ಕೆಪಿಸಿಸಿ ಅಧ್ಯಕ್ಷರ ಮೇಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ
ರಾಮನಗರ: ದಿವಂಗತ ಎಂಸಿ ಮನಗೂಳಿ ಅವರು ತಮ್ಮ ಮಕ್ಕಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ತಮ್ಮ ಮನೆಗೆ ಬಂದು ಕೇಳಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ತೀವ್ರ ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿಂದು ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮಗಳ ಮುಂದೆ ತಮ್ಮ ಬೇಸರ ಹೊರಹಾಕಿದ ಅವರು, “ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು. ಅವರಿಗೆ ಜನರೇ ಉತ್ತರ ನೀಡುತ್ತಾರೆ. ಮನಗೂಳಿ ಅವರು ಡಿ.ಕೆ.ಶಿವಕುಮಾರ್ ಮನೆಗಷ್ಟೇ ಏಕೆ?, ಅವರ ಹತ್ತಿರಕ್ಕೂ ಹೋಗಿರಲಿಲ್ಲ. ಅವರ ಮಗ ಹೋಗಿ ಭೇಟಿ ಮಾಡಿರಬಹುದು” ಎಂದರು.
ಶಿವಮೊಗ್ಗದ ನಾಯಕರೊಬ್ಬರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ವರ್ಷಾನುಗಟ್ಟಲೆ ಅವರ ಮನೆ ಮುಂದೆ ಬಲೆ ಹಾಕಿಕೊಂಡು ಕೂತಿದ್ದೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದರು. ಅವರು ಜೆಡಿಎಸ್ ನಾಯಕರ ಮನೆ ಮುಂದೆ ಈಗಲೂ ಬಲೆ ಹಾಕಿಕೊಂಡು ಕೂತಿದ್ದಾರೆ ಎಂದು ಹೆಚ್‌ಡಿಕೆ ಕಟುವಾಗಿ ಟೀಕಿಸಿದರು.
ಮುಂದೆ ಆ ಬಲೆಯೇ ಕಾಂಗ್ರೆಸ್ ನಾಯಕರಿಗೆ ದೊಡ್ಡ ಮುಳುವಾಗಲಿದೆ. ಎಲ್ಲವನ್ನೂ ಕಾಲವೇ ನಿರ್ಣಯ ಮಾಡಲಿದೆ, ನೋಡೋಣ ಎಂದು ಮಾರ್ಮಿಕವಾಗಿ ಅವರು ಉತ್ತರ ನೀಡಿದರು.
16ರಿಂದ ಉಪ ಚುನಾವಣೆ ಪ್ರಚಾರ
ಹಬ್ಬ ಮುಗಿದ ಮೇಲೆ, ಅಂದರೆ; ಅಕ್ಟೋಬರ್ 16ರಿಂದ ನಾನು ಉಪ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಸಿಂಧಗಿ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಹಾನಗಲ್ ಕ್ಷೇತ್ರದಲ್ಲೂ ಜೆಡಿಎಸ್ ಪರ ಅಲೆ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಾಂಗ್ರೆಸ್‌ಪಕ್ಷವನ್ನು ಸೋಲಿಸಲು ಜೆಡಿಎಸ್‌ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ನೀಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರಿಗೆ ಈಗಲೇ ಸೋಲಿನ ಭಯ ಕಾಡುತ್ತಿದೆ. ನಮಗೆ ಅನುಕೂಲವಾದ ಅಭ್ಯರ್ಥಿಯನ್ನು ನಾವು ಹಾಕಿದ್ದೇವೆ ಎಂದರು ಹೆಚ್‌ಡಿಕೆ.
ಸಿಂಧಗಿ ಕ್ಷೇತ್ರದಲ್ಲಿ ಮೊನ್ನೆ ನಮ್ಮ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ಅವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜನರೇ 50 ಸಾವಿರ ರೂಪಾಯಿ ಸಂಗ್ರಹ ಮಾಡಿ ಚುನಾವಣೆಯ ಖರ್ಚಿಗೆ ನೀಡಿದ್ದಾರೆ. ಇದು ಜನರು ನಮ್ಮ ಪಕ್ಷದ ಮೇಲೆ ಇಟ್ಟಿರುವ ಪ್ರೀತಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಗುತ್ತಿ ಬಸವಣ್ಣ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆ. ಆ ಭಾಗದ ರೈತರು ಈ ಯೋಜನೆಗಾಗಿ ಅನೇಕ ವರ್ಷ ಹೋರಾಟ ಮಾಡಿದ್ದರು. ಜನಸೇವೆ ಮಾಡಿದರೆ ಅವರು ನಮ್ಮನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಅವರು ಭಾವುಕಾರಾದರು.
ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿದ್ದು, ಗೆಲುವು ಆ ಪಕ್ಷಕ್ಕೆ ಗಗನಕುಸುಮ. ಕಳೆದ 15 ವರ್ಷಗಳಿಂದ ಅಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಫೈಟ್ ಇದೆ. ಇದು ಗೊತ್ತಿದ್ದೇ ಕಾಂಗ್ರೆಸ್‌ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋದ ಮನಗೂಳಿ ಅವರ ಪುತ್ರನನ್ನು ಅಭ್ಯರ್ಥಿ ಮಾಡಿದೆ. ಇದಕ್ಕಿಂತ ದೊಡ್ಡ ದಾರಿದ್ರ್ಯ ಆ ಪಕ್ಷಕ್ಕೆ ಏನಿದೆ ಎಂದರು ಅವರು.
ಸಿಂಧಗಿಯಲ್ಲಿ ಜೆಡಿಎಸ್ ಪಕ್ಷವು ಸುಸಂಸ್ಕೃತ ಹೆಣ್ಣು ಮಗಳಿಗೆ ಟಿಕೆಟ್‌ನೀಡಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿರುವ ಕುಟುಂಬದ ಹೆಣ್ಣುಮಗಳು ಅವರು. ಜತೆಗೆ, ಎಂ.ಎ ಪಧವೀಧರೆ ಕೂಡ. ಹಾನಗಲ್‌ಕ್ಷೇತ್ರದಲ್ಲಿ ಎಂ.ಟೆಕ್‌ಮಾಡಿರುವ ನಿಯಾಜ್‌ಶೇಖ್‌ಎಂಬ ಯುವಕನಿಗೆ ಟಿಕೆಟ್‌ಕೊಟ್ಟಿದ್ದೇವೆ. ಅಂಥ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ನನ್ನ ಬಗ್ಗೆ ಕಾಂಗ್ರೆಸ್ʼಗೆ ಭಯವಿದೆ
ಕುಮಾರಸ್ವಾಮಿ ಅವರ ಜನರ ಜತೆಗಿನ ಸಂಪರ್ಕ ಕಂಡರೆ ಕಾಂಗ್ರೆಸ್ʼಗೆ ಭಯ ಆಗುತ್ತಿದೆ. ನನ್ನ ಬಗ್ಗೆ ಜನರಿಗೆ ಇರುವ ಪ್ರೀತಿ, ವಿಶ್ವಾಸ ಕಂಡು ಕಾಂಗ್ರೆಸ್ಸಿಗರು ಕುಗ್ಗಿಹೋಗಿದ್ದಾರೆ ಎಂದ ಹೆಚ್‌ಡಿಕೆ ಅವರು; ಕಾಂಗ್ರೆಸ್ ನಾಯಕರಿಗೆ ರಾಮನಗರ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗೊತ್ತಿಲ್ಲ. ಸರಿಯಾದ ದೂರದೃಷ್ಟಿ ಇಲ್ಲ. ರಾಜಕೀಯ ಬಿಟ್ಟರೆ ಅವರಿಗೆ ಬೇರೆ ಚರ್ಚೆಯ ವಿಷಯವೇ ಇಲ್ಲ. ಜನತೆ ಜತೆಗಿನ ನನ್ನ ಸಂಪರ್ಕದಿಂದ ಕಳವಳಗೊಂಡು ನನ್ನನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ನನ್ನ ಹಾಗೂ ನಮ್ಮ ಪಕ್ಷದ ಬಗ್ಗೆ ಹೆಚ್ಚು ಆತಂಕ ಕಾಂಗ್ರೆಸ್ಸಿಗರಿಗೆ ಇದೆ. ಆದ್ದರಿಂದ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜತೆಗೆ; ಚನ್ನಪಟ್ಟಣ ಕ್ಷೇತ್ರದ ಸಮಸ್ಯೆಗಳಿಗೆ ಹೆಚ್‌ಡಿಕೆ ಸ್ಪಂದಿಸುತ್ತಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಅವರು ಟೀಕಿಸಿದರು.
ಚನ್ನಪಟ್ಟಣ ಕ್ಷೇತ್ರದ ಜನತೆಗೆ ಕಾಂಗ್ರೆಸ್ ನಾಯಕರ ಕೊಡುಗೆ ಏನು? ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಳ್ಳಬೇಕಾಗಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿದ್ದರೂ ಚನ್ನಪಟ್ಟಣದ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸುತ್ತಿದೇನೆ. ಇಂಥ ಸಂದರ್ಭದಲ್ಲಿ ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸದರು ಏಕೆ ಸ್ಪಂದಿಸುತ್ತಿಲ್ಲ. ಕೇವಲ ಕೇವಲ ಟೇಪ್ ಕತ್ತರಿಸಲು ಮಾತ್ರ ಅವರು ಬರುತ್ತಾರೆ ಎಂದು ಟಾಂಗ್‌ಕೊಟ್ಟರು ಕುಮಾರಸ್ವಾಮಿ ಅವರು.
ಕ್ಷೇತ್ರದ ಆಗುಹೋಗುಗಳ ವಿಚಾರದಲ್ಲಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಚನ್ನಪಟ್ಟಣದ ವಾಟರ್ ಟ್ಯಾಂಕ್‌ನಲ್ಲಿ ಮಹಿಳೆಯ ಕಾಲು ಪತ್ತೆಯಾದ ಕೂಡಲೇ ಕ್ರಮ ಕೈಗೊಂಡಿದ್ದೇನೆ. ಜನರಿಗೆ ತೊಂದರೆ ಆಗದಂತೆ ಪ್ರತಿ ಮನೆಗೂ ನೀರು ಪೂರೈಕೆ ಮಾಡಿಸಿದ್ದೇನೆ. ಸತ್ತ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನುವ ಬಗ್ಗೆ ಸಂಶಯವಿದೆ. ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಎಲ್ಲ ಸರಿ ಹೋಗುವವರೆಗೂ ಹಣ ಎಷ್ಟೇ ಖರ್ಚಾದರೂ ಟ್ಯಾಂಕರ್‌ನಲ್ಲೇ ನೀರು ಪೂರೈಸಲು ಸೂಚಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ಗರಕಹಳ್ಳಿಯ ಡೈರಿ ಗಲಾಟೆಯ ವಿಚಾರವೂ ನನಗೆ ಗೊತ್ತಿದೆ. ಅಲ್ಲಿನ ಎಆರ್ ನಿಂದಾಗಿ ಇಷ್ಟೆಲ್ಲ ಅವಾಂತರ ಆಗಿದೆ. ಆದಷ್ಟು ಬೇಗ ಆತನನ್ನು ವರ್ಗಾವಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಮಾತನಾಡಿದ್ದೇನೆ. ಹಾಗೆಯೇ; ಸಾದರಹಳ್ಳಿಯ ರಸ್ತೆಯ ವಿಚಾರ ಪಂಚಾಯಿತಿಗೆ ಸಂಬಂಧಿಸಿದ್ದು. ಅದನ್ನು ಸಹ ಈಗಾಗಲೇ ಸಂಬಂಧಿಸಿದವರ ಜತೆಗೆ ಮಾತನಾಡಿದ್ದೇನೆ. ಹೀಗಾಗಿ ನಾನು ಎಲ್ಲೇ ಇದ್ದರೂ ಚನ್ನಪಟ್ಟಣದ ಕಡೆ ಗಮನ ಇಟ್ಟಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.