ಗುಡಿಬಂಡೆ ತಾಲೂಕಿನ ಕಾಟೇನಹಳ್ಳಿಯಲ್ಲಿ ತಲೆ ತಗ್ಗಿಸುವ ಘಟನೆ
ಗ್ರಾಮಕ್ಕೆ ಸಚಿವ ಡಾ.ಕೆ.ಸುಧಾಕರ್, ಡೀಸಿ ಆರ್.ಲತಾ, ಜಿಲ್ಲಾ SP ಭೇಟಿ
ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು; ನಿಂದಿಸಿದ ಮಹಿಳೆ ವಿರುದ್ದ ಅಟ್ರಾಸಿಟಿ ಕೇಸ್
ಗುಡಿಬಂಡೆ: ಪಡಿತರ ಆಹಾರ ಪಡೆಯಲು ಹೋದ ದಲಿತ ಮಹಿಳೆಗೆ ಪಡಿತರ ವಿತರಣೆ ಮಾಡುವ ಅಂಗಡಿಯ ಮಾಲಕಿ ದೌರ್ಜನ್ಯ ನಡೆಸಿ ಜಾತಿ ನಿಂದನೆ ಮಾಡಿರುವ ಘಟನೆ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಾತಿ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಲಿತ ಸಂಘಟನೆಗಳು ಇದನ್ನು ಖಂಡಿಸಿವೆ. ಕಾಟೇನಹಳ್ಳಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಭಾನುವಾರ ಭೇಟಿ ನೀಡಿ ನೊಂದ ದಲಿತ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಕಾಟೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯ ನಾಗರತ್ನಮ್ಮ ಹೆಸರಿನಲ್ಲಿ ಇದ್ದು, ಈಕೆಯ ಮಗಳಾದ ಪದ್ಮಮ್ಮ ಪಡಿತರ ವಿತರಣೆ ಮಾಡುತ್ತಿದ್ದರು. ಶನಿವಾರ ಕಾಟೇನಹಳ್ಳಿ ಗ್ರಾಮದ ದಲಿತ ಮಹಿಳೆ ಪಡಿತರ ಪಡೆಯಲು ನ್ಯಾಯ ಬೆಲೆ ಅಂಗಡಿಗೆ ಹೋದಾಗ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿರುವುದನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪಡಿತರ ವಿತರಣೆ ಮಾಡುತ್ತಿದ್ದ ಪದ್ಮಮ್ಮ ದಲಿತ ಮಹಿಳೆ ನಾರಾಯಣಮ್ಮ ಅವರ ಮೇಲೆ ದೌರ್ಜನು ಎಸಗಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
“ನಾವು ಏನು ವಿತರಣೆ ಮಾಡುತ್ತೇವೆಯೋ ಅದನ್ನು ತೆಗೆದುಕೊಂಡು ಹೋಗಿ ತಿನ್ನಬೇಕು. ನಿಮ್ಮಂತಹ ಕೀಳುಮಟ್ಟದ ಜನರಿಗೆ ಸರಕಾರ ಕೊಡುತ್ತಿರುವುದನ್ನು ತಿಂದು ಕೊಬ್ಬು ಹೆಚ್ಚಾಗಿದೆ. ನಿಮ್ಮನ್ನು ಎಲ್ಲಿ ಇಟ್ಟಿರಬೇಕೋ ಅಲ್ಲೇ ಇಟ್ಟಿರಬೇಕು” ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ನಾರಾಯಣಮ್ಮ ಆರೋಪಿಸಿದ್ದಾರೆ.
ದಲಿತ ಮಹಿಳೆಯ ಮೇಲೆ ಜಾತಿ ನಿಂದನೆ ಹಾಗೂ ದೌರ್ಜನ್ಯ ಖಂಡನೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾಟೇನಹಳ್ಳಿ ಗ್ರಾಮದ ಪಡಿತರ ವಿತರಣೆ ಮಾಡುವ ಪದ್ಮಮ್ಮ ನಡೆಯನ್ನು ದಲಿತ ಸಂಘಟನೆಗಳು ಖಂಡಿಸಿವೆ. ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನೊಂದ ದಲಿತ ಮಹಿಳೆ ನಾರಾಯಣಮ್ಮ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಸಾಂತ್ವನ ಹೇಳಿದರು.
ನಾರಾಯಣಮ್ಮ ನಿವಾಸಕ್ಕೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಪದ್ಮಮ್ಮ ಮೇಲೆ ಅಟ್ರಾಸಿಟಿ ಕೇಸ್ ಮಾಡಿ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ ಪಡಿತರ ಚೀಟಿ ಅಂಗಡಿಯ ಲೈಸೆನ್ಸ್ ರದ್ದು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದು ತಲೆ ತಗ್ಗಿಸುವಂತಹ ಘಟನೆ. ಗ್ರಾಮಗಳಲ್ಲಿ ಜಾತಿ ಹೆಸರನ್ನು ಇಟ್ಟುಕೊಂಡು ನಿಂದನೆ ಮಾಡುವುದು ಅಕ್ಷಮ್ಯ ಅಪರಾಧ” ಎಂದರು.
ಈ ಘಟನೆಗೆ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ. ಪಡಿತರ ವಿತರಣೆ ಮಾಡುವ ಮಹಿಳೆ ಸಂಸ್ಕಾರ ಮರೆತು ವರ್ತಿಸಿದ್ದಾರೆ. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಕನಿಷ್ಠ ಗೌರವ ನೀಡಬೇಕಿತ್ತು. ಹಾಗೆ ಮಾಡದೇ ಜಾತಿ ನಿಂದನೆ ಮಾಡಿರುವುದು ಅಪರಾಧ ಎಂದು ಸಚಿವರು ಹೇಳಿದರು.
ಕಾನೂನು ರೀತ್ಯ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಅದನ್ನು ಕೈಗೊಳ್ಳಲಾಗುವುದು. ದಲಿತ ಮುಖಂಡರು ತಿಳಿಸಿದಂತೆ ತಾಲೂಕಿನಲ್ಲಿ ಜಾತಿ ನಿಂದನೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗ್ರಾಮ ಮಟ್ಟದಲ್ಲೇ ಎಲ್ಲ ಸಮಸ್ಯೆಗಳನ್ನು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಾಲತಾಣಗಳಲ್ಲಿ ಜಾತಿ ನಿಂದನೆಯ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಉಪ ವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್ಪಿ ವಾಸುದೇವ್, ಜಿಲ್ಲಾ ಆಹಾರ ಇಲಾಖೆ ನಿರ್ದೇಶಕಿ ಸವಿತಾ, ತಹಶೀಲ್ದಾರ್ ಸಿಗ್ಬತ್ತುಲ್ಲಾ, ಸಮಾಜ ಕಲ್ಯಾಣ ಇಲಾಖೆಯ ಶೇಷಾದ್ರಿ, ಪೆರೇಸಂದ್ರ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಮಾಹಿತಿ ಪಡೆದಿದ್ದರು.
ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪದಮಮ್ಮ ಪರಾರಿಯಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.