ಒಂದೂವರೆ ಗಂಟೆಯಲ್ಲಿ 30 ಮಿ. ಮೀ.ಯಷ್ಟು ಮಳೆ; ಉಕ್ಕಿದ ರಾಜಕಾಲುವೆ; ಮನೆಗಳಿಗೆ ನುಗ್ಗಿದ ನೀರು
By GS Bharath Gudibande
ಗುಡಿಬಂಡೆ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಭಾರೀ ಮಳೆ ಸುರಿದಿದ್ದು, ಪರಿಣಾಮವಾಗಿ ವಿವಿಧ ವಾರ್ಡುಗಳ ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಒಂದೂವರೆ ಗಂಟೆ ಅವಧಿಯಲ್ಲಿ ಸುಮಾರು 30 ಮಿ. ಮೀ.ಯಷ್ಟು ಮಳೆಯಾಗಿದೆ.
ಒಂದೆಡೆ ಆಕಾಶಕ್ಕೆ ರಂಧ್ರ ಕೊರೆದಂತೆ ಮಳೆ ಸುರಿಯುತ್ತಿದ್ದರೆ, ಇನ್ನೊಂದೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಮನೆಗಳಿಗೆ ನುಗ್ಗಿದ ಮಳೆ ನೀರು ಜನರನ್ನು ಕಕ್ಕಾಬಿಕ್ಕಿಗೊಳಿಸಿತಲ್ಲದೆ, ನಿವಾಸಿಗಳು ತೀವ್ರ ತೊಂದರೆಗೆ ಒಳಗಾದರು.
ಒಂದೂವರೆ ಗಂಟೆ ನಿರಂತರವಾಗಿ ಸುರಿದ ಮಳೆಯಿಂದ ಪ್ರಮುಖ ರಸ್ತೆಗಳು ಹಾಗೂ ಕೆಳ ಸೇತುವೆಗಳು, ರಾಜಕಾಲುವೆ ಹೊಳೆಯ ರೂಪ ತಾಳಿದವು. ಜಲ ರುದ್ರತಾಂಡವವನ್ನು ನೋಡುತ್ತಲೇ ಜನ ಗಾಬರಿಯಾದರು. ಆದರೆ, ಎಲ್ಲಿಯೂ ಜೀವಹಾನಿ, ಆಸ್ತಿ ಹಾನಿ ಆದ ಬಗ್ಗೆ ವರದಿಗಳು ಬಂದಿಲ್ಲ. ಆದರೆ, ರೈತರ ಬೆಳೆಗಳು ನೆಲದ ಪಾಲಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ,
ಇಡೀ ದಿನ ಬಿಸಿಲಿನ ವಾತಾವರಣ ಇತ್ತು. ಆಗಾಗ ಮೋಡ ಕವಿದ ವಾತಾವರಣವಿತ್ತು. ಸಂಜೆ 6 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣದೊಂದಿಗೆ ಜೋರಾಗಿ ಗಾಳಿ ಬೀಸಿತು. 6.10 ಗಂಟೆ ಸುಮಾರಿಗೆ ಶುರುವಾದ ಮಳೆಯ ಅಬ್ಬರ ರಾತ್ರಿ 7.30 ಗಂಟೆಯವರೆಗೂ ಮುಂದುವರಿದಿತ್ತು. ಈ ಅವಧಿಯಲ್ಲಿ ಗುಡುಗು– ಸಿಡಿಲು ಆರ್ಭಟವೂ ಹೆಚ್ಚಾಗಿತ್ತು.
ಮುಖ್ಯರಸ್ತೆ ಸಂಪೂರ್ಣ ಜಲಾವೃತ
ಭಾರೀ ಮಳೆಗೆ ಪಟ್ಟಣದ ಏಕೈಕ ಮುಖ್ಯರಸ್ತೆ ಹಾಗೂ ವಿವಿಧ ವಾರ್ಡ್ʼಗಳ ಸುತ್ತಮುತ್ತ ಪ್ರದೇಶಗಳಲ್ಲಿ ನೀರು ನದಿಯಂತೆ ಹರಿಯಿತು. ರಸ್ತೆಗಳಲ್ಲಿ ವಾಹನ ಸವಾರರು ಪರದಾಡಿದರು. ಇನ್ನು ಕೆಲವರು ನೀರನಲ್ಲೇ ಸಿಕ್ಕಿಕೊಂಡು ತೊಂದರೆಗೆ ಒಳಗಾದರು. ರಸ್ತೆಗಳ ಪಕ್ಕದಲ್ಲಿದ್ದ ಮನೆಗಳ ನಿವಾಸಿಗಳು ನೀರಿನ ರಭಸಕ್ಕೆ ತತ್ತರಿಸಿದರು.
ಉಕ್ಕಿ ಹರಿದ ರಾಜಕಾಲುವೆ; ಮನೆಗಳಿಗೆ ನುಗ್ಗಿದ ನೀರು
ಮಳೆಯಿಂದಾಗಿ ರಸ್ತೆ ಹಾಗೂ ಕೆಳಸೇತುವೆಯಲ್ಲಿ ನೀರು ಭಾರೀ ಪ್ರಮಾಣದಲ್ಲಿ ಹರಿಯಿತು. ಅದರ ಜತೆಗೆ ರಾಜ ಕಾಲುವೆ ಹಾಗೂ ಚರಂಡಿಗಳಲ್ಲಿದ್ದ ತ್ಯಾಜ್ಯವೆಲ್ಲ ರಸ್ತೆ ಮೇಲೆ ಬಂದು ಅಕ್ಕಪಕ್ಕದ ಮನೆಗಳಿಗೆ ನುಗ್ಗಿತು. ಪ್ರವಾಹೋಪಾದಿಯಲ್ಲಿ ಕಸದ ಸಮೇತ ಮನೆಗಳಿಗೆ ನುಗ್ಗಿದ ನೀರನ್ನು ಜನರು ಅಸಹಾಕತೆಯಿಂದ ನಿಲ್ಲುವಂತಾಯಿತು. ನೀರು ಹೊರ ಹಾಕುವುದರಲ್ಲೇ ಜನರು ರಾತ್ರಿ ಕಳೆಯುತ್ತಿದ್ದಾರೆ.
ನೀರಿನ ಜತೆಯಲ್ಲೇ ವಿಷಕಾರಿ ಹುಳುಗಳು ಹಾಗೂ ತ್ಯಾಜ್ಯವೆಲ್ಲ ಮನೆಗಳಲ್ಲಿ ಸೇರಿದೆ. ‘ಜೋರು ಮಳೆ ಬಂದಾಗಲೆಲ್ಲ ನೀರು ಮನೆಯೊಳಗೆ ನುಗ್ಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.
ಪಟ್ಟಣದ ರಾಜಕಾಲುವೆಯ ತಡೆ ಗೋಡೆಯನ್ನು ಎತ್ತರ ಮಾಡಿ ಎಂದು ಅಧಿಕಾರಿಗಳಿಗೆ ಜನರು ನಿರಂತರವಾಗಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪರಿಣಾಮ ಮಳೆ ನೀರಿನ ರಭಸವನ್ನು ತಡೆಯಲು ಕಾಲುವೆಗೆ ಸಾಧ್ಯವಾಗಲಿಲ್ಲ. ಅಲ್ಲದೆ, ಕಾಲುವೆಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ತುಂಬಿದ್ದರಿಂದ ನೀರು ಸುನಾಯಾಸವಾಗಿ ಹರಿಯದೇ ಮುಖ್ಯರಸ್ತೆಗೆ ನುಗ್ಗಿತು. ಆ ನೀರಿನಲ್ಲೇ ವಾಹನಗಳು ಸಿಲುಕಿಕೊಂಡವು.
ವಿದ್ಯುತ್ ಕಡಿತ
ಜೋರು ಮಳೆ ಸಂದರ್ಭದಲ್ಲೇ ಗಾಳಿ ವೇಗವಾಗಿ ಬೀಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಮಳೆ ಕಡಿಮೆಯಾದ ನಂತರ ವಿದ್ಯುತ್ ಸರಬರಾಜು ಪುನಾರಂಭವಾಯಿತು.
ಪಟ್ಟಣದ ರಾಜಕಾಲುವೆ ಎತ್ತರ ಮಾಡುವಂತೆ ಹಲವು ಸಲ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
ವಿನಾಯಕ ನಗರ ನಿವಾಸಿಗಳು
ಗುಡಿಬಂಡೆ ಪಟ್ಟಣದಲ್ಲಿ ೩೦ ಮಿ. ಮೀ. ಮಳೆಯಾಗಿದೆ. ಒಮ್ಮೆಲೆ ರಭಸವಾಗಿ ಸುರಿದ ಮಳೆಯಿಂದ ಎಲ್ಲೆಡೆ ನೀರು ತುಂಬಿಕೊಂಡಿತು.
ಶಂಕರಯ್ಯ, ಕೃಷಿ ಅಧಿಕಾರಿ