ತುಂಬಿ ಹರಿದ ಗಂಗೆಗ ಬಾಗೀನ; ನದಿ ಸ್ವಚ್ಛತೆಗೆ ಸಂಕಲ್ಪ
by Ra Na Gopala Reddy Bagepalli
ಬಾಗೇಪಲ್ಲಿ: ಎರಡು ತಾಲೂಕುಗಳ ಜೀವನಾಡಿ ಆಗಿರುವ ಹಾಗೂ ಉತ್ತಮ ಮಳೆಯಿಂದ ತುಂಬಿ ಹರಿಯುತ್ತಿರುವ ಚಿತ್ರಾವತಿ ಅಣೆಕಟ್ಟೆಯ ಬಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಗೋಡು ಗ್ರಾಮ ಪಂಚಾಯಿತಿ ವತಿಯಿಂದ ಇದೇ ಮೊದಲ ಬಾರಿಗೆ ʼಚಿತ್ರಾವತಿ ನದಿ ಉತ್ಸವʼವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಚಿತ್ರಾವತಿ ಬ್ಯಾರೇಜಿನ ಪ್ರವೇಶ ದ್ವಾರದಿಂದ ಅಣೆಕಟ್ಟೆಯವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ತಮಟೆ ವಾದನ, ವೀರಗಾಸೆ ಇತ್ಯಾದಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಸುಗಮ ಸಂಗೀತದ ತಂಡ ಸುಶ್ರಾವ್ಯವಾಗಿ ಗೀತ ಗಾಯನ ಮಾಡಿ ಶೋತೃಗಳನ್ನು ರಂಜಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಚಿತ್ರಾವತಿಗೆ ಪುರೋಹಿತರ ವೇದಘೋಷ ಮಂತ್ರಗಳೊಂದಿಗೆ ಸೀರೆ, ಕುಪ್ಪಸ, ಹರಿಷಿನ, ಕುಂಕುಮ, ಹೂವು, ಹಣ್ಣು ಬಳೆ ತುಂಬಿದ ಮರವನ್ನು ನೀರಿಗೆ ಬಿಡುವುದರ ಮೂಲಕ ಗಂಗೆಗೆ ಬಾಗೀನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎನ್. ಸುಬ್ಬಾರೆಡ್ಡಿ; “ಪಟ್ಟಣದಲ್ಲಿ ಹಲವರು ದುರ್ನಾತ ಬೀರುತ್ತಿರುವ ತ್ಯಾಜ್ಯವನ್ನು ಚಿತ್ರಾವತಿಗೆ ನದಿಗೆ ಹಾಕಿ ಕಲುಷಿತ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡಿ ಕ್ರಮ ಜರುಗಿಸುತ್ತೇನೆ ಮತ್ತು ನಮ್ಮ ನದಿಯಿಂದ ಆಂಧ್ರಪ್ರದೇಶಕ್ಕೆ ಹರಿಯುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಚಿತ್ರಾವತಿ ಜಲಾಶಯದಲ್ಲಿ ಗಿಡಗಂಟೆ ಹೂಳು ತೆಗೆಯುವ ಪ್ರಯತ್ನ ಮಾಡಿದರೆ ಸುಪ್ರಿಂ ಕೋರ್ಟಿನ ಆದೇಶ ಅಡ್ಡಿ ಬರಬಹುದು ಎಂಬ ಆತಂಕದಿಂದ ಹೂಳು ತೆಗೆಯಲು ಸಾಧ್ಯವಾಗಲಿಲ್ಲ. ಒಂದು ವೇಳೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೆ ತಕ್ಷಣ ಚಿತ್ರಾವತಿ ಜಲಾಶಯಲ್ಲಿ ಎಲ್ಲಾ ಗಿಡ ಗಂಟೆಗಳನ್ನು ತೆಗೆಸಿ ಸುಂದರವಾದ ಜಲಾಶಯವನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.
ಈ ಜಲಾಶಯದ ಪ್ರಮುಖ ರೂವಾರಿಗಳಾದ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಅಂದಿನ ಸಂಸದ ಆರ್.ಎಲ್.ಜಾಲಪ್ಪ ಅವರನ್ನು ನೆನಪಿಸಿಕೊಳ್ಳಲೇಬೇಕು. ಮುಂದಿನ ದಿನಗಳಲ್ಲಿ ನೀರಾವರಿ ಯೋಜನೆಗಳು ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡುತ್ತೇನೆ. ಹೆಚ್.ಎನ್.ವ್ಯಾಲಿ ಯೋಜನೆಯ ನೀರನ್ನು ತಾಲೂಕಿನ ಎಲ್ಲಾ ಕೆರೆಗಳಿಗೆ ತ್ವರಿತಗತಿಯಲ್ಲಿ ಹರಿಸುತ್ತೇನೆ ಎಂದರು ಅವರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿ; “ನಮ್ಮದು ಗಂಗಾ ಸಂಸ್ಕೃತಿ, ನೀರು ಸಂಸ್ಕೃತಿ, ಜಲ ಸಂಸ್ಕೃತಿ, ದಲಿತ ಸಂಸ್ಕೃತಿ. ಗಂಗೆ ದಲಿತ ಹೆಣ್ಣು ಮಗಳು. ನಮ್ಮ ಮನೆಗೆ ತಂಗಿಯಾದವಳು ಬಂದರೆ ಅಣ್ಣ ತಂಗಿಗೆ ಸೀರೆ ಕುಪ್ಪಸ ಅರಿಶಿಣ ಕುಂಕುಮ ಬಳೆ, ಹೂವು ಕೊಡುವ ಸಂಪ್ರದಾಯದಂತೆ ಗಂಗೆ ನಮ್ಮೂರಿಗೆ ಹರಿಯುತ್ತಾ ಬಂದರೆ ನಾವು ಕೊಡುವ ಬಾಗೀನ ಅದೇ ಅರ್ಥವನ್ನು ಹೊಂದಿರುತ್ತದೆ ಎಂದರು.
ಈ ಭಾಗದ ಜನತೆಗೆ ನೀರೆಂದರೆ ಬದುಕು. ನೀರೆಂದರೆ ಪ್ರಾಣವೂ ಹೌದು. ನೀರೆಂದರೆ ಎಲ್ಲವೂ ಹೌದು. ಬಿಸಿಲಿನ ಕಾವಿಗೆ ಕಾದ ಕಾವಲಿಯಾಂತಾಗುವ ಇಲ್ಲಿನ ಭೂಮಿಗೆ ಮಳೆಯಂದರೆ ತನ್ನ ಪ್ರಿಯಕರ ಬಂದಷ್ಷೆ ಸಂತೋಷ ಎಂದರು ಅವರು.
ಇಲ್ಲಿನ ನದಿಗೆ ನಮ್ಮ ಪೂರ್ವಿಕರು ದೇವಲೋಕದ ಅಪ್ಸರೆ ಚಿತ್ರಾವತಿಯ ಹೆಸರನ್ನೇ ಇಟ್ಟಿದ್ದಾರೆ. ಚಿತ್ರೆ ತುಂಬ ಸೌಂದರ್ಯವತಿ, ಚಿತ್ರಾವತಿ ನದಿಯ ಉದ್ದಕ್ಕೂ ಇರುವ ದೇಗುಲಗಳನ್ನು ತಾಗಿಕೊಂಡು ಮುಂದಕ್ಕೆ ಪ್ರಯಾಣ ಬೆಳೆಸುತ್ತಾಳೆ. ಆದರೆ ಅಂತಹ ಹೆಸರನ್ನು ಪಡೆದ ನಮ್ಮ ಚಿತ್ರಾವತಿ ನದಿ ಈಗ ಕುರೂಪವಾಗಿದ್ದಾಳೆ. ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸಕಡ್ಡಿ ಮತ್ತಿತರೆ ತ್ಯಾಜ್ಯ ತುಂಬಿ ಕುರೂಪವನ್ನುಂಟು ಮಾಡಿದೆ. ಆದ್ದರಿಂದ ನದಿಯನ್ನು ಸ್ವಚ್ಛಗೊಳಿಸಬೇಕು, ನದಿಯ ಒತ್ತುವರಿಯನ್ನು ತೆರವುಗೊಳಿಸಬೇಕು. ನದಿಯ ಉದ್ದಕ್ಕೂ ಚಿಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಆ ನೀರನ್ನು ನಿಲ್ಲಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಈ ಚಿತ್ರಾವತಿ ನದಿಯ ಮಹತ್ವವನ್ನು ಅರಿವು ಮೂಡಿಸುವುದರ ಹಿನ್ನೆಲೆಯಲ್ಲಿ ಈ ಚಿತ್ರಾವತಿ ಉತ್ಸವವನ್ನು ಮಾಡಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ತಹಸೀಲ್ದಾರ್ ಡಿ.ಎ.ದಿವಾಕರ್ ಮಾತನಾಡಿ; ಚಿತ್ರಾವತಿ ನದಿ ಈ ಭಾಗದ ಒಂದು ಮುಖ್ಯ ನದಿಯಾಗಿದ್ದು, ಇದರ ಸುಂದರ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ರಾಷ್ಟೀಯ ಹೆದ್ದಾರಿ ಮುಖ್ಯರಸ್ತೆಯಿಂದ ಶಾಸಕರನ್ನು ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ ಮಂಗಳ ವಾದ್ಯಗಳೊಂದಿಗೆ ಬರಮಾಡಿಕೊಂಡು ಸ್ವಾಗತ ಕೋರಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಹಂಗಾಮಿ ಅಧ್ಯಕ್ಷ ಎ.ಶ್ರೀನಿವಾಸ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡಪ್ಪ, ಕೆಪಿಸಿಸಿ ಸದಸ್ಯ ಅಮರನಾಥರೆಡ್ಡಿ, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜು, ಪರಗೋಡು ಗ್ರಾಪಂ ಅಧ್ಯಕ್ಷೆ ನಾಗಮಣಿ ಸದಾಶಿವರೆಡ್ಡಿ, ಉಪಾಧ್ಯಕ್ಷೆ ಶಾಂತಮ್ಮ ನರಸಿಂಹಪ್ಪ, ಪಿಡಿಒ ರಾಮಕೃಷ್ಣ, ತಾಪಂ ಮಾಜಿ ಅಧ್ಯಕ್ಷರಾದ ಎಸ್.ಎಸ್.ರಮೇಶ್ ಬಾಬು, ಕೆ.ಆರ್.ನರೇಂದ್ರಬಾಬು, ಜಪಂ ಮಾಜಿ ಸದಸ್ಯ ನರಸಿಂಹಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ನರೇಂದ್ರ, ಗ್ರಾಪಂ ಸದಸ್ಯರಾದ ರಾಜಪ್ಪ, ನಾಗರಾಜು, ಸುಬ್ಬಿರೆಡ್ಡಿ, ಶಿವಪ್ಪ ಮುಖಂಡರಾದ ರಾಮಿರೆಡ್ಡಿ, ಶ್ರೀನಿವಾಸರೆಡ್ಡಿ, ಹೆಚ್.ವಿ.ನಾಗರಾಜು, ನಂಜುಂಡಪ್ಪ, ಬಿ.ವಿ.ವೆಂಕಟರವಣ, ಸುಬ್ಬುರಾಯಪ್ಪ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.