ತೀರ್ಮಾನ ಮಾಡಿಕೊಂಡಿದೆ. ಇದಕ್ಕೆ ನಮ್ಮ ಪಕ್ಷದ ವಿರೋಧವಿದೆ ಹಾಗೂ ನೀರಿನ ಕಡಿಮೆ ಸಂಗ್ರಹ ಕಡಿಮೆ ಮಾಡಿದರೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಸಿಗುವುದಿಲ್ಲ. ಅಂಥ ಅನ್ಯಾಯ ಮಾಡಿದರೆ ಜೆಡಿಎಸ್ ಸುಮ್ಮನಿರುವುದಿಲ್ಲ.
ನೋಡೆಲ್ ಅಧಿಕಾರಿ ನೇಮಿಸಿ
ಎತ್ತಿನಹೊಳೆ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಮರ್ಥ ಆಧಿಕಾರಿಯೊಬ್ಬರನ್ನು ನೋಡೆಲ್ ಆಫಿಸರ್ ಆಗಿ ನೇಮಕ ಮಾಡುವಂತೆ ಮಾಜಿ ಮುಖ್ಯಮಂತ್ರಿಗಳು ಸರಕಾರಕ್ಕೆ ಸಲಹೆ ಮಾಡಿದರು.
ದೇವೇಗೌಡರು ಕೃಷ್ಣ ಮೇಲ್ದಂಡೆ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಐಎಎಸ್ ಅಧಿಕಾರಿ ಜಾಮ್ದಾರ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದರು. ಅವರಿಗೆ ಪೂರ್ಣ ಅಧಿಕಾರ ನೀಡಿ ಯೋಜನೆ ಶೀಘ್ರವಾಗಿ ಕಾರ್ಯಗತ ಆಗುವಂತೆ ನೋಡಿಕೊಂಡಿದ್ದರು ಎಂದು ಅವರು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮುಂತಾದವರಿದ್ದರು.