ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಣ್ಣನೆ
ಬೆಂಗಳೂರು: ಜಗತ್ತಿಗೆ ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ನಿಜವಾದ ಅರ್ಥದಲ್ಲಿ ಜಗತ್ತಿನ ಗುರುವಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಣ್ಣಿಸಿದ್ದಾರೆ.
ಮಲ್ಲೇಶ್ವರಂನ ಈಸ್ಟ್ ಪಾರ್ಕ್ ನಲ್ಲಿ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡಿದ್ದ ಅವರು, `ಭಾರತೀಯರು ತ್ರೇತಾ ಯುಗದ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಶ್ರೇಷ್ಠ ಮೌಲ್ಯಗಳೆಲ್ಲವೂ ವಾಲ್ಮೀಕಿ ಮಹರ್ಷಿಗಳ ಕೊಡುಗೆಗಳಾಗಿವೆ’ ಎಂದು ನೆನೆದರು. ಈ ಸಂದರ್ಭದಲ್ಲಿ ಅವರು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಭಾರತೀಯತೆಯು ಅವರ ಪರಿಕಲ್ಪನೆಯಾಗಿದ್ದು, ಎಲ್ಲರೂ ಸುಖದಿಂದ ಬಾಳುವ ರಾಮರಾಜ್ಯದ ಕಲ್ಪನೆ ಕೂಡ ನಮಗೆ ಅವರಿಂದಲೇ ಬಂದಿರುವ ಬಳುವಳಿಯಾಗಿದೆ. ಇದಕ್ಕೆ ತಕ್ಕಂತೆ ಎನ್ಇಪಿಯಲ್ಲಿ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಢಿಸುವುದಕ್ಕೆ ಸಾಕಷ್ಟು ಒತ್ತು ಕೊಡಲಾಗಿದೆ ಎಂದು ಅವರು ನುಡಿದರು.
ರಾಜ್ಯ ಸರಕಾರವು ಕೂಡ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ವಾಲ್ಮೀಕಿಯವರ ಹೆಸರಿನಲ್ಲೇ ಆಶ್ರಮ ಶಾಲೆಗಳನ್ನು ತೆರೆದಿದ್ದು, 5 ಲಕ್ಷ ಅರ್ಹ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದೆ. ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮುದಾಯವೂ ಸೇರಿದಂತೆ ಇನ್ನಿತರ ಬುಡಕಟ್ಟುಗಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯ ಗಮನ ಹರಿಸಲಾಗುವುದು ಎಂದು ಸಚಿವರು ಹೇಳಿದರು.