ಡಿಸಿಸಿ ಬ್ಯಾಂಕ್ ಫೈಟ್‌ಗೆ ಹೊಸ ಟ್ವಿಸ್ಟ್
ವಿಜಯಪುರ/ಹುಬ್ಬಳ್ಳಿ: ಸಚಿವ ಡಾ.ಕೆ.ಸುಧಾಕರ್ ಅವರು ನನ್ನನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದಾರೆ. ಅವರು ಕಳಿಸಿದರೆ ನಾನು ಹೋಗಲೂ ಸಿದ್ಧ ಇದ್ದೇನೆ ಎಂದು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ತಿಳಿಸಿದರು.
ವಿಜಯಪುರದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅವರು ಪ್ರಭಾವಿ ಮಂತ್ರಿಗಳು. ಸರಕಾರದಲ್ಲಿ ಇದ್ದಾರೆ. ಅವರ ಬಳಿ ನನ್ನ ಬಗ್ಗೆ ಏನಾದರೂ ಅಂತಹ ಮಾಹಿತಿ ಇದ್ದರೆ ನನ್ನನ್ನು ಜೈಲಿಗೆ ಕಳಿಸಿಸಲಿ ಎಂದು ಸುಧಾಕರ್ ಅವರಿಗೆ ಟಾಂಗ್ ಕೊಟ್ಟರು.
ನಾನು ಈ ದೇಶದ ಪ್ರಜೆ. ಈ ದೇಶದ ಸಂವಿಧಾನಕ್ಕೆ ಬದ್ಧವಾಗಿ ನಡೆಯೋನು. ಅವರು ಜೈಲಿಗೆ ಕಳಿಸಲು ಸಿದ್ಧವಾಗಿದ್ದರೆ ನಾನು ಸಹ ಹೋಗಲು ತಯಾರಿದ್ದೇನೆ ಎಂದು ಮಾಜಿ ಸ್ಪೀಕರ್ ಹೇಳಿದರು.
ಮಂತ್ರಿ ಅಂದ ಮೇಲೆ ಅವರು ಯೋಚನೆ ಮಾಡಿಯೇ ಮಾತನಾಡಿರುತ್ತಾರೆ. ಹಾಗಾಗಿ ನಾನು ಕೂಡ ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದರು.
ನಾನು ಹಾಗೆ ಹೇಳಿಯೇ ಇಲ್ಲ: ಡಾ.ಸುಧಾಕರ್
ನಾನು ಅಧಿಕಾರದ ಮದದಿಂದ ಏನನ್ನೂ ಮಾತನಾಡಿಲ್ಲ. ಜವಾಬ್ದಾರಿಯಿಂದ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ವಿಶೇಷ ಗೌರವವಿದೆ. ಕೋಲಾರ ಡಿಸಿಸಿ ಬ್ಯಾಂಕ್ʼನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆರೇಳು ವರ್ಷಗಳಿಂದ ಅವರು ಸಿಎಂ ಆಗಿದ್ದಾಗಿನಿಂದಲೂ ಈ ಸಮಸ್ಯೆ ಇದೆ. ಕೆ.ಎಚ್.ಮುನಿಯಪ್ಪನವರು ಆಗಲೇ ಈ ಕುರಿತು ದೂರು ನೀಡಿದ್ದರು. ತನಿಖೆಗೆ ಆದೇಶ ನೀಡಿ ಎಂದು ಅವರು ಕೋರಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತನಿಖೆ ಮಾಡಿಸಲು ಒಪ್ಪಲೇ ಇಲ್ಲ. ಇಂದು ಕೂಡ ಅವರ ಪಕ್ಷದ ನಾಯಕರು, ಹಿಂಬಾಲಕರು ಮಾಡುವ ತಪ್ಪನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆಯೇ? ಭ್ರಷ್ಟಾಚಾರದ ಪರವಾಗಿ ಅವರು ಇದ್ದಾರಾ? ಎಂದು ಅವರು ಪ್ರಶ್ನೆ ಮಾಡಿದರು.
ಸಹಕಾರ ಕ್ಷೇತ್ರದ ಜನರಿಗೆ, ರೈತರಿಗೆ ಸರಿಯಾದ ಆಡಳಿತ ನೀಡಬೇಕೆಂಬ ಬದ್ಧತೆ ಇದ್ದರೆ, ಅವರೇ ತನಿಖೆಗೆ ಆದೇಶ ಮಾಡಿ ಎಂದು ಒತ್ತಾಯ ಮಾಡಬೇಕಿತ್ತು. ಆದರೆ ವಿರೋಧ ಪಕ್ಷದ ನಾಯಕರ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಇದನ್ನು ಅಧಿಕಾರದ ಮದ ಎನ್ನುವುದಾದರೆ ಜನರ ತೀರ್ಮಾನಕ್ಕೆ ಬಿಡುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು ಸಚಿವರು.