ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಉಪೇಕ್ಷೆ, ಕಳಪೆ ನಿರ್ವಹಣೆ; ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಕಟ್ಟೆ ಒಡೆದ ಕೆರೆಗಳ ವೀಕ್ಷಣೆ
ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ಯುವಶಕ್ತಿ ತಂಡದಿಂದ ಇಂದು ಶಿಡ್ಲಘಟ್ಟ ತಾಲೂಕಿನ ಕೆರೆಕಟ್ಟೆ ಒಡೆದ ತಿಮ್ಮನಾಯಕನಹಳ್ಳಿ ಪಂಚಾಯತಿ ವ್ಯಾಪ್ತಿಯ ನಲ್ಲೊಜನಹಳ್ಳಿ ಅಗ್ರಹಾರ ಕೆರೆ, ಚೊಕ್ಕನಹಳ್ಳಿ ನಾರಾಯಣರೆಡ್ಡಿ ಕೆರೆ ಮತ್ತು ಬಂದರಘಟ್ಟ ಕೆರೆಗಳನ್ನು ವೀಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಕೆರೆ ಅಚ್ಚುಕಟ್ಟು ಮತ್ತು ಸುತ್ತಲಿನ ಹಳ್ಳಿಗಳಾದ ನಲ್ಲೋಜನಹಳ್ಳಿ, ಆನೆಮಡಗು, ಪಿಲ್ಲಗುಂಡ್ಲಹಳ್ಳಿ, ನಾಚಗಾನಹಳ್ಳಿ, ಎರ್ರಹಳ್ಳಿ, ಕುದುಪುಕುಂಟೆ, ತಿಮ್ಮನಾಯಕನಹಳ್ಳಿ, ಗೊರ್ಲಗುಮ್ಮನಹಳ್ಳಿ, ದಡಮಘಟ್ಟ ಹಾಗೂ ರಾಯಪ್ಪನಹಳ್ಳಿ ಗ್ರಾಮಗಳ ಐವತ್ತಕ್ಕೂ ಹೆಚ್ಚು ರೈತರು ತಮ್ಮ ನೋವನ್ನು ತಂಡದ ಮುಂದೆ ತೋಡಿಕೊಂಡರು.
ಪ್ರಮುಖವಾಗಿ ನಲ್ಲೋಜನಹಳ್ಳಿಯ ರೈತ ಮಹಿಳೆ ಅನಿತಾ ಅವರು, “ಕಳೆದ 10 ವರ್ಷಗಳಲ್ಲಿ ತೀವ್ರ ಬರಗಾಲದಿಂದ ಕೃಷಿಗೆ ನೀರಿಲ್ಲದೆ ತಮ್ಮ ಊರಿನ ಪುರುಷರು ಅಡುಗೆ ಕೆಲಸಕ್ಕಾಗಿ ನೂರಾರು ಕಿ.ಮೀ ದೂರದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಊರುಗಳಿಗೆ ಸುತ್ತಿ ಜೀವನ ಸಾಗಿಸುತ್ತಿದ್ದಾರೆ. ರೈತ ಮಹಿಳೆಯರು ಹಸುಗಳನ್ನು ಸಾಕಿ ಹೈನುಗಾರಿಕೆಯಿಂದ ತಮ್ಮ ಮಕ್ಕಳ ಭವಿಷ್ಯವನ್ನು ಕಟ್ಟುತ್ತಿದ್ದೇವೆ. ಈಗ ಕೆರೆ ತುಂಬಿದ್ದರಿಂದ ಇನ್ನು ತಮ್ಮ ಜಮೀನಿನಲ್ಲಿ ಹೆಚ್ಚಿನ ಕೃಷಿ ಮಾಡಬಹುದೆಂಬ ನೀರೀಕ್ಷೆಯಿತ್ತು. ಆದರೆ, ಈಗ ನಮ್ಮಗಳ ಜೀವನ ಯಥಾಸ್ಥಿತಿ ಕೆಲಸಕ್ಕಾಗಿ ಅಲೆದಾಡುವಂತಾಗಿದೆ” ಎಂದು ಕಣ್ಣೀರಿಟ್ಟರು.
ಪ್ರಗತಿಪರ ರೈತ ಆನೆಮಡಗು ಶಿವಣ್ಣ ಅವರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದು ಹೀಗೆ; “ಕಳೆದ 10 ವರ್ಷಗಳಲ್ಲಿ 4 ಸಲ ಕೆರೆ ಕಟ್ಟೆ ಒಡೆದರೂ ಜನಪ್ರತಿನಿಧಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗುತ್ತಿಗೆದಾರರ ಕುಮ್ಮಕ್ಕಿನಿಂದ ಅವೈಜ್ಞಾನಿಕವಾದ ದುರಸ್ತಿಯಾಗಿ ಈ ಸ್ಥಿತಿ ಬಂದಿದೆ. ಈ ಬಗ್ಗೆ ತನಿಖೆಯಾಗಬೇಕು” ಎಂದು ಒತ್ತಾಯಿಸಿದರು.
ಕೆರೆ ಕಟ್ಟೆ ಮೇಲೆ ಮರ ಗಿಡಗಳು ಬೆಳೆದಿರುವುದರಿಂದ ಬೇರುಗಳು ಒಣಗಿ, ರಂಧ್ರಗಳು ಏರ್ಪಟ್ಟು ನಂತರ ನೀರು ಜಿನುಗುವುದರಿಂದ ಕಟ್ಟೆ ಒಡೆಯುವ ಸಾಧ್ಯತೆ ಇದ್ದು, ಅಧಿಕಾರಿಗಳು ಕೆರೆ ಕಟ್ಟೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಅವರು ದೂರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆರ್.ಆಂಜನೇಯರೆಡ್ಡಿ ಮಾತನಾಡಿ, “1997ರಲ್ಲಿ ಅವಿಭಜಿತ ಕೋಲಾರ ಜಿಲ್ಲಾಧಿಕಾರಿ ಸಂಜಯ್ ದಾಸ್ ಗುಪ್ತ ಅವರು ISRO ವಿಜ್ಞಾನಿಗಳಿಂದ ಜಿಲ್ಲೆಯ ಸುಮಾರು 4 ಸಾವಿರ ಕೆರೆಗಳ ಪುನಶ್ಚೇತನ ಹಾಗೂ ಸಮರ್ಪಕ ನಿರ್ವಹಣೆಗಾಗಿ ಮಾಡಿಸಿದ್ದ ವೈಜ್ಞಾನಿಕ ವರದಿ ಆಧರಿಸಿ ಈ ಕೆರೆಯನ್ನು ಪುನಶ್ಚೇತನಗೊಳಿಸಬೇಕು. ನಮ್ಮ ಗ್ರಾಮೀಣ ಪರಿಸರದಲ್ಲಿರುವ ಕೆರೆ, ಕುಂಟೆ, ಸರಕಾರಿ ಜಮೀನುಗಳು, ಬೆಟ್ಟಗಳು ಯಾವುದೇ ರಾಜಕಾರಣಿಗಳು, ಅಧಿಕಾರಿಗಳು ಅಥವಾ ಗುತ್ತಿಗೆದಾರರ ಆಸ್ತಿಯಲ್ಲ. ಅದೆಲ್ಲವೂ ಸಮುದಾಯದ ಆಸ್ತಿಯಾಗಿದ್ದು, ಅದನ್ನು ಉಳಿಸುವ ಜವಾಬ್ದಾರಿಯನ್ನು ರೈತರು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕೆರೆ ವೀಕ್ಷಣೆ ಬಳಿಕ, ಎಲ್ಲಾ ರೈತರು, ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ಯುವಶಕ್ತಿ ವತಿಯಿಂದ ಕೆಲ ಮಹತ್ವದ ನಿರರ್ಣಯಗಳನ್ನು ಕೈಗೊಳ್ಳಲಾಗಿದ್ದು, ಅವು ಹೀಗಿವೆ;
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ವಿಪತ್ತಿನಿಂದ ನಷ್ಟಕ್ಕೊಳಗಾದ ಎಲ್ಲಾ ರೈತರ ಬೆಳೆ ಹಾಗು ಆಸ್ತಿ ನಷ್ಟಗಳ ಅಧ್ಯಯನ ನಡೆಸಿ ಎಕೆರೆಗೆ 2 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು.
ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಅಗ್ರಹಾರ ಕೆರೆಯನ್ನು ವೈಜ್ಞಾನಿಕ ಸಂಸ್ಥೆಗಳಿಂದ ಅಧ್ಯಯನ ಮಾಡಿಸಿ DPR ತಯಾರಿಸಿ, ಕಟ್ಟೆಯನ್ನು ವೈಜಾನಿಕವಾಗಿ ಸಂಪೂರ್ಣ ಮರು ನಿರ್ಮಾಣ ಮಾಡಬೇಕು.
ಕೆರೆ ಒತ್ತುವರಿ ತೆರವು, ಕಟ್ಟೆ ನಿರ್ವಹಣೆ ಕಾವಲು ಹಾಗೂ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಶಾಶ್ವತ ಪರಿಹಾರ ರೂಪಿಸುವುದರ ಜತೆಗೆ; ಸಾರ್ವಜನಿಕ ಸಹಭಾಗಿತ್ವಕ್ಕಾಗಿ ಅಚ್ಚುಕಟ್ಟು ಪ್ರದೇಶದ ರೈತರನ್ನೊಳಗೊಂಡ ಅಗ್ರಹಾರ ಕೆರೆ ಸಂರಕ್ಷಣೆ ಸಮಿತಿ ರಚನೆ ಮಾಡುವುದು.
ಆನೆಮಡಗು-ದಡಮಘಟ್ಟ ಮಧ್ಯೆ ಅಗ್ರಹಾರ ಕೆರೆ ಹಾಗೂ ಗೊರ್ಲಗುಮ್ಮನಹಳ್ಳಿ ಕೆರೆ ಕಟ್ಟೆಗಳ ಮೇಲೆ ರಸ್ತೆ ಮಾಡುವುದರಿಂದ ಈ ಹಳ್ಳಿಗಳ ಸಂಪರ್ಕವು ಈಗಿನ 10 ಕಿ.ಮೀ ಅಂತರದ ಬದಲು 3 ಕಿ.ಮೀ ಆಗುವುದರಿಂದ ಈ ಭಾಗದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ, ಇತರೆ ಕೃಷಿ ಅವಲಂಭಿತ ಸಾಗಣೆ ವೆಚ್ಚ ಕಡಿಮೆಯಾಗುವುದು. ಆದ್ದರಿಂದ ಈ ರಸ್ತೆ ಅಭಿವೃದ್ಧಿಪಡಿಸಬೇಕು.
ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳಾದ ನಾಗದೇನಹಳ್ಳಿ ನಾರಾಯಣಸ್ವಾಮಿ, ಆನೂರು ದೇವರಾಜ್, ಅಬ್ಲೂಡು ದೇವರಾಜ್, ಸ್ಥಳೀಯ ಮುಖಂಡರಾದ ಎರಹಳ್ಳಿ ವೈ.ಕೆ.ಮಂಜುನಾಥ್, ರಾಯಪ್ಪನಹಳ್ಳಿ ನಾಗರಾಜರೆಡ್ಡಿ, ನಾಚಗಾನಹಳ್ಳಿ ನಾರಾಯಣಸ್ವಾಮಿ, ಆನೆಮಡಗು ಶಿವಣ್ಣ, ಎನ್.ನಾರಾಯಣಸ್ವಾಮಿ, ಮಂಜುನಾಥ್, ಗಂಗಾಧರ್ ತಿಮ್ಮನಾಯಕನಹಳ್ಳಿ ಟಿ.ಎನ್.ಬಚ್ಚರೆಡ್ಡಿ, ಕುರುಬರಹಳ್ಳಿ ಕೆ.ವಿ.ಬೈರಾರೆಡ್ಡಿ ಗೋಣಿಮರದಹಳ್ಳಿ ಎಂ.ವೆಂಕಟರೆಡ್ಡಿ, ಭೈರೇಗೌಡ, ಕುದುಪಕುಂಟೆ ಶ್ರೀನಿವಾಸ್, ದಡಮಘಟ್ಟ ಗೊರ್ಲಪ್ಪ, ಚೊಕ್ಕನಹಳ್ಳಿ ರಮೇಶ್, ಬಂಧರಘಟ್ಟ ಭೈರಾರೆಡ್ಡಿ, ಕೋನಪ್ಪರೆಡ್ಡಿ ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.