ಕೋಡಿಯಲ್ಲಿ ಸಿಲುಕಿದ ಆಂಬುಲೆನ್ಸ್; ರಸ್ತೆಗೆ ತಳ್ಳಿ ರಕ್ಷಿಸಿದ ಸ್ಥಳೀಯರು
By GS Bharath Gudibande
ಗುಡಿಬಂಡೆ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಎರಡನೇ ಬಾರಿಗೆ ಇಲ್ಲಿನ ಅಮಾನಿ ಭೈರಸಾಗರ ಕೆರೆ ಕೋಡಿ ಹರಿಯುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿಗೆ ಹೋಗಲು ಇರುವ ಏಕೈಕ ಮಾರ್ಗದಲ್ಲಿ ಜನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.
ಪಟ್ಟಣದ ಅಮಾನಿ ಭೈರಸಾಗರ ಕೆರೆಯ ಕೋಡಿ ಎರಡು ಅಡಿಗೂ ಹೆಚ್ಚು ಎತ್ತರದಲ್ಲಿ ಹರಿಯುತ್ತಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುತ್ತಿರುವ ದೃಶ್ಯಗಳ ಕಂಡುಬಂದವು. ಇಂದು ಬೆಳಗ್ಗೆ ಕೋಡಿ ದಾಟಲು ದ್ವಿಚಕ್ರ ವಾಹನ ಸವಾರರು ಹರಸಾಹಸ ಪಟ್ಟರು. ಕೆಲ ವಾಹನ ಸವಾರರಂತೂ ನೀರಿನ ರಭಸಕ್ಕೆ ಬಿದ್ದು ಎದ್ದು ಹೋದ ದೃಶ್ಯಗಳು ಕಂಡು ಬಂದವು.
ಕೆರೆ ಕೋಡಿಯಲ್ಲಿ ಸಿಲುಕಿದ ಆಂಬುಲೆನ್ಸ್
ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಕೋಡಿಯಲ್ಲಿ ಮುಂದೆ ಹೋಗಲಾಗದೆ ಇಂದು ಬೆಳಗ್ಗೆ ಆಂಬುಲೆನ್ಸ್ ಸಿಲುಕಿ ಪರದಾಡುತ್ತದ್ದ ವೇಳೆ ನೆರವಿಗೆ ಬಂದ ಸ್ಥಳೀಯರು ಹಾಗೂ ಯುವಕರ ತಂಡ ಆಂಬುಲೆನ್ಸ್ ನ್ನು ತಳ್ಳಿ ದಡ ಸೇರಿಸಲು ಯಶಸ್ವಿಯಾದರು. ಯುವಕರ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ದ್ವಿಚಕ್ರ ವಾಹನ ಸವಾರರ ಪರದಾಟ
ಗುಡಿಬಂಡೆ ಪಟ್ಟಣದಿಂದ ಬೀಚಗಾನಹಳ್ಳಿ, ಪೆರೇಸಂದ್ರ, ಚಿಕ್ಕಬಳ್ಳಾಪುರ, ಬೆಂಗಳೂರು ಕಡೆಗೆ ಹೋಗಲು ಇದೇ ಮಾರ್ಗವನ್ನು ಅವಲಂಬಿಸಬೇಕಾಗಿದೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗೆ ಇದೊಂದೇ ಲಿಂಕ್ ರಸ್ತೆ ಆಗಿದೆ.
ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಅಮಾನಿ ಭೈರಸಾಗರ ಕೆರೆ ಕೋಡಿ ಪ್ರಮಾಣ ಹೆಚ್ಚಾಗಿದ್ದು, ವಾಹನ ಸವಾರರ ತಮ್ಮ ಕೆಲಸಗಳಿಗೆ ತೆರಳಲು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೆಲವರು ಬೈಕ್ ಗಳಲ್ಲಿ ಕೋಡಿ ದಾಟಲು ಪ್ರಯತ್ನಿಸಿ ನೀರಿನ ರಭಸಕ್ಕೆ ಬೈಕುಗಳು ಕೊಚ್ಚಿಹೋಗಿರುವ ಸನ್ನಿವೇಶ ಎದುರಾಗಿದೆ. ಕೆಲ ಬೈಕುಗಳು ಆಫ್ ಆಗಿ ಸವಾರರು ಪರದಾಡುತ್ತಿದ್ದರು.
ಪೊಲೀಸರ ಎಂಟ್ರಿ, ಜನ ದಟ್ಟಣೆ ನಿಯಂತ್ರಣ
ಅಮಾನಿ ಭೈರಸಾಗರ ಕೆರೆ ಭಾರೀ ಪ್ರಮಾಣದಲ್ಲಿ ಕೋಡಿ ಹರಿಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ತಂಡೋಪ ತಂಡವಾಗಿ ಜನಸಾಗರವೇ ಅಲ್ಲಿ ಸೇರಿತ್ತು. ನೀರನ್ನು ಕಂಡ ಕೂಡಲೇ ಅಪಾಯವನ್ನು ಲೆಕ್ಕಿಸದೆ ಆಟವಾಡಲು ಮುಂದಾದ ಜನರನ್ನು ಕಂಟ್ರೋಲ್ ಮಾಡಲು ಸ್ವತಃ ಸಿಪಿಐ ಲಿಂಗರಾಜು ಅವರೇ ಸ್ಥಳಕ್ಕೆ ಬಂದು ಜನರನ್ನು ಕಂಟ್ರೋಲ್ ಗೆ ತಂದರು.
ಕೆರೆಯಲ್ಲಿ ನೀರು ತುಂಬಿರುವುದು ಮಾತ್ರವಲ್ಲದೆ, ಕೋಡಿಯ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಈ ಕಾರಣಕ್ಕೆ ಚಿಕ್ಕ ಮಕ್ಕಳನ್ನು ಕೆರೆ ಕೋಡಿಗೆ ಕರೆ ತರಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಕಿವಿಮಾತು ಹೇಳುತ್ತಿದ್ದಾರೆ.
ಅಲ್ಲದೆ, ಜನ ಕೆರೆಗೆ ಇಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕೆರೆ ಕಟ್ಟೆಯ ಮೇಲೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಇಂದು ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಪೇದೆ ಆಯ್ಕೆ ಪರೀಕ್ಷೆ ಬರೆಯಲು ಹೋಗಬೇಕು. ಅಮಾನಿ ಭೈರಸಾಗರ ಕೆರೆ ಕೋಡಿ ಪ್ರಮಾಣ ಹೆಚ್ಚಾಗಿದ್ದು, ರಸ್ತೆ ದಾಟಿ ಹೋಗಲು ಭಯವಾಯಿತು. ನಂತರ ನನ್ನ ಸ್ನೇಹಿತರ ಸಹಾಯದಿಂದ ರಭಸವಾಗಿ ಹರಿಯುವ ಕೆರೆ ಕೋಡಿ ನೀರಿನ ಮಧ್ಯೆ ದಾಟಿಕೊಂಡು ಹೋಗಿ ಪರೀಕ್ಷೆ ಬರೆದೆ.
ಅಕ್ಬರ್, ಸ್ಥಳೀಯ