ಸರಕಾರಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಗ್ರಹ
ಚಿಕ್ಕಬಳ್ಳಾಪುರ: ಬಯಲುಸೀಮೆಯ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳನ್ನು ಪ್ರಾಕೃತಿಕ ವಿಪತ್ತು ಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯು ಸರಕಾರವನ್ನು ಒತ್ತಾಯ ಮಾಡಿದೆ.
ಈ ಬಗ್ಗೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಅಗತ್ಯ ಮಾಹಿತಿ ಮೂಲಕ ಶಿಫಾರಸು ಮಾಡಬೇಕು ಎಂದು ಸಮಿತಿ ಒತ್ತಾಯ ಮಾಡಿದ್ದು, ಆ ಮೂಲಕ ಮಳೆಯಿಂದ ಸಂಕಷ್ಟಕ್ಕೆ ಗುರಿಯಾಗಿರುವ ಜನರ ನೆರವಿಗೆ ಬರಬೇಕೆಂದು ಕೋರಿದೆ.
ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಕೆರೆಗಳಿಗೆ ಪ್ರಸಿದ್ಧಿಯಾಗಿದ್ದ ಬರಪೀಡಿತ ಜಿಲ್ಲೆಗಳು ಅತಿವೃಷ್ಟಿಗೆ ತುತ್ತಾಗಿವೆ. ವೈಜ್ಞಾನಿಕ ನಿರ್ವಹಣೆಯ ಕೊರತೆಯಿಂದಾಗಿ ಹಲವಾರು ಕೆರೆಗಳ ಕಟ್ಟೆಗಳು ಒಡೆದುಹೋಗಿ ಅಪಾರ ಪ್ರಮಾಣದ ನೀರು ಆಂಧ್ರ ಪ್ರದೇಶ ಕಡೆಗೆ ಹರಿದು ಹೋಗಿದೆ. ಇನ್ನೂ ನೂರಾರು ಕೆರೆಗಳು ನೀರಿನ ಮೂಲ ಶೇಖರಣಾ ಸಾಮರ್ಥ್ಯ ಕಳೆದುಕೊಂಡಿವೆ. ಈಗಲೂ ನೂರಾರು ಕೆರೆಗಳು ಸೋರುತ್ತಿದ್ದು ಅಪಾಯದಲ್ಲಿವೆ. ಕಾಲುವೆ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿ ಭೂಮಿಯ ಮೇಲೆ ಪ್ರವಾಹದ ನೀರು ಹರಿದು ಅನೇಕ ರೈತರ ಬೆಳೆಗಳು ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ, ನೂರಾರು ರೈತರ ಫಲವತ್ತಾದ ಮಣ್ಣು ಕೊಚ್ಚಿಹೋಗಿ ಸವಕಳಿಯಾಗಿದೆ ಎಂದು ಸಮಿತಿ ಹೇಳಿದೆ.
ಕೋಲಾರ ಜಿಲ್ಲೆಯಲ್ಲಿ 2021ರ ಅಕ್ಟೋಬರ್ ತಿಂಗಳ ದಿನಾಂಕ 1ರಿಂದ 24ರವರೆಗೆ ಆಗಬೇಕಾಗಿದ್ದ ವಾಡಿಕೆ ಮಳೆ 111 ಮಿ.ಮೀ. ಆದರೆ ಆಗಿರುವ ಮಳೆ 224 ಮಿ.ಮೀ. ಇದೇ ವರ್ಷದ ಜೂನ್ 1ರಿಂದ ಸೆಪ್ಟೆಂಬರ್ 30 ರವರೆಗೆ ಆಗಬೇಕಾಗಿದ್ದ ವಾಡಿಕೆ ಮಳೆ 399 ಮಿ.ಮೀ., ಆದರೆ, ಆಗಿರುವ ಮಳೆ 621 ಮಿ.ಮೀ., ಹಾಗೆಯೇ 2021ರ ಜನವರಿ 1ರಿಂದ ಇಂದಿನವರೆಗೆ ಆಗಬೇಕಾಗಿದ್ದ ಸರಾಸರಿ ವಾಡಿಕೆ ಮಳೆ 627 ಮೀ.ಮೀ., ಆದರೆ ಆಗಿರುರುವ ಮಳೆ 1004 ಮಿ.ಮೀ.
ಕೋಲಾರ ಜಿಲ್ಲೆಯ ಇಡೀ ವರ್ಷದ ವಾರ್ಷಿಕ ಸರಾಸರಿ ವಾಡಿಕೆ ಮಳೆಯ ಒಟ್ಟು ಪ್ರಮಾಣದ ಶೇ.36ರಷ್ಟು ಮಳೆ ಇದೇ ಅಕ್ಟೋಬರ್ ತಿಂಗಳ ಕೇವಲ 24 ದಿನಗಳಲ್ಲಿ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 2021ರ ಅಕ್ಟೋಬರ್ ತಿಂಗಳ ದಿನಾಂಕ 1ರಿಂದ 24ವರೆಗೆ ಆಗಬೇಕಾಗಿದ್ದ ಸರಾಸರಿ ವಾಡಿಕೆ ಮಳೆ 118 ಮಿ.ಮೀ., ಆದರೆ ಆಗಿರುವ ಮಳೆ 296 ಮಿ.ಮೀ.
ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಆಗಬೇಕಾಗಿದ್ದ ಸರಾಸರಿ ವಾಡಿಕೆ ಮಳೆ 416 ಮಿ.ಮೀ, ಆದರೆ ಆಗಿರುವ ಮಳೆ 496 ಮಿ.ಮೀ. 2021ರ ಜನವರಿ 1ರಿಂದ ಅಕ್ಟೋಬರ್ 24ರ ವರೆಗೆ ಆಗಬೇಕಿದ್ದ ವಾಡಿಕೆ ಮಳೆ 642 ಮಿ.ಮೀ. ಆದರೆ ಆಗಿರುವ ಮಳೆ ಆಗಿರುವುದು: 962 ಮಿ.ಮೀ.
ಚಿಕ್ಕಬಳ್ಳಾಪುರ ಜಿಲ್ಲೆಯ ಇಡೀ ವರ್ಷದ ವಾರ್ಷಿಕ ಸರಾಸರಿ ವಾಡಿಕೆ ಮಳೆಯ ಶೇ.42ರಷ್ಟು ಪ್ರಮಾಣದ ಮಳೆ ಅಕ್ಟೋಬರ್ ತಿಂಗಳ ಕೇವಲ 24 ದಿನಗಳಲ್ಲಿ ಆಗಿದೆ.
ಹಾಗಾಗಿ ಇದನ್ನು ಪ್ರಾಕೃತಿಕ ವಿಪತ್ತು ಎಂದು ಘೋಷಸಿ ನಷ್ಟಕ್ಕೊಳಗಾಗಿರುವ ರೈತರಿಗೆ ತುರ್ತು ಪರಿಹಾರ ಮತ್ತು ವೈಜ್ಞಾನಿಕವಾಗಿ ಕೆರೆಗಳ ಶಾಶ್ವತ ಪುನರುಜ್ಜೀವನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.