ಮಳೆ ಸಮಸ್ಯೆ ನಿರ್ವಹಣೆಗೆ ಸಹಾಯವಾಣಿ
by M Krishnappa Chikkaballapura
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ರಾಜಕಾಲುವೆಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಹಾಗೂ ಕೆರೆಯಿಂದ ಕೆರೆಯನ್ನು ಸಂಪರ್ಕಿಸುವ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅವರು ಮಂಗಳವಾರ ತಾಲೂಕಿನ ಕಂದವಾರ ಕೆರೆಗೆ ಮುಂಜಾನೆ ಭೇಟಿ ನೀಡಿ ಕೆರೆ ಕೋಡಿಯಲ್ಲಿನ ನೀರಿನ ಹೊರ ಹರಿವನ್ನು ಪರಿಶೀಲಿಸಿದರು.
ಕಂದವಾರ ಕೆರೆ ತುಂಬಿದಾಗ ಹೊರ ಹರಿವಿನ ನೀರು ಸರಾಗವಾಗಿ ಸಾಗಿ ಅಮಾನಿ ಗೋಪಾಲಕೃಷ್ಣ ಕೆರೆಗೆ ತಲುಪಲು 4 ರಾಜಕಾಲುವೆಗಳಿವೆ. ಈ ಪೈಕಿ ಪ್ರಸ್ತುತ ಎರಡು ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಇನ್ನೆರಡು ರಾಜಕಾಲುವೆಗಳು ಮುಚ್ಚಿ ಹೋಗಿವೆ. ಅಲ್ಲಲ್ಲಿ ಒತ್ತುವರಿಯೂ ಆಗಿದೆ. ಒಂದು ರಾಜಕಾಲುವೆಯ ಮೇಲೆ ವಸತಿ ಕಟ್ಟಡಗಳು ಸಹ ನಿರ್ಮಾಣವಾಗಿವೆ. ಒತ್ತುವರಿ ಹಾಗೂ ಮಣ್ಣಿನಿಂದ ಮುಚ್ಚಿಹೋಗಿರುವ ಒಂದು ಕಾಲುವೆಯೊಂದರ ಮಣ್ಣನ್ನು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಒಂದು ತಂಡ ಕಂದವಾರ ಕೆರೆಯ ಕಡೆಯಿಂದ, ಮತ್ತೊಂದು ತಂಡ ಅಮಾನಿ ಗೋಪಾಲಕೃಷ್ಣ ಕೆರೆಯ ಕಡೆಯಿಂದ, ಇನ್ನೊಂದು ತಂಡ ರಾಜಕಾಲುವೆಯ ಮಧ್ಯಭಾಗದಿಂದ ಒತ್ತುವರಿ ತೆರವು ಹಾಗೂ ಕಾಲುವೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಸುಮಾರು 2.5 ಕಿ.ಮೀ ದೂರದ ತೆರವು ಕಾರ್ಯವನ್ನು ಪೂರ್ಣಗೊಳಿಸಿ ಕಂದವಾರ ಕೆರೆಯ ಹೊರ ಹರಿವಿನ ನೀರನ್ನು ಮತ್ತೊಂದು ರಾಜಕಾಲುವೆಯಲ್ಲಿ ಹರಿಯಲು ಇಂದೇ ವ್ಯವಸ್ಥೆ ಮಾಡಲಾಗುವುದು ಎಂದರು ಅವರು.
ಇದಲ್ಲದೆ ಒತ್ತುವರಿಯಾಗಿ ಕಟ್ಟಡ ನಿರ್ಮಾಣವಾಗಿರುವ ಮತ್ತೊಂದು ರಾಜಕಾಲುವೆಯ ಬಗ್ಗೆ ಶೀಘ್ರವೇ ಸಂಪೂರ್ಣ ಮಾಹಿತಿ ಪಡೆದು ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಈ ಕಾರ್ಯಕ್ಕಾಗಿ ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯ ಪ್ರವೃತ್ತರಾಗಲು ಸೂಚನೆ ನೀಡಿದ್ದೇನೆ. ಅದರಂತೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ತ್ವರಿತವಾಗಿ ಮುಗಿಯುತ್ತದೆ. ಕಂದವಾರ ಕೆರೆಯ ಹೊರಹರಿವಿನ ನೀರಿನಿಂದ ಚಿಕ್ಕಬಳ್ಳಾಪುರ ನಗರಕ್ಕೆ ಯಾವುದೇ ರೀತಿಯ ಅಪಾಯ ಎದುರಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಆತಂಕ ಪಡಬೇಕಾಗಿಲ್ಲ ಎಂದು ಅವರು ತಿಳಿಸಿದರು.
ರಾಜಕಾಲುವೆಗಳ ಒತ್ತುವರಿಯ ತೆರವನ್ನು ಯಾರಾದರೂ ಅಡ್ಡಿಪಡಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಿ ಹಾಗೂ ಅಗತ್ಯಬಿದ್ದರೆ ಪೊಲೀಸರ ನೆರವನ್ನು ಪಡೆದುಕೊಂಡು ಒತ್ತುವರಿ ತೆರವುಗೊಳಿಸಬೇಕು. ಒಟ್ಟಾರೆ ಇಂದು ಒಂದು ರಾಜಕಾಲುವೆಯ ತೆರವು ಕಾರ್ಯವನ್ನು ಪೂರ್ಣಗೊಳಿಸಿ ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡೀಸಿ ಸೂಚನೆ ನೀಡಿದರು.
ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಯನ್ನು ಸಂಪರ್ಕಿಸುವ 4 ರಾಜ ಕಾಲುವೆಗಳಲ್ಲಿನ ಮಣ್ಣನ್ನು ಹಾಗೂ ಒತ್ತುವರಿಯನ್ನು ತೆರವುಗೊಳಿಸಿ ಮುಂದಿನ ದಿನಗಳಲ್ಲಿಯೂ ಮಳೆ ನೀರಿನಿಂದ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಂಡು ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ವೇಳೆ ಸ್ಪಷ್ಟಪಡಿಸಿದರು.
ಸಹಾಯವಾಣಿ
ಜಿಲ್ಲೆಯಲ್ಲಿ ಮಳೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು 08156-277071 ಹಾಗೂ 08156-277077 ಸಹಾಯವಾಣಿಗಳು ಈಗಾಗಲೇ ಸ್ಥಾಪಿಸಲಾಗಿದ್ದು, ಈ ಸಹಾಯವಾಣಿಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಈ ದೂರವಾಣಿಗಳಿಗೆ ಕರೆ ಮಾಡಿದರೆ ನಮ್ಮ ಅಧಿಕಾರಿಗಳು ಕೂಡಲೇ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು ಡೀಸಿ.
ಕೆರೆಗಳೆಲ್ಲ ಭರ್ತಿ
ಎಚ್.ಎನ್.ವ್ಯಾಲಿ ಯೋಜನೆಯ ವ್ಯಾಪ್ತಿಗೆ ಒಳಪಡುವ 44 ಕೆರೆಗಳಲ್ಲಿ 43 ಕೆರೆಗಳು ಭರ್ತಿಯಾಗಿವೆ. ಇನ್ನುಳಿದ ಭದ್ರಕೆರೆ ಶೇ.50ರಷ್ಟು ತುಂಬಿದೆ. ಇನ್ನುಳಿದಂತೆ ಜಿಲ್ಲಾ ಪಂಚಾಯತ್ ಮತ್ತು ಸಣ್ಣ ನೀರಾವರಿ ಇಲಾಖೆಯಡಿ ಬರುವ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ಕೆಲವು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಗೆ ತುಂಬಿವೆ ಎಂದರು ಅವರು.
ಕೆರೆಗಳ ಸರ್ವೇ ಕಾರ್ಯ ಪೂರ್ಣ
ಜಿಲ್ಲೆಯ ಎಲ್ಲಾ ಕೆರೆಗಳ ಸರ್ವೆಯನ್ನು ಕಳೆದ ವರ್ಷವೇ ಮಾಡಲಾಗಿದೆ. ಕೆರೆಯ ಒತ್ತುವರಿಯನ್ನು ಸಹ ತೆರವುಗೊಳಿಸಲಾಗಿದೆ. ಕೆರೆಯಿಂದ ಕೆರೆಗೆ ಸಂಪರ್ಕಿಸುವ ಕಾಲುವೆಗಳು ಮಳೆಯಿಂದ ಮುಚ್ಚಿಹೋಗಿದ್ದರೆ ಅಥವಾ ಒತ್ತುವರಿ ಆಗಿದ್ದರೆ ಯಾವುದೇ ಮುಲ್ಲಾಜಿಲ್ಲದೆ ತೆರವುಗೊಳಿಸಿ, ಮುಕ್ತವಾಗಿ ನೀರು ಹರಿಯಲು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಈಗಾಗಲೇ ಈ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.
ಕಂದವಾರ ಕೆರೆಯ ವೀಕ್ಷಣೆಯ ಬಳಿಕ ನಗರದ ಬಿ.ಬಿ.ರಸ್ತೆ, ವಿನಾಯಕ ಬಡಾವಣೆಗಳ ಮೂಲಕ ಅಮಾನಿ ಗೋಪಾಲಕೃಷ್ಣ ಕೆರೆಯನ್ನು ಸಂಪರ್ಕಿಸುವ ವಿವಿಧ ಸ್ಥಳಗಳಲ್ಲಿ ರಾಜಕಾಲುವೆಗಳ ಸ್ಥಿತಿಗತಿಗಳನ್ನು ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಪೌರಾಯುಕ್ತರಾದ ಮಹಂತೇಶ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸರೆಡ್ಡಿ, ಎಚ್.ಎನ್. ವ್ಯಾಲಿ ಅಭಿಯಂತರ ರವೀಂದ್ರನಾಥ್, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.