ವೈಯಕ್ತಿಕವಾಗಿ ಬೆಟ್ಟದ ಅಭಿವೃದ್ದಿಗೆ 10 ಲಕ್ಷ ರೂ. ದೇಣಿಗೆ ಘೋಷಿಸಿದ ಸಚಿವರು; ಬೆಟ್ಟದ ಸುತ್ತ ಕಲ್ಲು ಗಣಿಗಾರಿಕೆ ಬೇಡ ಎಂದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ
ಗುಡಿಬಂಡೆ: ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ತಾಣವಾದ ವರ್ಲಕೊಂಡದ ವರಾಹಗಿರಿ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ,ಕೆ.ಸುಧಾಕರ್ ಪ್ರಕಟಿಸಿದರು.
ವರಾಹಗಿರಿಗೆ ಮೆಟ್ಟಿಲು ನಿರ್ಮಾಣ ಮಾಡುವ ಕಾರ್ಯಕ್ಕೆ ಇಂದು ಭೂಮಿಪೂಜೆ ನೆರೆವೇರಿಸಿದ ನಂತರ ಮಾತನಾಡಿದ ಅವರು; ನನ್ನ ಹುಟ್ಟೂರು ಪೇರೆಸಂದ್ರಕ್ಕೆ ಹತ್ತಿರದಲ್ಲೇ ಇರುವ ವರಾಹಗಿರಿಯನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಪಡಿಸಲಾಗುವುದು. ಅದಕ್ಕೆ ಅಗತ್ಯವಾದ ಹಣಕಾಸು ನೆರವು ನೀಡಲಾಗುವುದು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯು ಐತಿಹಾಸಿಕ ಹಾಗೂ ರಮಣೀಯ ಬೆಟ್ಟಗುಡ್ಡಗಳ ತಾಣಗಳನ್ನು ಹೊಂದಿದೆ. ಈಗಾಗಲೇ ನಂದಿ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಹಲವಾರು ತಾಣಗಳಚನ್ನು ಅಭಿವೃದ್ದಿ ಮಾಡಲಾಗುತ್ತಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ನುಡಿದರು.
ಈಗ ಹೆದ್ದಾರಿ ಪಕ್ಕದಲ್ಲೇ ಇದ್ದು, ಪ್ರವಾಸಿಗರು ಹಾಗೂ ಚಾರಣ ಪ್ರಿಯರನ್ನು ಕೈಬೀಸಿ ಕರೆಯುವ ವರ್ಲಕೊಂಡ ಬೆಟ್ಟದ ಅಭಿವೃದ್ದಿಗೂ ಆದ್ಯತೆ ನೀಡಿ ಎಲ್ಲ ಸೌಕರ್ಯಗಳನ್ನು ಮಾಡಿಕೊಡಲಾಗುವುದು. ವೈಯಕ್ತಿಕವಾಗಿ ೧೦ ಲಕ್ಷ ರೂ.ಗಳನ್ನು ಅಭಿವೃದ್ದಿಗಾಗಿ ನೀಡುತ್ತೇನೆ. ದೇವರ ಕಾರ್ಯದಲ್ಲಿ ಎಂದಿಗೂ ಪಕ್ಷಭೇದ, ಜಾತಿಭೇದಗಳು ಇರಬಾರದು. ನಾನು ಬಾಗೇಪಲ್ಲಿ ಕ್ಷೇತ್ರದ ಶಾಸಕರೊಂದಿಗೆ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡುತ್ತೇನೆ ಎಂದರು ಸಚಿವರು.
ಉಳಿದಂತೆ; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚೋಳರ ಇತಿಹಾಸದ ಅನೇಕ ಕುರುಹುಗಳಿವೆ. ಅವರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳಿವೆ. ಚೋಳರ ಕಾಲದಲ್ಲಿಯೇ ವರಾಹಗಿರಿ ಬೆಟ್ಟದಲ್ಲಿ ರಾಮನ ದೇವಾಲಯ ನಿರ್ಮಾಣ ಮಾಡಲಾಗಿದೆ. ಈ ಬೆಟ್ಟದ ಮೇಲೆ ಪುರಾತನ ರಾಮನ ದೇವಾಲಯವಿರುವುದು ನನಗೂ ಸಹ ಇತ್ತೀಚಿಗಷ್ಟೆ ತಿಳಿದಿದೆ. ಶ್ರೀ ಮಹಾವಿಷ್ಣುವಿನ ಮೂರನೇ ಅವತಾರ ವರಾಹ ಅವತಾರವಾಗಿದ್ದು, ಇದಕ್ಕೆ ಭವ್ಯ ಪರಂಪರೆಯುಳ್ಳ ಇತಿಹಾಸವಿದೆ. ದೇಶವ್ಯಾಪಿ ವರಾಹ ದೇವಾಲಯಗಳು ತುಂಬಾ ವಿರಳವಾಗಿದೆ. ಆದ್ದರಿಂದ ಇಂತಹ ಮಹತ್ವ ದೇವಾಲಯಗಳ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿರಬೇಕೆಂದು ಸಚಿವರು ಹೇಳಿದರು.
ಕಲ್ಲು ಗಣಿಗಾರಿಕೆಗೆ ಅವಕಾಶ ಬೇಡ ಎಂದ ಶಾಸಕರು
ಇದೇ ವೇಳೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧವಾದ ವರ್ಲಕೊಂಡ ಬೆಟ್ಟದ ಸುತ್ತ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಸಚಿವ ಸುಧಾಕರ್ ಅವರನ್ನು ಒತ್ತಾಯ ಮಾಡಿದರು.
ವರಾಹಗಿರಿ ಎಂದೇ ಹೆಸರಾಗಿರುವ ವರ್ಲಕೊಂಡ ಬೆಟ್ಟದ ಮೇಲೆ ದೈವೀ ಶಕ್ತಿಯುಳ್ಳ ದೇವಾಲಯ ಇದೆ. ಆ ದೇವಾಲಯವನ್ನು ಅಭಿವೃದ್ಧಿ ಮಾಡಬೇಕಿದೆ. ಮೈಸೂರು ದಸರಾ ಉತ್ಸವ ನಡೆಯುವ ವೇಳೆ ಈ ವರಾಹಗಿರಿ ಬೆಟ್ಟದ ಮೇಲೆ ಬೆಳೆಯುವ ಹೂವನ್ನು ಚಾಮುಂಡೇಶ್ವರಿ ಅಮ್ಮನವರಿಗೆ ಕೊಟ್ಟ ನಂತರ ಜಂಬೂಸವಾರಿಗೆ ಚಾಲನೆ ನೀಡುತ್ತಿದ್ದರಂತೆ. ಇಂತಹ ಶಕ್ತಿಯುಳ್ಳ ದೇವಾಲಯದ ಅಭಿವೃದ್ದಿಗೆ ಸ್ಥಳೀಯರು ಟ್ರಸ್ಟ್ ಮಾಡಿಕೊಂಡು ಮುಂದಾಗಿರುವುದು ಶ್ಲಾಘನೀಯವಾದದು ಎಂದು ಶಾಸಕರು ಹೇಳಿದರು.
ವರಾಹಗಿರಿ ಏಕಶಿಲಾ ಬೆಟ್ಟಗಳ ಪೈಕಿ ಏಷ್ಯಾ ಖಂಡದಲ್ಲೇ ಮೂರನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಸಚಿವರು ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದು. ಇದೇ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸುಮಾರು 10ಎಕರೆ ಜಮೀನನ್ನು ಜನರಲ್ ತಿಮ್ಮಯ್ಯ ಎಂಬ ಸಂಸ್ಥೆಗೆ ನೀಡಲಾಗಿತ್ತು, ಜತೆಗೆ 10 ಕೋಟಿ ಅನುದಾನವನ್ನೂ ಮಂಜೂರು ಮಾಡಲಾಗಿತ್ತು. ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ, ಈ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ಶಾಸಕರು ಮನವಿ ಮಾಡಿದರು.