ಮಾಜಿ ಶಾಸಕ ಎನ್.ಸಂಪಂಗಿ ಪ್ರಶ್ನೆ
by Ra Na Gopala Reddy Bagepalli
ಬಾಗೇಪಲ್ಲಿ: ನಾನು ಅಧಿಕಾರದಲ್ಲಿದ್ದಾಗ ಸಾಧ್ಯವಾದಷ್ಟು ಜನಸೇವೆ ಮಾಡಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದೇನೆ. ಭ್ರಷ್ಟಾಚಾರ ನಡೆಸಿ ಜನರ ಹಣ ಲೂಟಿ ಮಾಡುವ ರಾಜಕಾರಣಿ ನಾನಲ್ಲ ಎಂದು ಮಾಜಿ ಶಾಸಕ ಎನ್.ಸಂಪಂಗಿ ಹೇಳಿದರು.
ಉತ್ತಮ ಮಳೆಯಿಂದ ತುಂಬಿ ಕೋಡಿ ಹರಿಯುತ್ತಿರುವ ಚಿತ್ರಾವತಿ ಅಣೆಕಟ್ಟೆಗೆ ಬಾಗೀನ ಅರ್ಪಿಸಿದ ನಂತರ ಮಾತನಾಡಿದ ಅವರು; ಶಾಸಕನಾಗಿದ್ದೇನೆ. ಜನರ ಆಶೀರ್ವಾದ ಇದ್ದರೆ ಮತ್ತೊಮೆ ಶಾಸಕನಾಗುತ್ತೇನೆ ಎಂದರು.
ಪರೋಕ್ಷವಾಗಿ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಅವರು; ಬಾಗೇಪಲ್ಲಿ ಕ್ಷೇತ್ರದ ಜನರು ಎರಡು ಬಾರಿ ನನ್ನನ್ನು ಶಾಸಕನನ್ನಾಗಿ ಅಯ್ಕೆ ಮಾಡಿದ್ದರು. ಅಧಿಕಾರ ಇದ್ದಾಗ ಜನರ ಹಣ ಲೂಟಿ ಮಾಡುವ ಕೆಲಸಕ್ಕೆ ನಾನು ಎಂದು ಕೈ ಹಾಕಿಲ್ಲ. ನನಗೆ ಅಧಿಕಾರದ ಅವಕಾಶ ಸಿಕ್ಕ ಸಮಯದಲ್ಲಿ ಸರಕಾರಿ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಸಿಲ್ಲ. ರೀಯಲ್ ಎಸ್ಟೇಟ್ ಮಾಡಿಲ್ಲ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಜನರ ಸೇವೆ ಮಾಡಿದ್ದೇನೆ ಎಂದು ಹೇಳಿದರು.
ಜನರ ಅರ್ಶೀವಾದ ಇದ್ದರೆ ಮತ್ತೆ ಶಾಸಕನಾಗುತ್ತೇನೆ. ನನ್ನ ಶಾಸಕತ್ವದ ಅವಧಿಯಲ್ಲಿ ಒಳಚರಂಡಿ ಕಾಮಗಾರಿಗೆ 18 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ, ಪರಗೋಡು ಬಳಿ ಅಣೆಕಟ್ಟು ನಿರ್ಮಿಸಿ ಶುದ್ದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದೇನೆ. ನಾನು ಸೋತ ನಂತರ ಪಟ್ಟಣಕ್ಕೆ ಶುದ್ದ ನೀರು ನೀಡಿಲ್ಲ, ಒಳ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಕನಿಷ್ಠ ಒಂದು ಯೋಜನೆಯೂ ಅನುಷ್ಠಾನಗೊಂಡಿಲ್ಲ. 18 ಕೋಟಿ ರೂ.ಗಳ ಅನುದಾನ ಯಾರ ಜೇಬು ಸೇರಿದೆ? ಎಂದು ಅವರು ಪ್ರಶ್ನೆ ಮಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಖಾಂತರ ಬಹಿರಂಗಗೊಳಿಸುತ್ತೇನೆ ಎಂದ ಅವರು, ತಪ್ಪು ಮಾಡಿರುವ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರ ಇದ್ದಂತೆ. ಕೆಲ ನಾಯಕರನ್ನು ನಾವು ದೇವರು ಎಂದು ನಂಬಿರುತ್ತೇವೆ. ನಮ್ಮ ಪಾಲಿನ ದೇವರು ಎಂದು ನಂಬಿರುವಂಥ ನಾಯಕರುಗಳು ದೆವ್ವಗಳಾಗಿ ಪ್ರಾಮಾಣಿಕ ಕಾರ್ಯಕರ್ತರ ಕತ್ತು ಹಿಸುಕುವಂತಹ ಕೆಲಸ ಮಾಡಿದಾಗ ನಮ್ಮಂಥ ಪ್ರಾಮಾಣಿಕರಿಗೆ ಅನ್ಯಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಅದರ ಬಿಸಿ ಅವರಿಗೆ ತಟ್ಟಲಿದೆ ಎಂದು ಅವರು ಪರೋಕ್ಷವಾಗಿ ವೀರಪ್ಪ ಮೊಯಿಲಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೈಕಾರ ಹಾಕಬೇಡಿ ಎಂದ ಸಂಪಂಗಿ
ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಂಪಂಗಿ ಮಹಾರಾಜ್‌ಕೀ ಜೈ, ಕಾಂಗ್ರೆಸ್ ಪಕ್ಷದ ಮುಂದಿನ ಎಂಎಲ್‌ಎ ಎನ್.ಸಂಪಂಗಿ ಎಂದು ಜೈಕಾರ ಕೂಗುತ್ತಿದ್ದಂತೇ ಹಾಗೆ ಜೈಕಾರ ಹಾಕದಂತೆ ಕಾರ್ಯಕರ್ತರಿಗೆ ತಿಳಿ ಹೇಳಿದ ಪ್ರಸಂಗವೂ ನಡೆಯಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು, ಪುರಸಭೆ ಸದಸ್ಯರಾದ ಬಿ.ಎ.ನರಸಿಂಹಮೂರ್ತಿ, ಸುಜಾತಾ ನಾಯ್ಡು, ಗ್ರಾ.ಪಂ. ಅಧ್ಯಕ್ಷ ಎಂ.ಬಿ.ನರಸಿಂಹಯ್ಯ, ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ನರಸಿಂಹಪ್ಪ, ನಾರಾಯಣಪ್ಪ, ಬೋರ್‌ವೆಲ್ ಶಿವ, ರಾಮಚಂದ್ರ, ಚೇಳೂರು ಸುಬ್ರಮಣಿ ಮತ್ತಿತರರು ಇದ್ದರು.