ಎಲ್ಲೆಲ್ಲೂ ನೀರು, ಉಕ್ಕಿ ಹರಿದ ಕೆರೆ ಕಾಲುವೆಗಳು; ರಸ್ತೆಯಲ್ಲಿ ಹೂತುಹೋದ ಸಾರಿಗೆ ಬಸ್
ಬಾಗೇಪಲ್ಲಿ: ಸಕಾಲಕ್ಕೆ ಮಳೆ ಇಲ್ಲದೆ, ಬಿಸಲಿನ ಝಳದಿಂದ ತತ್ತರಿಸಿದ್ದ ಬಾಗೇಪಲ್ಲಿ ತಾಲೂಕಿನ ಜನತೆ ತಂಪೆರೆದ ವರುಣನಿಂದ ಖುಷಿಯಾಗಿದ್ದಾರೆ.
ಕೆಲ ದಿನಗಳಿಂದ ಮಳೆ ಇಲ್ಲದೆ ಒಣಗಿದ ಹೊಲದ ಬೆಳೆಗಳನ್ನು ಕಂಡು ಕಂಗಾಲಾಗಿದ್ದ ರೈತರು ಬಾಗೇಪಲ್ಲಿ ತಾಲೂಕಿನಾದ್ಯಂತ ಇಂದು ಬೆಳಗಿನ ಜಾವದಿಂದಲೇ ಬರೀ ಮಳೆ ನೀರಿನದ್ದೆ ಸದ್ದು.
ಬೆಳಗ್ಗೆಯಿಂದ ಧಾರಾಕಾರವಾಗಿ ಸುಮಾರು ಎರಡು ಗಂಟೆ ಕಾಲ ಸುರಿದ ಭಾರೀ ಮಳೆಗೆ ತಾಲೂಕಿನ ಎಲ್ಲೆಡೆ ಜಲಮೂಲಗಳು ಝೇಂಕರಿಸುತ್ತಿವೆ. ಕೆರೆ, ಕುಂಟೆ, ಕಾಲುವೆಗಳು ಕೋಡಿ ಹರಿಯುತ್ತಿವೆ.
ಎಲ್ಲಿ ನೋಡಿದರೂ ನೀರೆ ನೀರು. ಹೊಸ ಮನೆಗಳೂ ಸೋರುವ ಸೂಚನೆ ಕೊಡುತ್ತಿವೆ. ಹಳೆ ಮನೆಗಳು ಸೋರುತ್ತಿವೆ. ಇನ್ನೂ ಹಳೆ ಮನೆಗಳು ಕುಸಿದು ಬೀಳುತ್ತಿವೆ.
ತಗ್ಗು ಪ್ರದೇಶಗಳಲ್ಲಿರುವ ಜಮೀನುಗಳೆಲ್ಲವೂ ಜಲಾವೃತವಾಗಿವೆ. ಬೆಳೆಗಳು ಕೆಲವೆಡೆ ಹಳ್ಳ ಹಿಡಿದು ಕೆರೆ ಕುಂಟೆ ಸೇರಿವೆ. ಗ್ರಾಮೀಣ ರಸ್ತೆಗಳ ಮೇಲ್ಮಣ್ಣು ಕೊಚ್ಚಿ ಹೋಗಿ ಹಳ್ಳಗಳಂತಾಗಿವೆ.
ರಸ್ತೆಯಲ್ಲಿ ಕುಸಿದ ಸಾರಿಗೆ ಬಸ್
ತಾಲೂಕಿನ ದೇವಿಕುಂಟೆಗೆ ಕೆಎಸ್ಆರ್‌ಸಿ ಬಸ್ ಹೋಗಿ ಬರುವಾಗ ಮೋರಿ ಕುಸಿದು ಅಲ್ಲೇ ಸಿಕ್ಕಿಕೊಂಡಿದೆ. ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಡಾಂಬರೀಕರಣವಾಗದ ದೇವಿಕುಂಟೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಇನ್ನಾದರೂ ಡಾಂಬರೀಕರಣ ಮಾಡಲೇಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಾಗೇಯೇ ತಾಲೂಕಿನ ಮಾಡಪಲ್ಲಿ ಗ್ರಾಮದಲ್ಲಿ ಮದ್ದಿಗೀರಪ್ಪ ಮತ್ತು ಲಕ್ಷ್ಮಕ್ಕ ಎಂಬ ವೃದ್ದ ದಂಪತಿ ವಾಸ ಮಾಡುತ್ತಿದ್ದ ಮನೆ ಕುಸಿದು, ಪ್ರಾಣಾಪಾಯದಿಂದ ಇಬ್ಬರೂ ಪಾರಾಗಿದ್ದಾರೆ. ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟವರು ಮನೆ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅದೇ ರೀತಿಯಲ್ಲಿ ಕೊಲಿಂಪಲ್ಲಿ ಗ್ರಾಮದಲ್ಲಿಯೂ ಹಲವರ ಮನೆಗಳಿಗೆ ನೀರು ನುಗ್ಗಿದ್ದು, ವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಾಣಕ್ಕೆ ಒತ್ತು ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನಲ್ಲಿ ಇಂದು ಬಿದ್ದ ಮಳೆ ಚಿತ್ರಗಳು.
photo courtesy: Narasimha murthy madapalli